ಶನಿವಾರ, 20 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪಿಡಿಒ ಕಾರ್ಯ ಶ್ಲಾಘಿಸಿದ ಗ್ರಾ.ಪಂ. ಸದಸ್ಯರು

ದುಂಡಳ್ಳಿ ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆ
Published 16 ಜೂನ್ 2024, 16:15 IST
Last Updated 16 ಜೂನ್ 2024, 16:15 IST
ಅಕ್ಷರ ಗಾತ್ರ

ಶನಿವಾರಸಂತೆ: ಇಲ್ಲಿನ ದುಂಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪ್ರತಿ ಸದಸ್ಯರ ವಾರ್ಡ್‌ನಲ್ಲಿ ಸಮಾನವಾಗಿ ಸ್ವಚ್ಛತೆಗೆ ಆದ್ಯತೆ ನೀಡಿದ್ದಾರೆ ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಎಂ.ಕೆ.ಆಯಿಷಾ ಅವರನ್ನು ಎಲ್ಲ ಸದಸ್ಯರೂ ಒಮ್ಮತದಿಂದ ಸಾಮಾನ್ಯ ಸಭೆಯಲ್ಲಿ ಶ್ಲಾಘಿಸಿದರು.

ಈಚೆಗೆ ದುಂಡಳ್ಳಿ ಗ್ರಾಮ ಪಂಚಾಯಿತಿಯ ಅಧ್ಯಕ್ಷೆ ಸತ್ಯವತಿ ದೇವರಾಜ್ ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆ ನಡೆಯಿತು.

‘ಸಭೆಯಲ್ಲಿ ಒಂದೇ ತಿಂಗಳಲ್ಲಿ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ 7 ಕೊಳವೆ ಬಾವಿಗಳ ಮೋಟರ್ ಕೆಟ್ಟು ಹೋಗಿದ್ದು, ಇದರ ದುರಸ್ತಿಯನ್ನು ತಕ್ಷಣದಲ್ಲೇ ಮಾಡಲಾಗಿದೆ. ಆದರೆ, ಈ ದುರಸ್ತಿ ಮಾಡಿದವರು ಪಂಚಾಯಿತಿಗೆ ಹೆಚ್ಚು ಬಿಲ್ಲನ್ನು ಬರೆದಿದ್ದಾರೆ’ ಎಂದು ಸದಸ್ಯ ನಿತಿನ್ ಆರೋಪಿಸಿದರು.

‘ಈ ಬಗ್ಗೆ ಪಿಡಿಒ ಬಿಲ್‌ನ್ನು ಪರಿಶೀಲನೆ ಮಾಡಿ ಆ ಕೆಲಸಕ್ಕೆ ತಗಲುವ ವೆಚ್ಚವನ್ನು ಮಾತ್ರ ಪಾವತಿ ಮಾಡುವಂತೆ ಹಾಗೂ ಕೊಳವೆಬಾವಿ ದುರಸ್ತಿ ಮಾಡುವ ವೇಳೆ ವಾಟರ್ ಮ್ಯಾನ್‌ಗಳು ಸ್ಥಳದಲ್ಲಿ ಇದ್ದು, ದುರಸ್ತಿ ಕಾರ್ಯಕ್ಕೆ ಸಹಕರಿಸಬೇಕು’ ಎಂದು ಹೇಳಿದರು.

15ನೇ ಹಣಕಾಸು ಯೋಜನೆಯ ಕ್ರಿಯಾ ಯೋಜನೆಯನ್ನು ಮತ್ತು ‘ನರೇಗಾ’ ಯೋಜನೆಯಲ್ಲಿ ಹೆಚ್ಚುವರಿ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಲು ತೀರ್ಮಾನಿಸಲಾಯಿತು.

ಈ ಹಿಂದೆ ಕಾರ್ಯನಿರ್ವಹಿಸಿದ ಪಿಡಿಒ ಕಾರ್ಯವೈಖರಿಯ ಬಗ್ಗೆ ಎಲ್ಲಾ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು. ಸಾಂಕ್ರಾಮಿಕ ರೋಗ, ಡೆಂಗಿ ಜ್ವರ ಪಂಚಾಯತಿ ವ್ಯಾಪ್ತಿಯಲ್ಲಿ ಹೆಚ್ಚುತ್ತಿದ್ದು ಇದರ ನಿಯಂತ್ರಣಕ್ಕೆ ಕ್ರಮ ವಹಿಸಬೇಕು. ನಾಯಿಗಳ ಹಾವಳಿಯ ತಡೆಗಟ್ಟಲು ವಿಶೇಷ ಯೋಜನೆಯ ರೂಪಿಸಬೇಕು, ಪಂಚಾಯಿತಿ ಮಳಿಗೆಯ ದುರಸ್ತಿ ಕಾರ್ಯವನ್ನು ತಕ್ಷಣದಲ್ಲೇ ಮಾಡಿಸಬೇಕು ಎಂದು ಸದಸ್ಯರು ಒತ್ತಾಯಿಸಿದರು.

ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ಪಿ.ಎಚ್‌.ಗೋಪಿಕ, ಸದಸ್ಯರಾದ ಪೂರ್ಣಿಮಾ ಕಿರಣ್, ಭೋಜಪ್ಪ, ಸಿ.ಜೆ.ಗಿರೀಶ್, ಭವಾನಿ, ನಂದಿನಿ, ಜಾನಕಿ, ಎಸ್.ಸಿ.ನಿತಿನ್, ಕಾಂತರಾಜ್, ಮಹಾಂತೇಶ್ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT