ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೆಡ್ಡೆ- ಗೆಣಸು ಬೆಳೆದ ರೈತರಿಗೆ ನಷ್ಟ

ಕೋವಿಡ್‌ ಪರಿಣಾಮ: ಉತ್ತಮ ಫಸಲಿಗೂ ಬೇಡಿಕೆ ಇಲ್ಲ, ಸಾಗಣೆಯೇ ಕಷ್ಟ
Last Updated 10 ಮೇ 2021, 4:01 IST
ಅಕ್ಷರ ಗಾತ್ರ

ಸೋಮವಾರಪೇಟೆ: ಲಾಕ್‌ಡೌನ್ ಹಿನ್ನೆಲೆಯಲ್ಲಿ ಕೃಷಿ ಉತ್ಪನ್ನಗಳಿಗೆ ಬೆಲೆ ಇಲ್ಲ. ಬೆಳೆಯನ್ನು ಯಾರೂ ಖರೀದಿಸಲು ಮುಂದೆ ಬಾರದ್ದರಿಂದ ರೈತರು ಕಂಗಾಲಾಗಿದ್ದಾರೆ.

ಕೊರೊನಾ ಹಾವಳಿಯಿಂದಾಗಿ ಕಳೆದ ಒಂದೂಕಾಲು ವರ್ಷದಿಂದ ಯಾವುದೇ ರೀತಿಯ ಗೆಡ್ಡೆ ಗೆಣಸಿಗೆ ಸೂಕ್ತ ಬೆಲೆ ದೊರೆಯುತ್ತಿಲ್ಲ. ರೈತರುಸಾಕಷ್ಟು ಪರಿಶ್ರಮದಿಂದ ಬೆಳೆದ ಸಿಹಿಗೆಣಸು, ಸುವರ್ಣ ಗೆಡ್ಡೆ, ಕೇಸು, ಬೇರುಗೆಣಸು ಸೇರಿದಂತೆ ಹಲವು ಗೆಡ್ಡೆಗಳನ್ನು ತಾಲ್ಲೂಕಿನ ಹಲವೆಡೆ ಬೆಳೆದಿದ್ದಾರೆ. ಇಲ್ಲಿಯ ಬೆಳೆಗಾರರೆಲ್ಲ ಹೆಚ್ಚಾಗಿ ಮಹಾರಾಷ್ಟ್ರ, ಕೇರಳ, ತಮಿಳುನಾಡು, ಆಂಧ್ರಪ್ರದೇಶ, ದೆಹಲಿ ರಾಜ್ಯಗಳ ಮಾರುಕಟ್ಟೆಯನ್ನೇ ನಂಬಿಕೊಂಡಿದ್ದಾರೆ. ಆದರೆ, ಕೊರೊನಾ ಹಾವಳಿ ಹೆಚ್ಚಾದಂತೆ ಹೊರ ರಾಜ್ಯಗಳಿಗೆ ಲಾರಿಗಳು ಹೋಗುವ ಹಾಗಿಲ್ಲ. ಇದರಿಂದಾಗಿ ಖರೀದಿದಾರರು ಕೃಷಿ ಜಮೀನಿಗೆ ಬಂದು ಗೆಡ್ಡೆ ಫಸಲನ್ನು ಖರೀದಿಸಲು ಮುಂದಾಗುವುದಿಲ್ಲ.

ಗೆಣಸಿನ ಬೆಳೆ ಆರು ತಿಂಗಳಿನಿಂದ ಒಂದು ವರ್ಷದಲ್ಲಿ ಕಟಾವಿಗೆ ಬರುತ್ತವೆ. ಈ ಸಮಯದಲ್ಲಿ ಅದನ್ನು ಭೂಮಿಯಿಂದ ಹೊರಗೆ ತೆಗೆದು ವಿಲೇವಾರಿ ಮಾಡಬೇಕು. ತಪ್ಪಿದಲ್ಲಿ ಮಣ್ಣಿನಲ್ಲಿಯೇ ಹಾಳಾಗುತ್ತದೆ. ಕೆ.ಜಿಗೆ ₹ 15ರಿಂದ ₹ 25 ವರೆಗೆ ಮಾರಾಟವಾಗುತ್ತಿದ್ದ ಗೆಣಸಿನ ಬೆಳೆ ₹ 4 ರಿಂದ ₹ 5ಕ್ಕೆ ಬಂದು ನಿಂತಿದೆ. ಕೆಲವು ಖರೀದಿದಾರರು ಬಂದರೂ, ಹೆಚ್ಚಿನ ಪ್ರಮಾಣದಲ್ಲಿ ತೆಗೆದುಕೊಳ್ಳುತ್ತಿಲ್ಲ ಎಂದು ರೈತರ ತಮ್ಮ ಸಂಕಟ ಹೇಳಿಕೊಂಡಿದ್ದಾರೆ.

ತಾಲ್ಲೂಕಿನ ಕೂಡಿಗೆ, ಹೆಗ್ಗಡಹಳ್ಳಿ, ಹುದುಗೂರು, ಹಾರಂಗಿ, ಯಡವನಾಡು, ಬಾಣವಾರ, ಆಲೂರುಸಿದ್ದಾಪುರ, ಗಣಗೂರು, ಗೋಣಿಮರೂರು, ಅಳುವಾರ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಲ್ಲಿ ಹೆಚ್ಚಿನ ರೈತರು ಗೆಣಸನ್ನೇ ಬೆಳೆಯುತ್ತಿದ್ದಾರೆ. ಉತ್ತಮ ಇಳುವರಿಯೂ ಸಿಗುತ್ತಿದೆ. ಆದರೆ, ಬೆಲೆ ಮಾತ್ರ ದೊರೆಯುತ್ತಿಲ್ಲ. ಕೆಲವು ಕಡೆಗಳಲ್ಲಿ ಇನ್ನೂ ಗೆಣಸನ್ನು ಭೂಮಿಯಿಂದ ತೆಗೆಯದಿರುವುದರಿಂದ ಒಣಗುತ್ತಿದೆ. ಇನ್ನು ಬೇರುಗೆಣಸನ್ನು ಕೆ.ಜಿ ಯೊಂದಕ್ಕೆ ₹ 2ರಿಂದ 3 ಕ್ಕೆ ಖರೀದಿಸಲು ಮುಂದಾಗುತ್ತಿರುವುದರಿಂದ ಹೊಲದಲ್ಲಿಯೇ ಟ್ರಾಕ್ಟರ್ ಮೂಲಕ ಉತ್ತಿ ಮಣ್ಣಿಗೆ ಸೇರಿಸುತ್ತಿರುವುದು ಗಣಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಲವೆಡೆ ಕಾಣಬಹುದಾಗಿದೆ.

ಗೆಣಸಿನ ಕೃಷಿಗೆ ತಾಲ್ಲೂಕಿನಲ್ಲಿನ ಮಣ್ಣು, ಉತ್ತಮ ವಾತಾವರಣ ಅನುಕೂಲಕರವಾಗಿದೆ. ಕಷ್ಟಪಟ್ಟ ದುಡಿದು ಬೆಳೆಯುತ್ತಿರುವ ಯಾವುದೇ ರೀತಿಯ ಗೆಣಸಿಗೆ ಬೆಲೆ ಇಲ್ಲದೆ, ರೈತರು ಭಾರಿ ನಷ್ಟಕ್ಕೊಳಗಾಗುತ್ತಿದ್ದಾರೆ.

‘ನಮ್ಮ ಹಿತ ಕಾಯಲು ಯಾವುದೇ ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ ಮುಂದಾಗುತ್ತಿಲ್ಲ’ ಎಂದು ಗಣಗೂರು ಗ್ರಾಮದ ಕಿರಣ ತಮ್ಮ ಸಮಸ್ಯೆ ಹೇಳಿದರು.

ಗೆಣಸಿನ ಫಸಲಿಗೆ ಕಾಡು ಪ್ರಾಣಿಗಳ ಹಾವಳಿ ಹೆಚ್ಚು. ಕಾಡು ಹಂದಿಗಳು, ಆನೆಗಳ ಉಪಟಳ ನಿಯಂತ್ರಿಸಿ ಬೆಳೆಯಬೇಕಾಗಿದೆ. ರೈತರು ಬೆಳೆದ ಯಾವುದೇ ಬೆಳೆಗೆ ಬೆಲೆ ಸಿಗುತ್ತಿಲ್ಲ. ಎಂಬುದು ಬೆಳೆಗಾರರ ಸಂಕಟ ಒಂದು ಕಡೆಯಾದರೆ, ಇದೇ ಗೆಡ್ಡೆ ಗೆಣಸುಗಳನ್ನು ಅಂಗಡಿಗಳಲ್ಲಿ ಹೆಚ್ಚಿನ ಬೆಲೆಗೆ ಖರೀದಿಸಬೇಕಾಗಿದೆ ಎಂಬುದು ಗ್ರಾಹಕರ ಬೇಸರದ ನುಡಿ.

‘ರೈತರಿಗೆ ಬೆಲೆ ಸಿಗುತ್ತಿಲ್ಲ. ಬಳಕೆದಾರರೂ ಹೆಚ್ಚಿನ ಬೆಲೆ ನೀಡುವುದು ತಪ್ಪುತ್ತಿಲ್ಲ. ಕಷ್ಟಪಟ್ಟವರಿಗೆ ಸಿಗಬೇಕಾದ ಹಣ ಸಲಿಸಾಗಿ ಮಧ್ಯವರ್ತಿಗಳ ಪಾಲಾಗಿ ಅವರು ಆರ್ಥಿಕವಾಗಿ ಸಬಲರಾಗುತ್ತಿದ್ದಾರೆ’ ಎಂದು ಯರಪಾರೆ ಗ್ರಾಮದ ಸತೀಶ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT