ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶನಿವಾರಸಂತೆ: ವೈವಿಧ್ಯತೆಯ ಕಲೆ ಅರಳಿಸುವ ಕಲಾವಿದ ಕುಲದೀಪ್

ಕುಟುಂಬದ ನಾಲ್ವರು ಸದಸ್ಯರೂ ಕಲಾವಿದರು
Last Updated 28 ಅಕ್ಟೋಬರ್ 2022, 19:30 IST
ಅಕ್ಷರ ಗಾತ್ರ

ಶನಿವಾರಸಂತೆ: ‘ಮನಸ್ಸಿಗೆ ಖುಷಿ ಕೊಡುವ ಕಲೆಯನ್ನು ಸಂಸ್ಕಾರ ಹಾಗೂ ಸಾಂಪ್ರದಾಯಿಕ ದೃಷ್ಟಿಯಲ್ಲಿ ಭಾವಿಸಿದ್ದೇನೆ. ಕಲೆ ವ್ಯವಹಾರಿಕವಲ್ಲ; ಹವ್ಯಾಸ ಮತ್ತು ಪ್ರವೃತ್ತಿಯಾಗಿದೆ’ ಎಂದು ಬಹುಮುಖ ಪ್ರತಿಭೆಯ ಕಲಾವಿದ ಕುಲದೀಪ್ ಭಾವುಕರಾಗಿ ನುಡಿಯುತ್ತಾರೆ.

ಕೊಡ್ಲಿಪೇಟೆಯ ಯು.ಪಿ.ನಾಗೇಶ್- ಜ್ಞಾನೇಶ್ವರಿ ದಂಪತಿಯ ಪುತ್ರ ಯು.ಎನ್.ಕುಲದೀಪ್ ಸೂಕ್ಷ್ಮ ಕೆತ್ತನೆ, ಎಲೆಕಲೆ, ಪೆನ್ಸಿಲ್ ಪೋರ್ಟ್ರೇಟ್ ಸ್ಕೆಚ್, ಕಾಫಿ ಪೇಯ್ಟಿಂಗ್, ಕ್ಲೆಮಾಡೆಲಿಂಗ್, ವಾಲ್ ಪೇಯ್ಟಿಂಗ್, ಸ್ಟ್ರಿಂಗ್ ಪೊಟ್ರೇಟ್ ಆರ್ಟ್, ಕೊಬ್ಬರಿ ಕಲೆ, ಸೀಮೆಸುಣ್ಣ ಕಲೆ, ವೀರಗಾಸೆ, ನಂದಿಧ್ವಜ ಕುಣಿತ, ಪೌರೋಹಿತ್ಯ ಎಲ್ಲದಕ್ಕೂ ಸೈ ಎನಿಸಿಕೊಂಡಿದ್ದಾರೆ.

13ನೇ ವಯಸ್ಸಿನಲ್ಲಿ ಕಲೆಯ ಬಗ್ಗೆ ಒಲವು ಮೂಡಿಸಿಕೊಂಡ ಕುಲದೀಪ್ ಸ್ವತಃ ಕಲಾವಿದರಾಗಿರುವ ತನ್ನ ತಂದೆ-ತಾಯಿಯೇ ತನಗೆ ಸ್ಫೂರ್ತಿ, ಆದರ್ಶ ಎನ್ನುತ್ತಾರೆ. ಓದಿನ ಜತೆಯಲ್ಲೆ ಕಲೆಗಾರಿಕೆಗೂ ಪ್ರೋತ್ಸಾಹ ನೀಡಿದರು ಎಂದು ಸ್ಮರಿಸುತ್ತಾರೆ.

ಬಿ.ಸಿ.ಎ. ಮುಗಿಸಿರುವ ಕುಲದೀಪ್, ಪ್ರಸ್ತುತ ಎಂ.ಟೆಕ್ ವಿದ್ಯಾರ್ಥಿಯಾಗಿದ್ದು, ಓದಿನ ಜತೆಯಲ್ಲಿ ಬೆಂಗಳೂರಿನ ವಿಪ್ರೊ ಕಂಪನಿ ಉದ್ಯೋಗಿಯಾಗಿದ್ದಾರೆ. ಮನೆಯಲ್ಲೆ ಇದ್ದು ಕೆಲಸ ಮಾಡುತ್ತಿದ್ದಾರೆ. ಬಿಡುವಿನ ವೇಳೆಯಲ್ಲಿ ಕಲಾ ಸಾಧನೆಯಲ್ಲಿ ತೊಡಗಿದ್ದಾರೆ. ಕಲೆಗಳಲ್ಲಿ ವೈವಿಧ್ಯತೆ ಅರಳಿಸುವ ಅಪರೂಪದ ಕಲೆಗಾರ ಅವರು.

ಕುಲದೀಪ್ ಈಚೆಗೆ ಸ್ಟ್ರಿಂಗ್ ಆರ್ಟ್‌ನಲ್ಲಿ ರಚಿಸಿದ ನಟ ಪುನೀತ್‌ ರಾಜ್‌ಕುಮಾರ್ ಚಿತ್ರ ಸಾರ್ವಜನಿಕವಾಗಿ ಅಪಾರ ಮೆಚ್ಚುಗೆ ಗಳಿಸಿತು. ಫಲಕಕ್ಕೆ 250-300 ಮೊಳೆ ಹೊಡೆದು ಕಪ್ಪುದಾರವನ್ನು ಮೊಳೆಯಿಂದ ಮೊಳೆಗೆ ಲೆಕ್ಕಾಚಾರದಂತೆ ಎಕ್ಸೆಲ್ ತರಹ ಸುತ್ತಿಸುತ್ತಿ ಮೂಡಿಸಿದ ಸುಂದರ ಚಿತ್ರವನ್ನು ಅಪ್ಪು ಅಭಿಮಾನಿ ಮೈಸೂರಿನ ಜಯಂತ್ ಖರೀದಿಸಿದರು.

ಕೊಡ್ಲಿಪೇಟೆಯಲ್ಲಿ ನಡೆಯುವ ದೇವರ ಉತ್ಸವ, ಧಾರ್ಮಿಕ ಕಾರ್ಯಕ್ರಮಗಳಿಗೆ ಕುಲದೀಪ್ ಮತ್ತು ತಂಡದವರ ವೀರಗಾಸೆ ಕುಣಿತ, ಮಂಗಳವಾದ್ಯಗಳ ಜತೆ ನಂದಿಧ್ವಜ ಕುಣಿತ ಮೆರುಗು ನೀಡುತ್ತದೆ. ವಿಗ್ರಹಗಳಿಗೆ ಬಣ್ಣ ಹಚ್ಚುವುದು, ಅಲಂಕರಿಸುವುದರಲ್ಲಿಯೂ ಕುಲದೀಪ್ ಪ್ರತಿಭೆ ಮೆರೆಯುತ್ತಿದ್ದಾರೆ.

ಕಲಾವಿದ ಕುಟುಂಬ

ಕುಲದೀಪ್ ತಂದೆ ಸಹಕಾರ ಬ್ಯಾಂಕ್ ಉದ್ಯೋಗಿ ಯು.ಪಿ.ನಾಗೇಶ್ ಸಹ ಕಲಾವಿದರು. ಚಿಕ್ಕಂದಿನಿಂದಲೇ ಗೌರಿ-ಗಣೇಶ ಮೂರ್ತಿಗಳನ್ನು ಮಾಡುತ್ತಿದ್ದು, ಕಲೆಗಾರಿಕೆಯನ್ನು ಮುಂದುವರೆಸಿಕೊಂಡು ಬರುತ್ತಿದ್ದಾರೆ. ಪ್ರತಿವರ್ಷ ಗಣೇಶ ಚತುರ್ಥಿ ಪ್ರಯುಕ್ತ ಬೇಡಿಕೆಗೆ ಅನುಗುಣವಾಗಿ ಜೇಡಿಮಣ್ಣಿನಲ್ಲಿ ಪರಿಸರಸ್ನೇಹಿ ಮೂರ್ತಿಗಳನ್ನು ಮಾಡಿಕೊಡುತ್ತಾರೆ. ತಾಯಿ ಜ್ಞಾನೇಶ್ವರಿಯವರು ಕೊಬ್ಬರಿ ಕೆತ್ತನೆ, ಮಲ್ಲಿಗೆಹಾರ ದಿಂಡು, ಕಳಸ ಅಲಂಕಾರ ಇತ್ಯಾದಿ ಕಸದಿಂದ ರಸ ತೆಗೆಯುವ ಗುಡಿ ಕೈಗಾರಿಕೆಯಲ್ಲಿ ನೈಪುಣ್ಯತೆ ಪಡೆದಿದ್ದಾರೆ.

ಸೋದರಿ ಯು.ಎನ್.ಕಾವ್ಯಶ್ರೀ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿಯಾಗಿದ್ದು, ಶಿಕ್ಷಣದ ಜತೆಗೆ ಪೆನ್ಸಿಲ್ ಪೋರ್ಟ್ರೇಟ್ ಆರ್ಟ್‌ನಲ್ಲಿ ಪರಿಣತಿ ಪಡೆದಿದ್ದಾರೆ. ‘ಚೈಲ್ಡ್ ಆರ್ಟ್ಸ್ ಇನ್‌ಸ್ಟಿಟ್ಯೂಟ್ ಆಫ್ ಮಹಾರಾಷ್ಟ್ರ’ ಸ್ಪರ್ಧೆಯಲ್ಲಿ ಭಾಗವಹಿಸಿ ಸ್ವಾಮಿ ವಿವೇಕಾನಂದರ ಪೆನ್ಸಿಲ್ ಆರ್ಟ್‌ಗೆ ‘ಕಲಾಭಾರತಿ’ ಪ್ರಶಸ್ತಿ ಪಡೆದಿದ್ದಾರೆ.

ಕಲಾವಿದ ಕುಲದೀಪ್ ಕುಟುಂಬದ ನಾಲ್ವರು ಸದಸ್ಯರೂ ಕಲಾವಿದರಾಗಿದ್ದು ಹಣಕ್ಕಾಗಿ ಕಲೆ ಅಲ್ಲ; ಮನಸ್ಸಿನ ಸಂತೋಷಕ್ಕಾಗಿ ಹವ್ಯಾಸವಾಗಿ ಕಲೆಯನ್ನು ಆರಾಧಿಸುತ್ತಾ ಎಲೆಮರೆಯ ಕಾಯಿಗಳಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT