ಬುಧವಾರ, 9 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೊಡಗು: ಜಿಲ್ಲೆಗೆ ಬೇಕು ಪ್ರಥಮ ಚಿಕಿತ್ಸಾ ತರಬೇತಿ ಶಿಬಿರ

ವಿಶ್ವ ಪ್ರಥಮ ಚಿಕಿತ್ಸಾ ದಿನ, ಪ್ರಥಮ ಚಿಕಿತ್ಸೆ ಇಲ್ಲದೇ ಏರುತ್ತಿದೆ ಸಾವಿನ ಪ್ರಮಾಣ
Published : 23 ಸೆಪ್ಟೆಂಬರ್ 2024, 6:48 IST
Last Updated : 23 ಸೆಪ್ಟೆಂಬರ್ 2024, 6:48 IST
ಫಾಲೋ ಮಾಡಿ
Comments

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಹಠಾತ್ ಸಾವುಗಳ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದೆ. ಹೃದಯಾಘಾತವೇ ಇದರಲ್ಲಿ ಸಿಂಹಪಾಲು ಪಡೆದಿದೆ. ಇದರೊಂದಿಗೆ ಅಪಘಾತಗಳಲ್ಲಿ ಉಂಟಾಗುವ ಸಾವಿನ ಪ್ರಮಾಣ, ಹಾವು ಕಡಿತ, ನೀರಿನಲ್ಲಿ ಮುಳುಗುವುದು ಸೇರಿದಂತೆ ಮೊದಲಾದ ಕಾರಣಗಳಿಂದಲೂ ಸಾವು ಸಂಭವಿಸುತ್ತಿವೆ. ಆದರೆ, ಈ ಎಲ್ಲ ಪ್ರಕರಣಗಳಲ್ಲೂ ಬಹುತೇಕ ಸಾವುಗಳನ್ನು ಪ್ರಥಮ ಚಿಕಿತ್ಸೆ ನೀಡಿದ್ದರೆ ತಪ್ಪಿಸಬಹುದಿತ್ತು ಎನ್ನುವ ಅಭಿಪ್ರಾಯವನ್ನು ಬಹುತೇಕ ಮಂದಿ ವ್ಯಕ್ತಪಡಿಸುತ್ತಾರೆ.

ವಿಶೇಷವಾಗಿ, ಕೊಡಗು ಜಿಲ್ಲೆಯಲ್ಲಿ ಪ್ರಥಮ ಚಿಕಿತ್ಸೆ ಕುರಿತು ತರಬೇತಿ ನೀಡುವ ವ್ಯವಸ್ಥೆ ತೀರಾ ಕಡಿಮೆ. ಕನಿಷ್ಠ ಪಕ್ಷ ಪ್ರಥಮ ಚಿಕಿತ್ಸೆ ಕುರಿತು ತರಬೇತಿ ನೀಡುವ ವ್ಯವಸ್ಥೆ ಕಲ್ಪಿಸುವ ಕುರಿತು ಒಂದೆರಡು ಸಂಘಟನೆಗಳನ್ನು ಬಿಟ್ಟರೆ ಉಳಿದ ಯಾವುದೇ ಸಂಘ, ಸಂಸ್ಥೆಗಳೂ ಚಿಂತನೆ ನಡೆಸಿದಂತಿಲ್ಲ. ಇದರಿಂದ ತುರ್ತು ವಿಪತ್ತು ಸನ್ನಿವೇಶಗಳಲ್ಲಿ ‘ಗೋಲ್ಡನ್ ಹವರ್’ ವ್ಯರ್ಥವಾಗಿ ಕಳೆದು ಹೋಗಿ ರೋಗಿಯ ಪ್ರಾಣ ಉಳಿಯುತ್ತಿಲ್ಲ.

ಹೃದಯಘಾತವಾದಾಗ, ಹೃದಯ ಸ್ತಂಬನವಾದಾಗ ತಕ್ಷಣ ನೀಡುವಂತಹ ಕಾರ್ಡಿಯೊ ಪಲ್ಮನರಿ ರಿಸಸಿಟೇಶನ್ (ಸಿಪಿಆರ್‌)  ಎಂಬ ಪ್ರಥಮ ಚಿಕಿತ್ಸಾ ವಿಧಾನ ಬಹುತೇಕರಿಗೆ ತಿಳಿದೇ ಇಲ್ಲ. ಶಾಲೆ, ಕಾಲೇಜುಗಳಲ್ಲಿ, ವಿವಿಧ ಬಗೆಯ ಖಾಸಗಿ ಸಂಸ್ಥೆಗಳಲ್ಲಿ ಇಂತಹ ಪ್ರಥಮ ಚಿಕಿತ್ಸಾ ವಿಧಾನದ ಕುರಿತು ತರಬೇತಿ ನೀಡುವ ವ್ಯವಸ್ಥೆ ಇಲ್ಲಿಲ್ಲ. ಇದರಿಂದ ಹೃದಯಾಘಾತವಾದಾಗ ಸಾವಿನ ಸಂಖ್ಯೆಯನ್ನು ಕಡಿಮೆ ಮಾಡಲು ಆಗುತ್ತಿಲ್ಲ.

ರಾಜ್ಯದಲ್ಲಿ ಬೇರೆ ಬೇರೆ ಜಿಲ್ಲೆಗಳಲ್ಲಿ ಇಂತಹ ಪ್ರಥಮ ಚಿಕಿತ್ಸಾ ವಿಧಾನವನ್ನು ಕಲಿಸುವ ಕಾರ್ಯಕ್ರಮಗಳು ಆಗಿದ್ದಾಂಗ್ಗೆ ನಡೆಯುತ್ತಲೇ ಇರುತ್ತವೆ. ಆದರೆ, ಕೊಡಗು ಜಿಲ್ಲೆಯಲ್ಲಿ ಇಂತಹ ಕಾರ್ಯಕ್ರಮಗಳು ನಡೆಯುತ್ತಿಲ್ಲ. ನಡೆದರೂ ಅದು ಕೇವಲ ಅಗ್ನಿ ಅವಘಡ, ಗಾಯ, ಮೂಳೆ ಮುರಿತ, ಹಾವು ಕಡಿತಗಳಿಗೆ ಮಾತ್ರವೇ ಸೀಮಿತಗವಾಗಿದೆ.

ಈಚೆಗೆ ಬೆಂಗಳೂರಿನಲ್ಲಿ ಸರ್ಜಿಲ್ ಸೊಸೈಟಿ ಆಫ್‌ ಬೆಂಗಳೂರು ಸಂಸ್ಥೆ ಕಂಠೀರವ ಕ್ರೀಡಾಂಗಣದಲ್ಲಿ ಕಾರ್ಡಿಯೊ ಪಲ್ಮನರಿ ರಿಸಸಿಟೇಶನ್ (ಸಿಪಿಆರ್) ವಿಧಾನ ಕುರಿತು ಬೆಂಗಳೂರಿನ 2,200 ಪೊಲೀಸರಿಗೆ ತರಬೇತಿ ನೀಡಿತ್ತು. ಇದಕ್ಕೆ ವರ್ಲ್ಡ್‌ ರೆಕಾರ್ಡ್‌ ಆಫ್‌ ಲಂಡನ್ ಸಂಸ್ಥೆಯು ವಿಶ್ವ ದಾಖಲೆ ಪ್ರಮಾಣಪತ್ರ ನೀಡಿತ್ತು. ಗದಗದ ಸಂಕನೂರ ಶುಶ್ರೂಷ ಸಂಸ್ಥೆಯಲ್ಲಿ ನರ್ಸಿಂಗ್‌ ಕಾಲೇಜಿನ ವಿದ್ಯಾರ್ಥಿಗಳಿಗೆ ಈ ಕೌಶಲ ಕಲಿಸಲಾಗುತ್ತು. ಮೈಸೂರಿನಲ್ಲಿ ಜೂನ್ ಮೊದಲ ವಾರದಲ್ಲಿ ವಿಶ್ವ ಸಿಪಿಆರ್ ಮತ್ತು ಎಇಡಿ ಜಾಗೃತಿ ಸಪ್ತಾಹ ಕಾರ್ಯಕ್ರಮ ಅಂಚೆ ಇಲಾಖೆಯ ಸಿಬ್ಬಂದಿಗಾಗಿ ನಡೆದಿತ್ತು.

ಹೀಗೆ ರಾಜ್ಯದ ನಾನಾ ಜಿಲ್ಲೆಗಳಲ್ಲಿ ನಡೆಯುವ ಇಂತಹ ತರಬೇತಿ ಕಾರ್ಯಕ್ರಮಗಳು ಜಿಲ್ಲೆಯಲ್ಲಿ ಹೆಚ್ಚಾಗಿ ನಡೆಯುತ್ತಿಲ್ಲ. ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಹಾಗೂ ಜಿಲ್ಲಾ ರೆಡ್‌ಕ್ರಾಸ್‌ ಸಂಸ್ಥೆಗಳು ಆಗೊಮ್ಮೆ, ಈಗೊಮ್ಮೆ ಇಂತಹ ತರಬೇತಿ ಕಾರ್ಯಕ್ರಮಗಳನ್ನು ನಡೆಸುತ್ತಿರುವುದನ್ನು ಬಿಟ್ಟರೆ ಇಲ್ಲಿ ಹೆಚ್ಚು ಕ್ರಿಯಾಶೀಲವಾಗಿರುವ ಸಂಘ, ಸಂಸ್ಥೆಗಳು, ಸರ್ಕಾರೇತರ ಸಂಸ್ಥೆಗಳು ಇದರತ್ತ ಗಮನ ಹರಿಸಿಲ್ಲ.

ಇನ್ನು ಕೊಡಗು ಜಿಲ್ಲೆಯಲ್ಲಿ ಹಾವಿನ ಕಡಿತ ಸರ್ವೇ ಸಾಮಾನ್ಯ ಎನಿಸಿದೆ. ಹಾವು ಕಡಿತಗೊಂಡ ತಕ್ಷಣ ಏನು ಮಾಡಬೇಕೆಂದು ತಿಳಿಯದೇ ಸಮಯ ವ್ಯಯ ಮಾಡಿ ಮೃತಪಟ್ಟವರು ಸಾಕಷ್ಟು ಮಂದಿ ಇದ್ದಾರೆ. ಸದ್ಯ, ಏನು ಮಾಡದಿದ್ದರೂ ಪರವಾಗಿಲ್ಲ. ತಕ್ಷಣವೇ ಆಸ್ಪತ್ರೆಗೆ ಕರೆದುಕೊಂಡು ಬಂದರೂ, ಜೀವ ಉಳಿಯುವ ಸಾಧ್ಯತೆ ಹೆಚ್ಚಿದೆ. ಹೆಚ್ಚಿನ ಮಂದಿ ಇದನ್ನು ಮಾಡದೇ ನಾಟಿ ಔಷಧದ ಮೊರೆ ಹೋಗುತ್ತಿದ್ದಾರೆ.

ಕೊಡಗು ಜಿಲ್ಲೆಯಲ್ಲಿ ನದಿ, ತೊರೆಗಳು, ಜಲಪಾತಗಳು ಸಾಕಷ್ಟಿವೆ. ನೀರಿನಲ್ಲಿ ಮುಳುಗಿದಂತಹ ವ್ಯಕ್ತಿಗೆ ತಕ್ಷಣವೇ ನೀಡಬೇಕಾದ ಪ್ರಥಮ ಚಿಕಿತ್ಸೆಯ ಮಾಹಿತಿಯೂ ಹಲವರಲ್ಲಿ ಇಲ್ಲ.

ಪ್ರಾಥಮಿಕ ಅರಿವೂ ಇಲ್ಲ...!

ಯಾವುದಾದರೂ ವಿಪತ್ತು ಎದುರಾದರೆ ತಕ್ಷಣಕ್ಕೆ ಏನು ಮಾಡಬೇಕೆಂಬ ಪ್ರಾಥಮಿಕ ಅರಿವೂ ಬಹಳಷ್ಟು ಜನರಿಗೆ ಇಲ್ಲ. ಹೃದಯಾಘಾತವಾದಾಗ ಕೊನೆಗೆ ಸಮೀಪದ ಆಸ್ಪತ್ರೆಗೆ ಹೋಗುವುದಿಲ್ಲ. ಹೆಚ್ಚಿನ ಚಿಕಿತ್ಸೆ ಸಿಗುತ್ತದೆ ಎಂಬ ಕಾರಣಕ್ಕೆ ದೂರದ ಮೈಸೂರು ಇಲ್ಲವೇ ಮಂಗಳೂರಿನ ಆಸ್ಪತ್ರೆಗೆ ಹೋಗುವವರೇ ಅಧಿಕ. ಇದರಿಂದ ದಾರಿ ಮಧ್ಯೆಯೇ ಹಲವು ಮಂದಿ ಮೃತಪಟ್ಟಿದ್ದಾರೆ. ಈ ರೀತಿ ಮಾಡಬಾರದು ಎಂದು ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ವೈದ್ಯರು ಹೇಳುತ್ತಾರೆ.

‘ಹೃದಯಾಘಾತ, ಪಾರ್ಶ್ವವಾಯುವಿನ ಲಕ್ಷಣಗಳು ಕಂಡ ಕೂಡಲೇ ತಕ್ಷಣವೇ ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ಸೇರಿದ ಮಡಿಕೇರಿಯಲ್ಲಿರುವ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಬಂದಲ್ಲಿ ಅವರಿಗೆ ಸೂಕ್ತ ಮೊದಲ ಚಿಕಿತ್ಸೆ ನೀಡಲಾಗುವುದು. ತಕ್ಷಣವೇ ಉನ್ನತ ಚಿಕಿತ್ಸೆಗಾಗಿ ಕಳುಹಿಸಿಕೊಡಲಾಗುವುದು. ಇದರಿಂದ ಬದುಕುವ ಸಾಧ್ಯತೆ ಅಧಿಕ ಇದೆ’ ಎಂದು ಆಸ್ಪತ್ರೆಯ ಮೆಡಿಸಿನ್ ವಿಭಾಗದ ಮುಖ್ಯಸ್ಥ ಡಾ.ಎ.ಜೆ.ಲೋಕೇಶ್ ಹೇಳುತ್ತಾರೆ.

ಹಾವು ಕಚ್ಚಿದಾಗಲೂ ದೂರದ ಆಸ್ಪತ್ರೆಗೆ ಕರೆದುಕೊಂಡು ಹೋದರೆ ಬದುಕುವ ಸಾಧ್ಯತೆ ತೀರಾ ಕಡಿಮೆ. ಅದರ ಬದಲು ಮಡಿಕೇರಿಯ ಆಸ್ಪತ್ರೆಗೆ ಕರೆದುಕೊಂಡು ಬಂದಲ್ಲಿ ಪೂರ್ಣಪ್ರಮಾಣದ ಚಿಕಿತ್ಸೆ ಲಭ್ಯವಿದೆ. ಬದುಕುವ ಸಾಧ್ಯತೆಯೂ ಅಧಿಕ ಇದೆ.

ಮಡಿಕೇರಿಯ ಎಎಲ್‌ಜಿ ಕ್ರೆಸೆಂಟ್ ಶಾಲೆಯಲ್ಲಿ ಈಚೆಗೆ ಜಿಲ್ಲಾ ಅಗ್ನಿಶಾಮಕ ಇಲಾಖೆಯ ಅಧಿಕಾರಿಗಳ ಸಹಯೋಗದಲ್ಲಿ ಬೆಂಕಿ ಅವಘಡ ಉಂಟಾದಾಗ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳ ಕುರಿತು ವಿದ್ಯಾರ್ಥಿಗಳಿಗೆ ಪ್ರಾತ್ಯಕ್ಷಿಕೆ ನೀಡಲಾಗಿತ್ತು
ಮಡಿಕೇರಿಯ ಎಎಲ್‌ಜಿ ಕ್ರೆಸೆಂಟ್ ಶಾಲೆಯಲ್ಲಿ ಈಚೆಗೆ ಜಿಲ್ಲಾ ಅಗ್ನಿಶಾಮಕ ಇಲಾಖೆಯ ಅಧಿಕಾರಿಗಳ ಸಹಯೋಗದಲ್ಲಿ ಬೆಂಕಿ ಅವಘಡ ಉಂಟಾದಾಗ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳ ಕುರಿತು ವಿದ್ಯಾರ್ಥಿಗಳಿಗೆ ಪ್ರಾತ್ಯಕ್ಷಿಕೆ ನೀಡಲಾಗಿತ್ತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT