ಗೋಣಿಕೊಪ್ಪಲು: ಕೊಡವ ಜನಾಂಗದವರು ಪಿತ್ರಾರ್ಜಿತ ಹಾಗೂ ಪೂರ್ವಾರ್ಜಿತವಾಗಿ ಬಂದಿರುವ ಭೂಮಿಯನ್ನು ಮಾರಾಟ ಮಾಡದೆ ಆತ್ಮಸಾಕ್ಷಿಯೊಂದಿಗೆ ನಮ್ಮ ನೆಲ ರಕ್ಷಿಸಬೇಕೆಂದು ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಅಜ್ಜಿನಿಕಂಡ ಮಹೇಶ್ ನಾಚಯ್ಯ ಮನವಿ ಮಾಡಿದರು.
ಬಿಟ್ಟಂಗಾಲದಲ್ಲಿ ಜಬ್ಬೂಮಿ ಸಂಘಟನೆ ಹಾಗೂ ರೂಟ್ಸ್ ಆಫ್ ಕೊಡಗು ಸಹಯೋಗ ಹಾಗೂ ಇತರ ಸಂಘ ಸಂಸ್ಥೆಗಳ ಸಹಕಾರದಲ್ಲಿ ನಡೆದ ಬೇಲ್‌ಪಣಿ ಕ್ರೀಡಾಕೂಟದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
‘ಈ ನೆಲ ಸ್ವಯಾರ್ಜಿತವಾಗಿ ಸಂಪಾದಿಸಿದಲ್ಲ. ಸ್ವಾಭಿಮಾನದಿಂದ ಈ ನೆಲವನ್ನು ರಕ್ಷಿಸಬೇಕು. ರಾಜರ ಕಾಲದಲ್ಲಿಯೂ ಈ ನೆಲವನ್ನು ರಕ್ಷಿಸಬೇಕೆಂದು ರಾಜರ ಆಡಳಿತದಲ್ಲಿ ಕೊಡವರು ಯೋಧರಾಗಿ ಹೋರಾಟ ಮಾಡಿದ್ದಾರೆ. ಅವರು ಬದುಕಿನ ಹೊಟ್ಟೆ ಬಟ್ಟೆಗಲ್ಲ. ನಾಟಿ ಗದ್ದೆಯ ಕ್ರೀಡಾಕೂಟದ ಸಂಭ್ರಮದೊಂದಿಗೆ ಶಾಶ್ವತವಾಗಿ ರಕ್ಷಿಸಲು ಪಣತೊಡಬೇಕು. ಇದು ನಮ್ಮ ಕೈಜಾರದಂತೆ ಸಂಕಲ್ಪ ಮಾಡಬೇಕು’ ಎಂದರು.
ಅಧ್ಯಕ್ಷತೆ ವಹಿಸಿದ್ದ ಜಬ್ಬೂಮಿ ಚಾರಿಟಬಲ್ ಟ್ರಸ್ಟ್ ಸಂಚಾಲಕ ಚೊಟ್ಟೆಕ್‌ಮಾಡ ರಾಜೀವ್ ಬೋಪಯ್ಯ ಮಾತನಾಡಿ,‘ಭತ್ತದ ಕೃಷಿಯಲ್ಲಿ ಕೊಡವರಿಗೆ ಲಾಭ ನಷ್ಟದ ಪ್ರಶ್ನೆ ಬರುವುದಿಲ್ಲ. ಭತ್ತದ ಕೃಷಿ ನಮಗೆ ಸಂಸ್ಕೃತಿ -ಸಂಸ್ಕಾರ ನೀಡಿದೆ. ಭೂಮಿಯೊಂದಿಗಿನ ಸಂಬಂಧವನ್ನು ಅರ್ಥ ಮಾಡಿಸಲು ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಭತ್ತದ ಕೃಷಿಯೊಂದಿಗೆ ಕೊಡವ ಸಂಸ್ಕೃತಿ ಮಿಳಿತವಾಗಿದ್ದು, ಕೊಡವರ ಪ್ರತಿ ಹಬ್ಬವೂ ಇದರೊಂದಿಗೆ ಬೆರೆತುಕೊಂಡಿದೆ. ಇದನ್ನು ನಮ್ಮ ಮಕ್ಕಳಿಗೆ ಅರ್ಥಮಾಡಿಸಿ ಅಭಿಮಾನ ಮೂಡಿಸುವುದೇ ಈ ಕ್ರೀಡಾಕೂಟದ ಉದ್ದೇಶ’ ಎಂದರು.
‘ಬಿಟ್ಟಂಗಾಲದಲ್ಲಿ ಈ ಕ್ರೀಡಾಕೂಟ ಆಯೋಜಿಸಲು ಮುಖ್ಯ ಕಾರಣ ಈ ವ್ಯಾಪ್ತಿಯಲ್ಲಿ ಭತ್ತದ ಗದ್ದೆಗಳು ಅತಿ ಹೆಚ್ಚು ಪ್ರಮಾಣದಲ್ಲಿ ಭೂಪರಿವರ್ತನೆ ಆಗುತ್ತಿವೆ. ಕೊಡವರು ಪ್ರಕೃತಿ ಆರಾಧಕರಾಗಿ ಬದುಕಿ ಬಂದ ಜನ ಈ ಜಾಗ ಉಳಿಸಿಕೊಳ್ಳಲು, ವಿದೇಶದಲ್ಲಿ ನೆಲೆಸಿರುವ ಕೊಡವರಿಗೂ ಜಾಗೃತಿ ಮೂಡಿಸಿ ಇಲ್ಲಿನ ನೆಲ ಉಳಿಸಲು ಅಭಿಯಾನ ಹಮ್ಮಿಕೊಳ್ಳಲಾಗುತ್ತಿದೆ. ಕೊಡವರೇ ಭೂಮಿ ಮಾರಾಟ ಮಾಡಿ ಕೊಡವರನ್ನು ದುರ್ಬಲಗೊಳಿಸುತ್ತಿದ್ದಾರೆ. ಭೂಪರಿವರ್ತನೆ ಮಾಡಿ ತೋಡುಗಳನ್ನು ಮುಚ್ಚಿ, ಹೊರಗಿನವರಿಗೆ ಮಾರಾಟ ಮಾಡಿದರೆ, ನಾಳೆ ನಮ್ಮ ಮಕ್ಕಳು, ಮುಂದಿನ ಪೀಳಿಗೆ ಏನು ಮಾಡಬೇಕು, ಅವರ ಭವಿಷ್ಯವೇನು ಎಂಬ ಬಗ್ಗೆ ಚಿಂತಿಸಬೇಕಾಗಿದೆ’ ಎಂದು ಎಚ್ಚರಿಸಿದರು.
ವೇದಿಕೆಯಲ್ಲಿ ಗದ್ದೆ ಮಾಲೀಕ ನಾಯಡ ಸೋಮಣ್ಣ, ಕೊಡಗು ಜಿಲ್ಲಾ ಕೃಷಿಕ ಸಮಾಜ ಅಧ್ಯಕ್ಷ ಮಾಚೆಟ್ಟಿರ ಚೋಟು ಕಾವೇರಪ್ಪ, ಅಮ್ಮತ್ತಿ ಕೊಡವ ಸಮಾಜ ಅಧ್ಯಕ್ಷ ಐನಂಡ ಪ್ರಕಾಶ್, ಅಂತಾರಾಷ್ಟ್ರೀಯ ರಗ್ಮಿ ಆಟಗಾರ ಮಾದಂಡ ತಿಮ್ಮಯ್ಯ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.