ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಲಿಕಾಪ್ಟರ್‌ ಹಾರಾಟ: ಸ್ಥಳೀಯರಿಗೆ ತೊಂದರೆ

ಜಾಲಿರೈಡ್‌ ಸ್ಥಗಿತಕ್ಕೆ ಒತ್ತಾಯ, ಶಬ್ದ ಮಾಲಿನ್ಯದಿಂದ ವಯಸ್ಕರು, ಪುಟ್ಟ ಮಕ್ಕಳಿಗೆ ಸಮಸ್ಯೆ
Last Updated 28 ಡಿಸೆಂಬರ್ 2020, 11:20 IST
ಅಕ್ಷರ ಗಾತ್ರ

ಮಡಿಕೇರಿ: ಖಾಸಗಿ ಕಂಪನಿಯೊಂದು ಮಡಿಕೇರಿಯಲ್ಲಿ ಕಳೆದ ಐದು ದಿನಗಳಿಂದ ಜಾಲಿರೈಡ್‌ ಹೆಸರಿನಲ್ಲಿ ಹೆಲಿಕಾಪ್ಟರ್‌ ಹಾರಾಟ ನಡೆಸುತ್ತಿದ್ದು ಅದಕ್ಕೆ ಮಡಿಕೇರಿಯ ಹಲವು ಬಡಾವಣೆಗಳ ನಿವಾಸಿಗಳು ವಿರೋಧ ವ್ಯಕ್ತಪಡಿಸಿದ್ದಾರೆ.

ತಕ್ಷಣವೇ ನಗರ ಹೃದಯ ಭಾಗದಲ್ಲಿ ಮೋಜಿನ ಹಾರಾಟ ನಿಲ್ಲಿಸಬೇಕು. ನಗರದಿಂದ ಹೊರವಲಯಕ್ಕೆ ತಾತ್ಕಾಲಿಕ ಹೆಲಿಪ್ಯಾಡ್‌ ಸ್ಥಳಾಂತರ ಮಾಡಬೇಕು ಎಂದು ಜಿಲ್ಲಾಡಳಿತವನ್ನು ವಿವಿಧ ಬಡಾವಣೆಗಳ ಹಿರಿಯ ನಾಗರಿಕರು ಒತ್ತಾಯಿಸಿದ್ದಾರೆ.

ಸೋಮವಾರ ಜಿಲ್ಲಾಡಳಿತಕ್ಕೂ ಮನವಿ ಸಲ್ಲಿಸಿದ್ದಾರೆ. ಆದರೆ, ಜಿಲ್ಲಾಡಳಿತದಿಂದ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ.

ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಹಿರಿಯ ನಾಗರಿಕ ಕಾರ್ಯಪ್ಪ ಅವರು, ‘ಐದು ದಿನಗಳಿಂದ ಹೆಲಿಕಾಪ್ಟರ್‌ವೊಂದು ನಗರದ ಹೃದಯ ಭಾಗದಲ್ಲಿ ಹಾರಾಟ ನಡೆಸುತ್ತಿದ್ದು ಅದರಿಂದ ಹೊಮ್ಮುವ ಶಬ್ದದಿಂದ ಹಿರಿಯ ನಾಗರಿಕರಿಗೆ ತೊಂದರೆ ಆಗುತ್ತಿದೆ. ಜ.1ರ ತನಕ ಜಿಲ್ಲಾಡಳಿತವು ಅನುಮತಿ ನೀಡಿದೆ ಎಂಬ ಮಾಹಿತಿಯಿದೆ. ಬೆಳಿಗ್ಗೆ 9ರಿಂದ ಸಂಜೆ 5ರ ತನಕ ಹಾರಾಟ ನಡೆಸಬೇಕು. ಆದರೆ, ಸಂಜೆ 6.30ರ ತನಕವೂ ಹಾರಾಟ ನಡೆಸುತ್ತಿದೆ. ಸ್ಥಳದಲ್ಲಿ ಯಾವುದೇ ಮುನ್ನೆಚ್ಚರಿಕೆ ಕ್ರಮವನ್ನೂ ಕೈಗೊಂಡಿಲ್ಲ ಎಂದು ಆರೋಪಿಸಿದರು.

‘ಪ್ರತಿಯೊಬ್ಬರಿಗೆ ₹ 3ರಿಂದ ₹ 5,500ರ ತನಕ ದರವಿದೆ. ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ಹೆಸರಿನಲ್ಲಿ ದಂಧೆ ನಡೆಸಲಾಗುತ್ತಿದೆ. ಇದೊಂದು ವ್ಯವಹಾರ ಅಷ್ಟೆ. ನಿತ್ಯ 15 ಬಾರಿ ಟೇಕಾಫ್‌ ಆಗಿ, ಮತ್ತೆ 15 ಬಾರಿ ತಾತ್ಕಾಲಿಕ ಹೆಲಿಪ್ಯಾಡ್‌ನಲ್ಲಿ ಬಂದಿಳಿಯುತ್ತಿದೆ. ಇದರಿಂದ ಅಕ್ಕಪಕ್ಕದ ನಿವಾಸಿಗಳ ಕತೆಯೇನು? ಜೂನಿಯರ್‌ ಕಾಲೇಜಿಗೆ ಸೇರಿದ ಮೈದಾನದಲ್ಲಿ ತಾತ್ಕಾಲಿಕ ಹೆಲಿಪ್ಯಾಡ್‌ ನಿರ್ಮಿಸಲಾಗಿದ್ದು, ಅದು ಅತ್ಯಂತ ಅಪಾಯಕಾರಿ ಸ್ಥಳವಾಗಿದೆ. ಒಂದು ಬದಿ ಮಾತ್ರ ತೆರೆದ ಜಾಗವಿದ್ದು ಸುತ್ತಲೂ ಕಟ್ಟಡಗಳಿವೆ. ಸ್ಥಳವನ್ನು ಪರಿಶೀಲನೆ ನಡೆಸದೆಯೇ ಅನುಮತಿ ನೀಡಲಾಗಿದೆ. ಅಗ್ನಿಶಾಮಕ ದಳದ ವಾಹನವೂ ಸ್ಥಳದಲ್ಲಿ ಇಲ್ಲ’ ಎಂದು ಕಾರ್ಯಪ್ಪ ಅವರು ಹೇಳಿದರು.

‘ಅಕ್ಕಪಕ್ಕದ ಬಡಾವಣೆಗಳಲ್ಲಿ 80ಕ್ಕೂ ಮೇಲ್ಪಟ್ಟ ವಯಸ್ಸಿನವರು ಇದ್ದಾರೆ. ಪುಟ್ಟ ಮಕ್ಕಳಿದ್ದಾರೆ. ಕೊರೊನಾ ಕಾರಣಕ್ಕೆ ಮನೆಯಿಂದಲೇ ಸಾಫ್ಟ್‌ವೇರ್‌ ಎಂಜಿನಿಯರ್‌ಗಳು ಕೆಲಸ ಮಾಡುತ್ತಿದ್ದಾರೆ. ಶಬ್ದ ಮಾಲಿನ್ಯ ಹಾಗೂ ವಾಯು ಮಾಲಿನ್ಯದಿಂದ ಸಮಸ್ಯೆಯಾಗುತ್ತಿದೆ’ ಎಂದು ಕಾರ್ಯಪ್ಪ ಅವರು ನೋವು ತೋಡಿಕೊಂಡರು.

ಕ್ರೀಡಾಪಟುಗಳಿಗೆ ತೊಂದರೆ:

ತಾತ್ಕಾಲಿಕವಾಗಿ ನಿರ್ಮಿಸಿರುವ ಹೆಲಿಪ್ಯಾಡ್‌ನಲ್ಲಿ ಬ್ಯಾಸ್ಕೆಟ್‌ಬಾಲ್‌, ಫುಟ್‌ಬಾಲ್‌ ಮೈದಾನವಿದೆ. ಪ್ರತಿನಿತ್ಯ ಹತ್ತಾರು ಮಂದಿ ಈ ಮೈದಾನದಲ್ಲಿ ವಾಯು ವಿವಾಹ ನಡೆಸುತ್ತಿದ್ದರು. ಆದರೆ, ಅವರಿಗೆ ತೊಂದರೆಯಾಗುತ್ತಿದೆ ಎಂದು ಹೇಳಿದರು.

ನಿವೃತ್ತ ಅಧಿಕಾರಿಯೂ ಆಗಿರುವ ಹಿರಿಯ ನಾಗರಿಕ ಕೆ.ತಿಮ್ಮಯ್ಯ ಮಾತನಾಡಿ, ‘ಜಿಲ್ಲಾಡಳಿತ ಅನುಮತಿ ನೀಡಿದೆಯೋ ಇಲ್ಲವೇ ಗೊತ್ತಿಲ್ಲ. ಪ್ರಶಾಂತ ವಾತಾವರಣ ಮಡಿಕೇರಿಯಲ್ಲಿ ವಾಯು ಮಾಲಿನ್ಯ, ಶಬ್ದ ಮಾಲಿನ್ಯ ಆಗುತ್ತಿದ್ದರೂ ಯಾರೊಬ್ಬರೂ ಗಮನ ಹರಿಸುತ್ತಿಲ್ಲ. ಯಾರೋ ದುಡ್ಡು ಮಾಡಿಕೊಳ್ಳಲು ಜನರ ನೆಮ್ಮದಿ ಕೆಟ್ಟಿದೆ’ ಎಂದು ನೋವು ತೋಡಿಕೊಂಡರು.

ಪತ್ರಿಕಾಗೋಷ್ಠಿಯಲ್ಲಿ ಎಂ.ಪಿ.ಕಾವರಪ್ಪ ಹಾಜರಿದ್ದರು.

‘ಮೀಸಲು ಅರಣ್ಯದ ಮೇಲೂ ಹಾರಾಟ’
ಮಡಿಕೇರಿ: ‘ಜಾಲಿರೈಡ್‌’ ಹೆಸರಿನಲ್ಲಿ ಹಾರಾಟ ನಡೆಸುತ್ತಿರುವ ಹೆಲಿಕಾಪ್ಟರ್‌ ರಕ್ಷಿತಾ ಅರಣ್ಯದ ಮೇಲೂ ಹಾರಾಟ ನಡೆಸುತ್ತಿದೆ. ಇದರಿಂದ ವನ್ಯಜೀವಿಗಳಿಗೂ ತೊಂದರೆ ಆಗುತ್ತಿದೆ. ಐಎಫ್‌ಎಸ್ ಅಧಿಕಾರಿಗಳು ಇದನ್ನು ಗಮನ ಹರಿಸುತ್ತಿಲ್ಲ ಎಂದು ನಿವಾಸಿ ಕಾರ್ಯಪ್ಪ ಅವರು ದೂರಿದರು.

ಇನ್ನು ಓಂಕಾರೇಶ್ವರ ದೇಗುಲದಲ್ಲಿ ಅಷ್ಟಮಂಗಲ ಕಾರ್ಯಕ್ರಮ ನಡೆಯುತ್ತಿದೆ. ದೇಗುಲದ ಮೇಲೂ ವಿಮಾನ ಹಾರಾಟ ನಡೆಸುತ್ತಿದೆ. ಸಂಬಂಧಿಸಿದವರು ಗಮನ ಹರಿಸಬೇಕು ಎಂದು ಕೋರಿದರು.

ಜನಪ್ರತಿನಿಧಿಗಳಿಗೆ ಕಣ್ಣು, ಕಿವಿಯಿಲ್ಲ. ಖಾಸಗಿ ಕಂಪನಿ ಹಣಕ್ಕಾಗಿ ಹೆಲಿಕಾಪ್ಟರ್‌ ಹಾರಾಟ ನಡೆಸಿ, ಶಬ್ದ ಮಾಲಿನ್ಯ ಮಾಡುತ್ತಿದ್ದರೆ ಗಮನ ಹರಿಸುತ್ತಿಲ್ಲ
ಕಾರ್ಯಪ್ಪ, ಸ್ಥಳೀಯ ನಿವಾಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT