ಗುರುವಾರ , ಫೆಬ್ರವರಿ 25, 2021
23 °C
ಕೊಡಗಿಗೆ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ, ಜಂಬೂರಿನಲ್ಲಿ ಕಾರ್ಯಕ್ರಮ ಆಯೋಜನೆ

ಇಂದು ಸಂತ್ರಸ್ತರ ಮನೆ ನಿರ್ಮಾಣಕ್ಕೆ ಚಾಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಮಡಿಕೇರಿ: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಶುಕ್ರವಾರ ಸಂತ್ರಸ್ತರ ಮನೆ ನಿರ್ಮಾಣಕ್ಕೆ ಚಾಲನೆ ನೀಡಲಿದ್ದಾರೆ. ಮನೆ ನಿರ್ಮಾಣ ಕಾರ್ಯ ವಿಳಂಬವಾಗಿತ್ತು ಎಂಬ ಆರೋಪ ಕೇಳಿಬಂದಿತ್ತು. ಅದರ ಬೆನ್ನಲೇ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡಿದ್ದು, ಮನೆನಿರ್ಮಾಣಕ್ಕೆ ಚಾಲನೆ ನೀಡುತ್ತಿದೆ.

ಬೆಳಿಗ್ಗೆ 10.45 ಕ್ಕೆ ಗರಗಂದೂರಿನ ಚೆನ್ನಮ್ಮ ಪದವಿಪೂರ್ವ ಕಾಲೇಜಿನ ಫುಟ್‌ಬಾಲ್ ಮೈದಾನದಲ್ಲಿ ನಿರ್ಮಿಸಿರುವ ವಿಶೇಷ ಹೆಲಿಪ್ಯಾಡ್‌ಗೆ ಆಗಮಿಸಲಿದ್ದಾರೆ.

ಬಳಿಕ ಮಧ್ಯಾಹ್ನ 12.15ಕ್ಕೆ ಸೋಮವಾರಪೇಟೆ ತಾಲ್ಲೂಕು ಜಂಬೂರು ಗ್ರಾಮದಲ್ಲಿ ಪ್ರಕೃತಿ ವಿಕೋಪದಿಂದ ಮನೆ ಕಳೆದುಕೊಂಡ ಸಂತ್ರಸ್ತರ ಪುನರ್ವಸತಿ ಕಲ್ಪಿಸುವ ಸಂಬಂಧ ಮನೆ ನಿರ್ಮಾಣ ಕಾಮಗಾರಿ ಶಂಕುಸ್ಥಾಪನಾ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.

ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ, ನಗರಾಭಿವೃದ್ಧಿ ಮತ್ತು ವಸತಿ ಸಚಿವ ಯು.ಟಿ.ಖಾದರ್, ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ.ಮಹೇಶ್, ಶಾಸಕರಾದ ಎಂ.ಪಿ.ಅಪ್ಪಚ್ಚು ರಂಜನ್, ಕೆ.ಜಿ.ಬೋಪಯ್ಯ, ಎಂ.ಪಿ.ಸುನೀಲ್ ಸುಬ್ರಮಣಿ, ವೀಣಾ ಅಚ್ಚಯ್ಯ, ಸಂಸದ ಪ್ರತಾಪ್‌ ಸಿಂಹ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಬಿ.ಎ. ಹರೀಶ್ ಪಾಲ್ಗೊಳ್ಳಲಿದ್ದಾರೆ. 

ಎಷ್ಟು ಮನೆ: ತಲಾ 30X40 ಅಡಿ ಅಳತೆ ನಿವೇಶನ ಗುರುತು ಮಾಡಲಾಗಿದೆ. ಮಡಿಕೇರಿ ತಾಲ್ಲೂಕಿನ ಕೆ. ನಿಡುಗಣೆ ಗ್ರಾಮದ ಸರ್ವೆ ನಂಬರ್ 1/50ರಲ್ಲಿ 4.60 ಎಕರೆ, ಕೆ. ನಿಡುಗಡೆ ಗ್ರಾಮದ ಸರ್ವೆ ನಂಬರ್ 1/13ರಲ್ಲಿ 11.80 ಎಕರೆ, ಕರ್ಣಂಗೇರಿ ಗ್ರಾಮದ ಸರ್ವೆ ನಂಬರ್ 178/1ರಲ್ಲಿ 4 ಎಕರೆ, ಗಾಳಿಬೀಡು ಗ್ರಾಮದ ಸರ್ವೆ ನಂಬರ್ 103ರಲ್ಲಿ 9.50 ಎಕರೆ, ಗಾಳಿಬೀಡು 99/3ರಲ್ಲಿ 7.50 ಎಕರೆ, ಗಾಳಿಬೀಡು ಗ್ರಾಮದ 100/3ರಲ್ಲಿ 7.40 ಎಕರೆ, ಸಂಪಾಜೆ ಹೋಬಳಿ ಮದೆ ಗ್ರಾಮದ 399ರಲ್ಲಿ 11.28 ಎಕರೆ, ಬಿಳಿಗೇರಿ ಗ್ರಾಮದ 347/3ರಲ್ಲಿ 1.88 ಎಕರೆ, ಸಂಪಾಜೆ ಹೋಬಳಿ ಬಿಳಿಗೇರಿ 347/3ರಲ್ಲಿ 1.50 ಎಕರೆ, ಸಂಪಾಜೆ 54/1ರಲ್ಲಿ 1.50 ಎಕರೆ, ಸೋಮವಾರಪೇಟೆ ತಾಲ್ಲೂಕಿನ ಸುಂಟಿಕೊಪ್ಪ ಹೋಬಳಿಯ ಜಂಬೂರು 13/1ರಲ್ಲಿ 50 ಎಕರೆ, ಕುಶಾಲನಗರದಲ್ಲಿ ಸರ್ವೆ ನಂಬರ್ 17ರಲ್ಲಿ 1 ಎಕರೆ ಸೇರಿ ಒಟ್ಟು 110 ಎಕರೆ ಪುನರ್ವಸತಿಗೆ ಗುರುತಿಸಲಾಗಿದೆ.

ಸಂತ್ರಸ್ತರಿಗೆ ಅನುಕೂಲ ಆಗುವ ಸ್ಥಳದಲ್ಲಿ ಮನೆ ನಿರ್ಮಿಸಿಕೊಡಲು ಜಿಲ್ಲಾಡಳಿತ ಯೋಜನೆ ರೂಪಿಸಿದೆ. ಮಡಿಕೇರಿ ತಾಲ್ಲೂಕಿನಲ್ಲಿ 524, ಮಡಿಕೇರಿ ನಗರಸಭೆ ವ್ಯಾಪ್ತಿಯಲ್ಲಿ 205, ಸೋಮವಾರಪೇಟೆ ತಾಲ್ಲೂಕಿನಲ್ಲಿ 88 ಮತ್ತು ಕುಶಾಲನಗರ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ 23 ಕುಟುಂಬಗಳಿಗೆ ಮನೆ ನಿರ್ಮಿಸಬೇಕಿದೆ. ಅದರಲ್ಲಿ ಕೆಲವರು ಸ್ವಂತ ಸ್ಥಳದಲ್ಲಿ ಮನೆ ನಿರ್ಮಿಸಿಕೊಳ್ಳಲು ಮುಂದಾಗಿದ್ದಾರೆ. 

ಬಡಾವಣೆ ಅಭಿವೃದ್ಧಿ: ಮನೆ ನಿರ್ಮಾಣ ಸೇರಿದಂತೆ ಮೂಲ ಸೌಕರ್ಯ ಕಲ್ಪಿಸಲು ಮತ್ತು ಬಡಾವಣೆ ಅಭಿವೃದ್ಧಿಗೆ ಒಟ್ಟು ₹ 31.63 ಕೋಟಿಗೂ ಪ್ರಸ್ತಾವ ಸಲ್ಲಿಸಲಾಗಿತ್ತು. ಅದಕ್ಕೂ ಸರ್ಕಾರ ಒಪ್ಪಿಗೆ ಸೂಚಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು