ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಡಾನೆ ಹಾವಳಿ ನಿಯಂತ್ರಣಕ್ಕೆ ಸೂಚನೆ

ಸಮನ್ವಯತೆಯಿಂದ ಕೆಲಸ ಮಾಡಿ: ಜಿಲ್ಲಾಧಿಕಾರಿ ಅನೀಸ್‌ ಕಣ್ಮಣಿ ಜಾಯ್‌
Last Updated 18 ಮೇ 2019, 12:23 IST
ಅಕ್ಷರ ಗಾತ್ರ

ಮಡಿಕೇರಿ: ಜಿಲ್ಲೆಯಲ್ಲಿ ಮತ್ತೆ ಕಾಡಾನೆ ಹಾವಳಿ ತೀವ್ರವಾಗಿದ್ದು ಶನಿವಾರ ಅರಣ್ಯ ಭವನದಲ್ಲಿ ಜಿಲ್ಲಾಮಟ್ಟದ ಅಧಿಕಾರಿಗಳ ನೇತೃತ್ವದಲ್ಲಿ ಮಹತ್ವದ ಸಭೆ ನಡೆಯಿತು.

ಸಭೆಯಲ್ಲಿ ಕೊಡಗು ವೃತ್ತ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸಂತೋಷ್ ಕುಮಾರ್ ಮಾತನಾಡಿ, ಜಿಲ್ಲೆಯಲ್ಲಿ ಕಾಡಾನೆ ಹಾವಳಿ ಹೆಚ್ಚಾಗಿದ್ದು ಕಾಡಾನೆಗಳು ಮತ್ತು ಮಾನವ ನಡುವೆ ಸಂಘರ್ಷ ಏರ್ಪಡುತ್ತಿದೆ. ಇದನ್ನು ತಡೆಯಲು ಅರಣ್ಯ ಇಲಾಖೆಯಿಂದ ಸಾಕಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಆದರೂ, ಕಾಡಾನೆ ಮತ್ತು ವನ್ಯಪ್ರಾಣಿಗಳ ಹಾವಳಿ ಹೆಚ್ಚಾಗಿದೆ. ವನ್ಯಜೀವಿ ಹಾವಳಿ ನಿಯಂತ್ರಣ, ಮಾನವ ಸಂಘರ್ಷ ತಪ್ಪಿಸುವ ನಿಟ್ಟಿನಲ್ಲಿ ವಿವಿಧ ಇಲಾಖೆಗಳ ಸಹಕಾರ ಅತ್ಯಗತ್ಯ ಎಂದು ಕೋರಿದರು.

ಅರಣ್ಯ ಪ್ರದೇಶದ ಭಾಗದಲ್ಲಿ ಸೋಲಾರ್ ಬೇಲಿ, ಕಂದಕ ನಿರ್ಮಾಣ, ರೈಲ್ವೆ ಕಂಬಿಗಳ ನಿರ್ಮಾಣ ಜತೆಗೆ ಸ್ಥಳೀಯ ಮಟ್ಟದಲ್ಲಿ ರ‍್ಯಾಪಿಡ್ ರೆಸ್ಪಾನ್ಸ್ ಟೀಂ, ಗ್ರಾ.ಪಂ ಮಟ್ಟದಲ್ಲಿ ಸ್ಥಳೀಯ ಪ್ರತಿನಿಧಿಗಳೊಂದಿಗೆ ಮಾಹಿತಿ ಹಂಚಿಕೊಳ್ಳುವುದು... ಹೀಗೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

ಬೆಳೆ ಹಾನಿ, ಮಾನವ ನಡುವೆ ಸಂಘರ್ಷ ಕೊನೆಗೊಂಡಿಲ್ಲ. ಇದನ್ನು ಪರಿಣಾಮಕಾರಿಯಾಗಿ ತಡೆಯುವ ನಿಟ್ಟಿನಲ್ಲಿ ಅರಣ್ಯ ಇಲಾಖೆ ಜೊತೆಗೆ ವಿವಿಧ ಇಲಾಖೆಗಳು ಕೈಜೋಡಿಸಬೇಕಿದೆ ಎಂದು ಸಂತೋಷ್ ಕುಮಾರ್ ಮನವಿ ಮಾಡಿದರು.

ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಮಾತನಾಡಿ, ಜಿಲ್ಲೆಯಲ್ಲಿ ಕಾಡಾನೆ ಹಾಗೂ ಮಾನವನ ಸಂಘರ್ಷ ನಡೆಯುತ್ತಿದೆ. ಮಾನವನ ಜೀವಕ್ಕೆ ಬೆಲೆ ಕಟ್ಟುವುದು ಅಸಾಧ್ಯ. ಕಾಡಾನೆ ಹಾಗೂ ವನ್ಯ ಪ್ರಾಣಿಗಳ ಹಾವಳಿಯನ್ನು ನಿಯಂತ್ರಿಸಬೇಕಿದೆ. ಆ ನಿಟ್ಟಿನಲ್ಲಿ ಅರಣ್ಯ ಇಲಾಖೆ ಜೊತೆ ನಾನಾ ಇಲಾಖೆಗಳು ಕೈಜೋಡಿಸಬೇಕಿದೆ ಎಂದು ಸೂಚಿಸಿದರು.

ಪಶುಪಾಲನಾ ಇಲಾಖೆ ಉಪ ನಿರ್ದೇಶಕ ತಮ್ಮಯ್ಯ ಪ್ರತಿಕ್ರಿಯಿಸಿ, ಜಾನುವಾರುಗಳಿಗೆ ವಿಮೆ ಮಾಡಿಸಲು ಅವಕಾಶವಿದ್ದು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಕುಟುಂಬದವರ ಜಾನುವಾರುಗಳಿಗೆ ಉಚಿತವಾಗಿ ವಿಮೆ ಮಾಡಲಾಗುತ್ತದೆ. ಇತರ ಕುಟುಂಬದ ಜಾನುವಾರುಗಳಿಗೆ ವಿಮೆ ಮಾಡಿಸಬೇಕಿದೆ. ಆ ನಿಟ್ಟಿನಲ್ಲಿ ಸ್ಥಳೀಯವಾಗಿ ಶಿಬಿರ ಏರ್ಪಡಿಸುವುದು ಅಥವಾ ಮನೆ ಮನೆಗೆ ತೆರಳಿ ವಿಮೆ ಮಾಡಿಸಲು ಅಗತ್ಯ ಕ್ರಮ ಕೈಗೊಳ್ಳಬೇಕಿದೆ ಎಂದು ಮಾಹಿತಿ ನೀಡಿದರು.

ತಿತಿಮತಿ ವ್ಯಾಪ್ತಿಯ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶ್ರೀಪತಿ, ತಿತಿಮತಿ ಭಾಗದಲ್ಲಿ ಕಾಡಾನೆ ಹಾವಳಿ ವಿಪರೀತವಾಗಿದೆ. ಕಾಫಿ ತೋಟಗಳಲ್ಲಿಯೇ ಕಾಡಾನೆಗಳು ಇರುತ್ತವೆ. ಬೆಳೆಹಾನಿ ಸಂಬಂಧ ಪರಿಹಾರ ನೀಡಲು ಕಾಲಾವಕಾಶ ಬೇಕಾಗುತ್ತದೆ. ಆದರೆ, ತಕ್ಷಣವೇ ಪರಿಹಾರ ಬೇಕು ಎಂದು ಬೆಳೆ ನಷ್ಟ ಉಂಟಾದ ಕುಟುಂಬಸ್ಥರು ಒತ್ತಾಯಿಸುತ್ತಾರೆ ಎಂದು ತಿಳಿಸಿದರು.

ಆದಿವಾಸಿಗಳಿಗೆ ಅರಣ್ಯ ಹಕ್ಕುಪತ್ರ ನೀಡುವ ನಿಟ್ಟಿನಲ್ಲಿ ಸಾಕಷ್ಟು ಅರ್ಜಿಗಳು ಬಾಕಿಯಿವೆ. ಇವುಗಳನ್ನು ಇತ್ಯರ್ಥ ಮಾಡಬೇಕಿದೆ. ಆ ನಿಟ್ಟಿನಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಸಹಕರಿಸಬೇಕು ಎಂದುಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್‌ ಹೇಳಿದರು.

ಗುಡ್ಡೆಹೊಸೂರು ಗ್ರಾ.ಪಂ ವ್ಯಾಪ್ತಿಯ ಬಸವನಹಳ್ಳಿಯಲ್ಲಿ ಮೂಲನಿವಾಸಿಗೆ ಆಶ್ರಯ ಮನೆ ಕಲ್ಪಿಸಬೇಕಿದ್ದು, ಆ ನಿಟ್ಟಿನಲ್ಲಿ ಮೂರು ಎಕರೆ ಜಾಗ ಗುರುತಿಸಲಾಗಿದೆ. ಅಲ್ಲಿನ ಸ್ಥಳೀಯರೊಂದಿಗೆ ಮತ್ತೊಮ್ಮೆ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳಬೇಕು. ಈ ಸಂಬಂಧ ಮೇ ಅಂತ್ಯದೊಳಗೆ ಸಮಸ್ಯೆ ಬಗೆಹರಿಸುವಂತೆ ಅರಣ್ಯ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಅವರು ತಿಳಿಸಿದರು.

ದುಬಾರೆಯಲ್ಲಿ ರಿವರ್ ರ‍್ಯಾಪ್ಟಿಂಗ್ ಪುನರ್ ಆರಂಭಿಸುವ ಬಗ್ಗೆ ಅರಣ್ಯ ಇಲಾಖೆಯಿಂದ ಪತ್ರ ನೀಡಬೇಕಿದ್ದು, ಈ ಸಂಬಂಧ ಅಗತ್ಯ ಮಾಹಿತಿ ಸಲ್ಲಿಸಿ ಎಂದು ತಿಳಿಸಿದರು.

ತಮ್ಮಯ್ಯ ಪ್ರತಿಕ್ರಿಯಿಸಿ, ಅರಣ್ಯ ಪ್ರದೇಶದಲ್ಲಿ ಯಥೇಚ್ಛವಾಗಿ ಬಿದಿರು, ಹಲಸು ಗಿಡಗಳನ್ನು ಬೆಳೆಸಬೇಕು. ದೊಡ್ಡ ದೊಡ್ಡ ಕೆರೆ, ಕಟ್ಟೆಗಳನ್ನು ನಿರ್ಮಾಣ ಮಾಡಬೇಕು ಎಂದು ಸಲಹೆ ಮಾಡಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ. ಪೆನ್ನೇಕರ್ ಅವರು ಕಾಡಾನೆ ಹಾಗೂ ಮಾನವ ಸಂಘರ್ಷ ತಪ್ಪಿಸುವ ನಿಟ್ಟಿನಲ್ಲಿ ಯಾವ ರೀತಿ ಕ್ರಮ ಕೈಗೊಳ್ಳಲಾಗುತ್ತಿದೆ ಎಂಬ ಬಗ್ಗೆ ಸಾರ್ವಜನಿಕರೊಂದಿಗೆ ಬೆರೆತು ಕಾರ್ಯ ನಿರ್ವಹಿಸಿದ್ದಲ್ಲಿ ಹಲವು ಸಮಸ್ಯೆಗಳನ್ನು ಇತ್ಯರ್ಥ ಪಡಿಸಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಅಬಕಾರಿ ಇಲಾಖೆಯ ಉಪ ಆಯುಕ್ತ ವೀರಣ್ಣ ಅವರು ಜಿಲ್ಲೆಯ ಒಂಬತ್ತು ಕಡೆಗಳಲ್ಲಿ ಕಳ್ಳಭಟ್ಟಿ ದಂಧೆ ನಡೆಯುತ್ತಿದೆ. ಇದನ್ನು ನಿಯಂತ್ರಿಸಲು ವಿವಿಧ ಇಲಾಖೆಗಳ ಸಹಕಾರ ಅತ್ಯಗತ್ಯ ಎಂದು ಅವರು ಕೋರಿದರು.

ಉಪ ಅರಣ್ಯ ಸಂರಕ್ಷಣಾಧಿಕಾರಿ ಜಯ, ಉಪ ವಿಭಾಗಾಧಿಕಾರಿ ಟಿ.ಜವರೇಗೌಡ, ಡಿವೈಎಸ್‌ಪಿ ಸುಂದರರಾಜ್, ಭೂ ದಾಖಲೆಗಳ ಉಪ ನಿರ್ದೇಶಕ ಶ್ರೀನಿವಾಸ್, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಮಹಂತೇಶಪ್ಪ, ತೋಟಗಾರಿಕೆಯ ಇಲಾಖೆಯ ಉಪ ನಿರ್ದೇಶಕ ಚಂದ್ರಶೇಖರ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT