ಗುರುವಾರ , ಆಗಸ್ಟ್ 5, 2021
21 °C
ಜಿಲ್ಲೆಯ ಶಾಸಕರು, ಜಿಲ್ಲಾಧಿಕಾರಿಗೆ ಜವಾಬ್ದಾರಿ: ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ

ಕೊಡಗು: ಪರಿಸ್ಥಿತಿ ಅವಲೋಕಿಸಿ ನಿರ್ಬಂಧದ ತೀರ್ಮಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಡಿಕೇರಿ: ‘ಒಂದು ವಾರ ಜಿಲ್ಲೆಯಲ್ಲಿ ಕೋವಿಡ್–19 ಪರಿಸ್ಥಿತಿ ಅವಲೋಕಿಸಲಾಗುವುದು. ಪರಿಸ್ಥಿತಿ ಸುಧಾರಣೆ ಆಗದಿದ್ದರೆ ಕೆಲವು ನಿರ್ಬಂಧ ವಿಧಿಸುವ ತೀರ್ಮಾನಕ್ಕೆ ಬರಲಾಗುವುದು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಹೇಳಿದರು.

ಇಲ್ಲಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಸಭೆಯ ಬಳಿಕ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

‘ರಾಜ್ಯ ಹಾಗೂ ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಜಿಲ್ಲೆಯಲ್ಲಿ ಎಲ್ಲ ರೀತಿಯ ಕ್ರಮ ಕೈಗೊಳ್ಳಲಾಗುತ್ತಿದೆ. ರ್‍ಯಾಂಡಮ್‌ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. 10,582 ಜನರ ಗಂಟಲು ದ್ರವವನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು ಅದರಲ್ಲಿ 9,005 ಮಂದಿಗೆ ನೆಗೆಟಿವ್‌ ಬಂದಿದೆ. 1,455 ಮಂದಿಯ ವರದಿ ಬರಬೇಕಿದೆ. 131 ಮಂದಿಗೆ ಪಾಸಿಟಿವ್‌ ಬಂದಿತ್ತು ಎಂದು ಅವರು ವಿವರಿಸಿದರು.

ಒಂದು ವಾರ ಪರಿಸ್ಥಿತಿ ಅವಲೋಕಿಸುತ್ತೇವೆ. ಕ್ಲಿಷ್ಟ ಪರಿಸ್ಥಿತಿ ಎದುರಾದರೆ ಕೆಲವು ನಿರ್ಬಂಧ ಹೇರಲಾಗುವುದು. ಜಿಲ್ಲೆಯ ಶಾಸಕರು ಹಾಗೂ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಭೆ ನಡೆಸಿ ಯಾವುದಕ್ಕೆ ನಿರ್ಬಂಧ ಹೇರಬೇಕು ಎಂಬ ತೀರ್ಮಾನ ತಿಳಿಸಿದರೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಿಂದ ಒಪ್ಪಿಗೆ ಕೊಡಿಸುತ್ತೇನೆ’ ಎಂದು ಭರವಸೆ ನೀಡಿದರು.

‘ಜಿಲ್ಲೆಯಲ್ಲಿ 112 ಸಕ್ರಿಯ ಪ್ರಕರಣಗಳಿವೆ. ಒಬ್ಬರು ಮಾತ್ರ ಐಸಿಯುನಲ್ಲಿದ್ದಾರೆ. ಉಳಿದವರ ಆರೋಗ್ಯದಲ್ಲಿ ಸುಧಾರಣೆ ಆಗುತ್ತಿದೆ’ ಎಂದು ಹೇಳಿದರು.

‘ಆರಂಭಿಕ ದಿನಗಳಲ್ಲಿ ರಾಜ್ಯದಲ್ಲಿ ಕೋವಿಡ್‌ ಪರೀಕ್ಷೆಯ ಎರಡು ಲ್ಯಾಬ್‌ಗಳು ಮಾತ್ರ ಇದ್ದವು. ಈಗ ರಾಜ್ಯದಲ್ಲಿ 83 ಪ್ರಯೋಗಾಲಯಗಳಿವೆ. ಚಿಕ್ಕಮಗಳೂರಿನಲ್ಲಿ ಇನ್ನೆರಡು ದಿನದಲ್ಲಿ ಲ್ಯಾಬ್‌ಗೆ ಚಾಲನೆ ಸಿಗಲಿದೆ. ಇನ್ನೂ ಎಲ್ಲೆಲ್ಲಿ ಅವಶ್ಯವಿದೆಯೋ ಅಲ್ಲಿ, ಲ್ಯಾಬ್‌ ತೆರೆಯಲಾಗುವುದು. ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ’ ಎಂದು ಸೋಮಣ್ಣ ಹೇಳಿದರು.

‘ಗಂಟಲು ಮಾದರಿಯನ್ನು ಬೆಳಿಗ್ಗೆ ಸಂಗ್ರಹಿಸಿದರೆ, ಅದೇ ದಿನ ಸಂಜೆ ವರದಿ ನೀಡುವ ಕ್ರಮ ಆಗುತ್ತಿದೆ’ ಎಂದು ಮಾಹಿತಿ ನೀಡಿದರು.

‘ತರಕಾರಿ, ಸಿಮೆಂಟ್‌ ಹಾಗೂ ರಸಗೊಬ್ಬರ ತರುವ ಚಾಲಕರಿಗೆ ಕೋವಿಡ್‌ ಪರೀಕ್ಷೆ ಆಗಿದೆಯೇ, ಎಲ್ಲವೇ ಎಂಬುದನ್ನು ಪರಿಶೀಲಿಸುವಂತೆ ತಿಳಿಸಲಾಗಿದೆ. ಅಲ್ಲದೇ ಕೋವಿಡೇತರ ಕಾಯಿಲೆಯಿಂದ ಬಳಲುತ್ತಿರುವ ರೋಗಿಗಳು ಆಸ್ಪತ್ರೆಗೆ ಬಂದರೆ ಯಾರನ್ನೂ ಬೇರೆ ಜಿಲ್ಲೆಗಳಿಗೆ ಕಳುಹಿಸುವಂತಿಲ್ಲ. ಚಿಕಿತ್ಸೆಗೆ ದಾಖಲು ಮಾಡಿಕೊಳ್ಳಬೇಕು. ರಾಜ್ಯಕ್ಕೆ ಹೊಸದಾಗಿ 500 ಆಂಬುಲೆನ್ಸ್‌ ಖರೀದಿಸಲಾಗುತ್ತಿದೆ. ಎರಡನ್ನು ಜಿಲ್ಲೆಗೆ ಕಳುಹಿಸಲಾಗುವುದು’ ಎಂದು ಹೇಳಿದರು.

ಸಭೆಯಲ್ಲಿ ಏನೇನು?: ಸಭೆಯಲ್ಲಿ ಮಾತನಾಡಿದ ಶಾಸಕ ಕೆ.ಜಿ.ಬೋಪಯ್ಯ, ‘ಚಿಕಿತ್ಸೆಗಾಗಿ ಅಶ್ವಿನಿ ಆಸ್ಪತ್ರೆಗೆ ಬಂದವರನ್ನು ಹೊರ ಜಿಲ್ಲೆಗೆ ಕಳುಹಿಸಿರುವುದು ಗೊತ್ತಾಗಿದೆ. ಇನ್ನುಮುಂದೆ ಈ ರೀತಿಯಾಗಬಾರದು. ಅಲ್ಲದೇ ಕೋವಿಡ್‌ ಇದ್ದವರನ್ನು ಅಶ್ವಿನಿ ಆಸ್ಪತ್ರೆಯಲ್ಲಿ ದಾಖಲಿಸಿಕೊಂಡಿದ್ದು ಎಷ್ಟು ಸರಿ? ಇದರಿಂದ ಬೇರೆ ಕಾಯಿಲೆಯಿಂದ ಬಳಲುತ್ತಿರುವ ರೋಗಿಗಳಿಗೆ ತೊಂದರೆ ಆಗುವುದಿಲ್ಲವೇ’ ಎಂದು ಪ್ರಶ್ನಿಸಿದರು.‌

ಎಫ್.‌ಐ.ಆರ್‌ ಹಾಕಲು ಸೂಚನೆ: ‘ಬೆಂಗಳೂರಿನಿಂದ ಬಂದವರು ಎಲ್ಲೆಂದರಲ್ಲಿ ಓಡಾಡುತ್ತಿದ್ದಾರೆ. ಅಂಥವರ ವಿರುದ್ಧ ಪ್ರಕರಣ ದಾಖಲು ಮಾಡಬೇಕು. ಅವರ ಪರವಾಗಿ ಪ್ರತಿಭಟನೆ ನಡೆಸಿದರೆ, ಅವರ ವಿರುದ್ಧವೂ ಕೇಸು ಹಾಕಿ’ ಎಂದು ಬೋಪಯ್ಯ ಸೂಚನೆ ನೀಡಿದರು.

ಡಿ.ಸಿ ವಿರುದ್ಧ ಕೆಜಿಬಿ ಗರಂ: ‘ಜಿಲ್ಲಾ ಪಂಚಾಯಿತಿ ಅಧ್ಯಕ್ಷರನ್ನು ಕೋವಿಡ್‌ ನಿಯಂತ್ರಣಕ್ಕೆ ಸಂಬಂಧಿಸಿದ ಯಾವುದೇ ಸಭೆಗೂ ಆಹ್ವಾನಿಸಿಲ್ಲ. ಎಲ್ಲರೂ ಒಗ್ಗೂಡಿ ಕೆಲಸ ಮಾಡಬೇಕು. ಅಧ್ಯಕ್ಷರು ಕೋ ಛೇರ್ಮನ್‌. ಅವರನ್ನು ಎಷ್ಟು ಮೀಟಿಂಗ್‌ಗೆ ಕರೆಯಲಾಗಿದೆ’ ಎಂದು ಜಿಲ್ಲಾಧಿಕಾರಿ ವಿರುದ್ಧ ಕೆಜಿಬಿ ಗರಂಗೊಂಡರು.

ಅದಕ್ಕೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್‌ ಪ್ರತಿಕ್ರಿಯಿಸಿ, ‘ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಸದಸ್ಯರೂ ಸಹಕಾರ ನೀಡುತ್ತಿದ್ದಾರೆ. ಇನ್ನುಮುಂದೆ ಮತ್ತೊಂದು ಆದೇಶ ಮಾಡಿ ಎಲ್ಲರನ್ನೂ ಒಗ್ಗೂಡಿಸಿ ಕೆಲಸ ಮಾಡಲಾಗುವುದು’ ಎಂದು ಸ್ಪಷ್ಟನೆ ನೀಡಿದರು.

ಶಾಸಕ ಎಂ.ಪಿ.ಅ‌ಪ್ಪಚ್ಚು ರಂಜನ್‌ ಮಾತನಾಡಿ, ‘ಬೆಂಗಳೂರಿನಿಂದ ಬಂದ ಎಲ್ಲರನ್ನೂ ಕ್ವಾರಂಟೈನ್‌ಗೆ ಒಳಪಡಿಸಬೇಕು. ಚೆಕ್‌ಪೋಸ್ಟ್‌ನಲ್ಲಿ ತಪಾಸಣೆ ಮಾಡಿ ಜಿಲ್ಲೆಯ ಒಳಕ್ಕೆ ಬಿಡಬೇಕು. ಇನ್ನಷ್ಟು ಬಿಗಿಯಾದ ಕ್ರಮ ಆಗಬೇಕು’ ಎಂದು ಕೋರಿದರು. ಅದಕ್ಕೆ ಸೋಮಣ್ಣ ಸ್ಪಷ್ಟನೆ ನೀಡಿ, ‘ಸೀಲ್‌ ಹಾಕುವ ವ್ಯವಸ್ಥೆ ಈಗಿಲ್ಲ. ನಾಲ್ಕೈದು ದಿನ ಪರಿಸ್ಥಿತಿ ಅವಲೋಕಿಸಿ ಎಲ್ಲ ತೀರ್ಮಾನ ಮಾಡೋಣ’ ಎಂದು ಹೇಳಿದರು.

ವಿಧಾನ ಪರಿಷತ್‌ ಸದಸ್ಯೆ ವೀಣಾ ಅಚ್ಚಯ್ಯ ಮಾತನಾಡಿ, ‘ಜಿಲ್ಲೆಯಲ್ಲಿ ಕೊರೊನಾ ಹಾವಳಿಯ ಜೊತೆಗೆ, ವನ್ಯಜೀವಿಗಳ ಹಾವಳಿಯೂ ಜಾಸ್ತಿಯಾಗಿದೆ. 2018 ಹಾಗೂ 2019ರ ಮಹಾಮಳೆಯಿಂದ ಮನೆ ಬಿರುಕು ಬಿಟ್ಟವರಿಗೆ ಅಲ್ಪಮೊತ್ತದ ಪರಿಹಾರ ವಿತರಿಸಲಾಗಿದೆ. ಅವರಿಗೆ ಯಾವುದಾದರೂ ಯೋಜನೆ ಅಡಿ, ಮನೆ ದುರಸ್ತಿಗೆ ಅನುದಾನ ಕೊಡಿಸಿ’ ಎಂದು ಸಚಿವರಲ್ಲಿ ಕೋರಿದರು.

ಸಂಸದ ಪ್ರತಾಪ ಸಿಂಹ ಮಾತನಾಡಿ, ‘ಅನ್‌ಲಾಕ್‌ ಆದ ನಂತರ ಜನರ ಓಡಾಟ ಹೆಚ್ಚಾಗಿದೆ. ಈಗ ಕೊರೊನಾ ಯಾರಿಂದಲೂ ಹಿಡಿದಿಡಲು ಸಾಧ್ಯವಿಲ್ಲ. ನಿಯಂತ್ರಣಕ್ಕೆ ಹಾಗೂ ಜನರ ಜೀವ ಉಳಿಸಲು ಎಲ್ಲ ಸಿದ್ಧತೆ ಮಾಡಿಕೊಳ್ಳಬೇಕಿದೆ. ರೋಗ ಲಕ್ಷಣ ಇಲ್ಲದವರು ಹಾಗೂ ಗಂಭೀರ ಸ್ಥಿತಿಯಲ್ಲಿ ಇದ್ದವರಿಗೆ ಬೇರೆ ಜಿಲ್ಲೆಯಲ್ಲೂ ಚಿಕಿತ್ಸೆಗೆ ಸಿದ್ಧತೆ ಮಾಡಿಕೊಳ್ಳಬೇಕು. 1,500ರಷ್ಟು ಬೆಡ್‌ ವ್ಯವಸ್ಥೆ ಮಾಡಿಕೊಳ್ಳಬೇಕು’ ಎಂದು ಜಿಲ್ಲಾಡಳಿತಕ್ಕೆ ಸೂಚನೆ ನೀಡಿದರು.

ಸಭೆಯಲ್ಲಿ ವಿಧಾನ ಪರಿಷತ್‌ ಸದಸ್ಯ ಸುನಿಲ್‌ ಸುಬ್ರಮಣಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕ್ಷಮಾ ಮಿಶ್ರಾ, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್‌ ಇದ್ದರು.

ಕೇರಳದವರಿಗೂ ಈಗ ಕೊಡಗು ಕಂಡರೆ ಭಯ!

‘ಆರಂಭದಲ್ಲಿ ಕೇರಳದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗಿದ್ದರಿಂದ ಯಾರೂ ಜಿಲ್ಲೆಯತ್ತ ಬರಬಾರದೆಂದು ಮಣ್ಣು ಹಾಕಿ ರಸ್ತೆ ಬಂದ್ ಮಾಡಿದ್ದೆವು. ಈಗ ನಮ್ಮ ಜಿಲ್ಲೆಯಲ್ಲೇ ಪ್ರಕರಣಗಳು ಹೆಚ್ಚುತ್ತಿವೆ. ಇಲ್ಲಿಂದ ಯಾರೂ ಕೇರಳಕ್ಕೆ ಬರಬಾರದೆಂದು ಅವರೇ ಆಳೆತ್ತರದ ಮಣ್ಣು ಹಾಕಿ ರಸ್ತೆ ಬಂದ್‌ ಮಾಡುತ್ತಿದ್ದಾರೆ’ ಎಂದು ಶಾಸಕ ಕೆ.ಜಿ.ಬೋಪಯ್ಯ ಸಭೆಯ ಗಮನ ಸೆಳೆದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು