ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಸರು ಬದಲಾವಣೆಗಾಗಿ ನಾಡ ಕಚೇರಿಗೆ ತಲಕಾವೇರಿ ಅರ್ಚಕರ ಮಕ್ಕಳ ಚೆಕ್‌ ವಾಪಸ್

ನಾರಾಯಣ ಆಚಾರ್‌ ಪುತ್ರಿಯರಿಗೆ ವಿತರಿಸಿದ್ದ ಪರಿಹಾರದ ಚೆಕ್‌
Last Updated 26 ಆಗಸ್ಟ್ 2020, 16:13 IST
ಅಕ್ಷರ ಗಾತ್ರ

ಮಡಿಕೇರಿ: ತಲಕಾವೇರಿಯಲ್ಲಿ ಆ. 7ರಂದು ಸಂಭವಿಸಿದ್ದ ಭೂಕುಸಿತದಲ್ಲಿ ಮೃತಪಟ್ಟಿದ್ದ ತಲಕಾವೇರಿಯ ಕ್ಷೇತ್ರದ ಪ್ರಧಾನ ಅರ್ಚಕ ನಾರಾಯಣ ಆಚಾರ್‌ ಅವರ ಪುತ್ರಿಯರಿಗೆ ಜಿಲ್ಲಾಡಳಿತವು ವಿತರಿಸಿದ್ದ ಪರಿಹಾರದ ಹಣವನ್ನು ಪಡೆಯಲು ಹೆಸರು ಬದಲಾವಣೆಯಿಂದ ಸಾಧ್ಯವಾಗಿಲ್ಲ.

ಭಾಗಮಂಡಲದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರು, ಇಬ್ಬರು ಪುತ್ರಿಯರಿಗೆ ತಲಾ ₹ 2.5 ಲಕ್ಷದ ಚೆಕ್‌ ಅನ್ನು ಈಚೆಗೆ ವಿತರಿಸಿದ್ದರು.

ಆ ಚೆಕ್‌ ಬ್ಯಾಂಕ್‌ನಲ್ಲಿ ಡ್ರಾ ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ ಎಂಬ ಕಾರಣಕ್ಕೆ ಭಾಗಮಂಡಲ ನಾಡಕಚೇರಿಗೆ ವಾಪಸ್‌ ನೀಡಿದ್ದಾರೆ. ಇಬ್ಬರು ಪುತ್ರಿಯರು ತಮ್ಮ ಮೂಲ ಹೆಸರು ಬದಲಾವಣೆ ಮಾಡಿಕೊಂಡಿರುವುದು ಸಮಸ್ಯೆಯಾಗಿದೆ.

ಪುತ್ರಿಯರು ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್‌ನಲ್ಲಿ ನೆಲೆಸಿದ್ದರು. ಭೂಕುಸಿತದ ಮಾಹಿತಿ ತಿಳಿದು ಅಲ್ಲಿಂದ ಭಾಗಮಂಡಲಕ್ಕೆ ಬಂದು ತಂದೆ– ತಾಯಿ ನಾಪತ್ತೆಯ ದೂರು ನೀಡಿದ್ದರು. ದೂರು ನೀಡುವಾಗ ಶಾರದಾ ಆಚಾರ್‌ ಹಾಗೂ ನಮಿತಾ ಆಚಾರ್‌ ಎಂಬ ಹೆಸರು ಉಲ್ಲೇಖಿಸಿದ್ದರು. ನಾರಾಯಣ ಆಚಾರ್‌ ಅವರ ಶವ ದೊರೆತ ಮೇಲೆ ದೂರು ನೀಡಿದ್ದ ಆಧಾರದಂತೆಯೇ ತಹಶೀಲ್ದಾರ್‌ ಕಚೇರಿಯಿಂದ ಚೆಕ್‌ಗೆ ಹೆಸರು ಬರೆಯಲಾಗಿತ್ತು. ಹೆಸರು ಬದಲಾವಣೆ ಮಾಡಿಕೊಂಡಿದ್ದ ಕಾರಣಕ್ಕೆ ಈ ಹೆಸರು ಗಮನಿಸಿದ ಕೂಡಲೇ ಇಬ್ಬರೂ ಗೊಂದಲಕ್ಕೆ ಸಿಲುಕಿದ್ದರು. ಇದೀಗ ಬದಲಾವಣೆಯಾಗಿರುವ ಹೆಸರಿಗೇ ಚೆಕ್‌ ಬರೆಯಲು ಕೋರಿದ್ದಾರೆ.

ಉಪ ತಹಶೀಲ್ದಾರ್ ದೊರೆ ಅವರು‌, ತಮ್ಮ ಮೂಲ ಹೆಸರು ಬದಲಾವಣೆ ಆಗಿರುವುದಕ್ಕೆ ಕಾನೂನು ಬದ್ಧ ದಾಖಲೆ ಸಲ್ಲಿಸಲು ಸೂಚನೆ ನೀಡಿದ್ದಾರೆ. ಆದರೆ, ಪುತ್ರಿಯರು ಇನ್ನೂ ದಾಖಲೆ ಸಲ್ಲಿಸದ ಕಾರಣಕ್ಕೆ, ಪರಿಹಾರದ ಹಣ ಅವರ ಕೈಸೇರಿಲ್ಲ.

ವರದಿ ಸಲ್ಲಿಸಲು ನಿರ್ಧಾರ: ಈ ನಡುವೆ ಶಾಂತಾ ಆಚಾರ್‌ ಹಾಗೂ ಶ್ರೀನಿವಾಸ್‌ ಪಡ್ಡಿಲಾಯ ಅವರ ಸುಳಿವು ಸಿಕ್ಕಿಲ್ಲ. ಕಾರ್ಯಾಚರಣೆ ಸಹ ಸ್ಥಗಿತಗೊಳಿಸಲಾಗಿದೆ. ವಿಶೇಷ ಪ್ರಕರಣವೆಂದು ಪರಿಗಣಿಸಿ, ಪರಿಹಾರ ನೀಡುವಂತೆ ಜಿಲ್ಲಾಡಳಿತ ಸರ್ಕಾರಕ್ಕೆ ವರದಿ ಸಲ್ಲಿಸಲು ತೀರ್ಮಾನಿಸಿದೆ.

ಕುಟುಂಬಸ್ಥರ ಮನವಿ: ‘ನಾರಾಯಣ ಆಚಾರ್ ಅವರು ಕುಟುಂಬ ಸಮೇತ ಮರಣ ಹೊಂದಿದ ಬಳಿಕ ಆಚಾರ್ ಕುಟುಂಬದಲ್ಲಿ ಕಾವೇರಮ್ಮನ ಪೂಜೆ ಮಾಡಲು ಯಾರೂ ಇಲ್ಲ’ ಎಂಬ ಚರ್ಚೆಗಳು ನಡೆಯುತ್ತಿವೆ. ಆದರೆ, ತಮ್ಮ ಪಾಲಿಗೆ ಅನುವಂಶಿಕವಾಗಿ ಬಂದಿರುವ ಅರ್ಚನೆಯ ಹಕ್ಕನ್ನು ಆಚಾರ್ ಕುಟುಂಬದ ಹಲವು ಸದಸ್ಯರು ತಿಂಗಳುವಾರು ಲೆಕ್ಕದಲ್ಲಿ ಹಂಚಿಕೊಂಡು ಯಾವ ವಿವಾದಗಳಿಲ್ಲದೇ ಹಲವು ವರ್ಷಗಳಿಂದ ನಡೆಸಿಕೊಂಡು ಬರುತ್ತಿದ್ದಾರೆ. ಈ ವಿಚಾರ ದೇವಸ್ಥಾನಗಳ ವ್ಯವಸ್ಥಾಪನಾ ಸಮಿತಿ ಹಾಗೂ ಜಿಲ್ಲಾಧಿಕಾರಿಗೆ ತಿಳಿದಿದ್ದು ಈ ಪೂಜಾ ಕಾರ್ಯಗಳು ಇದೀಗ ಸೂತಕ ಅವಧಿ ಮುಗಿದ ಬಳಿಕ ಮುಂದಿನ ಹಕ್ಕುದಾರರು ಯಥಾಪ್ರಕಾರ ಕ್ರಮಬದ್ಧವಾಗಿ ನಡೆಸಿಕೊಂಡು ಬರುತ್ತಾರೆ’ ಎಂದು ಡಿ.ಆರ್‌.ಡಿ.ಒ. (ಕೇಂದ್ರ ರಕ್ಷಣೆ ಹಾಗೂ ಸಂಶೋಧನಾ ಇಲಾಖೆ) ನಿವೃತ್ತ ಪ್ರಾದೇಶಿಕ ಸಾರ್ವಜನಿಕ ಸಂಪರ್ಕ ಅಧಿಕಾರಿ ಕೆ. ಜಯಪ್ರಕಾಶ್ ರಾವ್ ಪ್ರಕಟಣೆಯಲ್ಲಿ ಕೋರಿದ್ದಾರೆ.

ಈ ಬಗ್ಗೆ ಯಾವುದೇ ವಿವಾದ ಬೇಡ ಎಂದು ಆಚಾರ್ ಕುಟುಂಬ ಈ ಮೂಲಕ ಸ್ಪಷ್ಟೀಕರಣ ಬಯಸುತ್ತದೆ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT