ಶನಿವಾರ, 20 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪೊನ್ನಂಪೇಟೆ ತಾಲ್ಲೂಕು ಕೇಂದ್ರ ಅಭಿವೃದ್ಧಿಗೆ ಅನುದಾನ: ಶಾಸಕ ಎ.ಎಸ್. ಪೊನ್ನಣ್ಣ

ಗ್ರಾಮ ಪಂಚಾಯಿತಿಯಲ್ಲಿ ನಡೆದ ಅಭಿವೃದ್ಧಿ ಪೂರಕ ಸಭೆಯಲ್ಲಿ ಭರವಸೆ
Published 26 ಜೂನ್ 2024, 13:58 IST
Last Updated 26 ಜೂನ್ 2024, 13:58 IST
ಅಕ್ಷರ ಗಾತ್ರ

ಗೋಣಿಕೊಪ್ಪಲು: ಪೊನ್ನಂಪೇಟೆ ತಾಲ್ಲೂಕು ಕೇಂದ್ರದ ಅಭಿವೃದ್ಧಿಗೆ ಸರ್ಕಾರದ ಮಟ್ಟದಲ್ಲಿ ವ್ಯವಹರಿಸಿ ಹೆಚ್ಚಿನ ಅನುದಾನ ತರಲು ಪ್ರಯತ್ನಿಸಲಾಗುವುದು ಎಂದು ಶಾಸಕ ಎ.ಎಸ್. ಪೊನ್ನಣ್ಣ ಹೇಳಿದರು.

ಪೊನ್ನಂಪೇಟೆ ಗ್ರಾಮ ಪಂಚಾಯಿತಿಯಲ್ಲಿ ಬುಧವಾರ ಪಂಚಾಯಿತಿ ವ್ಯಾಪ್ತಿಯ ಸಮಗ್ರ ಅಭಿವೃದ್ಧಿ ಚರ್ಚೆಯಲ್ಲಿ ಮಾತನಾಡಿದ ಅವರು ಬೇಡಿಕೆಗಳೆಲ್ಲವೂ ಸಕಾರಾತ್ಮಕವಾಗಿವೆ. ಇದಕ್ಕೆ ಪೂರಕವಾಗಿ ಕೆಲಸ ಮಾಡಲಾಗುವುದು ಎಂದು ತಿಳಿಸಿದರು.

ಪೊನ್ನಂಪೇಟೆ ತಾಲ್ಲೂಕು ಕಚೇರಿ ಎದುರು ಉದ್ಯಾನ ನಿರ್ಮಿಸುವ ಜಾಗ, ಜಂಬಯ್ಯನಕೆರೆ, ಕೊಲ್ಲಿ ಪ್ರದೇಶ, ಪೊನ್ನಂಪೇಟೆ ಬಸ್ ನಿಲ್ದಾಣ, ಪ್ರಾಥಮಿಕ ಶಾಲೆಯಲ್ಲಿ ತೆರವುಗೊಳಿಸಿದ್ದ ಶಾಲಾ ಕೊಠಡಿಗಳ ಮರು ನಿರ್ಮಾಣದ ಬಗೆಗೂ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಇದಕ್ಕೂ ಮೊದಲು ಪಂಚಾಯಿತಿ ಕೈಗೊಳ್ಳಬೇಕಾದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮನವಿ ಅಲಿಸಿದ ಅಧ್ಯಕ್ಷ ಅಣ್ಣೀರ ಹರೀಶ್ ಪೊನ್ನಂಪೇಟೆ ಪಟ್ಟಣದ ಜನರಿಗೆ ನೀರು ಒದಗಿಸಲು ತೆರೆ ಬಾವಿ ನಿರ್ಮಿಸಲಾಗಿದ್ದು, ಇದಕ್ಕೆ ಮೋಟರ್ ಅಳವಡಿಕೆ ವಿದ್ಯುತ್ ಕಂಬ ಅಳವಡಿಕೆ ಹಾಗೂ ಪೈಪ್‌ಲೈನ್ ಅಳವಡಿಸಬೇಕಾಗಿದೆ. ಇವುಗಳಿಗೆ ತಗಲುವ ₹7 ಲಕ್ಷ ಅನುದಾನ ನೀಡಬೇಕು ಎಂದು ಮನವಿ ಮಾಡಿದರು.

‘ಪೊನ್ನಂಪೇಟೆ ನಗರಕ್ಕೆ ಶಾಶ್ವತ ಕುಡಿಯುವ ನೀರಿನ ಯೋಜನೆಗಾಗಿ ಕೊಂಗಣ ಹೊಳೆಯಿಂದ ನೀರನ್ನು ಸರಬರಾಜು ಮಾಡಲು ಯೋಜನೆ ರೂಪಿಸಲಾಗುವುದು. ತಾಲ್ಲೂಕು ಕಚೇರಿಯ ಸಮೀಪ ಉದ್ಯಾನ ನಿರ್ಮಿಸುತ್ತಿದ್ದು, ಶೌಚಾಲಯ, ಆಸನ ವ್ಯವಸ್ಥೆ, ವಿವಿಧ ಸಸ್ಯ ಹಾಗೂ ಹೂವಿನ ಗಿಡಗಳು, ಸಿಸಿಟಿವಿ ಕ್ಯಾಮೆರಾ, ನೆಲಹಾಸು ಮತ್ತಿತರ ಕಾಮಗಾರಿಗಳಿಗೆ ಹಣ ಒದಗಿಸಿ ಕೊಡಬೇಕು’ ಎಂದು ಹೇಳಿದರು.

‘ಕಸ ವಿಲೇವಾರಿ ಘಟಕ ನಿರ್ಮಿಸಲು 10 ಸೆಂಟ್ ಜಾಗ ಗುರುತಿಸಿ ಕೊಡಬೇಕು. ಚಂಬಯ್ಯನಕೆರೆಯಲ್ಲಿ ವಾಸವಿರುವ ಎಂಟು ಕುಟುಂಬಗಳ ಮನೆ ಬಳಿ ತಡೆಗೋಡೆ ನಿರ್ಮಿಸಲು ಅನುದಾನದ ಅಗತ್ಯವಿದೆ’ ಎಂದು ತಿಳಿಸಿದರು.

‘65 ವರ್ಷಗಳಿಂದ ಪಂಚಾಯತಿ ವ್ಯಾಪ್ತಿಯಲ್ಲಿ ಎಂಟು ಕುಟುಂಬಗಳು ವಾಸವಿದ್ದು, ಸರ್ವೆ ನಡೆಸಿ ಅವರಿಗೆ ಪಟ್ಟೆ ಒದಗಿಸಿ ಕೊಡಬೇಕಾಗಿದೆ. ಕುದುರು ಗ್ರಾಮದಲ್ಲಿ ಸರ್ವೆ ನಂಬರ್ 30/1ರಲ್ಲಿ 62 ಕುಟುಂಬಗಳ ಪರಿಶಿಷ್ಟ ವರ್ಗದವರಿಗೆ ಹಕ್ಕು ಪತ್ರ ನೀಡುವ ಬಗೆಗೂ ಕ್ರಮ ಕೈಗೊಳ್ಳಬೇಕಾಗಿದೆ’ ಎಂದು ಶಾಸಕರಲ್ಲಿ ಮನವಿ ಮಾಡಿದರು.

ಕರ್ನಾಟಕ ಪಬ್ಲಿಕ್ ಶಾಲೆ ಆಡಳಿತ ಮಂಡಳಿ ಅಧ್ಯಕ್ಷ ಜುನೈದ್, ತಹಶೀಲ್ದಾರ್ ಮೋಹನ್ ಕುಮಾರ್, ಕಾರ್ಯನಿರ್ವಾಹಣಾಧಿಕಾರಿ ಅಪ್ಪಣ್ಣ, ಪಿಡಿಒ ಪುಟ್ಟರಾಜು, ಉಪಾಧ್ಯಕ್ಷ ಆಲಿರ ರಶೀದ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT