ಸೋಮವಾರಪೇಟೆ: ತಾಲ್ಲೂಕಿನ ಗಡಿ ಭಾಗದ ಗರ್ವಾಲೆ ಗ್ರಾಮದ ಪ್ರಗತಿಪರ ಕೃಷಿಕ ನಾಪಂಡ ಪೂಣಚ್ಚ ಅವರು ‘ಆದಿ ಕರಿಮೆಣಸು’ ತಳಿಯನ್ನು ಸಂರಕ್ಷಿಸುವುದರೊಂದಿಗೆ, ಅದರ ಬೆಳೆ ವಿಸ್ತರಣೆಗೆ ಮುಂದಾಗಿದ್ದಾರೆ.
ಈ ಮೆಣಸು ಔಷಧೀಯ ಗುಣ, ವಿಶಿಷ್ಟ ಸುವಾಸನೆ, ರೋಗ ನಿರೋಧಕ ಶಕ್ತಿಯಿಂದಾಗಿ ಕರಿವಜ್ರ ಎಂದೇ ಹೆಸರಾಗಿದೆ. ಆದರೆ, ಇದು ನಿರ್ಲಕ್ಷ್ಯಕ್ಕೆ ಒಳಗಾಗಿತ್ತು. ಇಂತಹ ತಳಿಯನ್ನು ಬೆಳೆಗಾರರಿಗೆ ದೊಡ್ಡ ಮಟ್ಟದಲ್ಲಿ ಪರಿಚಯಿಸುತ್ತಿರುವ ಹೆಗ್ಗಳಿಕೆ ಇವರಿಗೆ ಸಲ್ಲುತ್ತದೆ.
ಹೆಚ್ಚು ಮಳೆ ಬೀಳುವ, ಸದಾ ಶೀತದಿಂದ ಕೂಡಿರುವ ಗರ್ವಾಲೆ, ಬ್ರಹ್ಮಗಿರಿ ಬೆಟ್ಟಶ್ರೇಣಿ, ಶಾಂತಳ್ಳಿ ಭಾಗಗಳಲ್ಲಿ ಸಾಮಾನ್ಯ ಕರಿಮೆಣಸಿನ ಬೆಳೆ ಬೆಳೆಯುವುದು ಕಷ್ಟ. ಆದರೆ, ಇವರು ಹಲವು ವರ್ಷಗಳ ಪರಿಶ್ರಮದಿಂದ ಆದಿ ಕರಿಮೆಣಸು ತಳಿ ಬೆಳೆಯುತ್ತಿದ್ದಾರೆ.
‘ನನ್ನ ಸಂಶೋಧನೆಯ ಆದಿ ಕರಿಮೆಣಸು ತಳಿ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸ್ಪೈಸಸ್ ರೀಸರ್ಚ್ ವತಿಯಿಂದ ಪೇಟೆಂಟ್ ಪಡೆದುಕೊಂಡಿದೆ. ಇದಕ್ಕೆ ಕೇವಲ ಹೆಚ್ಚು ಮಳೆ ಬೀಳುವ ಪ್ರದೇಶದಲ್ಲಿ ಮಾತ್ರ ಬೆಳೆಯುವ ವಿಶೇಷ ತಳಿ ಎಂದು ಪ್ರಮಾಣೀಕರಣವನ್ನೂ ನೀಡಲಾಗಿದೆ’ ಎಂದು ಅವರು ಹೇಳುತ್ತಾರೆ.
ಸಾಮಾನ್ಯ ಕರಿಮೆಣಸು 4-5 ಮಿ.ಮೀ. ಗಾತ್ರವಿದ್ದರೆ, ಆದಿ ಕರಿಮೆಣಸು ಸುಮಾರು 6-7 ಮಿ.ಮೀ. ನಷ್ಟು ದೊಡ್ಡದಿದ್ದು, ತೂಕವೂ ಹೆಚ್ಚು ಇರುತ್ತದೆ. ಸಾಮಾನ್ಯ ಕರಿಮೆಣಸು ಒಣಗಿದ ನಂತರ ಶೇ 33ರಿಂದ 38ರಷ್ಟು ಪ್ರಮಾಣದಲ್ಲಿ ಸಿಕ್ಕಿದರೆ, ಆದಿ ಕರಿಮೆಣಸು ಶೇ 38ರಿಂದ 42ರಷ್ಟು ಸಿಗುತ್ತದೆ.
ಇದು ನವೆಂಬರ್ ತಿಂಗಳಿನಿಂದ ಫೆಬ್ರುವರಿ ತನಕ ಹೂವು ಬಿಡುತ್ತದೆ. ಹಸಿರು, ಹಳದಿ ಹಾಗೂ ಕೆಂಪು ಬಣ್ಣದಲ್ಲಿ ಇರುವುದು ಈ ಕರಿಮೆಣಸಿನ ಮತ್ತೊಂದು ವಿಶೇಷ. ಕಾಯಿ ಕಟ್ಟಲು ನೀರು ಬೇಕಾಗಿಲ್ಲ. ರೋಗದ ಹಾವಳಿಯೂ ಕಡಿಮೆ ಎನ್ನುವುದನ್ನು ಇವರ ಅಭಿಪ್ರಾಯ.
ಸುಸ್ಥಿರ ಮತ್ತು ನೈಸರ್ಗಿಕ ಕೃಷಿ ಪೂಣಚ್ಚ ಅವರ ಆದ್ಯತೆಯಾಗಿದೆ. ಹೆಚ್ಚು ಮಳೆ ಬೀಳುವ, ಬೆಟ್ಟ ಗುಡ್ಡಗಳಿಂದ ಕೂಡಿರುವ ಪ್ರದೇಶದ ರೈತರೂ ಕಡಿಮೆ ವೆಚ್ಚದಲ್ಲಿ ವಾಣಿಜ್ಯ ಬೆಳೆ ಬೆಳೆಯಬೇಕು ಎನ್ನುವ ಆಕಾಂಕ್ಷೆಯೂ ಇವರಲ್ಲಿದೆ. ‘ಆದಿ ಪೆಪ್ಪರ್ ಡೆಮೋ ಫಾರ್ಮ್ ಆಂಡ್ ರೀಸರ್ಚ್ ಸೆಂಟರ್’ ಮೂಲಕ ಬೆಳೆ ವಿಸ್ತರಿಸಲು ಶ್ರಮಿಸುತ್ತಿದ್ದಾರೆ. ಈಗಾಗಲೇ ಮೈಸೂರು ಸೇರಿದಂತೆ ಹಲವೆಡೆಗಳಿಂದ ಸಂಶೋಧನಾ ವಿದ್ಯಾರ್ಥಿಗಳು ಹಾಗೂ ಪ್ರಗತಿಪರ ಕೃಷಿಕರು ಇಲ್ಲಿ ಬಂದು ಅಧ್ಯಯನ ಮಾಡುತ್ತಿದ್ದಾರೆ. ವರ್ಷದಿಂದ ವರ್ಷಕ್ಕೆ ಕಾರ್ಮಿಕರ ಸಮಸ್ಯೆ ಹೆಚ್ಚಾಗುತ್ತಿದ್ದು, ಕಡಿಮೆ ಕಾರ್ಮಿಕರು ಅಥವಾ ಬೆಳೆಗಾರರೇ ತೋಟವನ್ನು ನಿರ್ವಹಿಸುವಂತೆ ಇರಬೇಕು ಎನ್ನುವುದು ಇವರ ಚಿಂತನೆಯಾಗಿದೆ.
ಕೇಂದ್ರ ಸಸ್ಯ ತಳಿಗಳ ಸಂರಕ್ಷಣೆ ಮತ್ತು ರೈತ ಹಕ್ಕು ಕಾಯ್ದೆ ಪ್ರಾಧಿಕಾರದ ‘ತಳಿ ಸಂರಕ್ಷಕ ಪ್ರಶಸ್ತಿ’ಗೆ ಇವರು ಭಾಜನರಾಗಿದ್ದಾರೆ. ವಿಶೇಷವಾಗಿ ಅತ್ಯಂತ ಹೆಚ್ಚು ಮಳೆ ಬೀಳುವ ಪ್ರದೇಶಗಳಲ್ಲಿ ಬೆಳೆಯುವ ಆದಿ ಕರಿಮೆಣಸು ತಳಿಯ ರಕ್ಷಣೆಗಾಗಿ ಈ ಗೌರವ ಪಡೆದಿರುವುದು ವಿಶೇಷ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.