ಮಂಗಳವಾರ, ಆಗಸ್ಟ್ 16, 2022
22 °C
ಭರದಿಂದ ಸಾಗಿರುವ ಕೊಡಗು- ಕೇರಳ ಸಂಪರ್ಕ ಕಲ್ಪಿಸುವ ಕೊಣನೂರು- ಮಾಕುಟ್ಟ ಹೆದ್ದಾರಿ

ವಿರಾಜಪೇಟೆ | ಮಾಕುಟ್ಟ ಹೆದ್ದಾರಿ ಕಾಮಗಾರಿ ತಿಂಗಳಾಂತ್ಯಕ್ಕೆ ಪೂರ್ಣ

ಹೇಮಂತ್ ಎಂ.ಎನ್. Updated:

ಅಕ್ಷರ ಗಾತ್ರ : | |

Prajavani

ವಿರಾಜಪೇಟೆ: ಸತತ 3 ವರ್ಷಗಳಿಂದ ಮಳೆಗಾಲದಲ್ಲಿ ಹಾನಿಗೊಳಗಾಗಿ ಸಂಪರ್ಕ ಕಡಿತಗೊಳ್ಳುತ್ತಿದ್ದ, ಕೊಡಗು- ಕೇರಳ ನಡುವೆ ಸಂಪರ್ಕ ಕಲ್ಪಿಸುವ ಕೊಣನೂರು- ಮಾಕುಟ್ಟ ಅಂತರರಾಜ್ಯ ಹೆದ್ದಾರಿಯ ಕಾಮಗಾರಿ  ಭರದಿಂದ ಸಾಗುತ್ತಿದ್ದು ತಿಂಗಳಾಂತ್ಯಕ್ಕೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ.

ಬೆಟ್ಟಗುಡ್ಡಗಳಿಂದ ಕೂಡಿದ ದಟ್ಟ ಅರಣ್ಯದ ಮೂಲಕ ನೆರೆಯ ಕೇರಳ ರಾಜ್ಯಕ್ಕೆ ಸಂಪರ್ಕ ಕಲ್ಪಿಸುವ ಕೊಣನೂರು-ಮಾಕುಟ್ಟ ಹೆದ್ದಾರಿಯು ಹಾನಿಗೊಳಗಾಗಿ ಬಂದ್ ಆಗಿ ಎರಡು ರಾಜ್ಯದ ಜನತೆ ಸಾಕಷ್ಟು ಸಮಸ್ಯೆ ಅನುಭವಿಸುವಂತಾಗಿತ್ತು.

2017 ರ ಜುಲೈನಲ್ಲಿ ಮಳೆಯಿಂದಾಗಿ ಸಮೀಪದ ಪೆರುಂಬಾಡಿಯಲ್ಲಿನ ಕೆರೆಗೆ ಕೋಡಿಬಿದ್ದು ಹೆದ್ದಾರಿ ಕೊಚ್ಚಿಹೋಗಿ ಕೆಲವು ದಿನಗಳ ಕಾಲ ಸಂಚಾರ ಬಂದ್ ಆಗಿತ್ತು. 2018ರಲ್ಲಿ ಜೂನ್ ತಿಂಗಳಲ್ಲಿ ಸುರಿದ ಭಾರಿ ಮಳೆಗೆ ಮಾಕುಟ್ಟ ಹೆದ್ದಾರಿಯುದ್ದಕ್ಕೂ ಹಲವೆಡೆ ಗುಡ್ಡ ಹಾಗೂ ಗುಡ್ಡ ಮೇಲಿನ ಮರಗಳು ರಸ್ತೆಗೆ  ಬಿದ್ದರೆ, ಕೆಲವೆಡೆ ನೀರಿನ ಹರಿವಿಗೆ ಸಿಲುಕಿ ರಸ್ತೆಗಳೇ ಕೊಚ್ಚಿ ಹೋಗಿ ತಿಂಗಳುಗಟ್ಟಲೆ ರಸ್ತೆ ಬಂದ್ ಆಗಿತ್ತು. ಬಳಿಕ ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ಅಲ್ಲಲ್ಲಿ ಕಾಂಕ್ರೀಟ್ ಹಾಗೂ ಗೇಬಿಯನ್ ಮೆಸ್ ಬಳಸಿ ತಡೆಗೋಡೆ ನಿರ್ಮಿಸಿ ಹಲವು ತಿಂಗಳು  ಬಳಿಕ ಹೆದ್ದಾರಿಯಲ್ಲಿ ಸಂಚಾರ ಆರಂಭಗೊಂಡಿತ್ತು.

2019 ರ ಆಗಸ್ಟ್‌ನಲ್ಲಿ ದಕ್ಷಿಣ ಕೊಡಗಿನಾದ್ಯಂತ ಸುರಿದ ಭಾರಿ ಮಳೆಗೆ ಮಾಕುಟ್ಟ ಹೆದ್ದಾರಿಗೆ ನೂತನವಾಗಿ ನಿರ್ಮಿಸಿದ್ದ ಕಾಂಕ್ರೀಟ್ ತಡೆಗೋಡೆ ಕೆಲವೆಡೆ ಕೊಚ್ಚಿ ಹೋಗಿ ಮತ್ತೆ ರಸ್ತೆ ಬಂದ್ ಆಗಿತ್ತು. ಕೆಲವು ದಿನಗಳ ಬಳಿಕ ತಾತ್ಕಾಲಿಕ ಕಾಮಗಾರಿ ಕೈಗೊಂಡು ಕೆಲವು ನಿರ್ಬಂಧಗಳ ನಡುವೆ ಹೆದ್ದಾರಿಯನ್ನು ಸಂಚಾರಕ್ಕೆ ಮುಕ್ತಗೊಳಿಸಲಾಗಿತ್ತಾದರೂ ಪೂರ್ಣ ಪ್ರಮಾಣದಲ್ಲಿ ಬಳಕೆಗೆ ಲಭ್ಯವಿರಲಿಲ್ಲ.

ಇದೀಗ ಸುಮಾರು ₹ 5 ಕೋಟಿ ವೆಚ್ಚದಲ್ಲಿ ಹೆದ್ದಾರಿ ಕಾಮಗಾರಿ ನಡೆಯುತ್ತಿದ್ದು ಈ ತಿಂಗಳಾಂತ್ಯಕ್ಕೆ ಮುಕ್ತಾಯಗೊಳ್ಳುವ ನಿರೀಕ್ಷೆಯಿದೆ. ಕಳೆದ ಸಾಲಿನ ಮಳೆಗೆ ರಸ್ತೆ ಕೊಚ್ಚಿ  ಹೋಗಿರುವ ಎರಡು ತಿರುವುಗಳಲ್ಲಿ ಬೃಹತ್ ತಡೆಗೋಡೆಗಳನ್ನು ನಿರ್ಮಿಸಲಾಗಿದೆ. ಒಂದು ತಿರುವಿನಲ್ಲಿ ಗುಜರಾತ್ ಮಾದರಿಯ ಗೇಬಿಯನ್ ಮೆಸ್ ಬಳಸಿ ಸುಮಾರು 10 ಮೀ ಎತ್ತರದ ತಡೆಗೋಡೆಯನ್ನು ನಿರ್ಮಿಸಲಾಗಿದೆ. ಮತ್ತೊಂದು ತಿರುವಿನಲ್ಲಿ ರಸ್ತೆ ಬದಿಯ ಕಂದಕಕ್ಕೆ ಕಾಂಕ್ರೀಟ್ ತಡೆಗೋಡೆ ನಿರ್ಮಿಸಿ, ಸುಮಾರು 2 ಸಾವಿರ ಲೋಡ್‌ಗಳಷ್ಟು ಮಣ್ಣು ಸುರಿದು ರಸ್ತೆಯನ್ನು ವಿಸ್ತರಿಸಲಾಗಿದೆ.

ಇದಲ್ಲದೆ 5 ತಿರುವುಗಳಲ್ಲಿ ನೀರು ಸರಾಗವಾಗಿ ಹರಿದುಹೋಗಲು ಚಿಕ್ಕ ಗಾತ್ರದ ಸೇತುವೆ ಹಾಗೂ ಅದಕ್ಕೆ ಹೊಂದಿಕೊಂಡಂತೆ ತಡೆಗೋಡೆ ಕಾಮಗಾರಿ ಕೈಗೊಳ್ಳಲಾಗಿದೆ. ಜತೆಗೆ ನೀರು ಹರಿಯಲು ಅಲ್ಲಲ್ಲಿ ಕಾಂಕ್ರೀಟ್ ಚರಂಡಿಯ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ರಸ್ತೆ ಹಾನಿಗೊಳಗಾಗಿರುವ ಕೆಲವೆಡೆ ರಸ್ತೆ ಕಾಮಗಾರಿಯು ನಡೆಯಲಿದೆ. ಪೆರುಂಬಾಡಿ ಕೆರೆಯ ಹೆಚ್ಚುವರಿ ನೀರು ಸರಾಗವಾಗಿ ಹರಿದು ಹೋಗಲು ಮಾಡಲಾಗಿರುವ ಕಿರು ಸೇತುವೆ ಕಾಮಗಾರಿಯೂ ಪೂರ್ಣಗೊಂಡಿದೆ.

ನೀರು ಅಲ್ಲಲ್ಲಿ ರಸ್ತೆಯ ಮೇಲಿನಿಂದ ಕಂದಕದ ಕಡೆ ಹರಿದರೆ ರಸ್ತೆ ಕೊಚ್ಚಿ ಹೋಗುವ ಅಪಾಯವಿರುವುದರಿಂದ ರಸ್ತೆಯ ಒಂದು ಬದಿಗೆ ಅಂದರೆ ಗುಡ್ಡದ ಕಡೆಗೆ ರಸ್ತೆಯನ್ನು ಇಳಿಜಾರುಗೊಳಿಸಲಾಗುತ್ತದೆ. ಗುಡ್ಡದ ಕಡೆಗೆ ಹರಿದ ನೀರನ್ನು ಸೂಕ್ತವಾದ ಜಾಗದಲ್ಲಿ ಕಂದಕದ ಕಡೆಗೆ ಹರಿಯುವಂತೆ ಕಾಮಗಾರಿ ಕೈಗೊಳ್ಳಲಾಗುತ್ತಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು