ಶನಿವಾರ, 21 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

5ರಿಂದ ತಲಕಾವೇರಿಯಲ್ಲಿ ಬ್ರಹ್ಮಕಲಶೋತ್ಸವ

ಅಗಸ್ತ್ಯೇಶ್ವರ ಪುನರ್‌ ಪುತಿಷ್ಠೆ, ರುದ್ರ ಹೋಮ
Published : 30 ಮಾರ್ಚ್ 2019, 12:30 IST
ಫಾಲೋ ಮಾಡಿ
Comments

ಮಡಿಕೇರಿ: ತಲಕಾವೇರಿ ಕ್ಷೇತ್ರದಲ್ಲಿ ಏ. 5ರಿಂದ 11ರವರೆಗೆ ಬ್ರಹ್ಮಕಲಶೋತ್ಸವ ಹಾಗೂ ಶ್ರೀರುದ್ರ ಹೋಮ ನಡೆಯಲಿದೆ ಎಂದು ಭಗಂಡೇಶ್ವರ ಹಾಗೂ ತಲಕಾವೇರಿ ದೇವಾಲಯ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಿ.ಎಸ್. ತಮ್ಮಯ್ಯ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ವ್ಯವಸ್ಥಾಪನಾ ಸಮಿತಿ ಸಭೆಯಲ್ಲಿ ಕೈಗೊಂಡ ತೀರ್ಮಾನದಂತೆ ಈಗಾಗಲೇ ಅಷ್ಟಮಂಗಲ ಪರಿಹಾರ ಕಾರ್ಯಗಳು ಮುಕ್ತಾಯಗೊಂಡಿದ್ದು, ಕ್ಷೇತ್ರ ತಂತ್ರಿಗಳಾದ ನೀಲೇಶ್ವರ ಪದ್ಮನಾಭ ತಂತ್ರಿ ಅವರ ನೇತೃತ್ವದಲ್ಲಿ ಅಷ್ಟಮಂಗಲ ಪ್ರಶ್ನೆಯಲ್ಲಿ ಕಂಡುಬಂದಿರುವ ಪರಿಹಾರ ಕಾರ್ಯಕ್ರಮಕ್ಕೆ ಧಾರ್ಮಿಕ ಕಾರ್ಯ ನಡೆಸಲಾಗುತ್ತಿದೆ’ ಎಂದು ತಿಳಿಸಿದರು.

ಏ. 11ರಂದು ಶ್ರೀರುದ್ರ ಹೋಮವನ್ನು ನಡೆಸಲಾಗುತ್ತಿದೆ. 12 ವರ್ಷಗಳಿಗೊಮ್ಮೆ ನಡೆಯುವ ಈ ಶುಭಕರವಾದ ಧಾರ್ಮಿಕ ಕಾರ್ಯವನ್ನು ಯಶಸ್ವಿಯಾಗಿ ನಡೆಸಬೇಕಿದೆ ಎಂದು ಹೇಳಿದರು.

5ರಂದು ಸಂಜೆ 5ಕ್ಕೆ ತಂತ್ರಿಗಳು ಆಗಮಿಸಲಿದ್ದು, ಸ್ವಾಗತ, ಪ್ರಾರ್ಥನೆ, ಪ್ರಸಾದ ಪರಿಗ್ರಹ, ಬಿಂಬ ಪರಿಗ್ರಹ, ಪುಣ್ಯಾಹ, ಪ್ರಸಾದ ಶುದ್ಧಿ, ವಾಸ್ತು ರಕ್ಷೋಜ್ಞ ಹೋಮ, ವಾಸ್ತು ಬಲಿ, ಅಂಕುರಾರ್ಪಣೆ ಕಾರ್ಯಕ್ರಮ ನಡೆಯಲಿದೆ. 6ರಂದು ಬೆಳಿಗ್ಗೆ 9.30ರಿಂದ ಗಣಪತಿ ಹೋಮ, ಅಂಕುರ ಪೂಜೆ, ಬಿಂಬಶುದ್ಧಿ, ಕಲಶ ಪೂಜೆ, ಬಿಂಬಶುದ್ಧಿ ಕಲಶಾಭಿಷೇಕ, ಪ್ರೋಕ್ತ ಹೋಮ, ಪ್ರಾಯಶ್ಚಿತ್ತ ಹೋಮ ನಡೆಯಲಿದೆ ಎಂದು ತಿಳಿಸಿದರು.

7ರಂದು ಗಣಪತಿ ಹೋಮ, ಅಂಕುರ ಪೂಜೆ, ಶಾಂತಿ ಹೋಮಗಳು, ಮಧ್ಯಾಹ್ನ 2.30ಕ್ಕೆ ಪೂಜೆ, ರಾತ್ರಿ 7ರಿಂದ ಅಂಕುರ ಪೂಜೆ, ದುರ್ಗಾ ನಮಸ್ಕಾರ ಪೂಜೆ, ಮಂಟಪ ಸಂಸ್ಕಾರ ನಡೆಯಲಿದೆ. ಏ. 8ರಂದು ಬೆಳಿಗ್ಗೆಯಿಂದ ತ್ರಿಕಾಲ ಪೂಜೆ, ಅಂಕುರ ಪೂಜೆ, ತತ್ವ ಕಲಶ ಪೂಜೆ, ತತ್ವ ಹೋಮ, ತತ್ವ ಕಲಶಾಭಿಷೇಕ, ಅನುಜ್ಞಾ ಕಲಶಾಭಿಷೇಕ, ಅನುಜ್ಞಾ ಪೂಜೆ, ಪ್ರಾರ್ಥನೆ ರಾತ್ರಿ 7ರಿಂದ ತ್ರಿಕಾಲ ಪೂಜೆ, ಅಂಕುರ ಪೂಜೆ ನಡೆಯಲಿದೆ ಎಂದು ಹೇಳಿದರು.

9ರಂದು ಸಂಹಾರ ತತ್ವ ಕಲಶಪೂಜೆ, ಸಂಹಾರ ತತ್ವಹೋಮ, ಸಂಹಾರ ತತ್ವ ಕಲಾಶಾಭಿಷೇಕ, ಜೀವ ಕಲಶಪೂಜೆ, ಜೀವೋಧ್ವಾಸನೆ, ಜೀವಕಲಶ ಶಯ್ಯಾಗಮನ, ಶಯನ ಸಂಜೆ ಶಿರತತ್ವ ಹೋಮ, ಕುಂಭೇಷ ಕರ್ಕರಿಕಲಶ ಪೂಜೆ, ಧ್ಯಾನಾಧಿವಾಸ, ಬ್ರಹ್ಮಕಲಶ ಪೂಜೆ ನಡೆಯಲಿದೆ ಎಂದು ಮಾಹಿತಿ ನೀಡಿದರು.

10ರಂದು ಬೆಳಿಗ್ಗೆ ರತ್ನನ್ಯಾಸ ಅಗಸ್ತ್ಯೇಶ್ವರ ಸಾನಿಧ್ಯ ಪುನರ್‌ ಪ್ರತಿಷ್ಠೆ, ಅಷ್ಟಬಂಧ ಲೇಪನ, ಕುಂಭೇಶ ಕಲಶಾಭಿಷೇಕ, ನಿದ್ರಾ ಕಲಶಾಭಿಷೇಕ, ಜೀವ ಕಲಶಾಭಿಷೇಕ, ಪರಾವಹನೆ, ಅವಸ್ಥಾವಾಹನೆ, ಪ್ರಾಣಾವಾಹನೆ, ಪ್ರತಿಷ್ಠೆ ಪೂಜೆ, ಪರಿಕಲಶಾಭಿಷೇಕ ನಡೆಯಲಿದೆ. ಏ. 11ರಂದು ಬೆಳಿಗ್ಗೆ ರುದ್ರಪಾರಾಯಣ, ರುದ್ರ ಹೋಮ, ಪ್ರಸಾದ ವಿತರಣೆ ಕಾರ್ಯಕ್ರಮಗಳು ನಡೆಯಲಿವೆ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ವ್ಯವಸ್ಥಾಪನಾ ಸಮಿತಿ ಅಣ್ಣಯ್ಯ, ಸುಭಾಷ್, ರಮೇಶ್, ಅರ್ಚಕ ರವಿಕುಮಾರ್, ಪಾರುಪತ್ತೆದಾರರಾದ ಪೊನ್ನಣ್ಣ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT