ಕುಶಾಲನಗರ: ಹಿಂದಿ ದಿವಸ್ ಆಚರಣೆಯನ್ನು ವಿರೋಧಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಶನಿವಾರ ಪ್ರತಿಭಟನೆ ನಡೆಸಿದರು.
ವೇದಿಕೆ ಜಿಲ್ಲಾ ಘಟಕದಿಂದ ಇಲ್ಲಿನ ತಹಶೀಲ್ದಾರ್ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದ ಕಾರ್ಯಕರ್ತರು, ಕೇಂದ್ರ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು. ‘ರಾಜ್ಯದಲ್ಲಿ ಬಲವಂತದಿಂದ ಹಿಂದಿ ಹೇರಿಕೆ ಮಾಡಲಾಗುತ್ತಿದೆ’ ಎಂದು ಖಂಡಿಸಿದರು.
ಜಿಲ್ಲಾ ಘಟಕದ ಅಧ್ಯಕ್ಷ ದೀಪಕ್ ಮಾತನಾಡಿ, ‘ಭಾಷಾವಾರು ಪ್ರಾಂತ್ಯಗಳ ಆಧಾರದ ಮೇಲೆ ರಚನೆಯಾಗಿರುವ ಭಾರತ ದೇಶ ವಿವಿಧತೆಯಿಂದ ಕೂಡಿದ್ದು, ಹಲವಾರು ಭಾಷೆಗಳು ಮತ್ತು ವಿವಿಧ ಸಂಸ್ಕೃತಿಗಳ ಬುನಾದಿಯ ಮೇಲೆ ನಡೆಯುತ್ತಿದೆ’ ಎಂದರು.
‘ಕೇಂದ್ರ ಸರ್ಕಾರ ಪ್ರತಿ ವರ್ಷ ಸೆ.14 ರಂದು ಹಿಂದಿ ದಿವಸ್ ಹೆಸರಿನಲ್ಲಿ ಹಿಂದಿಯೇತರ ರಾಜ್ಯಗಳ ಜನರ ಭಾವನೆಗಳಿಗೆ ಧಕ್ಕೆಯಾಗುವಂತೆ ನಡೆದುಕೊಳ್ಳುತ್ತಿರುವುದನ್ನು ವಿರೋಧಿಸಿ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷರ ನೇತೃತ್ವದಲ್ಲಿ ಕಾರ್ಯಕರ್ತರು 25 ವರ್ಷಗಳಿಂದ ಹಿಂದಿ ದಿವಸ್ ಆಚರಣೆಯನ್ನು ವಿರೋಧಿಸಿ ಹೋರಾಟ ನಡೆಸಿಕೊಂಡು ಬಂದಿದೆ’ ಎಂದರು.
‘ನಮ್ಮ ತೆರಿಗೆ ಹಣದಿಂದ ಹಿಂದಿ ಭಾಷೆಯನ್ನು ಮೆರೆಸುವುದು ಸ್ಥಳೀಯ ಆಡಳಿತ ಭಾಷೆಯನ್ನು ತುಳಿಯುವುದನ್ನು ಹಾಗೂ ಇಂತಹ ವ್ಯವಸ್ಥೆಯನ್ನು ಕರ್ನಾಟಕ ಸರ್ಕಾರ ಕಿತ್ತೊಗೆಯಬೇಕು’ ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಮಹಿಳಾ ಘಟಕದ ರಾಜ್ಯ ಸಂಚಾಲಕಿ ದೀಪಾ ಪೂಜಾರಿ, ತಾಲ್ಲೂಕು ಅಧ್ಯಕ್ಷ ಬಿ.ಜೆ.ಅಣ್ಣಯ್ಯ, ಉಪಾಧ್ಯಕ್ಷರಾದ ಚಂದ್ರು, ನಾಸಿರ್, ಮಹಿಳಾ ಘಟಕ ಅಧ್ಯಕ್ಷೆ ರೂಪಾ ಗಣೇಶ್, ಕಾರ್ಯದರ್ಶಿ ನವೀನ್, ಪ್ರಮುಖರಾದ ಸೋಮವಾರಪೇಟೆ ಮಂಜುನಾಥ್, ಆನಂದ್, ಸಂಧ್ಯಾಗಣೇಶ್, ನಂಜಪ್ಪ ಪಾಲ್ಗೊಂಡಿದ್ದರು.