ಸೋಮವಾರ, 22 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಆಡಳಿತ ಮಂಡಳಿ ಸಭೆಗೆ ಬಾರದ ಅಧ್ಯಕ್ಷೆ, ಪಿಡಿಒ

ಹೆಬ್ಬಾಲೆ ಗ್ರಾಮ ಪಂಚಾಯಿತಿ ಸದಸ್ಯರಿಂದ ವಿಶೇಷ ಸಭೆ
Published 14 ಜೂನ್ 2024, 6:38 IST
Last Updated 14 ಜೂನ್ 2024, 6:38 IST
ಅಕ್ಷರ ಗಾತ್ರ

ಕುಶಾಲನಗರ: ಇಲ್ಲಿಗೆ ಸಮೀಪದ ಹೆಬ್ಬಾಲೆ ಗ್ರಾಮ ಪಂಚಾಯಿತಿಯಲ್ಲಿ ಬುಧವಾರ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷರು ಹಾಗೂ ಅಭಿವೃದ್ಧಿ ಅಧಿಕಾರಿಯ ಅನುಪಸ್ಥಿತಿಯಲ್ಲಿ ಸದಸ್ಯರೇ ವಿಶೇಷ ಸಭೆ ನಡೆಸಿದರು.

ಪಂಚಾಯಿತಿಯ ಆಡಳಿತ ಮಂಡಳಿ ಸಭೆಯನ್ನು ಬುಧವಾರ ಕರೆಯಲಾಗಿತ್ತು. ಆದರೆ, ಸಭೆಗೆ ಅನಾರೋಗ್ಯದ ಕಾರಣ ನೀಡಿ ಅಧ್ಯಕ್ಷೆ ಅರುಣಾಕುಮಾರಿ ಗೈರಾದರು. ಉಪಾಧ್ಯಕ್ಷರು ಹಾಗೂ ಅಭಿವೃದ್ಧಿ ಅಧಿಕಾರಿಗಳು ಸಭೆಗೆ ಬರಲಿಲ್ಲ. ಇದರಿಂದ ಆಕ್ರೋಶಗೊಂಡ ಸದಸ್ಯರು ಅಧ್ಯಕ್ಷರು, ಉಪಾಧ್ಯಕ್ಷರು ಗ್ರಾಮದ ಅಭಿವೃದ್ಧಿ ಬಗ್ಗೆ ಸಂಪೂರ್ಣ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಆರೋಪಿಸಿ ಸದಸ್ಯರೇ ವಿಶೇಷ ಸಭೆ ನಡೆಸಿದರು.

ಒಟ್ಟು 14 ಸದಸ್ಯ ಪೈಕಿ 10 ಮಂದಿ ಹಾಜರಾಗಿದ್ದರು. ಸಭೆಯಲ್ಲಿ ಅಧ್ಯಕ್ಷೆ ಅರುಣಾ ಕುಮಾರಿ ಅವರು ಗ್ರಾಮದ ಅಭಿವೃದ್ಧಿ ನಿರ್ಲಕ್ಷ್ಯ ಹಾಗೂ ಬೇಜವಾಬ್ದಾರಿ ಕ್ರಮವನ್ನು ಖಂಡಿಸಿದರು.

‘ವಿದ್ಯುತ್ ಬಳಕೆ ಶುಲ್ಕ ಪಾವತಿಸದೆ ವಿದ್ಯುತ್ ‌ಸಂಪರ್ಕ ಕಡಿತಗೊಳಿಸಲಾಗಿದೆ. ಇದರಿಂದ ಕಚೇರಿ ಕೆಲಸ‌ ಕಾರ್ಯಗಳಿಗೆ ಹಾಗೂ ಸಾರ್ವಜನಿಕರಿಗೆ ತೊಂದರೆ ಉಂಟಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರು ಕೂಡಲೇ ಕ್ರಮ ಕೈಗೊಳ್ಳಬೇಕು’ ಎಂದು ಸಭೆಯಲ್ಲಿ ನಿರ್ಣಯ ಮಾಡಲಾಯಿತು.

ಸಕಾಲದಲ್ಲಿ ಯಾವುದೇ ಸಭೆ ನಡೆಸದ ಕಾರಣ ಸಾರ್ವಜನಿಕರ ಕೆಲಸ ಕಾರ್ಯಗಳು ನಡೆಯುತ್ತಿಲ್ಲ. ಇದರಿಂದಾಗಿ ಸಾರ್ವಜನಿಕವಾಗಿ ಪಂಚಾಯಿತಿಗೆ ಕೆಟ್ಟ ಹೆಸರು ಬರುತ್ತಿದೆ ಎಂದು ಕೆಲವು ಸದಸ್ಯರು ದೂರಿದರು.

‘ಪಂಚಾಯಿತಿಯಲ್ಲಿ ಈ ಹಿಂದೆ ಇದ್ದ ಪಿಡಿಒ ಅವರನ್ನು ವರ್ಗಾವಣೆಗೊಳಿಸಿದ್ದು ಸರಿಯಲ್ಲ. ಪಂಚಾಯಿತಿಯಲ್ಲಿ ಯಾವುದೇ ಅಭಿವೃದ್ದಿ ಕಾಮಗಾರಿಗಳು ನಡೆಯದ ಕಾರಣ ಜನರು ಪಂಚಾಯಿತಿ ವ್ಯವಸ್ಥೆ ವಿರುದ್ದ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ’ ಎಂದು ಸದಸ್ಯ ಮಂಜುನಾಥ್ ದೂರಿದರು.

ಹಿರಿಯ ಸದಸ್ಯ ಮರೂರು ಮಹದೇವ ಅಧ್ಯಕ್ಷತೆ ವಹಿಸಿದ್ದರು. ಸದಸ್ಯರಾದ ನಾರಾಯಣ್, ಮಹಾದೇವ್, ಚಂದ್ರಶೇಖರ್, ಕವಿತಾ, ಪವಿತ್ರಾ, ಶುವನಂಜಪ್ಪ, ತನುಕುಮಾರ್, ರತ್ವಮ್ಮ, ಪುಟ್ಟ ಲಕ್ಷ್ಮಮ್ಮ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT