ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂಗಾರು ಮಳೆ: ಕೊಡಗು ಜಿಲ್ಲೆಯಲ್ಲಿ ಮೂರು ತಿಂಗಳು ರಕ್ಷಣಾ ಸಿಬ್ಬಂದಿ ವಾಸ್ತವ್ಯ

Last Updated 2 ಜೂನ್ 2020, 11:33 IST
ಅಕ್ಷರ ಗಾತ್ರ

ಮಡಿಕೇರಿ: ಮುಂಗಾರು ಮಳೆಯ ವೇಳೆ ಪ್ರವಾಹ ಹಾಗೂ ಭೂಕುಸಿತ ಉಂಟಾದರೆ ರಕ್ಷಣಾ ಕಾರ್ಯಾಚರಣೆಗೆಂದು ರಾಷ್ಟ್ರೀಯ ವಿಪತ್ತು ನಿರ್ವಹಣೆ ಪಡೆಯ (ಎನ್‌ಡಿಆರ್‌ಎಫ್‌) 25 ಮಂದಿಯ ಒಂದು ಬೆಟಾಲಿಯನ್‌ ಮಂಗಳವಾರ ಕೊಡಗು ಜಿಲ್ಲೆಗೆ ಆಗಮಿಸಿತು.

ಕಮಾಂಡರ್‌ ಆರ್‌.ಕೆ.ಉಪಾಧ್ಯ ಅವರ ನೇತೃತ್ವದಲ್ಲಿ ಆಂಧ್ರಪ್ರದೇಶದಿಂದ, ಎನ್‌ಡಿಆರ್‌ಎಫ್‌ ಸಿಬ್ಬಂದಿ ಅಗತ್ಯ ರಕ್ಷಣಾ ಸಲಕರಣೆಗಳ ಜತೆಗೆ ಬಂದರು.

ನಗರದ ಮೈತ್ರಿ ಹಾಲ್‌ನಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಗಿದ್ದು ಈ ತಂಡವು ಇನ್ನು ಮೂರು ತಿಂಗಳು ಜಿಲ್ಲೆಯಲ್ಲೇ ಠಿಕಾಣಿ ಹೂಡಲಿದೆ. ಕಳೆದ ಎರಡು ವರ್ಷಗಳಂತೆಯೇ ಪ್ರವಾಹ ಹಾಗೂ ಭೂಕುಸಿತವಾದರೆ ಜನ– ಜಾನುವಾರುಗಳ ರಕ್ಷಣೆಗೆ ಎನ್‌ಡಿಆರ್‌ಎಫ್‌ ಬಳಕೆಗೆ ಜಿಲ್ಲಾಡಳಿತ ಉದ್ದೇಶಿಸಿದೆ.

ಜೂನ್‌ 4ರ ಬಳಿಕ ಜಿಲ್ಲೆಗೂ ಮುಂಗಾರು ಪ್ರವೇಶಿಸುವ ನಿರೀಕ್ಷೆಯಿದೆ. ಜಿಲ್ಲೆಯಲ್ಲಿ ದಟ್ಟ ಮೋಡ ಕವಿದ ವಾತಾವರಣವಿದ್ದು, ಆಗಾಗ್ಗೆ ತುಂತುರು ಸುರಿದು ಮಳೆಗಾಲದ ವಾತಾವರಣ ಕಾಣಿಸುತ್ತಿದೆ. ಜಿಲ್ಲಾಡಳಿತವು ಸೂಕ್ಷ್ಮ ಪ್ರದೇಶಗಳನ್ನು ಗುರುತಿಸಿದ್ದು ಅಲ್ಲಿ ನಿಗಾ ವಹಿಸಿದೆ.

ಎನ್‌ಡಿಆರ್‌ಎಫ್‌ ಸಿಬ್ಬಂದಿಯು ಲೈಪ್‌ ಜಾಕೆಟ್‌, ರೋಪ್‌, ವುಡ್ ‌ಕಟರ್‌, ಟಾರ್ಚ್‌ ಸೇರಿದಂತೆ ಹಲವು ರಕ್ಷಣಾ ಸಲಕರಣೆಗಳೊಂದಿಗೆ ಜಿಲ್ಲೆಗೆ ಬಂದಿದ್ದಾರೆ. ಮುಂಗಾರು ಅಬ್ಬರಕ್ಕೂ ಮೊದಲೇ ರಕ್ಷಣಾ ಸಿಬ್ಬಂದಿ ಆಗಮಿಸಿರುವುದು ಜನರಿಗೂ ಧೈರ್ಯ ಬಂದಿದೆ.

‘ಕಳೆದ ವರ್ಷವೂ ಇದೇ ತಂಡ ಜಿಲ್ಲೆಗೆ ಬಂದಿದ್ದು ಇಲ್ಲಿನ ಪರಿಸ್ಥಿತಿಯ ಅರಿವಿದೆ. ಒಂದು ವೇಳೆ ಅನಾಹುತ ಸಂಭವಿಸಿದರೆ, ರಕ್ಷಣೆಗೆ ಸಜ್ಜಾಗಿದ್ದೇವೆ. ಇತ್ತೀಚೆಗೆ ಒಡಿಶಾದಲ್ಲಿ ಉಂಟಾಗಿದ್ದ ಚಂಡಮಾರುತದ ವೇಳೆಯೂ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದ್ದೆವು. ಅದಾದ ಮೇಲೆ ಕೊಡಗಿಗೆ ನೇರವಾಗಿ ಬಂದಿದ್ದೇವೆ’ ಎಂದು ಬೆಟಾಲಿಯನ್‌ ಸಿಬ್ಬಂದಿ ಮಂಜುನಾಥ್‌ ಹೇಳಿದರು.

‘ರಾಜ್ಯಕ್ಕೆ ಬಂದಿರುವ ನಾಲ್ಕು ಬೆಟಾಲಿಯನ್‌ಗಳ ಪೈಕಿ ಜಿಲ್ಲೆಗೂ ಒಂದು ತಂಡ ಆಗಮಿಸಿದೆ. ಮುಂಜಾಗ್ರತಾ ಕ್ರಮವಾಗಿ ಮಳೆಗಾಲಕ್ಕೂ ಮೊದಲೇ ರಕ್ಷಣಾ ಸಿಬ್ಬಂದಿ ಕರೆಸಿಕೊಳ್ಳಲಾಗಿದೆ’ ಎಂದು ಜಿಲ್ಲಾ ವಿಪತ್ತು ನಿರ್ವಹಣಾ ವಿಭಾಗದ ಅಧಿಕಾರಿ ಅನನ್ಯ ವಾಸುದೇವ್‌ ಮಾಹಿತಿ ನೀಡಿದರು.

ಕಳೆದ ವರ್ಷ ವಿರಾಜಪೇಟೆ ತಾಲ್ಲೂಕಿನ ತೋರ ಗ್ರಾಮದಲ್ಲಿ ಸಂಭವಿಸಿದ್ದ ಭೂಕುಸಿತದಿಂದ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದವರ ರಕ್ಷಣಾ ಕಾರ್ಯಾಚರಣೆಯಲ್ಲಿ ಎನ್‌ಡಿಆರ್‌ಎಫ್‌, ಅಗ್ನಿಶಾಮಕ ದಳ, ಭಾರತೀಯ ಸೇನೆ ಹಾಗೂ ಸ್ಥಳೀಯ ಪೊಲೀಸರು ಮಹತ್ವದ ಪಾತ್ರ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT