ಶನಿವಾರ, ಆಗಸ್ಟ್ 17, 2019
24 °C
ಜಿಲ್ಲಾ ಜನರಲ್ ವರ್ಕರ್ಸ್ ಯೂನಿಯನ್ ಸ್ಪಷ್ಟನೆ

ಸಂಘಟನೆ ವಿರುದ್ಧ ಸುಳ್ಳು ಆಪಾದನೆ

Published:
Updated:

ಮಡಿಕೇರಿ: ‘ಜಿಲ್ಲಾ ಜನರಲ್ ವರ್ಕರ್ಸ್ ಯೂನಿಯನ್ ವಿರುದ್ಧ ಕೆಲವು ಸಂಘಟನೆಗಳು ಹಣ ವಸೂಲಾತಿಯ ಆಪಾದನೆ ಮಾಡಿದ್ದು, ಅದು ಸತ್ಯಕ್ಕೆ ದೂರವಾದ್ದದ್ದು’ ಎಂದು ಯೂನಿಯನ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎ.ಮಹದೇವ್‌ ಹೇಳಿದರು.

ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸಂಘಟನೆಯ ಹೆಸರು ಹೇಳಿಕೊಂಡು ಕೆಲವರು ಹಣದ ಬೇಡಿಕೆ ಸಲ್ಲಿಸುತ್ತಿದ್ದಾರೆ ಎಂಬ ಸುಳ್ಳು ವದಂತಿಗಳು ಹರಿದಾಡುತ್ತಿವೆ. ಇಂತಹ ಕೃತ್ಯದಲ್ಲಿ ಸಂಘಟನೆ ಎಂದೂ ಭಾಗಿಯಾಗಿಲ್ಲ. ಬದಲಾಗಿ ರೈತರು ಹಾಗೂ ಕಾರ್ಮಿಕರ ಪರವಾಗಿಯೇ ಕೆಲಸ ಮಾಡುತ್ತಿದೆ’ ಎಂದು ಹೇಳಿದರು.

ಸಂಘಟನೆ ನೋಂದಣಿಯಾಗಿದೆ. ಆದರೆ, ಕೆಲವು ವ್ಯಕ್ತಿಗಳು ಸಂಘಟನೆ ಶಕ್ತಿಯನ್ನು ಸಹಿಸದೇ ಇಲ್ಲದ ವದಂತಿ ಹಬ್ಬಿಸುತ್ತಿದ್ದಾರೆ ಎಂದು ದೂರಿದರು.

12 ಎಕರೆ 20 ಗುಂಟೆಗೆ ಮೇಲ್ಪಟ್ಟ ತೋಟದ ಮಾಲೀಕರು, ಪ್ಲಾಂಟೇಶನ್ ಲೇಬರ್ ಕಾಯ್ದೆಗೆ ಒಳಪಟ್ಟಿರುತ್ತಾರೆ. ಈ ತೋಟಗಳ ಮಾಲೀಕರು ಕಾರ್ಮಿಕರಿಗೆ ಕನಿಷ್ಠ ವೇತನ ₹321 ನೀಡಬೇಕು. ಜತೆಗೆ, ಲೈನ್‌ಮನೆಯಲ್ಲಿರುವವರಿಗೆ ಕುಡಿಯುವ ನೀರು, ಆಸ್ಪತ್ರೆ ಸೌಲಭ್ಯ, ಬೋನಸ್, ಪಿಎಫ್‌ಗಳನ್ನು ಸಕಾಲದಲ್ಲಿ ನೀಡಬೇಕು. ಅನೇಕ ವರ್ಷಗಳಿಂದ ಸಂಘಟನೆ ಹೋರಾಟ ಮಾಡುತ್ತಿದೆ. ಅದನ್ನು ಬಿಟ್ಟರೆ ರೈತರ ವಿರುದ್ಧ ಯಾವುದೇ ಹೋರಾಟಕ್ಕೆ ನಿಂತಿಲ್ಲ ಎಂದು ಹೇಳಿದರು.

ತೋಟದ ಕಾರ್ಮಿಕರ ಮಕ್ಕಳಿಗೆ ಶಿಕ್ಷಣ ವೇತನ, 6 ತಿಂಗಳ ಹೆರಿಗೆ ಭತ್ಯೆ ಸೇರಿದಂತೆ ಸಾರಿಗೆ ವಾಹನ ಸೌಲಭ್ಯ ವೆಚ್ಚವನ್ನು ಆಯಾ ತೋಟದ ಮಾಲೀಕರು ಕಾರ್ಮಿಕರಿಗೆ ನೀಡಬೇಕೆಂಬ ಕಾನೂನು ಇದೆ. ಆದರೆ, ಈ ಸವಲತ್ತುಗಳನ್ನು ಮಾಲೀಕರು ನೀಡುತ್ತಿಲ್ಲ ಎಂದು ದೂರಿದರು.

ಯೂನಿಯನ್ ಅಧ್ಯಕ್ಷ ಈ.ರಾ. ದುರ್ಗಾಪ್ರಸಾದ್‌ ಮಾತನಾಡಿ, ‘ಕಾರ್ಮಿಕರಿಗೆ ಕಾನೂನಿನಡಿ ಸಿಗುವ ಸೌಲಭ್ಯವನ್ನು ತೋಟದ ಮಾಲೀಕರು ನೀಡಬೇಕು. ಈ ಬಗ್ಗೆ ಹೋರಾಟವನ್ನು ಸಂಘಟನೆ ಮಾಡುತ್ತಿದೆ. ಉಳಿದಂತೆ, ಮಾಲೀಕರು ಅಥವಾ ಕೃಷಿಕರ ವಿರುದ್ಧ ಸಂಘಟನೆ ಕೆಲಸ ಮಾಡುತ್ತಿಲ್ಲ. ಜಿಲ್ಲೆಯ ಕೃಷಿಕರು, ಕಾರ್ಮಿಕರು ಒಗ್ಗಟ್ಟಾಗಿ ನಡೆಯಬೇಕಿದೆ ಎಂದು ಹೇಳಿದರು.

Post Comments (+)