ಗುರುವಾರ , ಅಕ್ಟೋಬರ್ 1, 2020
21 °C
ಕಾವೇರಿ ನಾಡಿನಲ್ಲಿ ಮತ್ತೆ ಮುನಿದ ವರುಣ | ಸಾಕು ಪ್ರಾಣಿಯೊಂದಿಗೆ ಮನೆ ಖಾಲಿ | ಜಾನುವಾರುಗಳು ಕಾಡು ಪಾಲು

ಕೊಡಗು: ಬಿಟ್ಟೂ ಬಿಡದೇ ಕಾಡುತ್ತಿರುವ ಪ್ರವಾಹ

ಆದಿತ್ಯ ಕೆ.ಎ. Updated:

ಅಕ್ಷರ ಗಾತ್ರ : | |

Prajavani

ಮಡಿಕೇರಿ: ಕಾವೇರಿ ನಾಡಿನಲ್ಲಿ ಉಂಟಾಗಿರುವ ಪ್ರವಾಹವು ಜನರನ್ನು ಮತ್ತೆ ಕೈಯೊಡ್ಡುವ ಸ್ಥಿತಿಗೆ ತಂದು ನಿಲ್ಲಿಸಿದೆ. ಮೂರು ವರ್ಷದಿಂದ ಬಿಟ್ಟೂ ಬಿಡದೇ ಕಾಡುತ್ತಿರುವ ಪ್ರವಾಹವು ಕುಶಾಲನಗರ ಸೇರಿದಂತೆ ಜಿಲ್ಲೆಯ ಹಲವು ಗ್ರಾಮಗಳನ್ನು ಮುಳುಗಿಸಿದೆ.

ಹಲವು ಸೇತುವೆಗಳು ಮುಳುಗಿದ್ದರೆ, ಇನ್ನು ಕೆಲವು ಕೊಚ್ಚಿ ಹೋಗಿವೆ. ಸಂಪರ್ಕ ಕಡಿತದಿಂದ ಗ್ರಾಮೀಣ ಪ್ರದೇಶದಲ್ಲಿ ಅಗತ್ಯ ವಸ್ತುಗಳಿಗೆ ಪರದಾಟ ಆರಂಭವಾಗಿದೆ.    

ಎರಡು ದಿನಗಳ ಹಿಂದೆಯಷ್ಟೇ ಸುಂದರ ಪ್ರದೇಶವಾಗಿ ಕಾಣಿಸುತ್ತಿದ್ದ ಕುಶಾಲನಗರದ ಸಾಯಿ ಹಾಗೂ ಕುವೆಂಪು ಬಡಾವಣೆಗಳು, ಈಗ ಸಮುದ್ರಗಳಂತೆ ಗೋಚರಿಸುತ್ತಿವೆ. ರಚ್ಚೆ ಹಿಡಿದಂತೆ ಸುರಿಯುತ್ತಿರುವ ಮಳೆಯು ಮತ್ತೆ ಮತ್ತೆ ನೋವು, ಕಣ್ಣೀರು ತರಿಸುತ್ತಿದೆ. 

ಅತ್ತ ಕಾವೇರಿ, ಇತ್ತ ಹಾರಂಗಿ ಜಲಾಶಯದ ಪ್ರವಾಹವು ಆಶ್ರಯದ ಮನೆಗಳನ್ನು ರಾತ್ರೋರಾತ್ರಿ ಖಾಲಿ ಮಾಡಿಸಿದೆ. ಪ್ರತಿ ಮಳೆಗಾಲವು ಕಾವೇರಿ ನಾಡಿನ ಜನರನ್ನು ನೋವಿನಲ್ಲಿ ಕಾಲಕಳೆಯುವಂತೆ ಮಾಡಿದೆ. ‘ಕಾವೇರಮ್ಮ ಕಾಪಾಡಮ್ಮ’ ಎಂಬ ಜನರ ಕೂಗು ಕೇಳುತ್ತಿಲ್ಲ.

ಕುಶಾಲನಗರದ ನಾಲ್ಕೈದು ಬಡಾವಣೆಯ ಜನರು ಮನೆಯ ಮಹಡಿಯ ಮೇಲೆ ಹಾಸಿಗೆ, ಹೊದಿಕೆ, ಪಾತ್ರೆ, ಗ್ಯಾಸ್‌ ಸ್ಟೌ ಜೋಡಿಸಿಟ್ಟು ಮನೆ ಖಾಲಿ ಮಾಡಿದ್ದಾರೆ. ಕೆಲವರು ಸಂಬಂಧಿಕರ ಮನೆಯತ್ತ ಪ್ರಯಾಣ ಬೆಳೆಸಿದರೆ, ಉಳಿದವರು ಮಳೆಗಾಲದ ಆಶ್ರಯಧಾಮ ‘ಪರಿಹಾರ ಕೇಂದ್ರ’ ಸೇರಿದ್ದಾರೆ.

ಮುದ್ದಿನ ನಾಯಿ, ಬೆಕ್ಕು ಹೊತ್ತು ಮನೆ ತೊರೆದರು. ಈ ದೃಶ್ಯವು ರಕ್ಷಣಾ ಸಿಬ್ಬಂದಿಗಳಿಗೂ ಕಣ್ಣೀರು ತರಿಸಿತು. ಕುಶಾಲನಗರದಲ್ಲಿ ಹಾವು, ಚೇಳು ಮರಿಗಳು ಬಡಾವಣೆಗಳಲ್ಲಿ ಪ್ರತ್ಯಕ್ಷವಾಗುತ್ತಿವೆ.

‘ಜೇಬಿನಲ್ಲಿದ್ದಷ್ಟು ಹಣ, ಚಿನ್ನಾಭರಣ, ಒಂದಷ್ಟು ಬಟ್ಟೆಯನ್ನು ಮಾತ್ರ ಹೊತ್ತು ಕನಸುಗಳನ್ನು ಮನೆಯಲ್ಲಿ ಬಿಟ್ಟು ಬಂದಿದ್ದೇವೆ. ಪ್ರತಿ ಬಾರಿಯೂ ಕಾವೇರಿ ನಮ್ಮ ಮೇಲೆ ಮುನಿಸಿಕೊಳ್ಳುತ್ತಿದ್ದಾಳೆ. ಎರಡು ಅಂತಸ್ತಿನ ಮನೆ ಮುಳುಗಿದೆ’ ಎಂದು ಕುಶಾಲನಗರದ ಚಂದ್ರು ನೋವು ತೋಡಿಕೊಂಡರು.


ಕೊಡಗು ಜಿಲ್ಲೆ ಭಾಗಮಂಡಲ ಭಗಂಡೇಶ್ವರ ದೇಗುಲ ಜಲಾವೃತಗೊಂಡಿದೆ

‘ನದಿಯಲ್ಲಿ ಸಂಗ್ರಹವಾಗಿರುವ ಹೂಳು ತೆರವುಗೊಳಿಸಿ ಪ್ರವಾಹ ಬರದಂತೆ ಎಚ್ಚರಿಕೆ ವಹಿಸುತ್ತೇವೆ’ ಎಂಬ ಭರವಸೆ, ವಿಶ್ವಾಸದ ನುಡಿಗಳು ಮತ್ತೆ ಕುಶಾಲನಗರದ ಜನರಿಗೆ ಹುಸಿಯಾಗಿವೆ.

ಮಳೆಗಾಲ ಆರಂಭಕ್ಕೂ ಕೆಲವೇ ದಿನಗಳ ಹಿಂದಷ್ಟೇ ಕಾವೇರಿ ನದಿಯಲ್ಲಿ ಹೂಳು ತೆರವು ಕಾರ್ಯ ಆರಂಭವಾಗಿತ್ತು. ಅದೂ ಪೂರ್ಣಗೊಳ್ಳಲಿಲ್ಲ. ಅದೇ ಸ್ಥಳದಲ್ಲಿ ನದಿ ಉಕ್ಕೇರಿದೆ.

ಕರಡಿಗೋಡು, ಗುಹ್ಯ, ಹೊದವಾಡ, ನೆಲ್ಯಹುದಿಕೇರಿ, ಭೇತ್ರಿ ಸೇರಿ ಜಿಲ್ಲೆಯ ಹಲವು ಗ್ರಾಮಗಳಲ್ಲಿ ಪ್ರವಾಹ ಆವರಿಸಿದೆ. ಕಾವೇರಿ, ಲಕ್ಷ್ಮಣತೀರ್ಥ ನದಿ ಬದಿಯ ಊರುಗಳು, ಕಾಫಿ ತೋಟ, ಭತ್ತದ ಗದ್ದೆಯನ್ನೇ ಮುಳುಗಿಸಿದೆ. ನೀರು ಇಳಿಯುತ್ತಿಲ್ಲ.

ಭಾಗಮಂಡಲ, ಚೇರಂಗಾಲ, ನಾಪೋಕ್ಲು ದ್ವೀಪವಾಗಿವೆ. ಸಂಪರ್ಕ ಕಡಿತವಾಗಿ ನಾಲ್ಕು ದಿನಗಳೇ ಕಳೆದಿವೆ. ನದಿಪಾತ್ರದಲ್ಲಿನ ನಿವಾಸಿಗಳು ಸಾಕಿದ್ದ ಜಾನುವಾರುಗಳ ಹಗ್ಗಬಿಚ್ಚಿ ಪರಿಹಾರ ಕೇಂದ್ರ ಸೇರಿದ್ದಾರೆ. ಜಾನುವಾರು ಮತ್ತೆ ಕಾಡು ಪಾಲಾಗಿವೆ. 

ಸಂಕಷ್ಟ ಕಲಿಸಿದ ಪಾಠ

ಜಿಲ್ಲೆಯಲ್ಲಿ ರಕ್ಷಣಾ ಕಾರ್ಯಾಚರಣೆಯೂ ಅಷ್ಟೇ ಚುರುಕಾಗಿ ನಡೆಯುತ್ತಿದೆ. ಅಚ್ಚುನಾಡಿನಲ್ಲಿ ಪ್ರವಾಹದಲ್ಲಿ ಸಿಲುಕಿದ್ದವರ ರಕ್ಷಣೆ ಮಾಡಲಾಗಿದೆ. ಕೊಡಗು ರಕ್ಷಣಾ ವೇದಿಕೆ ಸೇರಿದಂತೆ ಕೆಲವು ತಂಡಗಳು ಕಾರ್ಯಾಚರಣೆಗೆ ಇಳಿದಿವೆ.

ಕಳೆದ ಎರಡು ವರ್ಷಗಳ ಸಂಕಷ್ಟ ಅರಿತಿದ್ದ ಕೆಲವು ಸ್ಥಳದ ಜನರು, ಸ್ವಪ್ರೇರಣೆಯಿಂದ ಪ್ರವಾಹ ಬರುವ ಮುನ್ಸೂಚನೆ ಅರಿತು ತಾವೇ ಮನೆ ಬಿಟ್ಟು ಬಂದಿದ್ದಾರೆ. ನೆಂಟರ ಮನೆಗೂ ತೆರಳಿದ್ದಾರೆ. ಇದರಿಂದ ರಕ್ಷಣಾ ಕಾರ್ಯ ಈ ಬಾರಿ ಸ್ವಲ್ಪ ಸುಲಭವಾಗಿದೆ.


ಕೊಡಗು ಜಿಲ್ಲೆಯ ಕುಶಾಲನಗರ ಇಂದಿರಾ ಬಡಾವಣೆಗೆ ಕಾವೇರಿ ನೀರು ನುಗ್ಗಿರುವ ದೃಶ್ಯ

ನಾಲ್ಕು ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಣೆ

ಬೆಂಗಳೂರು: ದಕ್ಷಿಣ ಒಳನಾಡಿನಲ್ಲಿ ಆ.8ರಂದು ಧಾರಾಕಾರ ಮಳೆಯಾಗುವ ಸಾಧ್ಯತೆ ಇರುವುದರಿಂದ ಶಿವಮೊಗ್ಗ, ಕೊಡಗು, ಹಾಸನ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ 'ರೆಡ್ ಅಲರ್ಟ್' ಘೋಷಿಸಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

‘ಕರಾವಳಿ ಹಾಗೂ ದಕ್ಷಿಣ ಒಳನಾಡಿನಲ್ಲಿ ಹೆಚ್ಚು ಮಳೆಯಾಗುವ ನಿರೀಕ್ಷೆಯಿದ್ದು, ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಹಾಸನ, ಕೊಡಗು, ಹಾಸನ ಜಿಲ್ಲೆಗಳಲ್ಲಿ ಆ.11ರವರೆಗೂ ಆರೆಂಜ್ ಅಲರ್ಟ್ ಘೋಷಿಸಲಾಗಿದೆ’ ಎಂದು ಹವಾಮಾನ ಇಲಾಖೆ ನಿರ್ದೇಶಕ ಸಿ.ಎಸ್.ಪಾಟೀಲ ತಿಳಿಸಿದರು.

ಮಳೆ -ಎಲ್ಲಿ, ಎಷ್ಟು?: ಆಗುಂಬೆ 19, ವಿರಾಜಪೇಟೆ, ಶೃಂಗೇರಿ 18, ಕೊಪ್ಪ 15, ಸಕಲೇಶಪುರ 13, ಲಿಂಗನಮಕ್ಕಿ, ತೀರ್ಥಹಳ್ಳಿ 12, ಬೆಳ್ತಂಗಡಿ, ಸಿದ್ದಾಪುರ 11, ಮೂಡುಬಿದರೆ 10, ಕುಂದಾಪುರ, ಸೋಮವಾರಪೇಟೆ 8, ಬೇಲೂರು 7, ಕೊಲ್ಲೂರು 6, ಭಟ್ಕಳ, ಶಿವಮೊಗ್ಗ, ಎಚ್.ಡಿ.ಕೋಟೆ, ಚಿಕ್ಕಮಗಳೂರು 5, ಉಡುಪಿ, ಅಂಕೋಲಾ, ಕುಶಾಲನಗರ, ಸೊರಬ 4, ಉಪ್ಪಿನಂಗಡಿ, ಅರಕಲಗೂಡು, ತರೀಕೆರೆಯಲ್ಲಿ ತಲಾ 3 ಸೆಂ.ಮೀ ಮಳೆಯಾಗಿದೆ.

ಹಗ್ಗದ ನೆರವಿನಿಂದ ತಾಯಿ, ಮಗು ರಕ್ಷಣೆ

ಮಡಿಕೇರಿ: ಸೋಮವಾರಪೇಟೆ ತಾಲ್ಲೂಕಿನ ಬಾಳೆಗುಂಡಿಯ ಮನೆಯೊಂದರ ಸುತ್ತಲೂ ಪ್ರವಾಹ ಆವರಿಸಿ, ಸಂಕಷ್ಟಕ್ಕೆ ಸಿಲುಕಿದ್ದವರನ್ನು ಮರಕ್ಕೆ ಹಗ್ಗ ಕಟ್ಟಿ ರಕ್ಷಣೆ ಮಾಡಲಾಗಿದೆ. ಮೂರು ತಿಂಗಳ ಮಗು, ತಾಯಿ ಸೇರಿದಂತೆ ಎರಡು ಕುಟುಂಬಗಳನ್ನು ರಕ್ಷಿಸಿ ಸುರಕ್ಷಿತ ಸ್ಥಳಕ್ಕೆ ಕರೆತರಲಾಗಿದೆ.

ಚೆರಿಯಪರಂಬು, ಕೊಂಡಂಗೇರಿ ಗ್ರಾಮದಲ್ಲಿ ಪ್ರವಾಹದಿಂದ ಮನೆಯ ಮಹಡಿ ಮೇಲಿದ್ದ ಜನರನ್ನು ರಕ್ಷಿಸಲಾಗಿದೆ. ಜಿಲ್ಲೆಗೆ ಹೆಚ್ಚುವರಿ ರಕ್ಷಣಾ ತಂಡ ಬಂದಿದೆ.

ತುರ್ತುಕ್ರಮ: ಸಿಎಸ್‌ಗೆ ಸೂಚನೆ

ಬೆಂಗಳೂರು: ‘ನನ್ನ ಆದೇಶ ಅಥವಾ ಒಪ್ಪಿಗೆಗೆ ಕಾಯದೇ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಪರಿಹಾರ ಕಾರ್ಯಕ್ಕೆ ಹಣ ಬಿಡುಗಡೆ ಮಾಡುವುದೂ ಸೇರಿದಂತೆ, ಅಗತ್ಯ ಕ್ರಮಗಳನ್ನು ಕೈಗೊಳ್ಳಿ’ ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್ ಅವರಿಗೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಸೂಚಿಸಿದ್ದಾರೆ.

ರಾಜ್ಯದಲ್ಲಿ ಪ್ರವಾಹ ಪರಿಸ್ಥಿತಿ ಬಗ್ಗೆ ವಿಜಯಭಾಸ್ಕರ್‌ ಅವರಿಂದ ದೂರವಾಣಿ ಮೂಲಕ ಮಾಹಿತಿ ಪಡೆದ ಅವರು, ಯಾವುದೇ ಕಾರಣಕ್ಕೂ ಜನ–ಜಾನುವಾರುಗಳ ರಕ್ಷಣೆ ಮತ್ತು ಪರಿಹಾರ ಕಾರ್ಯಗಳಲ್ಲಿ ವಿಳಂಬವಾಗಬಾರದು ಎಂದು ಹೇಳಿದ್ದಾರೆ.

‘ಪರಿಹಾರ ಕಾರ್ಯಗಳಿಗೆ ಅಗತ್ಯವಿರುವ ಹಣ ಬಿಡುಗಡೆ ಮಾಡಿ. ಕಡತಗಳಿಗೆ ನನ್ನ ಸಹಿಗಾಗಿ ಕಾಯುವುದು ಬೇಡ. ಆಸ್ಪತ್ರೆಯಿಂದ ಬಿಡುಗಡೆಗೊಂಡು ಬಂದ ನಂತರ ಕಡತಕ್ಕೆ ಸಹಿ ಹಾಕುತ್ತೇನೆ’ ಎಂದೂ ಯಡಿಯೂರಪ್ಪ ಹೇಳಿರುವುದಾಗಿ ಮೂಲಗಳು ತಿಳಿಸಿವೆ.

ಕೊಡಗಿನ ಪರಿಸ್ಥಿತಿಯ ಬಗ್ಗೆ ಸಚಿವ ವಿ.ಸೋಮಣ್ಣ ಅವರಿಗೆ ಕರೆ ಮಾಡಿ ವಿವರಗಳನ್ನು ಪಡೆದರು. ಗುಡ್ಡ ಕುಸಿತದಿಂದ ತಲಕಾವೇರಿಯಲ್ಲಿ ಅರ್ಚಕರ ಕುಟುಂಬದ ಸದಸ್ಯರು ನಾಪತ್ತೆ ಆದ ಬಗ್ಗೆಯೂ ಮಾಹಿತಿ ಪಡೆದರು.

ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಯಾವ ಯಾವ ಕ್ರಮಗಳನ್ನು ಕೈಗೊಳ್ಳಲಾಗಿದೆ. ಉಸ್ತುವಾರಿ ಸಚಿವರು ಜಿಲ್ಲೆಗಳಿಗೆ ಭೇಟಿ ಕೊಟ್ಟು ಪರಿಸ್ಥಿತಿ ನಿಭಾಯಿಸುತ್ತಿದ್ದಾರೆಯೇ ಇಲ್ಲವೆ ಎಂಬ ಬಗ್ಗೆಯೂ ಮಾಹಿತಿ ಪಡೆದರು. ಜಿಲ್ಲೆಗಳಲ್ಲಿ ಪರಿಸ್ಥಿತಿ ಸರಿ ಹೋಗುವವರೆಗೆ ಬೆಂಗಳೂರಿಗೆ ಬರಬೇಡಿ ಎಂದು ಹೇಳಿದ್ದರೂ ಪ್ರವಾಹ ಪೀಡಿತ ಜಿಲ್ಲೆಗಳ ಉಸ್ತುವಾರಿ ಹೊತ್ತಿರುವ ಕೆಲವು ಸಚಿವರು ವಿಧಾನಸೌಧದಲ್ಲಿ ಕುಳಿತು ಶುಕ್ರವಾರ ಸಭೆ ನಡೆಸಿದ ಬಗ್ಗೆ ಬೇಸರ ವ್ಯಕ್ತಪಡಿಸಿದರು ಎಂದು ಮೂಲಗಳು ತಿಳಿಸಿವೆ.

ಆಸ್ಪತ್ರೆಗೆ ದಾಖಲಾಗಿರುವ ಸಿ.ಎಂ ಅವರು ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಜಿಲ್ಲಾಧಿಕಾರಿಗಳಿಂದ ಮಾಹಿತಿ ತರಿಸಿಕೊಂಡು ಕೆಲವು ನಿರ್ದೇಶನಗಳನ್ನೂ ನೀಡಿದರು. ಕೋವಿಡ್‌ ಸ್ಥಿತಿ ಬಗ್ಗೆಯೂ ಮಾಹಿತಿ ಪಡೆದರು ಎಂದು ಅವರ ಕಚೇರಿ ಮೂಲಗಳು ತಿಳಿಸಿವೆ.

‘ಸಮರೋಪಾದಿಯಲ್ಲಿ ಪರಿಹಾರ ಕೈಗೊಳ್ಳಿ’

ಬೆಂಗಳೂರು: ಮುಂಗಾರು ಮಳೆಗೆ ನಲುಗಿರುವ ರಾಜ್ಯದ ಜನರು ಮತ್ತು ಜಾನುವಾರುಗಳ ರಕ್ಷಣೆಗೆ ಸರ್ಕಾರ ಸಮರೋಪಾದಿಯಲ್ಲಿ ಪರಿಹಾರ ಕಾಮಗಾರಿಗಳನ್ನು ಕೈಗೊಳ್ಳಬೇಕು ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಒತ್ತಾಯಿಸಿದ್ದಾರೆ.

ಈ ಸಂಬಂಧ ಸರಣಿ ಟ್ವೀಟ್‌ ಮಾಡಿರುವ ಅವರು, ಅತಿವೃಷ್ಟಿಯಿಂದ ಸಂತ್ರಸ್ತರಾದವರ ಪರಿಹಾರ ಕಾಮಗಾರಿಗಳಿಗೆ ಹಣಕಾಸಿನ ಕೊರತೆ ಆಗದಂತೆ ನೋಡಿಕೊಳ್ಳಬೇಕು ಎಂದಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.