ಬುಧವಾರ, ನವೆಂಬರ್ 25, 2020
19 °C
ಮಾಂಸ ಸೇವನೆ, ಸಭೆ– ಸಮಾರಂಭಗಳಿಗೆ ನಿಷೇಧ

ನ.30ರಂದು ಕೊಡಗಿನಲ್ಲಿ ಹುತ್ತರಿ ಸಂಭ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನಾಪೋಕ್ಲು: ಕೊಡಗಿನಾದ್ಯಂತ ಸೋಮವಾರ (ನ.30) ಹುತ್ತರಿ ಹಬ್ಬ ನಡೆಯಲಿದೆ.

ಕೊಡಗಿನ ಕುಲದೈವ ಕಕ್ಕಬ್ಬೆ ಪಾಡಿ ಶ್ರೀ ಇಗ್ಗುತ್ತಪ್ಪ ದೇವಾಲಯದಲ್ಲಿ ಭಾನುವಾರ ಕಲಾಡ್ಚ ಹಬ್ಬ, ಹುತ್ತರಿ ಹಬ್ಬದ ದಿನವನ್ನು ದೇವಾಲಯದ ಪಾರಂಪರಿಕ ಜ್ಯೋತಿಷಿ ಅಮ್ಮಂಗೇರಿ ಕಣಿಯರ ಶಶಿಕುಮಾರ್ ನಿಗದಿಪಡಿಸಿದರು.

ಪಾಡಿ ಶ್ರೀ ಇಗ್ಗುತ್ತಪ್ಪ ದೇವಾಲಯದಲ್ಲಿ ಭಾನುವಾರ (ನ. 29) ಹುತ್ತರಿ ಕಲಾಡ್ಚ ಹಬ್ಬ ನಡೆಯಲಿದೆ. ಸೋಮವಾರ ರಾತ್ರಿ ರೋಹಿಣಿ ನಕ್ಷತ್ರದಲ್ಲಿ ಹುತ್ತರಿ ಹಬ್ಬ ನಡೆಯಲಿದ್ದು, ದೇವಾಲಯದಲ್ಲಿ ರಾತ್ರಿ 7.15ಕ್ಕೆ ನೆರೆ ಕಟ್ಟುವುದು. 8.15ಕ್ಕೆ ಕದಿರು ತೆಗೆಯುವುದು ಮತ್ತು 9.15ಕ್ಕೆ ಭೋಜನ. ಸಾರ್ವಜನಿಕರಿಗೆ (ನಾಡ್ ಪೋದ್) ಸಂಜೆ 7.45ಕ್ಕೆ ನೆರೆ ಕಟ್ಟುವುದು, 8.45ಕ್ಕೆ ಕದಿರು ತೆಗೆಯುವ ಕಾರ್ಯಕ್ರಮ ನಡೆಯಲಿದೆ.

ದೇವಾಲಯದ ದೇವತಕ್ಕರಾದ ಪರದಂಡ ಡಾಲಿ ಮಾತನಾಡಿ, ‘ಹುತ್ತರಿ ಹಬ್ಬದ ಪ್ರಯುಕ್ತ ನ. 15ರಂದು ಪಾಡಿ ಶ್ರೀ ಇಗ್ಗುತ್ತಪ್ಪ ದೇವರ ಆದಿ ಸ್ಥಳ ಮಲ್ಮದಲ್ಲಿ ತಕ್ಕ ಮುಖ್ಯಸ್ಥರೊಂದಿಗೆ ಸೇರಿ ದೇಶ ಕಟ್ಟು ವಿಧಿಸಲಾಗಿದೆ. ನ. 29ರಂದು ಕಲಾಡ್ಚ ಹಬ್ಬ ನಡೆದು ಎತ್ತೇರಾಟ, ದೇವರ ಮೂರ್ತಿಯೊಂದಿಗೆ ಆದಿ ಸ್ಥಳ ಮಲ್ಮಕ್ಕೆ ತೆರಳಿ ಸಂಪ್ರದಾಯದಂತೆ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿದ ನಂತರ ಕಟ್ಟು ಸಡಿಲಿಸಲಾಗುವುದು’ ಎಂದರು.

‘ಈ ಸಮಯದಲ್ಲಿ ಹಸಿರು ಮರ ಕಡಿಯುವುದು, ರಕ್ತಪಾತ, ಪ್ರಾಣಿ ಹಿಂಸೆ, ಮಾಂಸ ಸೇವನೆ, ಸಭೆ ಸಮಾರಂಭಗಳನ್ನು ನಡೆಸುವುದನ್ನು ನಿಷೇಧಿಸಲಾಗಿದೆ. ಜಿಲ್ಲೆಯ ಭಕ್ತರು ನಿಯಮ ಪಾಲಿಸಬೇಕು’ ಎಂದು ಅವರು ಮನವಿ ಮಾಡಿದರು.

ದೇವಾಲಯ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಾಚಮಂಡ ಲವ ಚಿಣ್ಣಪ್ಪ, ಭಕ್ತಜನ ಸಂಘದ ಅಧ್ಯಕ್ಷ ಕಾಂಡಂಡ ಜೋಯಪ್ಪ, ದೇವಾಲಯ ಸಮಿತಿ ಹಾಗೂ ಭಕ್ತಜನ ಸಂಘದ ಎಲ್ಲಾ ನಿರ್ದೇಶಕರು, ದೇವಾಲಯಕ್ಕೆ ಸಂಬಂಧಿಸಿದ ಎಲ್ಲಾ ಕುಟುಂಬದ ತಕ್ಕ ಮುಖ್ಯಸ್ಥರು, ಪಾರುಪತ್ತೆಗಾರ ಪರದಂಡ ಪ್ರಿನ್ಸ್ ತಿಮ್ಮಯ್ಯ, ಜ್ಯೋತಿಷಿ ಕುಟುಂಬದ ಕಣಿಯರ ನಾಣಯ್ಯ, ದೇವಾಲಯದ ಸಿಬ್ಬಂದಿ ವರ್ಗ, ಭಕ್ತರು ಹಾಜರಿದ್ದರು.  

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.