ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನರೇಗಾ ಲಾಭ ಫಲಾನುಭವಿಗಳಿಗೆ ಸಿಗಲಿ: ವೇಣುಗೋಪಾಲ್

Published 29 ಫೆಬ್ರುವರಿ 2024, 7:47 IST
Last Updated 29 ಫೆಬ್ರುವರಿ 2024, 7:47 IST
ಅಕ್ಷರ ಗಾತ್ರ

ಮಡಿಕೇರಿ: ‘ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಲಾಭ ಫಲಾನುಭವಿಗಳಿಗೆ ಸಿಗುವಂತೆ ಮಾಡಬೇಕು. ಯೋಜನೆ ಅನುಷ್ಠಾನದಲ್ಲಿ ಅಧಿಕಾರಿಗಳು ತಾಂತ್ರಿಕ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು’ ಎಂದು ಗ್ರಾಮೀಣಾಭಿವೃದ್ಧಿ ಆಯುಕ್ತಾಲಯ ತಾಂತ್ರಿಕ ವಿಭಾಗದ ಜಂಟಿ ನಿರ್ದೇಶಕ ವೇಣುಗೋಪಾಲ್ ತಿಳಿಸಿದರು.

ಇಲ್ಲಿನ ಜಿಲ್ಲಾ ಪಂಚಾಯಿತಿ ಕಚೇರಿಯಲ್ಲಿ ಬುಧವಾರ ನಡೆದ ನರೇಗಾ ಯೋಜನೆ ಸಂಬಂಧದ ಸಭೆಯಲ್ಲಿ ಅವರು ಮಾತನಾಡಿದರು.

‘ಜಿಲ್ಲೆಯಲ್ಲಿ ಈ ಯೋಜನೆಯನ್ನು ಉತ್ತಮವಾಗಿ ಅನುಷ್ಠಾನಗೊಳಿಸಲಾಗುತ್ತಿದೆ. ಮತ್ತಷ್ಟು ಯಶಸ್ವಿಯಾಗಿ ಕಾರ್ಯನಿರ್ವಹಿಸಬೇಕಾದ ಅಗತ್ಯವೂ ಇದೆ’ ಎಂದರು.

‘ಈ ಯೋಜನೆಯಲ್ಲಿ ತಾಂತ್ರಿಕವಾಗಿಯೂ ಹಲವು ಬದಲಾವಣೆಗಳನ್ನು ಜಾರಿಗೆ ತರಲಾಗಿದೆ. ಜಿಎಸ್‌ಟಿ ಹಾಗೂ ರಾಜಧನ ಪಾವತಿಯನ್ನು ಸೂಕ್ತ ರೀತಿಯಲ್ಲಿ ನಿರ್ವಹಿಸಬೇಕು’ ಎಂದು ಅವರು ನಿರ್ದೇಶನ ನೀಡಿದರು.

‘ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ಅನುಮೋದಿತ ವೈಯಕ್ತಿಕ ಮತ್ತು ಸಮುದಾಯ ಕಾಮಗಾರಿಗಳನ್ನು ಮತ್ತಷ್ಟು ವ್ಯವಸ್ಥಿತವಾಗಿ ಅನುಷ್ಠಾನಗೊಳಿಸಬೇಕು. ಸಾಮಾಗ್ರಿ ವೆಚ್ಚ ಪಾವತಿ ಮಾಡುವಾಗ ಎಲ್ಲಾ ಕಾಮಗಾರಿಗಳ ಎಫ್.ಟಿ.ಒ ಗಳನ್ನು ಸೂಕ್ತವಾಗಿ ಪರಿಶೀಲಿಸಬೇಕು’ ಎಂದು ಅವರು ತಿಳಿಸಿದರು.

ಕಾಮಗಾರಿಗಳ ಸ್ಥಳ ಪರಿಶೀಲನೆ: ಸಭೆಯ ಬಳಿಕ ಜಂಟಿ ನಿರ್ದೇಶಕ ವೇಣುಗೋಪಾಲ್ ಅವರು ಮಡಿಕೇರಿ ತಾಲ್ಲೂಕಿನ ಮದೆ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿದರು. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮಹಾತ್ಮಗಾಂಧಿ ‘ನರೇಗಾ’ ಯೋಜನೆಯಡಿಯಲ್ಲಿ ನಿರ್ಮಾಣ ಮಾಡಲಾದ ತೆರೆದ ಬಾವಿ, ದನದಕೊಟ್ಟಿಗೆ ಕಾಮಗಾರಿ ಪರಿಶೀಲಿಸಿದರು.

ನಂತರ, ಸೋಮವಾರಪೇಟೆ ತಾಲ್ಲೂಕು ವ್ಯಾಪ್ತಿಯ ಬೇಳೂರು ಗ್ರಾಮ ಪಂಚಾಯಿತಿಯ ಸರ್ಕಾರಿ ಶಾಲೆಯಲ್ಲಿ ಗಿಡ ನೆಡುವ ಕಾಮಗಾರಿ, ಗಣಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸರ್ಕಾರಿ ಶಾಲೆಗೆ ಕಾಂಪೌಂಡ್ ನಿರ್ಮಾಣ, ಸಿಮೆಂಟ್ ಚರಂಡಿ ಮತ್ತು ಅಮೃತ ಸರೋವರ ಕಾರ್ಯಕ್ರಮದಡಿಯಲ್ಲಿ ಅಭಿವೃದ್ಧಿ ಮಾಡಲಾದ ಕೆರೆ ಕಾಮಗಾರಿ ಪರಿಶೀಲಿಸಿದರು.

ಗ್ರಾಮ ಪಂಚಾಯಿತಿ ಕಚೇರಿಗಳಿಗೆ ತೆರಳಿ ಕಾಮಗಾರಿಗಳಿಗೆ ಸಂಬಂಧಿಸಿದ ಕಡತಗಳನ್ನು ಪರಿಶೀಲಿಸಿ, ಸಲಹೆ ಮತ್ತು ಮಾರ್ಗದರ್ಶನ ನೀಡಿದರು.

ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಜಿ.ಧನರಾಜು, ಮುಖ್ಯ ಲೆಕ್ಕಾಧಿಕಾರಿ ಝೀವಲ್ ಖಾನ್, ಗ್ರಾಮೀಣ ಉದ್ಯೋಗ ಸಹಾಯಕ ನಿರ್ದೇಶಕರಾದ ಹೇಮಂತ್, ರಾಕೇಶ್, ಸಹಾಯಕ ಜಿಲ್ಲಾ ಕಾರ್ಯಕ್ರಮ ಸಮನ್ವಯಾಧಿಕಾರಿ ಮಹೇಂದ್ರ, ಜಿಲ್ಲಾ ಐಇಸಿ ಸಂಯೋಜಕ ಪವನ್ ಕುಮಾರ್, ತಾಂತ್ರಿಕ ಸಂಯೋಜಕರಾದ ರಂಜಿತ್, ದಿಲೀಪ್ ಕುಮಾರ್ ಭಾಗವಹಿಸಿದ್ದರು.

ಹಲವೆಡೆ ಸ್ಥಳ ಪರಿಶೀಲನೆ ನಡೆಸಿದ ಜಂಟಿ ನಿರ್ದೇಶಕ ಬೇಳೂರು ಗ್ರಾಮ ಪಂಚಾಯಿತಿ ಭೇಟಿ ಕಾಮಗಾರಿಗಳಿಗೆ ಸಂಬಂಧಿಸಿದ ಕಡತಗಳ ‍ಪರಿಶೀಲನೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT