ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೊಡಗಿನಲ್ಲಿ ಹೊಸ ವರ್ಷ ‘ಎಡಮ್ಯಾರ್’ ಸಂಭ್ರಮ

ಸಿಎನ್‍ಸಿಯಿಂದ ಮದೆನಾಡಿನ ಬೆಟ್ಟತ್ತೂರು ಗ್ರಾಮದಲ್ಲಿ ಆಚರಣೆ
Published 15 ಏಪ್ರಿಲ್ 2024, 4:09 IST
Last Updated 15 ಏಪ್ರಿಲ್ 2024, 4:09 IST
ಅಕ್ಷರ ಗಾತ್ರ

ಮಡಿಕೇರಿ: ಕೊಡವರ ಹೊಸ ವರ್ಷ ‘ಎಡಮ್ಯಾರ್’ ಅನ್ನು ಕೊಡಗಿನಲ್ಲೆಡೆ ಸಂತಸ, ಸಂಭ್ರಮಗಳಿಂದ ಭಾನುವಾರ ಆಚರಿಸಲಾಯಿತು.

ಇದರ ಅಂಗವಾಗಿ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಮದೆನಾಡಿನ ಬೆಟ್ಟತ್ತೂರು ಗ್ರಾಮದಲ್ಲಿ ಕಾರ್ಯಕ್ರಮವೊಂದನ್ನು ಆಯೋಜಿಸಿತ್ತು.

ಗ್ರಾಮದ ಕೂಪದಿರ ಎನ್.ಮೋಹನ್ ಅವರ ಗದ್ದೆಯಲ್ಲಿ ಭೂತಾಯಿಗೆ ವಿಧಿವತ್ತಾಗಿ ಪೂಜೆ ಸಲ್ಲಿಸಿದ ಸಿಎನ್‍ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಅವರು, ಕೆಂಪಯ್ಯ, ಕರಿಯಣ್ಣ ಜೋಡೆತ್ತುಗಳ ಮೂಲಕ ಉಳುಮೆ ಮಾಡಿದರು. ಭೂತಾಯಿ ಹಾಗೂ ಆದಿಮಸಂಜಾತ ಕೊಡವ ಬುಡಕಟ್ಟು ಜನರ ನಡುವಿನ ಅವಿನಾಭಾವ ಸಂಬಂಧವನ್ನು ಪ್ರತಿಪಾದಿಸಿದರು. ಗಾಳಿಯಲ್ಲಿ ಗುಂಡು ಹಾರಿಸಿದರು, ಊರು ಮಂದ್‌ನಲ್ಲಿ ಹಿರಿಯರನ್ನು ಸ್ಮರಿಸಿದರು.

ಈ ವೇಳೆ ಮಾತನಾಡಿದ ನಾಚಪ್ಪ, ‘ಪ್ರಕೃತಿ ಆರಾಧಕರಾದ ಕೊಡವರ ವಿಶಿಷ್ಟವಾದ ಆಚರಣೆಯನ್ನು ವಿಶ್ವ ಮಟ್ಟಕ್ಕೆ ಪರಿಚಯಿಸುವ ಸಲುವಾಗಿ ಹೊಸ ವರ್ಷ ‘ಎಡಮ್ಯಾರ್’ ಅನ್ನು ಸಿಎನ್‍ಸಿ ಸಂಘಟನೆ ಪ್ರತಿವರ್ಷ ಸಾರ್ವತ್ರಿಕವಾಗಿ ಆಚರಿಸಿಕೊಂಡು ಬರುತ್ತಿದ್ದು, ಇದು 30ನೇ ವರ್ಷದ ಕಾರ್ಯಕ್ರಮವಾಗಿದೆ’ ಎಂದರು.

ನಮ್ಮ ಸಂಸ್ಕೃತಿ, ಪರಂಪರೆಯನ್ನು ಈ ರೀತಿಯಲ್ಲಿ ಪ್ರತಿಬಿಂಬಿಸುವುದರಿಂದ ಕೊಡವರ ಅಸ್ತಿತ್ವದ ಬಗ್ಗೆ ಇಡೀ ವಿಶ್ವಕ್ಕೆ ತಿಳಿಯಲಿದೆ. ಅತ್ಯಂತ ಸೂಕ್ಷ್ಮ ಆದಿಮಸಂಜಾತ ಕೊಡವರ ಸ್ಥಿತಿಗತಿಯ ಬಗ್ಗೆ ಅರಿವು ಮೂಡಲಿದೆ ಎಂದು ತಿಳಿಸಿದರು.

ಇದೇ ವೇಳೆ ಅವರು ಕೊಡವ ಲ್ಯಾಂಡ್ ಭೂರಾಜಕೀಯ ಸ್ವಾಯತ್ತತೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿದರು.

ಡಾ.ಅಂಬೇಡ್ಕರ್ ಜಯಂತಿ ಆಚರಣೆ

ಇದೇ ವೇಳೆ ಸಿಎನ್‌ಸಿ ವತಿಯಿಂದ ಡಾ.ಬಿ.ಆರ್.ಅಂಬೇಡ್ಕರ್ ಜನ್ಮದಿನವನ್ನೂ ಆಚರಿಸಲಾಯಿತು.

‘ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಸ್ಮರಿಸುವುದು ಮತ್ತು ಜಯಂತಿಯನ್ನು ಆಚರಿಸುವುದು ಸಂವಿಧಾನದ ಮಹಾನ್ ಶಿಲ್ಪಿಯ ಆತ್ಮಕ್ಕೆ ಸಲ್ಲಿಸುವ ಗೌರವವಾಗಿದೆ’ ಎಂದರು.

ಅಂಬೇಡ್ಕರ್ ಅವರು ಕೊಡವ ಜನರಂತೆ ಅಳಿವಿನಂಚಿನಲ್ಲಿರುವ ಸೂಕ್ಷ್ಮ ಅಲ್ಪಸಂಖ್ಯಾತ ಬುಡಕಟ್ಟು ಜನಾಂಗಗಳ ನಿರಂತರ ಧ್ವನಿಯಾಗಿದ್ದಾರೆ. ಅವರು ರಚಿಸಿದ ಸಂವಿಧಾನವು ಕೊಡವ ಬುಡಕಟ್ಟು ಜನರ ಏಕೈಕ ಭರವಸೆಯ ಕಿರಣ ಮತ್ತು ನ್ಯಾಯಸಮ್ಮತವಾದ ಕೊಡವರ ಆಶಯಗಳನ್ನು ಸಾಧಿಸಲು ರಾಮಬಾಣವಾಗಿದೆ’ ಎಂದು ಪ್ರತಿಪಾದಿಸಿದರು.

ಕೂಪದಿರ ಮೋಹನ್, ಕೂಪದಿರ ಗಂಗವ್ವ, ಕೂಪದಿರ ಭವ್ಯಾ ಮಾಚಯ್ಯ, ಕೊಂಪ್ಳಿರ ಯಶವಂತ ಕುಮಾರ್, ಕೊಂಪ್ಳಿರ ನಯನಾ ಯಶವಂತ, ಕೂಪದಿರ ಸಾಬು, ಕೂಪದಿರ ಕಾವೇರಮ್ಮ, ಕೂಪದಿರ ವಿಹಾನ್, ವಿನು, ಪ್ರಣಮ್ ಕುಮಾರ್, ಕೆ.ಇರಾ ಜಗತ್ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT