ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಅಶ್ಲೀಲ ಪದ, ಕಾಡು, ಹಾವುಗಳ ಸಮಸ್ಯೆ

ಗೌಡಳ್ಳಿಯಲ್ಲಿ ಮಕ್ಕಳ ಗ್ರಾಮ ಸಭೆ, ಗಂಭೀರ ಸಮಸ್ಯೆಗಳ ಅನಾವರಣ
Published 12 ಡಿಸೆಂಬರ್ 2023, 6:33 IST
Last Updated 12 ಡಿಸೆಂಬರ್ 2023, 6:33 IST
ಅಕ್ಷರ ಗಾತ್ರ

ಸೋಮವಾರಪೇಟೆ: ರಾತ್ರಿ ವೇಳೆ ಕಿಡಿಗೇಡಿಗಳು ಶಾಲೆಯೊಳಗೆ ನುಗ್ಗಿ ಕಪ್ಪು ಹಲಗೆಯ ಮೇಲೆ ಅಶ್ಲೀಲ ಪದ ಬರೆಯುತ್ತಾರೆ, ಹಾವುಗಳು ಶಾಲೆಯೊಳಗೆ ಬರುತ್ತವೆ. ಶಾಲೆಯ ಸುತ್ತ ಗಿಡ ಮರಗಳು ಬೆಳೆದಿದ್ದು ಕಾಡು ನಿರ್ಮಾಣವಾಗಿದೆ. ಮೇಲ್ಛಾವಣಿ ಮರಗಳು ಗೆದ್ದಲು ಹಿಡಿದಿವೆ. ನಮಗೆ ರಕ್ಷಣೆ ಕೊಡಿ.......

ಇವು ಸಾರ್ವಜನಿಕರ ಅಹವಾಲಲ್ಲ, ಬದಲಿಗೆ ಶಾಲಾ ಮಕ್ಕಳಿಗಾಗಿ ಗೌಡಳ್ಳಿ ಗ್ರಾಮ ಪಂಚಾಯಿತಿಯಿಂದ ಸೋಮವಾರ ಏರ್ಪಡಿಸಿದ್ದ ಮಕ್ಕಳ ಗ್ರಾಮಸಭೆಯಲ್ಲಿ ಮಕ್ಕಳೇ ಅಧಿಕಾರಿಗಳಿಗೆ ಸಲ್ಲಿಸಿದ ಅಹವಾಲುಗಳು. ಸಮಸ್ಯೆ ಹೇಳಿದವರು ಮಕ್ಕಳಾದರೂ, ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಬೇಕಾದ ಸಮಸ್ಯೆಗಳು.

ಗೌಡಳ್ಳಿ ಗ್ರಾಮ ಪಂಚಾಯಿತಿ, ಬೆಂಗಳೂರು ಮಕ್ಕಳ ಕಲ್ಯಾಣ ನಿರ್ದೇಶನಾಲಯ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಗ್ರಾಮೀಣಾಭಿವೃದ್ಧಿ,  ಪಂಚಾಯಿತಿ ರಾಜ್ ಇಲಾಖೆ ಮತ್ತು ನಾವು ಪ್ರತಿಷ್ಠಾನದಿಂದ ಸಭೆ ನಡೆಯಿತು.

ಸಭೆಯಲ್ಲಿ ವಿದ್ಯಾರ್ಥಿಗಳು ತಮ್ಮ ಶಾಲೆಗೆ ಸಂಬಂಧಿಸಿದ ಸಮಸ್ಯೆಗಳ ಸರಮಾಲೆಯನ್ನೇ ಬಿಚ್ಚಿಟ್ಟರು. ಗೌಡಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸುತ್ತ ಕಾಡು ಬೆಳೆದಿದ್ದು, ಹಾವುಗಳು ಹಾಗೂ ಕ್ರಿಮಿಕೀಟಗಳು ಶಾಲಾ ಕೊಠಡಿಯೊಳಗೆ ಬರುತ್ತವೆ. ಕಾಡು ಕಡಿಸಿಕೊಡಿ ಎಂದು ಪಂಚಾಯಿತಿಗೆ ಮನವಿ ಸಲ್ಲಿಸಿದರು. ರಾತ್ರಿ ಸಮಯದಲ್ಲಿ ಕಿಡಿಗೇಡಿಗಳು ಕೊಠಡಿಯ ಬೀಗ ಒಡೆದು ಕಪ್ಪು ಹಲಗೆಯಲ್ಲಿ ಅಶ್ಲೀಲ ಪದಗಳನ್ನು ಬರೆಯುತ್ತಾರೆ. ಕೊಠಡಿಯೊಳಗೆ ಮೂತ್ರ ಮಾಡಿ ಹೋಗುತ್ತಾರೆ. ನಮ್ಮ ಶಾಲೆಗೆ ರಕ್ಷಣೆ ಬೇಕು ಎಂದು ಮನವಿ ಮಾಡಿದರು.

ಶುಂಠಿ ಗ್ರಾಮದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಎರಡು ಕೊಠಡಿಯ ಮೇಲ್ಚಾವಣಿಯ ಮರಗಳು ಗೆದ್ದಲು ಹಿಡಿದಿದ್ದು, ಯಾವಾಗ ಬೇಕಾದರೂ ಕುಸಿದು ಬೀಳಬಹುದು ಎಂದು 5ನೇ ತರಗತಿ ಶ್ರೀನಿಧಿ ಹೇಳಿದರು.

ಶಿಕ್ಷಣ ಇಲಾಖೆಯ ಅಧಿಕಾರಿಗಳ ಬಂದು ನೋಡಿ ಹೋಗುತ್ತಾರೆ. ಆದರೆ, ದುರಸ್ತಿ ಕೆಲಸ ಮಾಡಿಸಿಲ್ಲ. ಮಕ್ಕಳ ಜೀವ ಹಾನಿಯಾದರೆ ಯಾರು ಜವಾಬ್ದಾರರು? ಕೂಡಲೇ ಸಮಸ್ಯೆ ಬಗೆಹರಿಸಿ ಎಂದರು. 

‘ಪಂಚಾಯಿತಿಯಿಂದ ಇಂಗು ಗುಂಡಿ ನಿರ್ಮಾಣ ಮಾಡಲಾಗಿದೆ. ಆದರೆ, ಪೈಪ್ ಅಳವಡಿಸಿಲ್ಲ. ಶಾಲಾ ಆವರಣ ಗಬ್ಬು ವಾಸನೆಯಿಂದ ಕೂಡಿದೆ. ಗ್ರಾಮೀಣ ಭಾಗದಿಂದ ಮಕ್ಕಳು ಕಾಲ್ನಡಿಗೆಯಲ್ಲೇ ಬರಬೇಕಾಗಿದೆ. ನಂದಿಗುಂದ ಸರ್ಕಾರಿ ಪ್ರಾಥಮಿಕ ಶಾಲೆಗೆ ಕೈತೊಳೆಯುವ ತೊಟ್ಟಿ ನಿರ್ಮಿಸಿ ಕೊಡಬೇಕು. ಶಾಲೆಯ ಮೆಟ್ಟಿಲ ತನಕ ಕಾಂಕ್ರೀಟ್ ರಸ್ತೆ ಬೇಕು. ಆಟದ ಮೈದಾನ ಸ್ಚಚ್ಛ ಗೊಳಿಸಿಕೊಡಬೇಕು’ ಎಂದು ಶಾಲಾ ವಿದ್ಯಾರ್ಥಿಗಳು ಕೇಳಿಕೊಂಡರು.

ಗೌಡಳ್ಳಿ ಪಂಚಾಯಿತಿ ಪಿಡಿಒ ಲಿಖಿತ ಮಾತನಾಡಿ, ‘ಕಳೆದ ಮಕ್ಕಳ ಗ್ರಾಮಸಭೆಯಲ್ಲಿ ವಿದ್ಯಾರ್ಥಿಗಳು ಅನೇಕ ಬೇಡಿಕೆಗಳನ್ನು ಇಟ್ಟಿದ್ದರು. ಗೌಡಳ್ಳಿ ಸರ್ಕಾರಿ ಶಾಲೆಗೆ ರಸ್ತೆ, ಶೌಚಗೃಹ, ಕಾಂಪೌಂಡ್ ಮಾಡಲಾಗಿದೆ, ನಂದಿಗುಂದ ಶಾಲೆಗೆ ಕಾಂಪೌಂಡ್ ಆಗಿದೆ. ಶುಂಠಿ ಶಾಲೆಗೂ  ಕಾಂಪೌಂಡ್ ಮಾಡಲಾಗಿದೆ. ಉದ್ಯಾನವನ್ನು ಮಾಡಿಕೊಡಲಾಗುವುದು. ಕಟ್ಟಡದ ದುರಸ್ತಿಯ ಬಗ್ಗೆ ಜಿಲ್ಲಾ ಪಂಚಾಯಿತಿಗೆ ಅರ್ಜಿ ಸಲ್ಲಿಸಲಾಗಿದೆ’ ಎಂದು ಮಾಹಿತಿ ನೀಡಿದರು.

ನಾವು ಪ್ರತಿಷ್ಠಾನದ ಕಾರ್ಯಕಾರಿ ನಿರ್ದೇಶಕ ಸುಮನ ಮ್ಯಾಥ್ಯು ಮಾತನಾಡಿ, ‘ಇಂದಿನ ಮಕ್ಕಳು ಇಂದಿನ ಪ್ರಜೆಗಳೇ ಆಗಿದ್ದು, ಅವರಿಗೆ ಎಲ್ಲಾ ಮೂಲಭೂತ ಸವಲತ್ತುಗಳನ್ನು ನೀಡಬೇಕಾಗಿದೆ. ದೇಶದಲ್ಲಿ 51ಕೋಟಿ ಮಕ್ಕಳಿದ್ದಾರೆ. ಅದರಲ್ಲಿ ಶೇ 38ರಷ್ಟು ಗ್ರಾಮೀಣ ಭಾಗದಲ್ಲಿ ಮಕ್ಕಳಿದ್ದಾರೆ. ಬದುಕುವ ಹಕ್ಕು, ರಕ್ಷಣೆ ಹೊಂದುವ ಹಕ್ಕು, ಭಾಗವಹಿಸುವ ಹಕ್ಕುಗಳನ್ನು ಸಂವಿಧಾನ ನೀಡಿದ್ದು, ಎಲ್ಲಾ ಹಕ್ಕುಗಳು ಸಿಗುವಂತಾಗಬೇಕು. ಮಕ್ಕಳು ಯಾವುದೇ ಮುಲಾಜಿಲ್ಲದೆ ಕೇಳಿ ಪಡೆದುಕೊಳ್ಳಬೇಕು. ನಿಮ್ಮ ಸಮಸ್ಯೆಗಳನ್ನು ಸಹಾಯವಾಣಿಗೆ ಕರೆ ಮಾಡಿ ಹೇಳಿಕೊಳ್ಳಬಹುದು’ ಎಂದು ಹೇಳಿದರು.

ಸಭೆಯಲ್ಲಿ ಗೌಡಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ನವೀನ್ ಅಜ್ಜಳ್ಳಿ, ಉಪಾಧ್ಯಕ್ಷೆ ವಿಶಾಲಾಕ್ಷಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಕಾನೂನು ಸಲಹೆಗಾರರಾದ ಜಿ.ಆರ್. ತುಳಸಿ, ಮಕ್ಕಳ ಸಹಾಯವಾಣಿ ಸಂಯೋಜಕ ನವೀನ್ ಕುಮಾರ್, ನಾವು ಪ್ರತಿಷ್ಠಾನದ ಸ್ಥಾಪಕ ಗೌತಮ್ ಕಿರಗಂದೂರು, ವಿದ್ಯಾರ್ಥಿಗಳಾದ ಸ್ಪೂರ್ತಿ, ಗಾನವಿ, ಜಯಶ್ರೀ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT