ಮಡಿಕೇರಿ: ಬಿಸಿಲಿನಿಂದ ಇಳೆ ತಂಪಾಗುತ್ತಾ, ಬಾನಂಗಳದಲ್ಲಿ ಕೆಂಬಣ್ಣ ಮೂಡುತ್ತಿದ್ದಂತೆ ಇಲ್ಲಿ ‘ಮಡಿಕೇರಿ ದಸರಾ ಜನೋತ್ಸವ’ ಪುಸ್ತಕದ ಪುಟಗಳು ತೆರೆದುಕೊಂಡವು.
ವಾರ್ತಾ ಕಮ್ಯೂನಿಕೇಷನ್ಸ್ ಇಲ್ಲಿನ ರೆಡ್‌ಬ್ರಿಕ್ಸ್ ಹೋಟೆಲ್‌ನ ಸತ್ಕಾರ ಸಭಾಂಗಣದಲ್ಲಿ ಭಾನುವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಲೇಖಕ ಎಚ್.ಟಿ.ಅನಿಲ್ ಅವರ ‘ಮಡಿಕೇರಿ ದಸರಾ ಜನೋತ್ಸವ’ ಪುಸ್ತಕ ಲೋಕಾರ್ಪಣೆಗೊಂಡಿತು.
ಒಟ್ಟು 128 ಪುಟಗಳಿರುವ ಈ ಪುಸ್ತಕವು ಮಡಿಕೇರಿ ದಸರೆಯ ಐತಿಹಾಸಿಕ ಕ್ಷಣಗಳನ್ನು ಹಿಡಿದಿಟ್ಟಿದೆ. ದಸರೆಗೆ ಮುನ್ನುಡಿ ಬರೆಯಲಿರುವ ಶಕ್ತಿ ದೇವತೆಗಳ ಕರಗೋತ್ಸವ, ದಶಮಂಟಪಗಳನ್ನು ಹೊರಡಿಸುವ 10 ದೇಗುಲಗಳ ಇತಿಹಾಸ ಸೇರಿದಂತೆ ಇತಿಹಾಸದಲ್ಲಿ ದಾಖಲಾಗಿರುವ ಹಲವು ಅಂಶಗಳು ಪುಸ್ತಕದ ಒಡಲಲ್ಲಿದೆ.
ಕಾರ್ಯಕ್ರಮದ ಆರಂಭದಲ್ಲೇ ಲೇಖಕ ಎಚ್.ಟಿ.ಅನಿಲ್ ಅವರು, ಮಡಿಕೇರಿ ದಸರೆಗೆ ಹೊಸರೂಪವನ್ನು ಕಟ್ಟಿಕೊಡುವ ಹಲವು ವಿಚಾರಗಳ ಮೇಲೆ ಬೆಳಕು ಚೆಲ್ಲಿದರು. ಸದ್ಯ, ಮಡಿಕೇರಿ ದಸರಾವನ್ನು ಪ್ರಚಾರ ಮಾಡುವಲ್ಲಿ ಸಂಪೂರ್ಣ ವಿಫಲರಾಗಿದ್ದೇವೆ ಎಂಬ ಬೇಸರವನ್ನೂ ವ್ಯಕ್ತಪಡಿಸಿದರು.
‘ಮೈಸೂರು ದಸರೆ, ಕೇರಳದ ಅನೇಕ ಉತ್ಸವಗಳ ಕುರಿತು ಮಾಹಿತಿಗಳನ್ನು ಹಂಚಿಕೊಂಡ ಅವರು ಮಡಿಕೇರಿ ದಸರೆಯಲ್ಲಿ ಇಂದಿಗೂ ಮಹಿಳೆಯರು ಹೋಗಲಾಗದ ಸ್ಥಿತಿ ಇದೆ. ಇದಕ್ಕೆಲ್ಲ ನಾವು ನಮ್ಮ ದಸರೆಯನ್ನು ಸರಿಯಾದ ಮಾರ್ಗದಲ್ಲಿ ಹೊರಜಗತ್ತಿಗೆ ತಿಳಿಸದೇ ಇರುವುದೇ ಆಗಿದೆ’ ಎಂದು ವಿಶ್ಲೇಷಿಸಿದರು.
ಇದಕ್ಕೆ ದನಿಗೂಡಿಸಿದ ಜಿಲ್ಲಾಧಿಕಾರಿ ವೆಂಕಟ್ ರಾಜಾ, ‘ಮಡಿಕೇರಿ ದಸರೆಯ ಮಾಹಿತಿಗಳನ್ನು ಸಮರ್ಪಕವಾಗಿ ದಾಖಲಾತಿ ಮಾಡುವ ಕಾರ್ಯ ಕೂಡ ಆಗಿಲ್ಲ. ಈ ವರ್ಷದಿಂದ ಇದನ್ನು ಆರಂಭಿಸಲಾಗುವುದು’ ಎಂದು ಹೇಳಿದರು.
‘ಎಲ್ಲರೂ ಒಂದು ತಂಡವಾಗಿ ಕೆಲಸ ಮಾಡಿದರೆ ಸಹಕಾರ ನೀಡಿದರೆ ಈ ಬಾರಿ ದಸರೆಯು ಯಶಸ್ವಿಯಾಗಲಿದೆ’ ಎಂದರು.
ಮಡಿಕೇರಿ ದಸರಾ ಸಮಿತಿಯ ಕಾರ್ಯಾಧ್ಯಕ್ಷ ಪ್ರಕಾಶ್ ಆಚಾರ್ಯ ಮಾತನಾಡಿ, ‘ಈ ಬಾರಿ ಒಳ್ಳೆಯ ಅನುದಾನ ಬರುತ್ತದೆ. ಮುಂದಿನ ವರ್ಷಗಳಲ್ಲಿ ಶಾಸಕರು ₹ 5-10 ಕೋಟಿ ಅನುದಾನ ತರುವ ವಿಶ್ವಾಸ ಇದೆ. ಪಕ್ಷ, ಧರ್ಮ, ಜಾತಿ ಬೇಧಗಳನ್ನು ಮರೆತು ಎಲ್ಲರೂ ಒಗ್ಗಟ್ಟಾಗಿ ದಸರೆಯನ್ನು ಆಚರಿಸಬೇಕು’ ಎಂದು ಮನವಿ ಮಾಡಿದರು.
ಚಿಂತಕ ಎಸ್.ಐ.ಮುನೀರ್ ಅಹಮ್ಮದ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸುಂದರ್ ರಾಜ್, ದಶಮಂಟಪಗಳ ಸಮಿತಿ ಅಧ್ಯಕ್ಷ ಬಿ.ಕೆ.ಜಗದೀಶ್, ನಗರಸಭೆ ಸದಸ್ಯ ಅರುಣ್‌ಶೆಟ್ಟಿ, ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಿ.ವೈ.ರಾಜೇಶ್ ಭಾಗವಹಿಸಿದ್ದರು.
ಮಡಿಕೇರಿ ದಸರೆಯ ಐತಿಹಾಸಿಕ ವ್ಯಕ್ತಿಗಳ ಸ್ಮರಣೆ
ಕಾರ್ಯಕ್ರಮದಲ್ಲಿ ಮಡಿಕೇರಿ ದಸರೆಯ ರೂಪುರೇಷೆಗಳನ್ನು ಬದಲಿಸಿದ ಪ್ರಮುಖರನ್ನು ಸ್ಮರಿಸಿದ್ದು ಹಾಗೂ ಸನ್ಮಾನಿಸಿದ್ದು ವಿಶೇಷವಾಗಿತ್ತು. ಮಡಿಕೇರಿ ದಸರೆಯಲ್ಲಿ ಪಲ್ಲಕ್ಕಿಯನ್ನು ಹೆಗಲ ಮೇಲೆ ಹೊತ್ತು ರಾಜಬೀದಿಗಳಲ್ಲಿ ಮೆರವಣಿಗೆ ಮಾಡುವಂತಹ ಬದಲಾವಣೆ ತಂದ ದಿವಂಗತ ಭೀಮ್‌ಸಿಂಗ್ ಅವರ ಪುತ್ರಿ ಶಾರದಾಬಾಯಿ ಅವರು ಅನಾರೋಗ್ಯದ ಕಾರಣಕ್ಕೆ ಕಾರ್ಯಕ್ರಮಕ್ಕೆ ಗೈರಾಗಿದ್ದರು. ಶಾರದಾಬಾಯಿ ಅವರು ಮಕ್ಕಳಾದ ರವಿಕುಮಾರ್ ಹಾಗೂ ವಾಸಂತಿ ಅವರನ್ನು ಸನ್ಮಾನಿಸಲಾಯಿತು. ದಸರಾ ಮಂಟಪ ಎನ್ನುವ ಪರಿಕಲ್ಪನೆಯ ಹರಿಕಾರ ಎನಿಸಿದ ಶಿವರಾಮಶೆಟ್ಟಿ ಹಾಗೂ ಅವರ ಪತ್ನಿ ಶಾಂತಲಕ್ಷ್ಮಿ ಅವರನ್ನು ಸನ್ಮಾನಿಸಲಾಯಿತು. ಇವರ ಸವಿಸ್ತಾರವಾದ ಅಪರೂಪದ ಮಾಹಿತಿಗಳುಳ್ಳ ಪರಿಚಯವನ್ನು ಉಪನ್ಯಾಸಕಿಯರಾದ ಪ್ರತಿಮಾರೈ ಹಾಗೂ ಜಯಲಕ್ಷ್ಮಿ ವಾಚಿಸಿದರು.
ಮಡಿಕೇರಿ ಗೋಣಿಕೊಪ್ಪಲು ದಸರೆ ಪ್ರಚಾರದಲ್ಲಿ ಹಿಂದೆ ಬಿದ್ದಿವೆ. ಸಾಂಸ್ಕೃತಿಕ ಕಾರ್ಯಕ್ರಮಗಳು ನಮ್ಮ ಸಂಸ್ಕೃತಿ ಬೆಳೆಸುವಂತಿರಬೇಕುಕೆ.ಜಿ.ಬೋಪಯ್ಯ, ಬಿಜೆಪಿಯ ಹಿರಿಯ ಮುಖಂಡ.
ಈ ಬಾರಿ ದಸರೆಗೆ ಸರ್ಕಾರ ₹ 2 ಕೋಟಿ ಅನುದಾನ ನೀಡಲಿ. ಮೈಸೂರು ದಸರೆಗೆ ಹೆಚ್ಚಿನ ಅನುದಾನ ಸಿಗುತ್ತಿದೆ. ನಾವೂ ಹೆಚ್ಚಿನ ಅನುದಾನ ಕೇಳಬೇಕು.ಅಪ್ಪಚ್ಚುರಂಜನ್, ಬಿಜೆಪಿಯ ಹಿರಿಯ ಮುಖಂಡ
ಮೈಸೂರು ದಸರಾದ ಹಿನ್ನೆಲೆ ಮಡಿಕೇರಿ ದಸರೆಯ ಹಿನ್ನೆಲೆ ಬೇರೆ ಬೇರೆ. ಎಲ್ಲರೂ ಒಗ್ಗಟ್ಟಾಗಿ ಉತ್ಸವ ಆಚರಿಸಬೇಕು.ಧರ್ಮಜ ಉತ್ತಪ್ಪ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಜಿಲ್ಲಾಧ್ಯಕ್ಷ
ಪುಸ್ತಕವನ್ನು ದಸರಾ ಶ್ರಮಿಕರಿಗೆ ಅರ್ಪಣೆ ಮಾಡಿರುವುದು ಸ್ತುತ್ಯರ್ಹ. ಇದೊಂದು ಸಂಗ್ರಹ ಯೋಗ್ಯ ಪುಸ್ತಕ.ಚಿದ್ವಿಲಾಸ್, ಪತ್ರಿಕೋದ್ಯಮಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.