ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಗುಣಮಟ್ಟದ ರಸಗೊಬ್ಬರ, ಬೀಜ ಪೂರೈಸಿ

ರೈತರಿಂದ ದೂರು ಬರಂದತೆ ಎಚ್ಚರ ವಹಿಸಲು ಜಿಲ್ಲಾಧಿಕಾರಿ ಸೂಚನೆ
Published 2 ಜೂನ್ 2024, 6:15 IST
Last Updated 2 ಜೂನ್ 2024, 6:15 IST
ಅಕ್ಷರ ಗಾತ್ರ

ಮಡಿಕೇರಿ: ಜಿಲ್ಲೆಯಲ್ಲಿ ಮುಂಗಾರು ಮಳೆ ಸನ್ನಿಹಿತವಾಗಿದ್ದು, ರಸಗೊಬ್ಬರ ಪೂರೈಕೆಯಲ್ಲಿ ಯಾವುದೇ ರೀತಿಯ ವ್ಯತ್ಯಯವಾಗದಂತೆ ಗಮನಹರಿಸಬೇಕು ಎಂದು ಸಗಟು ಹಾಗೂ ಚಿಲ್ಲರೆ ರಸಗೊಬ್ಬರ ಮಾರಾಟಗಾರರಿಗೆ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ತಾಕೀತು ಮಾಡಿದರು.

ನಗರದ ಜಿಲ್ಲಾಧಿಕಾರಿ ಅವರ ಕಚೇರಿ ಸಭಾಂಗಣದಲ್ಲಿ ರಸಗೊಬ್ಬರ ಹಾಗೂ ಬಿತ್ತನೆ ಬೀಜ ಪೂರೈಕೆ, ವಿತರಣೆ, ದಾಸ್ತಾನು ಮತ್ತಿತರ ವಿಷಯ ಕುರಿತು ಶನಿವಾರ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮುಂಗಾರು ವೇಳೆ ಗುಣಮಟ್ಟದ ರಸಗೊಬ್ಬರ ಹಾಗೂ ಬಿತ್ತನೆ ಬೀಜ ಪೂರೈಕೆಯನ್ನು ಸಮರ್ಪಕವಾಗಿ ನಿರ್ವಹಿಸಬೇಕು. ಕೃಷಿಕರಿಂದ ದೂರು ಕೇಳಿ ಬರದಂತೆ ಎಚ್ಚರವಹಿಸುವುದು ಪ್ರತಿಯೊಬ್ಬರ ಜವಾಬ್ದಾರಿ. ಆ ನಿಟ್ಟಿನಲ್ಲಿ ಜಿಲ್ಲಾಡಳಿತದೊಂದಿಗೆ ಸಹಕರಿಸಬೇಕು ಎಂದು ಅವರು ಹೇಳಿದರು.

ಈ ಬಾರಿ ಉತ್ತಮ ಮಳೆಯಾಗುವ ನಿರೀಕ್ಷೆ ಇದೆ. ಆದ್ದರಿಂದ ಜಿಲ್ಲೆಗೆ ಬೇಕಿರುವ ರಸಗೊಬ್ಬರ ದಾಸ್ತಾನು ಮಾಡಿಕೊಂಡು ಕೃಷಿಕರಿಗೆ ಕಾಲಕಾಲಕ್ಕೆ ಪೂರೈಸಬೇಕು. ರಸಗೊಬ್ಬರ ದಾಸ್ತಾನು, ವಿತರಣೆ ಸಂಬಂಧ ಮಾಹಿತಿಯ ಪಟ್ಟಿಯನ್ನು ಪ್ರತಿನಿತ್ಯ ಪ್ರಕಟಿಸುವುದರ ಜೊತೆಗೆ ಮಾಧ್ಯಮಗಳಲ್ಲಿಯೂ ಬಿಡುಗಡೆ ಮಾಡಬೇಕು ಎಂದು ಅವರು ತಿಳಿಸಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವರ್ಣಿತ್ ನೇಗಿ ಮಾತನಾಡಿ, ‘ಕೃಷಿ ಇಲಾಖೆ ಅಧಿಕಾರಿಗಳು ರಸಗೊಬ್ಬರ ಹಾಗೂ ಬಿತ್ತನೆ ಬೀಜವನ್ನು ಸಮರ್ಪಕವಾಗಿ ಪೂರೈಸಬೇಕು. ಯಾವುದೇ ಕಾರಣಕ್ಕೂ ದೂರುಗಳು ಕೇಳಿಬರಬಾರದು’ ಎಂದರು.

ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಸೋಮಸುಂದರ ಮಾತನಾಡಿ, ‘ಜಿಲ್ಲೆಯಲ್ಲಿ ಮೇ ತಿಂಗಳಲ್ಲಿ ಉತ್ತಮ ಮಳೆಯಾಗಿದ್ದು, ಜಿಲ್ಲೆಗೆ 80,946 ಮೆಟ್ರಿಕ್ ಟನ್ ರಸಗೊಬ್ಬರ ಬೇಡಿಕೆ ಇದೆ’ ಎಂದು ಹೇಳಿದರು. ಜಿಲ್ಲೆಯಲ್ಲಿ ಯೂರಿಯಾ, ಡಿಎಪಿ, ಎಂಒಪಿ, ಕಾಂಪ್ಲೆಕ್ಸ್, ಎಸ್‍ಎಸ್‍ಪಿಗೆ ಬೇಡಿಕೆ ಇದ್ದು, ಈಗಾಗಲೇ 15,885 ಮೆಟ್ರಿಕ್ ಟನ್ ರಸಗೊಬ್ಬರ ಸರಬರಾಜು ಆಗಿದ್ದು, ಸಾಕಷ್ಟು ರಸಗೊಬ್ಬರ ದಾಸ್ತಾನು ಇದೆ ಎಂದು ಮಾಹಿತಿ ನೀಡಿದರು.

ಭತ್ತ ಮತ್ತು ಮುಸುಕಿನ ಜೋಳದ ಬೆಳೆಗಳು ಜಿಲ್ಲೆಯ ಪ್ರಮುಖ ಕೃಷಿ ಬೆಳೆಗಳಾಗಿದ್ದು, ಭತ್ತದ ಬಿತ್ತನೆ ಮತ್ತು ನಾಟಿ ಕಾರ್ಯಗಳನ್ನು ಜೂನ್ ಅಂತ್ಯದಿಂದ ಪ್ರಾರಂಭಗೊಂಡು, ಜುಲೈ ಮತ್ತು ಆಗಸ್ಟ್ ತಿಂಗಳುಗಳಲ್ಲಿ ಹಾಗೂ ಮುಸುಕಿನ ಜೋಳದ ಬಿತ್ತನೆ ಕಾರ್ಯವನ್ನು ಜೂನ್ ತಿಂಗಳಿನಲ್ಲಿ ಕೈಗೊಳ್ಳಲಾಗುತ್ತದೆ ಎಂದರು.

ಮುಂಗಾರು ಸಂದರ್ಭದಲ್ಲಿ ನೀರಾವರಿ ಮತ್ತು ಮಳೆಯಾಶ್ರಿತ ಸೇರಿ 29 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯುವ ಗುರಿ ಹೊಂದಲಾಗಿದೆ. 3,500 ಹೆಕ್ಟೇರ್ ಪ್ರದೇಶದಲ್ಲಿ ಮುಸುಕಿನ ಜೋಳ ಬೆಳೆಯುವ ಗುರಿ ಹೊಂದಲಾಗಿದೆ. 70 ಹೆಕ್ಟೇರ್ ಪ್ರದೇಶದಲ್ಲಿ ರಾಗಿ ಬೆಳೆಯುವ ಗುರಿ ಹೊಂದಲಾಗಿದೆ. ಒಟ್ಟು 32,570 ಹೆಕ್ಟೇರ್ ಪ್ರದೇಶದಲ್ಲಿ ಮುಂಗಾರು ಕೃಷಿ ಮಾಡುವ ಗುರಿ ಇದೆ ಎಂದು ಅವರು ಮಾಹಿತಿ ನೀಡಿದರು.

ಕೊಡಗು ಜಿಲ್ಲೆಯಲ್ಲಿ ಬಿತ್ತನೆ ಬೀಜ ಬೇಡಿಕೆ, ಸರಬರಾಜು, ವಿತರಣೆ ಹಾಗೂ ದಾಸ್ತಾನು ಸಂಬಂಧಿಸಿದಂತೆ ಭತ್ತ ಬಿತ್ತನೆ ಬೀಜ 1,514 ಕ್ವಿಂಟಾಲ್ ಪೂರೈಕೆಯಾಗಿದ್ದು, ಪ್ರಸಕ್ತ ಸಾಲಿನಲ್ಲಿ 1,871 ಕ್ವಿಂಟಾಲ್ ಭತ್ತ ಬಿತ್ತನೆ ಬೀಜ ವಿತರಣೆ ಗುರಿ ಹೊಂದಲಾಗಿದೆ ಎಂದು ಹೇಳಿದರು.

ಪ್ರಸ್ತುತ ಜಿಲ್ಲೆಯ 16 ರೈತ ಸಂಪರ್ಕ ಕೇಂದ್ರಗಳಲ್ಲಿ ರೈತರಿಗೆ ಅವಶ್ಯವಿರುವ ವಿವಿಧ ತಳಿಗಳ ಬಿತ್ತನೆ ಬೀಜಗಳನ್ನು ಕೆಎಸ್‍ಎಸ್‍ಸಿ ಮತ್ತು ಎನ್‍ಎಸ್‍ಸಿ ಸಂಸ್ಥೆಗಳಿಂದ ಪಡೆದು, ದಾಸ್ತಾನು ಮಾಡಲಾಗಿದ್ದು, ವಿತರಣೆಗೆ ಕ್ರಮ ವಹಿಸಲಾಗಿದೆ. ವಿವಿಧ ಇಲಾಖೆ ಅಧಿಕಾರಿಗಳು, ಸಗಟು ಹಾಗೂ ಚಿಲ್ಲರೆ ರಸಗೊಬ್ಬರ ಮಾರಾಟಗಾರರು ಸಭೆಯಲ್ಲಿದ್ದರು.

ಸಭೆಯಲ್ಲಿ ಭಾಗವಹಿಸಿದ್ದ ಅಧಿಕಾರಿಗಳು
ಸಭೆಯಲ್ಲಿ ಭಾಗವಹಿಸಿದ್ದ ಅಧಿಕಾರಿಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT