ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಊಟವಿಲ್ಲದೆ ಅಸ್ಸಾಂ ಕಾರ್ಮಿಕರ ಪರದಾಟ

ಕುಶಾಲನಗರ ಚೆಕ್‌ಪೋಸ್ಟ್‌ನಲ್ಲಿ ಬಿಗಿ ತಪಾಸಣೆ; ಕಾರ್ಮಿಕರ ಪ್ರವೇಶ ನಿರಾಕರಣೆ
Last Updated 2 ಜುಲೈ 2021, 13:48 IST
ಅಕ್ಷರ ಗಾತ್ರ

ಕುಶಾಲನಗರ: ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳು ಕಡಿಮೆಯಾಗದ ಹಿನ್ನೆಲೆಯಲ್ಲಿ ಲಾಕ್‌ಡೌನ್ ಮುಂದುವರೆದಿದ್ದು, ಇಲ್ಲಿನ ಚೆಕ್‌ಪೋಸ್ಟ್‌ನಿಂದ ಜಿಲ್ಲೆಗೆ ಬರುವ ಎಲ್ಲ ವಾಹನಗಳನ್ನು ತೀವ್ರ ತಪಾಸಣೆಗೆ ಒಳಪಡಿಸಲಾಗುತ್ತಿದೆ.

ಪಟ್ಟಣದ ಟೋಲ್‌ಗೇಟ್‌ನಲ್ಲಿ ಹೊರ ಜಿಲ್ಲೆ ಹಾಗೂ ರಾಜ್ಯಗಳಿಂದ ಬರುವ ಕಾರ್ಮಿಕರನ್ನು ಪರಿಶೀಲನೆ ನಡೆಸಿ ಹೊರ ರಾಜ್ಯಗಳ ಕಾರ್ಮಿಕರಿಗೆ ಪ್ರವೇಶ ನಿರಾಕರಿಸಲಾಗುತ್ತಿದೆ. ಅಕ್ಕಪಕ್ಕದ ಜಿಲ್ಲೆಗಳ ಕಾರ್ಮಿಕರಿಗೆ ಸೀಲ್ ಹಾಕಿ ತೋಟದ ಲೈನ್ ಮನೆಗಳಲ್ಲಿ ಹೋಂ ಕ್ವಾರಂಟೈನ್ ಆಗುವಂತೆ ಸೂಚನೆ ನೀಡಲಾಗುತ್ತಿದೆ.

ಕಾರ್ಮಿಕರಿಗೆ ಪ್ರವೇಶ ನೀಡದ ಹಿನ್ನೆಲೆಯಲ್ಲಿ ಊಟ ತಿಂಡಿ ಇಲ್ಲದೆ ಪರದಾಡಿದರು. ಉತ್ತರ ಭಾರತದ 50ಕ್ಕೂ ಅಧಿಕ ಕಾರ್ಮಿಕ ಕುಟುಂಬಗಳು ಬುಧವಾರ ರಾತ್ರಿ ಬಸ್ ಮೂಲಕ ಬಂದಾಗ ಗಡಿಯಲ್ಲಿ ತಪಾಸಣಾ ಅಧಿಕಾರಿಗಳು ತಡೆಯೊಡ್ಡಿದರು.

ಇನ್ನೊಂದೆಡೆ ಕುಶಾಲನಗರ ವಾಹನ ತಪಾಸಣಾ ಕೇಂದ್ರದ ಮೂಲಕ ದಾಖಲೆ ಪರಿಶೀಲಿಸಿ ಸೀಲ್ ಹಾಕುವುದರೊಂದಿಗೆ ನೂರಕ್ಕೂ ಅಧಿಕ ಮಂದಿ ಕಾರ್ಮಿಕರನ್ನು ಜಿಲ್ಲೆಗೆ ಪ್ರವೇಶಿಸಲು ಅನುವು ಮಾಡಿಕೊಡಲಾಯಿತು.

ಕೆಲವರು ಕೊಪ್ಪ ಸೇತುವೆ ಮೂಲಕ ನಡೆದುಕೊಂಡು ಕುಶಾಲನಗರದತ್ತ ತೆರಳಿದ್ದಾರೆ. ಈ ನಡುವೆ ಬಸ್ ಚಾಲಕ ಪರಾರಿಯಾಗಿದ್ದು, ಬಸ್‌ಅನ್ನು ಬೈಲುಕೊಪ್ಪ ಪೊಲೀಸರ ವಶಕ್ಕೆ ನೀಡಲಾಗಿದೆ.

ಸಮಸ್ಯೆಗೊಳಗಾದ ವಲಸಿಗ ಕಾರ್ಮಿಕರ ಕುಟುಂಬದ ಮಕ್ಕಳು, ಮಹಿಳೆಯರಿಗೆ ಬೈಲುಕೊಪ್ಪೆಯ ರಿಚ್ ಫೋರ್ಟ್ ಹೋಟೆಲ್ ಮಾಲೀಕ ಅಣ್ಣಪ್ಪ ಅವರು ರಾತ್ರಿ ಆಸರೆ ನೀಡಿ, ಊಟದ ವ್ಯವಸ್ಥೆ ಕಲ್ಪಿಸಿ ಮಾನವೀಯತೆ ಮರೆದಿದ್ದಾರೆ.

‘ಗುವಾಹಟಿಯಿಂದ ಬೆಂಗಳೂರಿಗೆ ರೈಲು ಮೂಲಕ ಬಂದ ಕಾರ್ಮಿಕರನ್ನು ಕೊಡಗು ಜಿಲ್ಲೆಯ ಸುಂಟಿಕೊಪ್ಪ, ಸಿದ್ದಾಪುರ, ಮಡಿಕೇರಿ ಕಡೆಯ ಕಾಫಿ ತೋಟಗಳಿಗೆ ಹಾಗೂ ನೆಲ್ಲಿಹುದಿಕೇರಿಯ ಇಟ್ಟಿಗೆ ಕಾರ್ಖಾನೆಗೆ ಕಳುಹಿಸಿಕೊಡುವಂತೆ ಮಾಲೀಕರು ತಿಳಿಸಿದ್ದರು’ ಎಂದು ಮೇಸ್ತ್ರಿ ಅಳಲು ತೋಡಿಕೊಂಡಿದ್ದಾರೆ.

ಸ್ಥಳಕ್ಕೆ ಭೇಟಿ ನೀಡಿದ್ದ ಅಧಿಕಾರಿಗಳು ಕಾರ್ಮಿಕರನ್ನು ವಾಪಾಸ್ ಅವರ ಸ್ವಂತ ಸ್ಥಳಕ್ಕೆ ತೆರಳುವಂತೆ ಸೂಚಿಸಿದ್ದಾರೆ. ಆದರೂ ಕಾರ್ಮಿಕರು ಜಿಲ್ಲೆಯ ವಿವಿಧ ಗಡಿಗಳ ಮೂಲಕ ಸಿದ್ದಾಪುರ ಸುಂಟಿಕೊಪ್ಪ, ಗೋಣಿಕೊಪ್ಪ ಕಡೆಗೆ ತೆರಳಿದ್ದಾರೆ ಎನ್ನಲಾಗಿದೆ.

ಅಸ್ಸಾಂನ ಸುಮಾರು 20 ಕಾರ್ಮಿಕರು ಮಡಿಕೇರಿ ಸುತ್ತಮುತ್ತಲಿನ ಕಾಫಿ ತೋಟದಲ್ಲಿ ಕೆಲಸ ನಿರ್ವಹಿಸಲು ಮೈಸೂರು ಜಿಲ್ಲೆಯ ಕೊಪ್ಪ ಗ್ರಾಮದ ಮೂಲಕ ಗುಡ್ಡೆಹೊಸೂರು ತೆಪ್ಪದಕಂಡಿ ತೂಗು ಸೇತುವೆ ಮೂಲಕ ಬರುವುದನ್ನು ಪತ್ತೆ ಹಚ್ಚಿ ಪೊಲೀಸರಿಗೆ ಒಪ್ಪಿಸಿದ ಘಟ‌ನೆ ನಡೆದಿದೆ.

ಕಾಫಿ ತೋಟಗಳ ಮಾಲೀಕರು ಕಾರ್ಮಿಕರನ್ನು ಕರೆದುಕೊಂಡು ಹೋಗಲು ಸ್ಥಳಕ್ಕೆ ಆಗಮಿಸಿದ್ದರು. ಈ ಸಂದರ್ಭ ಗ್ರಾಮಸ್ಥರು ಹಾಗೂ ಕಾಫಿ ತೋಟದ ಸಿಬ್ಬಂದಿ ನಡುವೆ ಮಾತಿನ ಚಕಮುಖಿ ನಡೆಯಿತು. ಕಾರ್ಮಿಕರನ್ನು ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವಿಚಾರಣೆ ನಡೆಸಲಾಯಿತು. ಕೊಡಗಿನಲ್ಲಿ ಕೋವಿಡ್ ಹತೋಟಿಗೆ ಬರುತ್ತಿಲ್ಲ. ಇಂತಹ ಸಮಯದಲ್ಲಿ ಹೊರ ರಾಜ್ಯದ ಕಾರ್ಮಿಕರು ಬರುತ್ತಿರುವುದನ್ನು ಸ್ಥಳೀಯರು ಖಂಡಿಸಿದ್ದಾರೆ.

ಸ್ಥಳಕ್ಕೆ ತಹಶೀಲ್ದಾರ್ ಗೋವಿಂದರಾಜ್ ಭೇಟಿ ನೀಡಿ ಎಲ್ಲ ಕಾರ್ಮಿಕರಿಗೆ ಕೊರೊನಾ ಪರೀಕ್ಷೆಗೆ ಒಳಪಡಿಸಿ ಸೀಲ್ ಹಾಕಿ ಕಡ್ಡಾಯವಾಗಿ ತೋಟದ ಲೈನ್ ಮನೆಗಳಲ್ಲಿ ಹೋಂ ಕ್ವಾರಂಟೈನ್ ಮಾಡುವಂತೆ ಸೂಚನೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT