ಭಾನುವಾರ, 15 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಡಿಕೇರಿ: 9 ಹಿರಿಯ ಪತ್ರಿಕಾ ವಿತರಕರಿಗೆ ಸನ್ಮಾನ

2018ರ ಬಜೆಟ್‌ನಲ್ಲಿ ಘೋಷಿಸಿದ್ದ ಕ್ಷೇಮನಿಧಿ ಇನ್ನಾದರೂ ಜಾರಿಗೆ ಬರಲಿ; ಒತ್ತಾಯ
Published : 4 ಸೆಪ್ಟೆಂಬರ್ 2024, 13:30 IST
Last Updated : 4 ಸೆಪ್ಟೆಂಬರ್ 2024, 13:30 IST
ಫಾಲೋ ಮಾಡಿ
Comments

ಮಡಿಕೇರಿ: ಇಲ್ಲಿನ ಪತ್ರಿಕಾಭವನದಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಕೊಡಗು ಜಿಲ್ಲೆಯ 9 ಮಂದಿ ಹಿರಿಯ ಪತ್ರಕರ್ತರನ್ನು ಸನ್ಮಾನಿಸಲಾಯಿತು.

ಕೊಡಗು ಪತ್ರಕರ್ತರ ಸಂಘ ಹಾಗೂ ಅಖಿಲ ಕರ್ನಾಟಕ ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ನಡೆದ ಪತ್ರಿಕಾ ವಿತರಕರ ದಿನಾಚರಣೆಯಲ್ಲಿ 45 ಮಂದಿ ಪತ್ರಿಕಾ ವಿತರಕರು ಭಾಗಿಯಾಗಿದ್ದರು.

ಪತ್ರಿಕಾ ವಿತರಣಾ ಕ್ಷೇತ್ರದಲ್ಲಿ ಕಳೆದ 60 ವರ್ಷಗಳಿಂದ ದುಡಿಯುತ್ತಿರುವ ಕುಶಾಲನಗರದ ವಿ.ಪಿ.ಪ್ರಕಾಶ್, 50 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಸುಂಟಿಕೊಪ್ಪದ ಎಂ.ಎ.ವಸಂತ್, 45 ವರ್ಷಗಳಿಂದ ಪತ್ರಿಕಾ ವಿತರಕರಾಗಿರುವ ಎಂ.ಎನ್. ಸುರೇಶ್‌ಕುಮಾರ್, 40 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಮಡಿಕೇರಿಯ ಕೆ.ಬಿ.ಚಂದ್ರಶೇಖರ್, ಮೂರ್ನಾಡುವಿನ ಎನ್.ಕೆ.ವಿಜಯ್,  ಮಡಿಕೇರಿಯ ಕೆ.ಎನ್.ಶಿವಪ್ರಸಾದ್, ಸೋಮವಾರಪೇಟೆಯ ಬಿ.ಪಿ.ಶಿವಕುಮಾರ್ ಬದಲಿಗೆ ಅವರ ಸಂಬಂಧಿ, 35 ವರ್ಷಗಳಿಂದ ದುಡಿಯುತ್ತಿರುವ ಎಂ.ಕೆ.ಅಚ್ಚಯ್ಯ, 30 ವರ್ಷಗಳಿಂದ ದುಡಿಯುತ್ತಿರುವ ವಿರಾಜಪೇಟೆಯ ದೀಪಕ್ ದಾಸ್ ಅವರು ಸನ್ಮಾನ ಸ್ವೀಕರಿಸಿದರು.

‘2018ರ ಬಜೆಟ್‌ನಲ್ಲಿ ₹ 2 ಕೋಟಿ ಮೊತ್ತದ ಪತ್ರಿಕಾ ವಿತರಕರ ಕ್ಷೇಮನಿಧಿಯನ್ನು ಸರ್ಕಾರ ಘೋಷಿಸಿತ್ತು. ಅದು ಇದುವರೆಗೂ ಜಾರಿಗೆ ಬಂದಿಲ್ಲ’ ಎಂಬ ವಿಷಯವನ್ನು ಪತ್ರಕರ್ತ ಎಚ್.ಟಿ.ಅನಿಲ್ ಕಾರ್ಯಕ್ರಮದಲ್ಲಿ ಪ್ರಸ್ತಾಪಿಸಿದರು. 

ಇದಕ್ಕೆ ದನಿಗೂಡಿಸಿದ ಕಾರ್ಮಿಕ ಮುಖಂಡ ನಾಪಂಡ ಮುತ್ತಪ್ಪ, ‘ಈ ಕುರಿತು ಸರ್ಕಾರದ ಗಮನಕ್ಕೆ ತರುವ ಪ್ರಯತ್ನ ಮಾಡುವೆ’ ಎಂದು ಭರವಸೆ ನೀಡಿದರು.

‘ಪತ್ರಿಕಾ ವಿತರಕರನ್ನು ತೀವ್ರವಾಗಿ ನಿರ್ಲಕ್ಷಿಸಲಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದ ಅವರು, ‘ಸರ್ಕಾರ ಇವರಿಗೆಂದೇ ಸಾಮಾಜಿಕ ಭದ್ರತಾ ಯೋಜನೆಗಳನ್ನು ಜಾರಿಗೊಳಿಸಬೇಕು’ ಎಂದು ಒತ್ತಾಯಿಸಿದರು.

ಸನ್ಮಾನಿತರ ಪರವಾಗಿ ಮಾತನಾಡಿದ ಹಿರಿಯ ಪತ್ರಿಕಾ ವಿತರಕ ವಸಂತ್, ‘50 ವರ್ಷಗಳಿಂದ ಪತ್ರಿಕಾ ವಿತರಕರನಾಗಿ ಕೆಲಸ ಮಾಡುತ್ತಿದ್ದೇನೆ. ಪತ್ರಿಕಾ ವಿತರಣೆಯಲ್ಲಿ ಸಾಕಷ್ಟು ಸಮಸ್ಯೆಗಳಿವೆ. ನಮ್ಮ ಬೇಡಿಕೆಗಳನ್ನು ಸರ್ಕಾರ ಈಡೇರಿಸಬೇಕು’ ಎಂದು  ಮನವಿ ಮಾಡಿದರು.

ಕೊಡಗು ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಎ.ಮುರಳೀಧರ್ ಮಾತನಾಡಿ, ‘ಅಸಂಘಟಿತ ಕಾರ್ಮಿಕ ವಲಯಕ್ಕೆ ಬರುವ ಪತ್ರಿಕೆಗಳ ಆಧಾರ ಸ್ತಂಭವಾಗಿರುವ ಪತ್ರಿಕಾ ವಿತರಕರು ಕಾರ್ಮಿಕ ಇಲಾಖೆಯಿಂದ ದೊರಕುವ ಸೌಲಭ್ಯಗಳನ್ನು ಅರಿತು ಬಳಸಿಕೊಳ್ಳುವ ಕೆಲಸವಾಗಬೇಕು. ಅದಕ್ಕಾಗಿ ಅವರು ಸಂಘಟಿತರಾಗಬೇಕು’ ಎಂದು ಹೇಳಿದರು.

ಅಖಿಲ ಕರ್ನಾಟಕ ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿ ಸಂಘದ ನಿರ್ದೇಶಕ ಟಿ.ಜಿ.ಸತೀಶ್ ಭಾಗವಹಿಸಿದ್ದರು.

45 ಮಂದಿ ಪತ್ರಿಕಾ ವಿತರಕರು ಕಾರ್ಯಕ್ರಮದಲ್ಲಿ ಭಾಗಿ ಸಾಮಾಜಿಕ ಭದ್ರತಾ ಯೋಜನೆಗಳ ಜಾರಿಗೆ ಒತ್ತಾಯ

₹1.50 ಲಕ್ಷ ಕೊಡುಗೆ ಘೋಷಣೆ

ಪತ್ರಿಕೋದ್ಯಮಿ ಜಿ.ಚಿದ್ವಿಲಾಸ್ ಮಾತನಾಡಿ ಅಖಿಲ ಕರ್ನಾಟಕ ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿ ಸಂಘಕ್ಕೆ ₹ 1.50 ಲಕ್ಷ ಕೊಡುಗೆ ನೀಡುವುದಾಗಿ ಘೋಷಿಸಿದರು. ಜೊತೆಗೆ ಅಂಚೆ ಇಲಾಖೆಯಲ್ಲಿರುವ ವಿಮಾ ಯೋಜನೆಯ ಸೌಲಭ್ಯವನ್ನು ಪತ್ರಿಕಾ ವಿತರಕರು ಸದುಪಯೋಗಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT