ಮಡಿಕೇರಿ: ‘ಜಿಲ್ಲೆಯ ಎಲ್ಲಾ ಸಹಕಾರ ಬ್ಯಾಂಕ್‍ಗಳಲ್ಲಿ ಕೃಷಿಕರಿಗೆ ಸರ್ಕಾರದ ನಿರ್ದೇಶನದಂತೆ ಶೂನ್ಯ ಬಡ್ಡಿ ದರದಲ್ಲಿ ₹ 3 ರಿಂದ 5 ಲಕ್ಷದವರೆಗೂ ಸಾಲ ನೀಡಲಾಗುವುದು’ ಎಂದು ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‍ನ ಅಧ್ಯಕ್ಷ ಕೊಡಂದೇರ ಪಿ.ಗಣಪತಿ ತಿಳಿಸಿದರು.
ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ‘ಉನ್ನತಿ ಭವನ’ದ ಪಂದ್ಯಂಡ ಐ.ಬೆಳ್ಯಪ್ಪ ಸ್ಮಾರಕ ಸಭಾಂಗಣದಲ್ಲಿ ಶನಿವಾರ ನಡೆದ ಬ್ಯಾಂಕಿನ 99ನೇ ವಾರ್ಷಿಕ ಮಹಾಸಭೆಯಲ್ಲಿ ಅವರು ಮಾತನಾಡಿದರು.
ಕೊಡಗು ಜಿಲ್ಲೆಯ ಕಾಯಂ ನಿವಾಸಿಗಳ ಮಕ್ಕಳು ದೇಶ ಮತ್ತು ವಿದೇಶದಲ್ಲಿ ಉನ್ನತ ವ್ಯಾಸಂಗ ಮಾಡಲು ಬ್ಯಾಂಕಿನಲ್ಲಿ ‘ವಿದ್ಯಾ ಸಹಕಾರ’ವೆಂಬ ವಿದ್ಯಾಭ್ಯಾಸ ಸಾಲದ ಯೋಜನೆಯನ್ನು ಗರಿಷ್ಠ ₹ 60 ಲಕ್ಷಗಳವರೆಗೆ ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಜಿಲ್ಲೆಯಲ್ಲಿ 73 ವಿವಿಧ ರೀತಿಯ ಸಹಕಾರ ಸಂಘಗಳು ಇದ್ದು, ಯಾವುದೇ ಕಾರಣಕ್ಕೂ ಲೆಕ್ಕ ಪರಿಶೋಧನೆಯನ್ನು ವಿಳಂಬ ಮಾಡಬಾರದು. ಆಯಾಯ ಆರ್ಥಿಕ ವರ್ಷದಲ್ಲಿ ಲೆಕ್ಕಪರಿಶೋಧನೆ ಮಾಡಿಸಿಕೊಂಡು ಈ ಸಂಬಂಧ ವರದಿಯನ್ನು ಪ್ರತೀ ವರ್ಷ ಡಿಸಿಸಿ ಬ್ಯಾಂಕ್‍ಗೆ ಸಲ್ಲಿಸಬೇಕು ಎಂದು ಕಿವಿಮಾತು ಹೇಳಿದರು.
‘ಆಡಳಿತ ಮಂಡಳಿಗೆ ನಾಮ ನಿರ್ದೇಶನ ಸದಸ್ಯರನ್ನು ಅಧ್ಯಕ್ಷರು ಹಾಗೂ ಉಪಾಧ್ಯಕ್ಷರನ್ನಾಗಿ ಪರಿಗಣಿಸುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು ಈ ಬಗ್ಗೆ ಮರು ಚಿಂತಿಸಬೇಕಿದೆ’ ಎಂದರು.
‘ಕಳೆದ ಹಲವು ವರ್ಷಗಳಿಂದ ಆಡಿಟ್‍ನಲ್ಲಿ ‘ಎ’ ಸ್ಥಾನ ಪಡೆದಿರುವ ಬ್ಯಾಂಕು ಇದೇ ಮೊದಲ ಬಾರಿಗೆ ಶೇ 93ರಷ್ಟು ಅಂಕವನ್ನು ಪಡೆದಿದೆ. ಈಚೆಗೆ ನಡೆದ ಅಪೆಕ್ಸ್ ಬ್ಯಾಂಕಿನ ವಾರ್ಷಿಕ ಮಹಾಸಭೆಯಲ್ಲಿ ‘ಅತ್ಯುತ್ತಮ ಸಾಧನಾ ತೃತೀಯ ಪ್ರಶಸ್ತಿ’ಯೂ ದೊರೆತಿದೆ’ ಎಂದು ಹರ್ಷ ವ್ಯಕ್ತಪಡಿಸಿದರು.
ವಿವಿಧ ಸಹಕಾರ ಬ್ಯಾಂಕುಗಳ ಅಧ್ಯಕ್ಷರಾದ ನಂದ ಸುಬ್ಬಯ್ಯ, ಎಂ.ಬಿ.ದೇವಯ್ಯ, ರವಿಬಸಪ್ಪ, ನಾಗೇಶ್ ಕುಂದಲ್ಪಾಡಿ, ಕೃಷ್ಣ ಗಣಪತಿ ಇತರರು ಸಹಕಾರ ಸಂಘಗಳ ಬೆಳವಣಿಗೆ ಮತ್ತು ಅಭಿವೃದ್ಧಿ ಸಂಬಂಧಿಸಿದಂತೆ ಹಲವು ವಿಷಯ ಪ್ರಸ್ತಾಪಿಸಿದರು.
ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷರಾದ ಕೇಟೋಳಿರ ಎಸ್.ಪೂವಯ್ಯ, ನಿರ್ದೇಶಕರಾದ ಹೊಟ್ಟೆಂಗಡ ಎಂ.ರಮೇಶ್, ಹೊಸೂರು ಜೆ.ಸತೀಶ್ ಕುಮಾರ್, ಕೆ.ಅರುಣ್ ಭೀಮಯ್ಯ, ಕಾಂಗೀರ ಎನ್.ಸತೀಶ್, ಪೂಳಂಡ ಪಿ.ಪೆಮ್ಮಯ್ಯ, ಎಚ್.ಕೆ.ಮಾದಪ್ಪ, ಎಸ್.ಸಿ.ಶರತ್‍ಶೇಖರ್, ಎನ್.ಎಂ.ಉತ್ತಪ್ಪ, ಶರವಣ ಕುಮಾರ್ ಟಿ.ಆರ್., ಗುಮ್ಮಟ್ಟೀರ ಎಸ್.ಕಿಲನ್ ಗಣಪತಿ, ಜಲಜಾ ಶೇಖರ್, ಎಂ.ಕೆ.ಬೆಳ್ಳಿಯಪ್ಪ, ವೃತ್ತಿಪರ ನಿರ್ದೇಶಕರಾದ ಎ.ಗೋಪಾಲಕೃಷ್ಣ, ಮುಂಡಂಡ ಸಿ.ನಾಣಯ್ಯ ಸಹಕಾರ ಸಂಘಗಳ ಉಪ ನಿಬಂಧಕರಾದ ಜಿ.ಆರ್.ವಿಜಯ್ ಕುಮಾರ್, ಬ್ಯಾಂಕಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರವೀಣ್ ಬಿ ನಾಯಕ್, ಪ್ರಧಾನ ವ್ಯವಸ್ಥಾಪಕಿ ಜಿ.ಎಂ.ಬೋಜಮ್ಮ ಭಾಗವಹಿಸಿದ್ದರು.
ಅಪೆಕ್ಸ್ ಬ್ಯಾಂಕಿನ ವಾರ್ಷಿಕ ಮಹಾಸಭೆ ಆಡಿಟ್‍ನಲ್ಲಿ ‘ಎ’ ಸ್ಥಾನ ಪಡೆದಿರುವ ಬ್ಯಾಂಕ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.