ಭಾನುವಾರ, ಜನವರಿ 26, 2020
30 °C
‘ಪ್ರಜಾವಾಣಿ’ ಕಚೇರಿಯಲ್ಲಿ ನೇರ–ಫೋನ್‌–ಇನ್‌ ಕಾರ್ಯಕ್ರಮ: ಓದುವ ಕೋಣೆ ಸ್ಥಾಪನೆ, ವಿಶೇಷ ತರಗತಿ; ಧೃತಿಗೆಡದೆ ಪರೀಕ್ಷೆ ಬರೆಯಿರಿ: ಡಿಡಿಪಿಐ ಮಚ್ಚಾಡೋ

ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶ ಸುಧಾರಣೆಗೆ ಒತ್ತು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಡಿಕೇರಿ: ಜಿಲ್ಲೆಯಲ್ಲಿ ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ನೀಡುವ ಜೊತೆಗೆ ಫಲಿತಾಂಶ ಸುಧಾರಣೆಗೂ ಶಿಕ್ಷಕರು ಹಾಗೂ ಶಿಕ್ಷಣ ಇಲಾಖೆ ಅಧಿಕಾರಿಗಳು ಶ್ರಮಿಸುತ್ತಿದ್ದಾರೆ. ಸ್ಥಾನದ ಬಗ್ಗೆ ನಾವು ಅಷ್ಟಾಗಿ ತಲೆಕೆಡಿಸಿಕೊಂಡಿಲ್ಲ. ಅನುತ್ತೀರ್ಣ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಮಾಡಿ, ಉತ್ತೀರ್ಣರ ಸಂಖ್ಯೆ ಹೆಚ್ಚಿಸುವುದಕ್ಕೆ ಮೊದಲ ಆದ್ಯತೆ ನೀಡುತ್ತಿದ್ದೇವೆ. ಅದಕ್ಕಾಗಿಯೇ, ಓದುವ ಕೋಣೆ, ವಿಶೇಷ ತರಗತಿ, ಕಾರ್ಯಾಗಾರ, ಪೂರ್ವಭಾವಿ ಪರೀಕ್ಷೆ, ತೆರೆದ ಪುಸ್ತಕ ಪರೀಕ್ಷೆ ನಡೆಸಲಾಗುತ್ತಿದೆ ಎಂದು ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಪೆರಿಗ್ರಿನ್‌ ಎಸ್‌. ಮಚ್ಚಾಡೋ ಹೇಳಿದರು.

ಮಡಿಕೇರಿಯ ‘ಪ್ರಜಾವಾಣಿ’ ಕಚೇರಿಯಲ್ಲಿ ಸೋಮವಾರ ನಡೆದ ‘ನೇರ–ಫೋನ್‌–ಇನ್‌ ಕಾರ್ಯಕ್ರಮ’ದಲ್ಲಿ ಓದುಗರ ಹಾಗೂ ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಅವರು ಉತ್ತರಿಸಿದರು.

‘ಕಳೆದ ಸಾಲಿನಲ್ಲಿ ಯಶಸ್ವಿ ಎಂಬ ಕೈಪಿಡಿಯನ್ನು ವಿದ್ಯಾರ್ಥಿಗಳಿಗೆ ವಿತರಣೆ ಮಾಡಿದ್ದೆವು. ಅದು ಫಲಿತಾಂಶದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿತ್ತು. ಆದರೆ, ಈ ವರ್ಷ ಪ್ರಶ್ನಾವಳಿ ಬ್ಯಾಂಕ್‌ ತಯಾರಿಸಲಾಗುತ್ತಿದೆ. ಅದು ಮುದ್ರಣ ಹಂತದಲ್ಲಿದ್ದು ಎರಡು ದಿನಗಳಲ್ಲಿ ಆಯಾ ಶಾಲೆಯ ಸೇರಲಿವೆ. ಅದನ್ನು ಬಳಸಿಕೊಂಡು ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆಗೆ ಶಿಕ್ಷಕರು ಕ್ರಮ ವಹಿಸಬೇಕೆಂದು ಸೂಚಿಸಲಾಗಿದೆ’ ಎಂದು ತಿಳಿಸಿದರು.

ಬರೀ ಎಸ್ಸೆಸ್ಸೆಲ್ಸಿ ಪರೀಕ್ಷೆಯ ಕುರಿತು ಅವರು ಮಾತನಾಡದೆ ಶಾಲೆಗಳ ಸ್ಥಿತಿಗತಿಯ ಬಗ್ಗೆಯೂ ಬೆಳಕು ಚೆಲ್ಲಿದರು. ನಿಗದಿತ ಸಮಯಕ್ಕೂ ಮೊದಲೇ ಕರೆಗಳು ಬರಲು ಆರಂಭಿಸಿದವು. ವಿಷಯವಾರು ಶಿಕ್ಷಕರ ಜೊತೆಗೆ ಬಂದಿದ್ದ ಮಚ್ಚಾಡೋ, ತಾಳ್ಮೆಯಿಂದಲೇ ಓದುಗರ ಎಲ್ಲ ಪ್ರಶ್ನೆಗಳಿಗೂ ಉತ್ತರಿಸಿ ಟಿಪ್ಪಣಿ ಮಾಡಿಕೊಂಡರು. ಕೆಲವು ಪ್ರಶ್ನೆ ಹಾಗೂ ಸಂದೇಹಗಳನ್ನು ಫೋನ್‌ನಲ್ಲಿ ಬಗೆಹರಿಸಿದರೆ, ಕೆಲವು ದೂರಗಳಿಗೆ ಸ್ಥಳಕ್ಕೆ ಬಂದು ಪರಿಶೀಲಿಸಿ ಪರಿಹಾರ ನೀಡುವ ಭರವಸೆಯಿತ್ತರು.

ಪ್ರಶ್ನೆ: ಜಿ.ಎಂ.ಪಿ ಶಾಲೆಯ ಸಭಾಂಗಣದ ಚಾವಣಿ ಹಾರಿಹೋಗಿತ್ತು. ಅದನ್ನು ತೆರವು ಮಾಡಲಾಗಿದೆ. ಆದರೆ, ಇನ್ನೂ ಮರು ನಿರ್ಮಾಣ ಮಾಡಿಲ್ಲ. 

– ಸುನಿಲ್‌, ಜಿ.ಎಂ.ಪಿ ಶಾಲೆ ಹಳೇ ವಿದ್ಯಾರ್ಥಿ, ಸುಂಟಿಕೊಪ್ಪ

ಉತ್ತರ: ಡಿಡಿಪಿಐ ಪೆರಿಗ್ರಿನ್‌ ಎಸ್‌. ಮಚ್ಚಾಡೋ ಉತ್ತರ: ಶಿಕ್ಷಣ ಇಲಾಖೆಯಿಂದ ಸಭಾಂಗಣ ನಿರ್ಮಾಣಕ್ಕೆ ಅವಕಾಶ ಇಲ್ಲ. ಆ ಶಾಲೆಗೆ ಎರಡು ಹೊಸ ಕೊಠಡಿ ಮಂಜೂರಾಗಿವೆ. ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.

* ಪ್ರಶ್ನೆ: ಸುಂಟಿಕೊಪ್ಪದ ಪ್ರಾಥಮಿಕ ಶಾಲೆಯು ಶತಮಾನೋತ್ಸವದ ಸಂಭ್ರಮದಲ್ಲಿದ್ದರೂ ಯಾವುದೇ ಕಾರ್ಯಕ್ರಮ ನಡೆದಿಲ್ಲ?

– ಬಿ.ಕೆ.ಮೋಹನ್‌, ಮಾಜಿ ಉಪಾಧ್ಯಕ್ಷ, ಗ್ರಾಮ ಪಂಚಾಯಿತಿ, ಸುಂಟಿಕೊಪ್ಪ

ಉತ್ತರ: ಶಾಲೆಯ ಎಸ್‌.ಡಿ.ಎಂ.ಸಿ ಸದಸ್ಯರು ಹಾಗೂ ಬಿಇಒ ಜೊತೆಗೆ ಚರ್ಚಿಸುತ್ತೇನೆ. ನೂತನ ಸಮಿತಿ ರಚಿಸಿ ಶತಮಾನೋತ್ಸವ ಆಚರಣೆ ಮಾಡೋಣ.

* ಪ್ರಶ್ನೆ: ನನ್ನ ವಾರ್ಡ್‌ನಲ್ಲಿ ಜಿ.ಎಂ.ಪಿ ಶಾಲೆಯಿದ್ದು ಶಾಲೆಯ ಸಭಾಂಗಣ ಸಂಪೂರ್ಣ ಹಾಳಾಗಿದೆ. ನೂರಾರು ವರ್ಷಗಳ ಇತಿಹಾಸವಿರುವ ಶಾಲೆಯಲ್ಲಿ ಓದಿದವರು ಉನ್ನತ ಅಧಿಕಾರಿಗಳೂ ಆಗಿದ್ದಾರೆ. ಆದರೆ, ಸಭಾಂಗಣದ ಸ್ಥಿತಿ ಕೆಟ್ಟಿದೆ.

- ಜಯವರ್ದನ್, ಪಟ್ಟಣ ಪಂಚಾಯಿತಿ ಸದಸ್ಯ, ಕುಶಾಲನಗರ

ಉತ್ತರ: ಶೀಟ್‌ ಹಾಗೂ ಫ್ಲೋರಿಂಗ್ ಹಾಕಿಸಲು ಕ್ರಮ ಕೈಗೊಳ್ಳುತ್ತೇನೆ. ಅದಕ್ಕೆ ಸಂಬಂಧಿಸಿದಂತೆ ಪ್ರಸ್ತಾವನೆ ಸಲ್ಲಿಸಿದರೆ ಕೆಲವೇ ದಿನಗಳಲ್ಲಿ ಕಾರ್ಯ ಪ್ರವೃತ್ತರಾಗುತ್ತೇನೆ.

* ಪ್ರಶ್ನೆ: ತಾಲ್ಲೂಕಿನ ‘ಕ್ಲೋಸ್‌ ಬರ್ನ್‌’ ಶಾಲೆಗೆ ₹ 21 ಲಕ್ಷ ಅನುದಾನ ಬಿಡುಗಡೆಗೊಂಡು ಕಾಮಗಾರಿ ಆರಂಭಿಸಲಾಗಿತ್ತು. ಆದರೆ, ಗುತ್ತಿಗೆದಾರರು ಕಾಮಗಾರಿ ಸ್ಥಗಿತಗೊಳಿಸಿದ್ದಾರೆ. ಇದೀಗ ಗುತ್ತಿಗೆದಾರರು ಸಂಪರ್ಕಕ್ಕೆ ಸಿಗುತ್ತಿಲ್ಲ. ಕಾಲಮಿತಿಯಲ್ಲಿ ಕೆಲಸ ಪೂರ್ಣಗೊಳ್ಳದಿದ್ದರೆ ನಮ್ಮ ಹೋರಾಟ ಮುಂದುವರಿಸುತ್ತೇವೆ.

– ಕಿಶೋರ್‌ ರೈ ಕತ್ತಲೆಕಾಡು

ಉತ್ತರ: ಪಂಚಾಯತ್‌ರಾಜ್‌ ಇಲಾಖೆ ಬಳಿ ಅನುದಾನವಿದೆ. ಅವರೇ ಟೆಂಡರ್‌ ಕರೆದಿದ್ದಾರೆ. ಶಿಕ್ಷಣ ಸಚಿವರು ಬಂದಾಗಲೂ ಕಾಲಮಿತಿಯಲ್ಲಿ ಕಾಮಗಾರಿ ಪೂರ್ಣಗೊಳಿಸುವ ಭರವಸೆ ನೀಡಿದ್ದರು. ಈ ಬಗ್ಗೆ ಗಮನ ಹರಿಸುತ್ತೇನೆ.

* ಪ್ರಶ್ನೆ: ನಮ್ಮ ಶಾಲೆಯಲ್ಲಿ ಆಧಾರ್‌ ಇಲ್ಲದೆ ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ. ಶಾಲೆಗಳಿಗೆ ಕಿಟ್‌ ಕಳುಹಿಸಿದರೆ ಅನುಕೂಲ...

– ಬೇಗೂರು ಶಾಲೆ ಎಸ್‌ಡಿಎಂಸಿ ಅಧ್ಯಕ್ಷೆ, ವಿರಾಜಪೇಟೆ ತಾಲ್ಲೂಕು

ಉತ್ತರ: ಜಿಲ್ಲಾಧಿಕಾರಿ ಜತೆಗೆ ಚರ್ಚಿಸಿರುವೆ. ಬಾಳೆಲೆಯಲ್ಲಿ ಆಧಾರ್‌ ನೋಂದಣಿ ಕಿಟ್‌ ಇದೆ. ಅದು ಪೂರ್ಣಗೊಂಡ ಬಳಿಕ ಪೊನ್ನಂಪೇಟೆಗೆ ಆಧಾರ್‌ ಕಿಟ್‌ ಬರಲಿದೆ.

* ಪ್ರಶ್ನೆ: ಗುಹ್ಯ ಗ್ರಾಮದ ಶಾಲೆಯ ಕಟ್ಟಡ ಸಂಪೂರ್ಣ ಶಿಥಿಲವಾಗಿದೆ. ವಿದ್ಯಾರ್ಥಿಗಳು ಆತಂಕದಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ. ಕೂಲಿ ಕೆಲಸಗಾರ ಮಕ್ಕಳೇ ಹೆಚ್ಚಿರುವ ಕಾರಣ, ಸರ್ಕಾರಿ ಶಾಲೆಯನ್ನೇ ಆಶ್ರಯಿಸಿದ್ದೇವೆ. ಹೊಸ ಕಟ್ಟಡ ನಿರ್ಮಾಣ ಮಾಡಿದರೆ ಅನುಕೂಲ...

– ದಶರಥ, ಗುಹ್ಯ – ಸಿದ್ದಾಪುರ

ಉತ್ತರ: ಮಕ್ಕಳ ಸುರಕ್ಷತೆಗೆ ಆದ್ಯತೆ ನೀಡುತ್ತೇವೆ. ಅಪಾಯದ ಕೊಠಡಿಯನ್ನು ಬಂದ್ ಮಾಡಲು ಶಿಕ್ಷಕರಿಗೆ ಸೂಚಿಸಲಾಗಿದೆ. ನನಗೂ ಮಾಹಿತಿ ಸಿಕ್ಕಿದೆ. ಜಿಲ್ಲಾಧಿಕಾರಿ ಅನುದಾನದ ದುರಸ್ತಿ ಪಟ್ಟಿಯಲ್ಲಿ ಈ ಶಾಲೆಯೂ ಸೇರಿದ್ದು ಸುಸಜ್ಜಿತ ಕೊಠಡಿ ನಿರ್ಮಿಸುತ್ತೇವೆ.

* ಪ್ರಶ್ನೆ: ವಿರಾಜಪೇಟೆ ತಾಲ್ಲೂಕಿನ ಕಡಂಗದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನನ್ನ ಮಕ್ಕಳು ಶಿಕ್ಷಣ ಪಡೆಯುತ್ತಿದ್ದು, ನಾಲ್ಕನೇ ತರಗತಿ ಗಣಿತ ಹಾಗೂ ಪರಿಸರ ವಿಜ್ಞಾನ ವಿಷಯವನ್ನು ಬೋಧಿಸುತ್ತಿಲ್ಲ. ದೈಹಿಕ ಶಿಕ್ಷಣ ಶಿಕ್ಷಕರು ಬೋಧನೆ ಮಾಡುವುದಾಗಿ ಒಪ್ಪಿಕೊಂಡಿದ್ದರೂ ಮರೆತಿದ್ದಾರೆ. ದೈಹಿಕ ಹಲ್ಲೆ ನಡೆಸಲಾಗುತ್ತಿದೆ.

– ಹೆಸರು ಬೇಡ, ಊರು ಬೇಡ

ಉತ್ತರ: ಮಕ್ಕಳಿಗೆ ದೈಹಿಕ ಶಿಕ್ಷೆ ನೀಡುವಂತಿಲ್ಲ. ತಪ್ಪಿತಸ್ಥ ಶಿಕ್ಷಕರ ಮೇಲೆ ಕ್ರಮ ಕೈಗೊಳ್ಳಲಾಗುವುದು. ಬೋಧನೆ ಮಾಡದ ಶಿಕ್ಷಕರ ಮೇಲೆ ಕ್ರಮವೂ ಆಗಲಿದೆ. ಆತಂಕ ಬೇಡ. ಶೀಘ್ರದಲ್ಲಿ ಶಾಲೆಗೆ ಭೇಟಿ ನೀಡುವೆ. (ಫೋನ್‌ ಇನ್‌ ಕಾರ್ಯಕ್ರಮವಾದ ಬಳಿಕ ಇಲಾಖೆ ಅಧಿಕಾರಿಗಳ ಜತೆಗೆ ಪೋನ್‌ನಲ್ಲಿ ಡಿಡಿಪಿಐ ಚರ್ಚಿಸಿದರು. ಕ್ರಮಕ್ಕೂ ಸೂಚಿಸಿದರು)

* ಪ್ರಶ್ನೆ: ಜಿಲ್ಲೆಯ ಒಟ್ಟಾರೆ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಖಾಸಗಿ ಶಾಲೆಯಲ್ಲಿಯೇ ಫಲಿತಾಂಶ ಕುಸಿಯುತ್ತಿದೆ. ಇದಕ್ಕೆ ಕಾರಣವೇನು? ಸುಧಾರಣೆಗೆ ಯಾವ ರೀತಿಯ ಕ್ರಮ ಕೈಗೊಂಡಿದೆ?

– ಜಯಂತಿ, ಮಡಿಕೇರಿ

ಉತ್ತರ: ಖಾಸಗಿ ಶಾಲೆಗಳಲ್ಲಿ ಫಲಿತಾಂಶ ಸುಧಾರಣೆಗೆ ಹಲವು ಕಾರ್ಯಕ್ರಮ ಹಾಕಿಕೊಳ್ಳಲಾಗಿದೆ. ಕಾರ್ಯಾಗಾರ, ಪೂರ್ವ ಪ್ರಶ್ನಾವಳಿ ತಯಾರಿಕೆ, ಶಿಕ್ಷಕರಿಗೆ ತರಬೇತಿ, ಮಾರ್ಗದರ್ಶನ ನೀಡಲಾಗಿದೆ. ಶಾಲೆಗೆ ಗೈರಾದ ಮಕ್ಕಳನ್ನು ಮರಳಿ ಶಾಲೆಗೆ ಕರೆತರಲು ಪ್ರಯತ್ನಿಸಲಾಗುತ್ತಿದೆ.

* ಪ್ರಶ್ನೆ: ಮಡಿಕೇರಿ ನಗರಸಭೆ ಶಾಲೆಯಲ್ಲಿ ಶಿಕ್ಷಕರ ಕೊರತೆ ಎದುರಾಗಿದೆ. ಶಿಕ್ಷಕರಿಗೂ ಸರಿಯಾಗಿ ಸಂಬಳ ಸಿಗುತ್ತಿಲ್ಲ. ಹಿಂದೂಸ್ಥಾನಿ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಹೆಚ್ಚಿದ್ದರೂ ಇಬ್ಬರೂ ಶಿಕ್ಷಕರೂ ಮಾತ್ರ ಲಭ್ಯವಿದ್ದಾರೆ.

– ರವಿಗೌಡ, ಅಧ್ಯಕ್ಷ, ನಗರ ಹಿತರಕ್ಷಣಾ ವೇದಿಕೆ

ಉತ್ತರ: ನಗರಸಭೆ ಶಾಲೆಗಳು ಶಿಕ್ಷಣ ಇಲಾಖೆ ವ್ಯಾಪ್ತಿಗೆ ಬರುವುದಿಲ್ಲ. ನಗರಸಭೆ ಆಡಳಿತವೇ ನೋಡಿಕೊಳ್ಳಲಿದೆ. ಸರ್ಕಾರಕ್ಕೆ ಈ ಶಾಲೆಗಳನ್ನು ಬಿಟ್ಟುಕೊಡುವಂತೆ ಪತ್ರ ಬರೆಯಲಾಗಿದೆ. ಜಿಲ್ಲಾಧಿಕಾರಿ ಜತೆಗೆ ಚರ್ಚಿಸಲಾಗುವುದು.

* ಪ್ರಶ್ನೆ: ಬಿಳಿಗೇರಿ ವ್ಯಾಪ್ತಿಯ ತೋಟದ ಲೈನ್‌ಮನೆಗಳಲ್ಲಿ ಕೂಲಿ ಕಾರ್ಮಿಕರ 30ಕ್ಕಿಂತ ಹೆಚ್ಚು ಮಕ್ಕಳು ಶಾಲೆ ತೊರೆದು ಕೂಲಿ ಕೆಲಸ ಮಾಡುತ್ತಿದ್ದಾರೆ. ಮರಳಿ ಶಾಲೆಗೆ ಮಕ್ಕಳನ್ನು ಸೇರಿಸಲು ಇಲಾಖೆ ಕ್ರಮವೇನು?

– ಚಿತ್ರಾ ನಾಣಯ್ಯ, ಬಿಳಿಗೇರಿ ಗ್ರಾಮ

ಉತ್ತರ: ಬಿಳಿಗೇರಿ ವ್ಯಾಪ್ತಿಯಲ್ಲಿ ಶಾಲೆ ತೊರೆದ ಮಕ್ಕಳನ್ನು ಮರಳಿ ಶಾಲೆಗೆ ಸೇರಿಸಲು ಅಧಿಕಾರಿಗಳಿಗೆ ಸೂಚಿಸುತ್ತೇನೆ. ಅಕ್ಕಪಕ್ಕದ ಶಾಲೆಯಲ್ಲಿ ಅವರಿಗೆ ವ್ಯವಸ್ಥೆ ಮಾಡಿ ಉಚಿತ ಶಿಕ್ಷಣ, ಸೌಲಭ್ಯ ನೀಡಲಾಗುವುದು.

* ಪ್ರಶ್ನೆ: ಐಗೂರು ವ್ಯಾಪ್ತಿಯಲ್ಲಿ ಆನೆ ಕಾಟ ಹೆಚ್ಚಿರುವುದರಿಂದ ಮಕ್ಕಳಿಗೆ ತೊಂದರೆಯಾಗಿದೆ?

– ಸುರೇಶ್‌, ಸೋಮವಾರಪೇಟೆ

ಉತ್ತರ: ಇಲಾಖೆಯಿಂದ ಹಿಂದೆ ವಾಹನ ವ್ಯವಸ್ಥೆ ಕಲ್ಪಿಸುವ ಬಗ್ಗೆ ಚರ್ಚೆಯಾಗಿತ್ತು. ಆನೆ ಕಾಟ ಹೆಚ್ಚಿರುವ ಶಾಲೆಗಳ ಪಟ್ಟಿ ಮಾಡಿ, ಮಕ್ಕಳ ಸುರಕ್ಷತೆಗೆ ಆದ್ಯತೆ ನೀಡಲಾಗುವುದು.

* ಪ್ರಶ್ನೆ: ಆರ್ಥಿಕ ತೊಂದರೆಯಿಂದ ಶುಲ್ಕ ಪಾವತಿ ವಿಳಂಬವಾದರೆ ಖಾಸಗಿ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶ ನೀಡುತ್ತಿಲ್ಲ. ಆಡಳಿತ ಮಂಡಳಿ ವಿರುದ್ಧ ಕ್ರಮ ಕೈಗೊಳ್ಳಬೇಕು.

– ಗಣೇಶ್‌, ಕೂಡಿಗೆ

ಉತ್ತರ: ಶಿಕ್ಷಣ ಎಲ್ಲರ ಹಕ್ಕು. ಲಿಖಿತ ದೂರು ನೀಡಿ. ಅಂಥ ಖಾಸಗಿ ಶಾಲೆಯ ಆಡಳಿತ ಮಂಡಳಿ ವಿರುದ್ಧ ಕ್ರಮ ಕೈಗೊಳ್ಳುತ್ತೇನೆ. ಈ ರೀತಿ ಮಾಡುವುದರಿಂದ ಮಕ್ಕಳ ಮೇಲೂ ಮಾನಸಿಕ ಪರಿಣಾಮ ಬೀರುತ್ತದೆ.

* ಪ್ರಶ್ನೆ: ಸೋಮವಾರಪೇಟೆ ತಾಲ್ಲೂಕಿನ ಬಾಣಾವಾರ, ಐಗೂರು ವ್ಯಾಪ್ತಿಯಲ್ಲಿ ಕಾಡಾನೆ ಹಾವಳಿಯಿದ್ದು ಜೀವಭಯದಲ್ಲೇ ವಿದ್ಯಾರ್ಥಿಗಳು ಶಾಲೆಗೆ ತೆರಳುತ್ತಿದ್ದಾರೆ. ಆರ್‌ಟಿಐ ಅಡಿ ದಾಖಲಾಗಿದ್ದರೂ ಖಾಸಗಿ ಶಾಲೆಗಳಲ್ಲಿ ಪೋಷಕರಿಂದಲೇ ಶುಲ್ಕ ವಸೂಲಿ ಮಾಡಲಾಗುತ್ತಿದೆ...

– ರುಬಿನಾ ಎಂ.ಎ., ಸೋಮವಾರಪೇಟೆ

ಉತ್ತರ: ಈ ರೀತಿ ತೊಂದರೆಯಿರುವ ಶಾಲೆಗಳು ಅರಣ್ಯ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿದರೆ ವಾಹನ ವ್ಯವಸ್ಥೆ ಮಾಡಲಿದ್ದಾರೆ. ಗುಹ್ಯ, ತೋರ ವ್ಯಾಪ್ತಿಯಲ್ಲಿ ವಾಹನದ ವ್ಯವಸ್ಥೆಯಾಗಿದೆ. ಆರ್‌ಟಿಐ ಅಡಿ ದಾಖಲಾದ ವಿದ್ಯಾರ್ಥಿಗಳಿಂದ ಶುಲ್ಕ ಪಡೆಯುವಂತಿಲ್ಲ. ಶುಲ್ಕ ಪಡೆಯುವ ಶಾಲೆಗಳ ಮಾಹಿತಿಯನ್ನು ಲಿಖಿತವಾಗಿ ಕಚೇರಿಗೆ ತಲುಪಿಸಿ; ಅಂಥ ಶಾಲೆಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಶುಲ್ಕ ಪಡೆದಿದ್ದರೆ ವಾಪಸ್‌ ಕೊಡಿಸಲಾಗುವುದು.

* ಪ್ರಶ್ನೆ: ನಮ್ಮೂರಿನ ಶಾಲೆ ಮಳೆಗಾಲದಲ್ಲಿ ಸೇರುತ್ತಿದೆ. ಕರ್ನಾಟಕ ಪಬ್ಲಿಕ್‌ ಶಾಲೆಗೆ ನಮ್ಮ ಶಾಲೆಯನ್ನು ಸೇರಿಸಬೇಕು.

– ಎಸ್‌.ಎಚ್.ಕೃಷ್ಣ, ಅಧ್ಯಕ್ಷ, ಎಸ್‌ಡಿಎಂಸಿ, ಶಿರಂಗಾಲ

ಉತ್ತರ: ಶಾಲೆ ಚಾವಣಿ ದುರಸ್ತಿಗೆ ಸಂಬಂಧಿಸಿದಂತೆ ಪ್ರಸ್ತಾವನೆ ಸಲ್ಲಿಸಿದರೆ ಮಂಜೂರಾತಿ ನೀಡಲಾಗುವುದು. ಹಾಗೆಯೇ, ಇನ್ನೂ 10 ‘ಕರ್ನಾಟಕ ಪಬ್ಲಿಕ್‌ ಶಾಲೆ’ಗಳು ಜಿಲ್ಲೆಗೆ ನೀಡುವ ಭರವಸೆ ಸಿಕ್ಕಿದೆ. ಬಂದರೆ ಶಿರಂಗಾಲಕ್ಕೆ ಒಂದು ಪಬ್ಲಿಕ್‌ ಶಾಲೆ ಮಂಜೂರು ಮಾಡುತ್ತೇನೆ.

* ಪ್ರಶ್ನೆ: ಗುಮ್ಮನಕೊಲ್ಲಿ ಶಾಲೆಯ ರಾಜ್ಯ ಹೆದ್ದಾರಿ ಪಕ್ಕದಲ್ಲಿದ್ದು ತಡೆಗೋಡೆ ಇಲ್ಲ. ಸಾರ್ವಜನಿಕರು ತಮ್ಮ ವಾಹನಗಳನ್ನು ಶಾಲಾ ಆವರಣದಲ್ಲಿ ನಿಲುಗಡೆ ಮಾಡುತ್ತಿದ್ದು ತೊಂದರೆಯಾಗುತ್ತಿದೆ.

– ಜಗದೀಶ್‌, ಗುಮ್ಮನಕೊಲ್ಲಿ

ಉತ್ತರ: ಈ ಶಾಲೆಯಲ್ಲಿ ಜಾಗದ ಸಮಸ್ಯೆಯಿದ್ದು ತಡೆಗೋಡೆ ನಿರ್ಮಿಸಲು ಸಾಧ್ಯವಾಗಿಲ್ಲ. ಪುನರ್‌ ಪರಿಶೀಲಿಸಿ ಉದ್ಯೋಗ ಖಾತ್ರಿ ಅಡಿ ಕಾಮಗಾರಿ ಆರಂಭಿಸಬಹುದೆ ಎಂಬುದನ್ನು ಪರಿಶೀಲಿಸುತ್ತೇನೆ.

* ಪ್ರಶ್ನೆ: ಈ ವರ್ಷದಿಂದ ಇಂಗ್ಲಿಷ್‌ ವಿಷಯದ ಪರೀಕ್ಷೆಗೆ ಹೆಚ್ಚುವರಿ ಸಮಯವಿದೆಯೇ? ಕನ್ನಡಕ್ಕೆ ಹೆಚ್ಚುವರಿ ಸಮಯ ನೀಡಬೇಕಿತ್ತು?

– ತಿಮ್ಮಯ್ಯ, ಶ್ರೀಮಂಗಲ

ಉತ್ತರ: ಇನ್ನೂ ಸುತ್ತೋಲೆ ಬಂದಿಲ್ಲ. ಇಂಗ್ಲಿಷ್‌ ವಿಷಯಕ್ಕೆ ಹೆಚ್ಚುವರಿ ಸಮಯ ನೀಡಬೇಕೆಂಬುದು ಹಲವು ದಿನಗಳ ಬೇಡಿಕೆ ಆಗಿತ್ತು. ಇಂಗ್ಲಿಷ್‌ ಅನ್ಯಭಾಷೆ ಎನ್ನುವ ಕಾರಣಕ್ಕೆ ಹೆಚ್ಚುವರಿ ಸಮಯ ನೀಡಲು ಉದ್ದೇಶಿಸಲಾಗಿದೆ.

* ಪ್ರಶ್ನೆ: ಸರ್ಕಾರಿ ಶಾಲೆಗೆ ಆಟದ ಮೈದಾನ ಕೊರತೆಯಿದ್ದರೂ ಈ ಮೈದಾನಗಳನ್ನೆ ಸಂಘ– ಸಂಸ್ಥೆಗಳು ಹಾಗೂ ರಾಜಕೀಯ ಪಕ್ಷಗಳು ಖಾಸಗಿ ಕಾರ್ಯಕ್ರಮಕ್ಕೆ ಬಳಕೆ ಮಾಡಿಕೊಳ್ಳುತ್ತಿವೆ?

– ಇಸ್ಮಾಯಿಲ್‌ ಕಂಡಕೆರೆ

ಉತ್ತರ: ಕೆಲವು ಸಂದರ್ಭದಲ್ಲಿ ಶಾಲೆ ಮುಖ್ಯಸ್ಥರ ಗಮನಕ್ಕೂ ವಿಷಯ ತಿಳಿಸದೆ ಮುಖಂಡರು ಹಲವು ಕಾರ್ಯಕ್ರಮ ನಡೆಸುತ್ತಾರೆ. ಸಂಜೆಯೂ ಮೈದಾನಗಳನ್ನು ಬಳಸಿಕೊಳ್ಳುತ್ತಾರೆ. ಈ ಬಗ್ಗೆ ಎಚ್ಚರ ವಹಿಸಲು ಆಯಾ ಶಾಲೆ ಮುಖ್ಯಶಿಕ್ಷಕರಿಗೆ ಸೂಚಿಸಲಾಗಿದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು