ಮಡಿಕೇರಿ: ಕರ್ನಾಟಕದ ಶ್ವಾಸಕೋಶವಾಗಿರುವ ಕೊಡಗಿನಲ್ಲಿ ಈ ಬಾರಿ ಬೇಸಿಗೆಯಲ್ಲಿ ಪದೇ ಪದೇ ಬೆಂಕಿ ಬೀಳುತ್ತಲೇ ಇದೆ. ಅರಣ್ಯ ಇಲಾಖೆ ಸಿಬ್ಬಂದಿ, ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿ ಬಸವಳಿದಿದ್ದಾರೆ. ಮುಂಬರುವ ದೊಡ್ಡ ವಿಪತ್ತಿನ ಮುನ್ಸೂಚನೆಯನ್ನು ನೀಡುವಂತೆ ಬೆಂಕಿಯ ಕೆನ್ನಾಲಿಗೆ ಮತ್ತೆ ಮತ್ತೆ ಚಾಚುತ್ತಲೇ ಇದೆ.
ಕಳೆದ ವರ್ಷ ಮುಂಗಾರುಪೂರ್ವ ಮಳೆ ಸಾಕಷ್ಟು ಮುಂಚಿತವಾಗಿಯೇ ಆರಂಭವಾಗಿದ್ದರಿಂದ ಬೆಂಕಿ ಪ್ರಕರಣಗಳ ಸಂಖ್ಯೆ ಕಡಿಮೆ ಇತ್ತು. ಬೆಂಕಿ ಹೊತ್ತಿಸುವ ದುರುಳರ ಆಟಕ್ಕೆ ವರುಣನೇ ಕಡಿವಾಣ ಹಾಕಿದ್ದ. ಆದರೆ, ಈ ಬಾರಿ ಬೇಸಿಗೆಯ ಆರಂಭದಲ್ಲೇ ಉರಿಬಿಸಿಲು ಎಲ್ಲೆಡೆ ಆವರಿಸಿ, ಆತಂಕ ಮೂಡಿಸಿದೆ.
ಅರಣ್ಯ ಇಲಾಖೆಯ ದತ್ತಾಂಶದ ಪ್ರಕಾರ ಈ ಬಾರಿ ಬೆಂಕಿ ಬಿದ್ದಿರುವುದು ದುಬಾರೆ ಭಾಗದಲ್ಲಿ 3 ಹೆಕ್ಟೇರ್ ಹಾಗೂ ಕೆಲವು ಡೀಮ್ಡ್ ಅರಣ್ಯದ 3 ಎಕರೆಯಷ್ಟು ಪ್ರದೇಶದಲ್ಲಿ ಮಾತ್ರ. ಇಲ್ಲೆಲ್ಲ ಕುರುಚಲು ಗಿಡಗಳು ಭಸ್ಮವಾಗಿವೆ. ಆದರೆ, ವಾರದಲ್ಲಿ ಮೂರರಿಂದ ನಾಲ್ಕು ಬಾರಿ ಬೆಂಕಿ ಕಾಣಿಸಿಕೊಂಡಿದ್ದಾದರೂ ಎಲ್ಲಿ ಎಂಬ ಪ್ರಶ್ನೆಗೆ ಅಧಿಕಾರಿಗಳು ಅವು ನಮ್ಮ ವ್ಯಾಪ್ತಿಯಲ್ಲಿಲ್ಲ ಎಂದು ಹೇಳುತ್ತಾರೆ.
ಕಾಡಿಗೆ ಹೊಂದಿಕೊಂಡಂತೆ ಇರುವ ಪೈಸಾರಿ ಜಾಗ, ಸಿ ಮತ್ತು ಡಿ ದರ್ಜೆ ಭೂಮಿಯಲ್ಲಿಯೂ ಕಾಡಿನ ಸ್ವರೂಪದಲ್ಲೇ ಮರಗಳು ಬೆಳೆದಿವೆ. ಹೊರನೋಟಕ್ಕೆ ದಟ್ಟ ಅರಣ್ಯ ಎನಿಸುವಂತಿವೆ. ಇಲ್ಲೂ ವನ್ಯಜೀವಿಗಳು ವಾಸಿಸುತ್ತಿವೆ. ಆದರೆ, ಭೌಗೋಳಿಕ ವ್ಯಾಪ್ತಿ ಮಾತ್ರ ಅರಣ್ಯ ಇಲಾಖೆಗೆ ಸೇರಿಲ್ಲ. ಇಲ್ಲಿ ಬಿದ್ದ ಬೆಂಕಿಯೂ ಕಾಡಿಗೆ ಬಿದ್ದ ಬೆಂಕಿಯಂತೆಯೇ ತೋರುತ್ತಿದೆ ಎಂಬುದು ಅವರ ಸಮಜಾಯಿಷಿ.
ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಕೊಡಗು ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಡಾ.ಬಿ.ಕೆ.ಮೂರ್ತಿ, ‘ಪೈಸಾರಿ ಜಾಗ, ಸಿ ಮತ್ತು ಡಿ ದರ್ಜೆ ಭೂಮಿ ನಮ್ಮ ವ್ಯಾಪ್ತಿಯಲ್ಲಿ ಇಲ್ಲದೇ ಹೋದರೂ ಅಲ್ಲಿಗೆ ಬಿದ್ದ ಬೆಂಕಿಯನ್ನು ನಮ್ಮ ಇಲಾಖೆಯ ಸಿಬ್ಬಂದಿಯೇ ನಂದಿಸುತ್ತಿದ್ದಾರೆ. ಈ ಮೂಲಕ ಕಾಡಿಗೆ ಬೆಂಕಿ ಹಬ್ಬುವುದನ್ನು ತಡೆಯುತ್ತಿದ್ದಾರೆ’ ಎಂದು ಹೇಳಿದರು.
ಭೌಗೋಳಿಕ ವ್ಯಾಪ್ತಿ ಯಾವುದೇ ಆದರೂ ಸರಿ ಕಾಡಿನಂತಿರುವ ಪ್ರದೇಶದಲ್ಲಿ ವನ್ಯಜೀವಿಗಳು ವಾಸಿಸುತ್ತಿವೆ. ಅಸಂಖ್ಯ ಸರಿಸೃಪಗಳು ಜೀವಿಸುತ್ತಿವೆ. ಅಮೂಲ್ಯ ಜೀವವೈವಿಧ್ಯವೂ ಇದೆ. ಇಲ್ಲೆಲ್ಲ ಬೆಂಕಿ ಬಿದ್ದರೆ ಅವುಗಳೆಲ್ಲ ನಾಶ ಹೊಂದುತ್ತವೆ. ನಾಪೋಕ್ಲು ಹೋಬಳಿಯ ಕಕ್ಕಬ್ಬೆ, ನೆಲಜಿ, ಬಲ್ಲಮಾವಟಿ, ಪೇರೂರು ಭಾಗದ ಬ್ರಹ್ಮಗಿರಿ ಅರಣ್ಯ ಪ್ರದೇಶದಲ್ಲೂ ಬೆಂಕಿ ಕಾಣಿಸಿಕೊಂಡಿರುವ ಬಗ್ಗೆ ಸ್ಥಳೀಯರು ಹೇಳುತ್ತಾರೆ.
ಬೆಂಕಿ ತಡೆ ಶಿಬಿರ ಬೇಕು: ಕೊಡಗು ಉಳಿಯಬೇಕಾದರೆ ಕಾಡು ಉಳಿಯಬೇಕು. ಕಾಡು ಉಳಿಯಬೇಕಾದರೆ ಅದನ್ನು ಬೆಂಕಿಯಿಂದ ರಕ್ಷಿಸಬೇಕು. ಅದಕ್ಕೆ ಅರಣ್ಯ ಇಲಾಖೆ ವಿಶೇಷ ಗಮನ ನೀಡಬೇಕಿದೆ. ಆದರೆ, ಸರ್ಕಾರದಿಂದ ಹೆಚ್ಚಿನ ನೆರವು ಸಿಗದೇ ಅರಣ್ಯ ಇಲಾಖೆ ಇನ್ನೂ ಸಾಂಪ್ರದಾಯಿಕ ವಿಧಾನಗಳನ್ನೇ ಅರಣ್ಯ ಬೆಂಕಿ ತಡೆಗೆ ಅನುಸರಿಸುತ್ತಿದೆ. ಇದರಿಂದ ಪರಿಸ್ಥಿತಿ ಸುಧಾರಿಸುತ್ತಿಲ್ಲ ಎಂಬುದು
ಇತ್ತೀಚಿನ ಬೆಂಕಿ ಪ್ರಕರಣಗಳು ಸಾಬೀತುಪಡಿಸಿವೆ.
ಬೇಟೆ ತಡೆಗಾಗಿ ಕಾಡಿನೊಳಗೆ ಬೇಟೆ ತಡೆ ಶಿಬಿರಗಳನ್ನು ಸ್ಥಾಪಿಸಿ ಅಲ್ಲಿ ಸಿಬ್ಬಂದಿಯನ್ನು ನಿಯೋಜಿಸಿದಂತೆ ಕಾಡಂಚಿನಲ್ಲಿ ಬೆಂಕಿ ಬೀಳಬಹುದಾದ ಪ್ರದೇಶದಲ್ಲಿ, ಗ್ರಾಮಗಳೊಟ್ಟಿಗೆ ಹೊಂದಿಕೊಂಡಿರುವ ಪ್ರದೇಶದಲ್ಲಿ ಬೆಂಕಿ ತಡೆ ಶಿಬಿರಗಳನ್ನು ಬೇಸಿಗೆ ಸಮಯದಲ್ಲಿ ಸ್ಥಾಪಿಸಬೇಕು. ಆಗ ಮಾತ್ರ ಬೆಂಕಿ ಹಚ್ಚುವವರನ್ನು ನಿಯಂತ್ರಿಸಬಹುದು.
ಬೆಂಕಿ ನಂದಿಸುವ ವಿಧಾನ: ಬದಲಾವಣೆ ಅಗತ್ಯ
ಬೆಂಕಿ ನಂದಿಸಲು ಈಗಲೂ ಸೊಪ್ಪನ್ನು ಬಡಿಯುವ ಸಾಂಪ್ರದಾಯಿಕ ವಿಧಾನವನ್ನೇ ಅನುಸರಿಸಲಾಗುತ್ತಿದೆ. ಅದಕ್ಕೆ ಬದಲಾಗಿ ವೈಜ್ಞಾನಿಕ ವಿಧಾನಗಳನ್ನು ಅನುಸರಿಸಬೇಕು. ವೈಜ್ಞಾನಿಕ ಉಪಕರಣಗಳನ್ನು ಬೆಂಕಿ ನಂದಕರಿಗೆ ನೀಡಬೇಕು. ಕೊಡಗನ್ನು ಉಳಿಸಲು ಬೆಂಕಿ ನಂದಿಸಲೆಂದೇ ವಿಶೇಷ ಹೆಲಿಕಾಪ್ಟರ್‌ವೊಂದನ್ನು ನಿಯೋಜಿಸಬೇಕು. ಈ ಎಲ್ಲ ಕ್ರಮಗಳು ಕೊಂಚು ದುಬಾರಿ ಎನಿಸಬಹುದು. ಆದರೆ, ಸುಟ್ಟು ಹೋದ ಅರಣ್ಯದಲ್ಲಿ ಬಿದ್ದ ಮಳೆ ನೀರು ರಭಸವಾಗಿ ಹರಿದು ಭೂಕುಸಿತಗಳು ಉಂಟಾಗುವ ಸಾಧ್ಯತೆಗಳು ಅಧಿಕ. ಕಾಡು ನಿಧಾನವಾಗಿ ನಾಶವಾಗುತ್ತಲೇ ಹೋದರೆ ಮುಂದೊಂದು ದಿನ ಅಪಾಯ ನಿಶ್ಚಿತ. ಹಾಗಾಗಿ, ದುಬಾರಿಯಾದರೂ ವೈಜ್ಞಾನಿಕ ಕ್ರಮಗಳನ್ನು ಸರ್ಕಾರ ಕೂಡಲೇ ಕೈಗೊಳ್ಳಬೇಕಾದ ಅನಿವಾರ್ಯತೆ ಇದೆ.
ಬೆಂಕಿ ಹಾಕುವವರು ಯಾರು?
ಕೊಡಗಿನಲ್ಲಿ ಸಾಮಾನ್ಯವಾಗಿ ತಾನೇ ತಾನಾಗಿ ಕಾಳ್ಗಿಚ್ಚು ಸಂಭವಿಸುವುದು ತೀರಾ ಕಡಿಮೆ. ಬೀಳುವ ಬೆಂಕಿ ಎಲ್ಲವೂ ಮಾನವ ಕೃತ್ಯವೇ ಆಗಿದೆ. ಹಂದಿ ಬೇಟೆಗಾಗಿ ಕೆಲವರು ಅರಣ್ಯಕ್ಕೆ ಬೆಂಕಿ ಇಡುತ್ತಾರೆ. ಅರಣ್ಯಾಧಿಕಾರಿಗಳ ಮೇಲಿನ ಸಿಟ್ಟಿಗೆ ಕಾಡಂಚಿನ ಕೆಲವು ಕಿಡಿಗೇಡಿಗಳು ಬೆಂಕಿ ಹೊತ್ತಿಸುತ್ತಾರೆ. ಆಕಸ್ಮಿಕ ವಾಗಿ ಕೆಲವೊಮ್ಮೆ ಬೀಡಿ, ಸಿಗರೇಟು ಹೊತ್ತಿಸಿದ ಬೆಂಕಿ ಕಡ್ಡಿಗಳಿಂದಲೂ ಬೆಂಕಿ ಉಂಟಾಗಬಹುದು. ಈ ಎಲ್ಲ ಕಾರಣಗಳಿಗೆ ಪರಿಹಾರ ಹುಡುಕುವುದು ತೀರಾ ಕಷ್ಟವೇನಲ್ಲ.
ಅರಣ್ಯದ ಭಾಗಗಳಲ್ಲಿ ನಿರಂತರವಾಗಿ ಗಸ್ತು ಹೆಚ್ಚಿಸ ಬೇಕು. ಬೆಂಕಿ ಕಂಡ ಕೂಡಲೇ ಅದನ್ನು ನಂದಿಸಲು ಅಗ್ನಿಶಾಮಕ ದಳದ ಹೆಚ್ಚಿನ ಸಿಬ್ಬಂದಿಯನ್ನು ಸನ್ನದ್ಧ ಸ್ಥಿತಿಯಲ್ಲಿರಿಸಬೇಕು.
ಯಾರು ಏನೆಂದರು?
ಅರಿವು ಮೂಡಿಸಬೇಕು
ಇದು ಒಂದು ವರ್ಷದ ಸಮಸ್ಯೆ ಅಲ್ಲ. ಜನರಲ್ಲಿ ನಿರಂತರವಾಗಿ ಅರಿವು ಮೂಡಿಸಬೇಕು. ಬೆಂಕಿ ಬೀಳುವುದರಿಂದ ಆಗುವ ದುಷ್ಪರಿಣಾಮಗಳ ಕುರಿತು ಮನವರಿಕೆ ಮಾಡಿಸಬೇಕು. ಬ್ರಹ್ಮಗಿರಿಗೆ ಬೆಂಕಿ ಬಿದ್ದರೆ ನದಿಗಳು ಬತ್ತಿ ಹೋಗುತ್ತವೆ ಎಂಬ ವಿಚಾರವನ್ನು ತಿಳಿ ಹೇಳಬೇಕು. ಅರಣ್ಯದಂಚಿನಲ್ಲಿ ನಿರಂತರ ಗಸ್ತು ಕಾರ್ಯ ನಡೆಸಬೇಕು
ಕೆ.ಎಂ.ಚಿನ್ನಪ್ಪ, ಶ್ರೀಮಂಗಲ, ಪರಿಸರ ಪ್ರೇಮಿ
ವಿಶೇಷ ಹೆಲಿಕಾಪ್ಟರ್ ಬೇಕು
ಬೇಸಿಗೆ ಸಮಯದಲ್ಲಿ ಅರಣ್ಯ ಗಸ್ತು ಹೆಚ್ಚಿಸಬೇಕು. ಅರಣ್ಯದಂಚಿನಲ್ಲಿ ಹೆಚ್ಚಿನ ಸಿಬ್ಬಂದಿ ನಿಯೋಜಿಸಬೇಕು. ಕಳ್ಳ ಬೇಟೆ ಶಿಬಿರದಂತೆ ಕಾಳ್ಗಿಚ್ಚು ತಡೆ ಶಿಬಿರಗಳನ್ನು ಸ್ಥಾಪಿಸಬೇಕು. ಬೇಟೆಗಾರರು, ಮರಗಳ್ಳರ ಮೇಲೆ ಹದ್ದಿನ ಕಣ್ಣಿಡಬೇಕು. ಬೆಂಕಿ ನಂದಿಸುವ ವಿಶೇಷ ಹೆಲಿಕಾಪ್ಟರ್ ವ್ಯವಸ್ಥೆ ಮಾಡಬೇಕು.
ಪವನ್ ಪೆಮ್ಮಯ್ಯ, ಕೊಡಗು ರಕ್ಷಣಾ ವೇದಿಕೆ ಅಧ್ಯಕ್ಷ
ಪೈಸಾರಿ ಭೂಮಿಗೆ ಹೆಚ್ಚಿನ ಬೆಂಕಿ
ಈ ಬಾರಿ ಕೊಡಗಿನಲ್ಲಿ ಅರಣ್ಯ ಇಲಾಖೆಗೆ ಸೇರಿದ ಪ್ರದೇಶಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಬೆಂಕಿ ಬಿದ್ದಿಲ್ಲ. ಹೆಚ್ಚಾಗಿ ಪೈಸಾರಿ ಭೂಮಿ, ಸಿ ಮತ್ತು ಡಿ ದರ್ಜೆಯ ಭೂಮಿಗೆ ಬೆಂಕಿ ಬಿದ್ದಿದೆ. ಇಲ್ಲಿಯೂ ಅರಣ್ಯ ಇಲಾಖೆಯ ಸಿಬ್ಬಂದಿಯೇ ಬೆಂಕಿ ನಂದಿಸಿದೆ
ಡಾ.ಬಿ.ಪಿ.ಮೂರ್ತಿ, ಕೊಡಗು ಅರಣ್ಯ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.