ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉರಿ ಬಿಸಿಲಿಗೆ ಹೈರಾಣಾದ ಕೊಡಗಿನ ರೈತರು; ಬಿತ್ತನೆಗೂ ಅವಕಾಶ ಇಲ್ಲ, ಮೇವಿಗೂ ಆತಂಕ

ಕೃಷಿಕರ ಪರದಾಟ
Last Updated 2 ಏಪ್ರಿಲ್ 2023, 19:45 IST
ಅಕ್ಷರ ಗಾತ್ರ

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ದಿನೇ ದಿನೇ ಉಷ್ಣಾಂಶ ಏರುತ್ತಿದ್ದು, ಜನಸಾಮಾನ್ಯರು ಮಾತ್ರವಲ್ಲ ರೈತರು, ಬೆಳೆಗಾರರು ಹೈರಾಣಾಗಿದ್ದಾರೆ. ಮುಂಗಾರು ಪೂರ್ವ ಮಳೆ ಬಾರದೇ ಪೈರುಗಳು, ಹುಲ್ಲು ಒಣಗಿವೆ. ಜಾನುವಾರು ಹಸಿ ಮೇವಿಗಾಗಿ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ.

ಅಧಿಕಾರಿಗಳು ಯಾವುದಕ್ಕೂ ಯಾವುದೇ ಸಮಸ್ಯೆ ಇಲ್ಲ ಎಂಬ ಸಿದ್ಧ ಮಾದರಿಯ ಉತ್ತರವನ್ನು ಹೇಳಿದರೂ ಗ್ರಾಮಾಂತರ ಭಾಗಗಳತ್ತ ಹೋದರೆ ಸಮಸ್ಯೆಗಳು ಕಣ್ಣಿಗೆ ರಾಚುತ್ತಿವೆ.

ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯ ಉಪನಿರ್ದೇಶಕ ಡಾ.ಲಿಂಗರಾಜ ದೊಡ್ಡಮನಿ ಅವರು 90,544 ಟನ್‌ಗಳಷ್ಟು ಮೇವು ಲಭ್ಯವಿದ್ದು, ಮುಂದಿನ 25ರಿಂದ 26 ವಾರಗಳ ಕಾಲ ಸಾಕಾಗುತ್ತದೆ ಎಂದು ಹೇಳುತ್ತಾರೆ. ಆದರೆ, ಶನಿವಾರಸಂತೆ, ಕೊಡ್ಲಿಪೇಟೆ, ಕುಶಾಲನಗರ ಭಾಗದಲ್ಲಿ ಮೇವು ಕೊರತೆ ಕಾಡುತ್ತಿದ್ದು, ಈ ತಿಂಗಳೂ ಮಳೆ ಬಾರದಿದ್ದರೆ ಪರಿಸ್ಥಿತಿ ಗಂಭೀರವಾಗಲಿದೆ.

ಯಥೇಚ್ಛವಾಗಿ ಕೊಡಗು ಜಿಲ್ಲೆಯಲ್ಲಿ ಭತ್ತವನ್ನು ಬೆಳೆದರೂ ಇತ್ತೀಚಿನ ವರ್ಷಗಳಲ್ಲಿ ಅವುಗಳನ್ನು ಯಂತ್ರಗಳಿಂದ ಕಟಾವು ಮಾಡಿಸುವುದು ಹೆಚ್ಚುತ್ತಿದೆ. ಅದರಲ್ಲೂ ಕಳೆದ ವರ್ಷ ನಿರಂತರವಾಗಿ ಸುರಿದ ಮಳೆಯಿಂದ ಭತ್ತವನ್ನು ರಕ್ಷಿಸಲು ತರಾತುರಿಯಲ್ಲಿ ರೈತರು ಯಂತ್ರಗಳಿಂದ ಕಟಾವು ಮಾಡಿಸಿದರು. ಇದರಿಂದ ಹುಲ್ಲು ತುಂಡಾಗಿ ಅವುಗಳನ್ನು ಜಾನುವಾರುಗಳು ಮೇಯುತ್ತಿಲ್ಲ.

ಇನ್ನು ಕೆಲವರು ಕೇರಳದಲ್ಲಿ ಹೆಚ್ಚಿನ ಬೆಲೆ ಸಿಗುತ್ತದೆ ಎಂಬ ಕಾರಣಕ್ಕೆ ಭತ್ತದ ಹುಲ್ಲನ್ನು ಮಾರಾಟ ಮಾಡಿದ್ದಾರೆ. ಸಾಮಾನ್ಯವಾಗಿ ಕೊಡಗಿನಲ್ಲಿ ಮುಂಗಾರು ಪೂರ್ವದಲ್ಲೂ ಭರ್ಜರಿ ಮಳೆಯಾಗುತ್ತದೆ. ಆಗ ಮೇವಿನ ಬೆಳೆಗಳನ್ನು ಬೆಳೆದುಕೊಂಡು ಜಾನುವಾರುಗಳಿಗೆ ಮೇವು ಒದಗಿಸಬಹುದು ಎಂಬ ಲೆಕ್ಕಾಚಾರದಲ್ಲಿ ಹೆಚ್ಚಿನ ಬೆಲೆ ಸಿಕ್ಕಿದ್ದರಿಂದ ಮಾರಾಟ ಮಾಡಿದ್ದಾರೆ.

ಕಳೆದ ವರ್ಷವೂ ಮುಂಗಾರು ಪೂರ್ವದಲ್ಲಿ ಹೆಚ್ಚಿನ ಮಳೆ ಸುರಿದಿತ್ತು. ಆದರೆ, ಈಗ ಕನಿಷ್ಠ ಒಂದು ಮಳೆಯೂ ಬಿರುಸಾಗಿ ಸುರಿದಿಲ್ಲ. ಕೊಳವೆಬಾವಿಗಳು, ನದಿ, ಹೊಳೆಗಳಲ್ಲಿ ನೀರು ಕಡಿಮೆಯಾಗುತ್ತಿದೆ. ನೀರಿನ ಒರತೆಗಳು ಇಂಗಿ ಹೋಗುತ್ತಿವೆ. ರೈತರು, ಬೆಳೆಗಾರರು ಕೇವಲ ಮೇವಿಗಾಗಿ ಮಾತ್ರವಲ್ಲ ತಮ್ಮ ಮುಂದಿನ ಕೃಷಿಗಾಗಿಯೂ ಗಗನದತ್ತ ಆತಂಕದಿಂದ ನೋಡುವಂತಾಗಿದೆ. ಗೋಶಾಲೆಗಳಲ್ಲಿ ಪರಿಸ್ಥಿತಿ ಮತ್ತಷ್ಟು ಶೋಚನೀಯವಾಗಿದೆ.

ಹೆಚ್ಚಿದ ಬವಣೆ
ಶನಿವಾರಸಂತೆ:
ಯುಗಾದಿ ಹಬ್ಬದ ನಂತರ ಈ ಭಾಗದ ರೈತರು ವರ್ಷಧಾರೆಯ ನಿರೀಕ್ಷೆಯಲ್ಲಿ ಇದ್ದಾರೆ. ರೈತರ ಭೂಮಿಯಲ್ಲಿ ಹಸಿರು ಇಲ್ಲದೆ ಜಾನುವಾರುಗಳು ಹಸಿವನ್ನು ನೀಗಿಸಿಕೊಳ್ಳಲು ಪರದಾಡುತ್ತಿವೆ.

ಈ ಹಿಂದೆ ಶನಿವಾರಸಂತೆ- ಕೊಡ್ಲಿಪೇಟೆ ಭಾಗದ ಮಾದ್ರೆ ದೊಡ್ಡಬಿಳಹ, ಬೆಸೂರು, ಕ್ಯಾತೆ, ಆಲೂರು ಸಿದ್ದಾಪುರ, ಹಂಡ್ಲಿ, ಮೆಣಸ, ಗೌಡಳ್ಳಿ, ರೈತರು ತಮ್ಮ ಗದ್ದೆಗಳಲ್ಲಿ ನವೆಂಬರ್ ಹಾಗೂ ಡಿಸೆಂಬರ್ ತಿಂಗಳಲ್ಲಿ ಅತಿವೃಷ್ಟಿಯಿಂದ ಬೆಳೆದ ಭತ್ತದ ಹುಲ್ಲು ನಾಶವಾಗಿದೆ. ತರಾತುರಿಯಲ್ಲಿ ಯಂತ್ರದ ಮೂಲಕ ಭತ್ತ ಕೊಯ್ಲು ಮಾಡಿದ ವೇಳೆ ಹುಲ್ಲು ಸಂಪೂರ್ಣ ತುಂಡಾಗಿ ಗದ್ದೆಯಲ್ಲಿ ಬಾಕಿಯಾಗಿ, ಮಳೆ ನೀರಿನಲ್ಲಿ ನಾಶವಾಗಿದೆ. ಇದರಿಂದ ಜಾನುವಾರುಗಳು ಹುಲ್ಲನ್ನು ತಿನ್ನುತ್ತಿಲ್ಲ. ಈ ಬೇಸಿಗೆಯಲ್ಲಿ ಮೇವು ಇಲ್ಲದೆ ಕಾಲ ಕಳೆಯಬೇಕಾಗಿದೆ.

ಕೆಲವೆಡೆ ಹಸಿರು ಮೇವಿಗಾಗಿ ಈ ಭಾಗದ ಕೆಲವು ರೈತರು ಮೆಕ್ಕೆಜೋಳ ಬೆಳೆದು ಜಾನುವಾರುಗಳಿಗೆ ನೀಡುತ್ತಿದ್ದಾರೆ. ಹೊಲಗದ್ದೆಗಳಲ್ಲಿ ಹಸಿರು ಹುಲ್ಲು ಬರಲು ಕೆರೆ– ಕೊಳವೆ ಬಾವಿಯ ಮೂಲಕ ತುಂತುರು ನೀರು ಹಾಯಿಸುತ್ತಿದ್ದಾರೆ. ಇನ್ನೂ ಎಮ್ಮೆ ದನಗಳಿಗೆ ಬಿಸಿಲಿನ ತಾಪಕ್ಕೆ ಹಿಂದೆ ಕೆಸರು ಗದ್ದೆಯಲ್ಲಿ ಮೈಗೆ ಕೆಸರು ಅಂಟಿಸಿಕೊಳ್ಳುತ್ತಿದ್ದವು. ಈಗ ಕೆಸರು ಗದ್ದೆಗಳು ಇಲ್ಲದೆ ಎಮ್ಮೆಗಳು ಹುಡುಕಾಡುತ್ತಿವೆ. ಜಾನುವಾರುಗಳನ್ನು ಮೇಯಲು ಹೊರಗೆ ಬಿಟ್ಟರೆ ಬಿಸಿಲಿನ ಬೇಗೆಗೆ ನೆರಳಿನ ಮರದ ಆಶ್ರಯ ಪಡೆಯುತ್ತಿವೆ.

ಹಸಿರು ಹುಲ್ಲು ಇಲ್ಲದೆ ಜಾನುವಾರುಗಳ ಹಾಲಿನ ಇಳುವರಿಯು ಕಡಿಮೆಯಾಗಿದೆ. ರೈತರು ಜಾನುವಾರುಗಳು ಹಸಿವು ನೀಗಿಸಲು ಮನೆಗಳಲ್ಲಿ ಹೆಚ್ಚು ಫೀಡ್ ಕೊಡುತ್ತಿದ್ದಾರೆ. ಇನ್ನು ಜಾನುವಾರುಗಳಿಗೆ ಚರ್ಮ ಗಂಟು ಕಾಯಿಲೆ ಬರುತ್ತಿದ್ದು. ಸಾವಿರಾರು ಮೌಲ್ಯದ ಜಾನುವಾರುಗಳನ್ನು ಉಳಿಸಿಕೊಳ್ಳುವುದೇ ರೈತರಿಗೆ ಸವಾಲಾಗಿದೆ.

ಮೇವು ದುಬಾರಿ
ಕುಶಾಲನಗರ:
ಬೇಸಿಗೆ ಆರಂಭವಾಗು ತ್ತಿದ್ದಂತೆ ತಾಲ್ಲೂಕು ವ್ಯಾಪ್ತಿಯಲ್ಲಿ ಜಾನುವಾರುಗಳಿಗೆ ಮೇವಿನ ಕೊರತೆ ಎದುರಾಗಿದೆ.

ಯುಗಾದಿ ಹೊಸ ಸಂವತ್ಸರದ ಮೊದಲ ದಿನ. ಯುಗಾದಿಯ ದಿನ ರೈತರು ಹೊನ್ನಾರು ಉತ್ಸವದ ಹೆಸರಿನಲ್ಲಿ ಬೇಸಾಯದ ಕೆಲಸ ಆರಂಭಿಸುತ್ತಾರೆ. ಆದರೆ, ಈ ವರ್ಷ ವರುಣನ ಅವಕೃಪೆಗೆ ಒಳಗಾಗಿದ್ದು, ಇದುವರೆಗೂ ಮಳೆಯಾಗದ ಕಾರಣ ಬಿಸಿಲಿನ ಧಗೆಗೆ ಜಲಮೂಲ ಬತ್ತಿಹೋಗಿವೆ. ಗಿಡ–ಮರ ಒಣಗಿ ನಿಂತಿವೆ.

ಮುಂಗಾರು ಕೈಕೊಟ್ಟಿರುವ ಹಿನ್ನೆಲೆಯಲ್ಲಿ ತಾಲ್ಲೂಕಿನಲ್ಲಿ ಮೇವಿನ ಕೊರತೆಯಾಗಿದ್ದು, ಮೇವಿನ ಕೊರತೆ ಯಿಂದ ಜಾನುವಾರುಗಳ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು ಎಂಬ ಆತಂಕ ರೈತರನ್ನು ಕಾಡುತ್ತಿದೆ.

ವಸಂತ ಕಾಲದಲ್ಲಿ ಎಲ್ಲೆಡೆ ಹಸಿರ ಹೊದಿಕೆಯಿಂದ ಗಿಡ, ಮರಗಳು ನಳನಳಿಸುತ್ತಿವೆ. ಹಸಿರು ಸೀರೆ ತೊಟ್ಟ ಮದುವಣಗಿತ್ತಿಯಂತೆ ಪ್ರಕೃತಿ ಸಿಂಗಾರಗೊಂಡು ಕಂಗೊಳಿಸುತ್ತದೆ. ಎಲ್ಲೆಡೆ ಹಸಿರುಮಯವಾಗಬೇಕಾದ ಪರಿಸರದಲ್ಲಿ ಇದೀಗ ಮಳೆಯಿಲ್ಲದೆ ಬಿಸಿಲಿನ ಧಗೆಯಿಂದ ಹೊಲಗದ್ದೆಗಳು, ಗೋಮಾಳಗಳು ಒಣಭೂಮಿಯಾಗಿ ಮಾರ್ಪಟ್ಟಿದೆ.

ಭತ್ತ, ರಾಗಿ ಬೆಳೆದ ರೈತರು ಅಲ್ಪಸ್ವಲ್ಪ ಒಣಹುಲ್ಲನ್ನು ಶೇಖರಣೆ ಮಾಡಿಕೊಂಡಿದ್ದಾರೆ. ಸಾಮಾನ್ಯವಾಗಿ ಒಂದು ಟ್ರ್ಯಾಕ್ಟರ್‌ ಲೋಡ್‌ ಹುಲ್ಲಿಗೆ ₹ 10,000 ದಿಂದ ₹12,000 ಇರುತ್ತಿತ್ತು. ಮೇವಿನ ಅಭಾವದ ಸಂಭವದ ಹಿನ್ನೆಲೆಯಲ್ಲಿ ₹20,000ಕ್ಕೂ ಹೆಚ್ಚಿನ ಬೆಲೆಗೆ ಮಾರಾಟವಾಗುತ್ತಿದೆ.

ರೈತರು ತಾವು ಬೆಳೆ ಭತ್ತ, ರಾಗಿ ಕಟಾವು ಮಾಡಲು ಕಾರ್ಮಿಕರು ಸಿಗದೆ ಯಂತ್ರದಿಂದ ಕಟಾವು ಮಾಡಿಸಿದ್ದು. ಯಂತ್ರವು ಭೂಮಿಯಿಂದ ಮುಕ್ಕಾಲು ಅಡಿ ಹುಲ್ಲು ಬಿಟ್ಟು ಕಟಾವು ಮಾಡಿದ ಕಾರಣ ಹುಲ್ಲು ಸಿಗಲಿಲ್ಲ. ನಾವು ಬೆಳೆ ಬೆಳೆದರೂ ಹೊರಗಡೆಯಿಂದ ಹುಲ್ಲು ಖರೀದಿಸುವ ಸ್ಥಿತಿ ಬಂದಿದೆ ಎಂದು ರೈತ ಸುರೇಶ್ ಹೇಳುತ್ತಾರೆ. ಈ ಬಾರಿ ಹೊಲಗಳಲ್ಲಿ ರಾಗಿಯನ್ನು ಬಿಟ್ಟರೆ ಬೇರೆ ಯಾವ ಬೆಳೆಗಳನ್ನು ಬೆಳೆದಿಲ್ಲ. ಇದರಿಂದ ಒಣ ಮೇವಿನ ಅಭಾವ ಸೃಷ್ಟಿಯಾಗಿದೆ ಎನ್ನುತ್ತಾರೆ ರೈತರು.

ಮೇವಿನ ಕೊರತೆಯಿಂದಾಗಿ ಹಾಲು ಉತ್ಪಾದನೆ ತೀವ್ರವಾಗಿ ಇಳಿಮುಖ ಗೊಂಡಿದೆ. ಶೇ 50ರಷ್ಟು ಹಾಲು ಉತ್ಪಾದನೆ ಕುಸಿದಿದ್ದರಿಂದ ಹಾಲು ಉತ್ಪಾದಕರು ಸಂಕಷ್ಟಕ್ಕೀಡಾಗಿದ್ದಾರೆ. ಜೊತೆಗೆ ಸಮಯಕ್ಕೆ ಸರಿಯಾಗಿ ಮೇವು, ಪೌಷ್ಟಿಕ ಆಹಾರ ಸಿಗದ ಹಿನ್ನೆಲೆಯಲ್ಲಿ ಜಾನುವಾರುಗಳ ಆರೋಗ್ಯ ಮೇಲೆ ಪರಿಣಾಮ ಬೀರುತ್ತಿದೆ. ರೈತರು ಜಾನುವಾರುಗಳನ್ನು ಸಾಕಲು ಕಷ್ಟಕರವಾಗಿ ದಲ್ಲಾಳಿಗಳಿಗೆ ಮಾರಾಟ ಮಾಡುತ್ತಿದ್ದಾರೆ.

ತುರ್ತಾಗಿ ಕ್ರಮ ಕೈಗೊಳ್ಳಿ
ಈ ಬಿಸಿಲಿನ ಬೇಗೆಯಿಂದ ಜಾನುವಾರುಗಳಿಗೆ ಹಸಿರು ಹುಲ್ಲು ಇಲ್ಲದೆ ಪರದಾಡುತ್ತಿವೆ. ಸರ್ಕಾರ ನೀತಿ ಸಂಹಿತೆ ಜಾರಿ ಮುಂಚಿತವಾಗಿ ಜನವರಿ ತಿಂಗಳಿನಲ್ಲೇ ಪಶು ಸಂಗೋಪನೆ ಇಲಾಖೆಯಿಂದ ಮೆಕ್ಕೆಜೋಳ ಬೀಜವನ್ನು ರೈತರಿಗೆ ನೀಡಿ ಮಾರ್ಚ್‌ನಿಂದ ಮೇ ತಿಂಗಳವರೆಗೆ ಜಾನುವಾರುಗಳ ಹಸಿವು ನೀಗಿಸುವ ಕಾರ್ಯ ಮಾಡಬೇಕಾಗಿತ್ತು. ಈಗ ಕಾಲ ಮಿಂಚಿಹೋಗಿದೆ. ರೈತರ ಜಾನುವಾರುಗಳ ಉಳಿವಿಗಾಗಿ ತುರ್ತಾಗಿ ಸಂಬಂಧಪಟ್ಟ ಇಲಾಖೆಯ ಅಧಿಕಾರಿ ಕ್ರಮ ವಹಿಸಬೇಕು.
–ಜಿ.ಎಂ.ಹೂವಯ್ಯ, ಉಪಾಧ್ಯಕ್ಷ, ಸೋಮವಾರಪೇಟೆ ರೈತ ಸಂಘ

ಗೋಶಾಲೆಯಲ್ಲೂ ಪರದಾಟ
ನಮ್ಮ ಗೋಶಾಲೆಯಲ್ಲಿ ದೇಸಿ ಗೋವುಗಳ ಸಾಕಣೆ ಮಾಡಲಾಗಿದೆ. ಬೇಸಿಗೆ ಕಾಲಕ್ಕೆ ಹೆಚ್ಚಾಗಿ ಗೋವುಗಳು ಹಸಿರು ಮೇವನ್ನು ತಿನ್ನಲು ಬಯಸುತ್ತವೆ. ಮಳೆ ಬರದೆ ಹಸಿರು ಮೇವು ಕೊರತೆಯಿದೆ. ಕ್ಷೇತ್ರ ಗೋ ಶಾಲೆಯಲ್ಲಿ ಇರುವ ಗೋವುಗಳಿಗೆ ದಿನಕ್ಕೆ ಸುಮಾರು 15-20 ಕೆ.ಜಿ ಯಷ್ಟು ಮೇವಿನ ಅಗತ್ಯ ಇದೆ. ಅಷ್ಟು ಮೇವು ನೀಡಲು ಸಾಧ್ಯವಾಗುತ್ತಿಲ್ಲ. ಸರ್ಕಾರದ ಗೋಶಾಲೆ ಅನುದಾನ ನೀಡುವುದರ ಜೊತೆಗೆ ನಮ್ಮಂತ ಗೋಶಾಲೆ ಬಗ್ಗೆ ಗಮನ ಹರಿಸಬೇಕಾಗಿದೆ.
–ಮಹಾಂತ ಶಿವಲಿಂಗ ಸ್ವಾಮೀಜಿ, ಶ್ರೀ ಬಿಲ್ವಾ ಗೋಶಾಲೆ, ತಪೋಕ್ಷೇತ್ರ ಮನೆಹಳ್ಳಿ ಮಠಾಧೀಶರು

ಜಿಲ್ಲಾಡಳಿತ ಗಮನ ಕೊಡಲಿ
ನಮ್ಮ ಮನೆಯಲ್ಲಿ ಇರುವ ಗೋವುಗಳನ್ನು ಹೇಮಾವತಿ ಹಿನ್ನೀರಿನ ಪ್ರದೇಶದಲ್ಲಿ ಮೇಯಲು ಬಿಡುತ್ತಿದ್ದು. ಇಲ್ಲಿ ಹಸಿರು ಹುಲ್ಲು ಇಲ್ಲದೆ ಹೊಟ್ಟೆ ಹಸಿವಿನಿಂದ ನರಳುತ್ತಿವೆ. ಈ ಮೂಕ ಪ್ರಾಣಿ ಕಷ್ಟವನ್ನು ಮೂಕಪ್ರೇಕ್ಷಕರಾಗಿ ನಾವು ನೋಡುವಂತಾಗಿದೆ. ಮಳೆ ದೂರವಾಗಿರುವುದರಿಂದ ವರ್ಷದ ಪ್ರಥಮ ಮಳೆ ಬಂದರೆ ನಮ್ಮ ಗೋವುಗಳನ್ನು ಉಳಿಸಿಕೊಳ್ಳಲು ಸಹಕಾರಿಯಾಗುತ್ತದೆ. ಜಿಲ್ಲಾಡಳಿತ ಹಾಗೂ ಸಂಬಂಧಪಟ್ಟ ಇಲಾಖೆಯವರು ಕೊರತೆಯಾಗಿರುವ ಮೇವು ನೀಡಿ ಜಾನುವಾರು ರಕ್ಷಣೆ ಮಾಡಬೇಕಿದೆ.
–ಕೆ.ಎಸ್. ಪರಮೇಶ್, ಕ್ಯಾತೆ ಗ್ರಾಮ, ಕೊಡ್ಲಿಪೇಟೆ

ಮಳೆ ಇಲ್ಲದೇ ಮೆಕ್ಕೆಜೋಳವೂ ಇಲ್ಲ
ಈ ಭಾಗದಲ್ಲಿ ಈ ಸಮಯಕ್ಕೆ ಪ್ರತಿ ವರ್ಷ ಮಳೆಯಾಗುತ್ತಿತ್ತು. ಆದರೆ, ಮಳೆಯಾಗದೆ ಜಾನುವಾರುಗಳಿಗೆ ಹಸಿರು ಕಡಿಮೆಯಾಗಿ, ದೇಹ ಕೃಶವಾಗಿದೆ, ಹಸಿರಿಗಾಗಿ ಮೆಕ್ಕೆಜೋಳ ಬಿತ್ತನೆ ಮಾಡಿದ್ದೇವೆ. ಮಳೆ ಇಲ್ಲದೆ ಅದು ಕೂಡ ಉತ್ತಮವಾಗಿ ಬೆಳವಣಿಗೆಯಾಗಿಲ್ಲ.
–ಬಿ.ಎಸ್. ಗಿರೀಶ್, ದೊಡ್ಡಬಿಳಹ ಗ್ರಾಮ, ಶನಿವಾರಸಂತೆ

ಹುಲ್ಲಿನ ಕೊರತೆ
ನಮ್ಮ ಗದ್ದೆಯಲ್ಲಿ ಪ್ರತಿ ವರ್ಷ ಭತ್ತ ಬೇಸಾಯ ಮಾಡುತ್ತಿದ್ದೇನೆ. ಪ್ರತಿ ವರ್ಷ ಭತ್ತ ಮತ್ತು ಹುಲ್ಲಿನಿಂದ ಉತ್ತಮ ಆದಾಯ ಸಿಗುತ್ತಿತ್ತು. ಹಿಂದಿನ ವರ್ಷ ನವೆಂಬರ್- ಡಿಸೆಂಬರ್‌ನಲ್ಲಿ ಭತ್ತ ಫಸಲು ತೆಗೆಯಲು ಹರಸಾಹಸಪಟ್ಟು ಭತ್ತವನ್ನು ಯಂತ್ರದ ಮೂಲಕ ಕೊಯ್ಲು ಮಾಡಿದೆ. ಆದರೆ, ಭತ್ತದ ಹುಲ್ಲು ವ್ಯಾಪಾರವಾಗದೆ ಗದ್ದೆಯಲ್ಲೇ ಬಿದ್ದಿದೆ. ಈಗ ಕಡಿಮೆ ಬೆಲೆಗೆ ಶುಂಠಿ ಬೇಸಾಯಕ್ಕೆ ರೈತರು ಕೇಳುತ್ತಿದ್ದಾರೆ.
–ದೊಡ್ಡಯ್ಯ, ಹಿರಿಕರ ಗ್ರಾಮ

ತುರ್ತಾಗಿ ಮಳೆ ಬರಬೇಕಿದೆ
ನಮ್ಮ ಮನೆಯಲ್ಲಿ ಎಮ್ಮೆ–ದನ ಸಾಕಣೆ ಮಾಡುತ್ತಿದ್ದೇವೆ. ಈ ವರ್ಷದ ಅತಿವೃಷ್ಟಿ ಮಳೆಯಿಂದ ಬೇಸಿಗೆಗೆ ಸಾಕಷ್ಟು ಒಣಮೇವು ಸಂಗ್ರಹಣೆ ಮಾಡಲು ಸಾಧ್ಯವಾಗಲಿಲ್ಲ. ಗದ್ದೆಗಳು ಒಣಗಿವೆ. ಎಮ್ಮೆ ದನಗಳು ಬಿಸಿಲಿನ ತಾಪಕ್ಕೆ ಕೆರೆ ನೀರಿಗೆ ಇಳಿದು ದೇಹ ತಂಪಾಗಿಸುತ್ತಿವೆ. ಮಳೆ ಬಂದರೆ ಹಸಿರು ಹುಲ್ಲು ಚಿಗುರಿ ಎಮ್ಮೆ ದನಗಳಿಗೆ ಮೇವು ಸಿಗುತ್ತದೆ.
–ಸಚಿನ್ ಕುಮಾರ್, ಬಾಗೇರಿ ಗ್ರಾಮ, ಶನಿವಾರಸಂತೆ.

ಬೇರೆಯವರಿಂದ ಹುಲ್ಲು ತರುತ್ತಿದ್ದೇವೆ
ನಮ್ಮ ಹಸುವಿಗೆ ಚರ್ಮಗಂಟು ರೋಗ ಬಂದಿದೆ. ಪಶು ಇಲಾಖೆ ಚಿಕಿತ್ಸೆ ನೀಡುತ್ತಿದೆ. ಭತ್ತದ ಒಣ ಹುಲ್ಲು ತಿನ್ನದೆ, ಹಸಿರು ಹುಲ್ಲು ಮಾತ್ರ ತಿನ್ನುತ್ತಿದ್ದು. ಬೇರೆಯವರ ಮನೆಯ ಅಡಿಕೆ ತೋಟದಲ್ಲಿ ತುಂತುರು ನೀರು ಹಾಯಿಸಿರುವುದರಿಂದ ಅಲ್ಲಿನ ಹಸಿರು ಹುಲ್ಲನ್ನು ತಂದು ಹಸುವಿಗೆ ನೀಡುತ್ತಿದ್ದೇವೆ.
–ಬಿ.ಎಲ್.ವಿಶ್ವನಾಥ, ಬೆಂಬಳೂರು ಗ್ರಾಮ ಕೊಡ್ಲಿಪೇಟೆ.

_________________________________

ಪ್ರಜಾವಾಣಿ ತಂಡ: ಕೆ.ಎಸ್.ಗಿರೀಶ್‌, ರಘು ಹೆಬ್ಬಾಲೆ, ಶರಣ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT