ಕೊಡಗು: ಪ್ರಾಕೃತಿಕ ವಿಕೋಪದಿಂದ ₹ 600 ಕೋಟಿ ಹಾನಿ

ಕುಶಾಲನಗರ: ‘ಕೊಡಗು ಜಿಲ್ಲೆಯಲ್ಲಿ ಪ್ರಾಕೃತಿಕ ವಿಕೋಪದಿಂದ ₹ 600 ಕೋಟಿಗೂ ಅಧಿಕ ಪ್ರಮಾಣದ ಹಾನಿ ಸಂಭವಿಸಿದೆ’ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಕೇಂದ್ರದ ಐಎಂಟಿಸಿ ಅಧ್ಯಯನ ತಂಡಕ್ಕೆ ಮಾಹಿತಿ ನೀಡಿದರು.
ಕೂಡಿಗೆ ಸೈನಿಕ ಶಾಲೆಯ ಸಭಾಂಗಣದಲ್ಲಿ ಮಂಗಳವಾರ ಭಾರತ ಸರ್ಕಾರದ ಗೃಹ ಸಚಿವಾಲಯದ ಜಂಟಿ ಕಾರ್ಯದರ್ಶಿ ಕೆ.ವಿ.ಪ್ರತಾಪ್ ಅವರ ನೇತೃತ್ವದ ಅಧ್ಯಯನ ತಂಡ ಉನ್ನತ ಅಧಿಕಾರಿಗಳ ಸಭೆ ನಡೆಸಿತು.
ಮಹಾಮಳೆ ಹಾಗೂ ಬೆಟ್ಟಗುಡ್ಡ ಕುಸಿತದಿಂದ ಹಾಗೂ ನೆರೆ ಪ್ರವಾಹದಿಂದ ಉಂಟಾದ ಹಾನಿಯ ವಿವರವನ್ನು ಪವರ್ ಪಾಯಿಂಟ್ ಪ್ರಸೆಂಟೇಷನ್ ಮೂಲಕ ಕೇಂದ್ರ ಅಧ್ಯಯನ ತಂಡಕ್ಕೆ ಸಮಗ್ರ ಮಾಹಿತಿಯನ್ನು ಜಿಲ್ಲಾಧಿಕಾರಿ ನೀಡಿದರು. ಭಾಗಮಂಡಲ ಬೆಟ್ಟ ಕುಸಿತದ ಅನಾಹುತ ಹಾಗೂ ಕಾರ್ಯಾಚರಣೆಯ ಸಮಗ್ರ ಚಿತ್ರಣವನ್ನು ಅಧಿಕಾರಿಗಳು ವೀಕ್ಷಿಸಿದರು.
ಜಿಲ್ಲೆಯಲ್ಲಿ ಆಗಸ್ಟ್ ಮೊದಲ ವಾರದಲ್ಲಿ ಸುರಿದ ಧಾರಾಕಾರ ಮಳೆಯಿಂದ ಉಂಟಾದ ನಷ್ಟದ ಕುರಿತು ಕಂದಾಯ, ಕೃಷಿ, ತೋಟಗಾರಿಗೆ, ಪರಿಸರ ಇಲಾಖೆ ಸೇರಿದಂತೆ ಇನ್ನಿತರ ಇಲಾಖೆಗಳಿಂದ ಸಮೀಕ್ಷೆ ನಡೆಸಲಾಗಿದೆ. ಇದರ ಪ್ರಕಾರ ₹ 600 ಕೋಟಿಯಷ್ಟು ಹಾನಿ ಉಂಟಾಗಿದೆ. ಕಾಫಿ, ಮೆಣಸು, ಏಲಕ್ಕಿ, ಕೃಷಿ, ತೋಟಗಾರಿಕೆ ಸೇರಿದಂತೆ ಒಟ್ಟು 41,026 ಹೆಕ್ಟೇರ್ ಪ್ರದೇಶಕ್ಕೆ ಹಾನಿ ಉಂಟಾಗಿದೆ. ಮಡಿಕೇರಿ ತಾಲ್ಲೂಕಿನಲ್ಲಿ 710 ಹೆಕ್ಟೇರ್ ಕೃಷಿ, 1,526 ತೋಟಗಾರಿಕೆ ಹಾಗೂ 12,751ಹೆಕ್ಟೇರ್ ಕಾಫಿ ತೋಟಕ್ಕೆ ಹಾನಿ ಉಂಟಾಗಿದೆ. ಸೋಮವಾರಪೇಟೆ ತಾಲ್ಲೂಕಿನಲ್ಲಿ 500 ಹೆಕ್ಟೇರ್ ಕೃಷಿ, 1,223 ತೋಟಗಾರಿಕೆ, 6,643 ಹೆಕ್ಟೇರ್ ಕಾಫಿ, ವಿರಾಜಪೇಟೆ ತಾಲ್ಲೂಕಿನಲ್ಲಿ 1,990 ಹೆಕ್ಟೇರ್ ಕೃಷಿ, 1,432 ಹೆಕ್ಟೇರ್ ತೋಟಗಾರಿಕೆ ಹಾಗೂ 14,251 ಹೆಕ್ಟೇರ್ ಕಾಫಿ ತೋಟಗಳಿಗೆ ಹಾನಿ ಉಂಟಾಗಿದೆ ಎಂದು ವಿವರ ನೀಡಿದರು.
ಜಿಲ್ಲೆಯ ಮೂರು ತಾಲ್ಲೂಕಿನ ವ್ಯಾಪ್ತಿಯಲ್ಲಿ ಸುಮಾರು 360ಕ್ಕೂ ಹೆಚ್ಚಿನ ಮನೆಗಳಿಗೆ ಹಾನಿ ಉಂಟಾಗಿದೆ.ಇದರಲ್ಲಿ 12 ಮನೆಗಳಿಗೆ ಬಹುತೇಕ ಹಾನಿ ಉಂಟಾಗಿದೆ. 43 ಮನೆಗಳಿಗೆ ಶೇ.50 ರಷ್ಟು ಹಾಗೂ 307 ಮನೆಗಳಿಗೆ ಶೇ.25 ರಷ್ಟು ಹಾನಿ ಉಂಟಾಗಿದೆ ಎಂದರು.
ಲೋಕೋಪಯೋಗಿ ಇಲಾಖೆಯ ರಸ್ತೆ ಅಭಿವೃದ್ಧಿಗೆ ₹ 103.89 ಕೋಟಿ, ಜಿಲ್ಲಾ ಪಂಚಾಯಿತಿ ರಸ್ತೆ, ಚರಂಡಿ ಅಭಿವೃದ್ಧಿಗೆ ₹ 310.53 ಕೋಟಿ, ಸಣ್ಣ ನೀರಾವರಿ ಇಲಾಖೆಯ ಕಾಮಗಾರಿಗಳಿಗೆ ₹ 27.90 ಕೋಟಿ, ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಗೆ ₹ 121.51 ಕೋಟಿ, ಗ್ರಾಮೀಣ ಕುಡಿಯುವ ನೀರಿನ ಯೋಜನೆಗೆ ₹1.02 ಕೋಟಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ₹8 ಕೋಟಿ, ಚಾಮುಂಡೇಶ್ವರಿ ವಿದ್ಯುತ್ ನಿಗಮಕ್ಕೆ ₹ 3.96 ಕೋಟಿ, ನಗರ ಸಂಸ್ಥೆಗಳಿಗೆ ₹ 12.82 ಕೋಟಿ, ಶಾಲೆಗಳ ಅಭಿವೃದ್ಧಿಗೆ ₹ 3.06 ಕೋಟಿ, ಅಂಗನವಾಡಿಗಳ ಅಭಿವೃದ್ಧಿಗೆ ₹ 1.08 ಕೋಟಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಯೋಜನೆಗೆ ₹ 0.54 ಕೋಟಿ,ಕಾವೇರಿ ನೀರಾವರಿ ನಿಗಮದ ಕಾಮಗಾರಿಗಳಿಗೆ ₹ 4.25 ಕೋಟಿ ಸೇರಿದಂತೆ ಒಟ್ಟು ₹ 598.56 ಕೋಟಿ ಕ್ರಿಯಾಯೋಜನೆ ಸಿದ್ಧಪಡಿಸಲಾಯಿತು ಎಂದು ಅವರು ಮಾಹಿತಿ ನೀಡಿದರು.
ಪ್ರಾಕೃತಿಕ ವಿಕೋಪದ ಸಂದರ್ಭ. ಎನ್.ಡಿ.ಆರ್.ಎಫ್, ಎಸ್.ಡಿ.ಆರ್.ಎಫ್, ಪೊಲೀಸ್ ಇಲಾಖೆ, ಅಗ್ನಿಶಾಮಕ ಇಲಾಖೆ, ಹೋಂಗಾಡ್ಸ್, ಅರಣ್ಯ ಇಲಾಖೆ ಸಿಬ್ಬಂದಿ ರಕ್ಷಣಾ ಕಾರ್ಯದಲ್ಲಿ ತೊಡಗಿಸಿಕೊಂಡು ಉತ್ತಮ ಸೇವೆ ನೀಡಿದ್ದಾರೆ ಎಂದು ಹೇಳಿದರು.
‘ಭಾಗಮಂಡಲದಲ್ಲಿ ಬೆಟ್ಟ ಕುಸಿದು ಐವರು ಮೃತಪಟ್ಟಿದ್ದಾರೆ. ಇದರಲ್ಲಿ ಮೂವರ ಮೃತದೇಹಗಳು ಸಿಕ್ಕಿದ್ದು, ಇಬ್ಬರ ಮೃತ ದೇಹಗಳು ಸಿಕ್ಕಿಲ್ಲ. ಮೃತಪಟ್ಟ ಕುಟುಂಬಗಳಿಗೆ ಎನ್‌ಡಿಆರ್‌ಎಫ್ ಹಾಗೂ ಸಿ.ಎಂ ನಿಧಿಯಿಂದ ₹ 5 ಲಕ್ಷ ಪರಿಹಾರವನ್ನು ತಹಶೀಲ್ದಾರ ಅವರು ವಿವರಿಸಿದ್ದಾರೆ. 17 ಸಾಕು ಪ್ರಾಣಿಗಳು ಮೃತಪಟ್ಟಿವೆ’ ಎಂದು ಮಾಹಿತಿ ಒದಗಿಸಿದರು.
ಜಿಲ್ಲೆಯಲ್ಲಿ 9 ಸಂತ್ರಸ್ತರ ಪರಿಹಾರ ಕೇಂದ್ರಗಳನ್ನು ಸ್ಥಾಪಿಸಿ 566 ಸಂತ್ರಸ್ತರಿಗೆ ಅಗತ್ಯ ನೆರವು ಒದಗಿಸಲಾಗಿದೆ. ಜಿಲ್ಲೆಯಲ್ಲಿ ಮಳೆಯಿಂದ 120ಕ್ಕೂ ಹೆಚ್ಚು ಶಾಲೆಗಳಿಗೆ ಹಾನಿ ಉಂಟಾಗಿದೆ ಎಂದು ಡಿಡಿಪಿಐ ಮಚ್ಚಾಡೋ ತಿಳಿಸಿದರು.
50ಕ್ಕೂ ಹೆಚ್ಚು ಅಂಗನವಾಡಿಗಳಿಗೆ ಹಾನಿಯಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿ ಮಾಹಿತಿ ನೀಡಿದರು. ಕಾಫಿ ತೋಟ, ಕರಿ ಮೆಣಸು ಸೇರಿದಂತೆ ಸಾಂಬಾರ ಬೆಳೆಗಳ ಹಾನಿ ಕುರಿತು ಕಾಫಿ ಮಂಡಳಿ ಅಧಿಕಾರಿಗಳು ಮಾಹಿತಿ ನೀಡಿದರು.
ಈ ಸಂದರ್ಭ ಭಾರತ ಸರ್ಕಾರದ ವಿತ್ತ ಸಚಿವಾಲಯದ ಡಾ.ಭಾರ್ತೇಂದು ಕುಮಾರ್‌ಸಿಂಗ್, ಕೆಎಸ್‌ಡಿಎಂಎ ಆಯುಕ್ತ ಮನೋಜ್ ರಂಜನ್, ವಿಜ್ಞಾನ ಮತ್ತು ತಂತ್ರಜ್ಞಾನ ಅಧಿಕಾರಿ ಜಗದೀಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರಾ, ಜಿ.ಪಂ ಸಿಇಒ ಮೀನಾ, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಸ್ನೇಹಾ, ಡಿವೈಎಸ್‍ಪಿ ಶೈಲೇಂದ್ರ, ಲೋಕೋಪಯೋಗಿ ಇಲಾಖೆ ಎಂಜಿನಿಯರ್ ಮದನ್‌ಮೋಹನ್, ತಹಶೀಲ್ದಾರ್ ಗೋವಿಂದರಾಜು ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
ಇದೇ ಸಂದರ್ಭ ಸೈನಿಕ ಶಾಲೆ ಆವರಣದಲ್ಲಿ ಅಳವಡಿಸಿದ್ದ ಪ್ರಾಕೃತಿಕ ವಿಕೋಪದಿಂದ ಉಂಟಾದ ಹಾನಿಯ ಕುರಿತು ಛಾಯಾಚಿತ್ರಗಳನ್ನು ಕೇಂದ್ರ ತಂಡದ ಅಧಿಕಾರಿಗಳು ವೀಕ್ಷಣೆ ಮಾಡಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.