ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ ಆಘಾತದ ನಡುವೆ ಮಳೆ ಆತಂಕ

ಕೊಡಗು ಜಿಲ್ಲೆಗೆ ಜೂನ್‌ 1ರಂದು ಮುಂಗಾರು ಪ್ರವೇಶಿಸುವ ಸಾಧ್ಯತೆ– ಹವಾಮಾನ ಇಲಾಖೆ
Last Updated 19 ಮೇ 2021, 15:08 IST
ಅಕ್ಷರ ಗಾತ್ರ

ಮಡಿಕೇರಿ: ಕೊಡಗು ಜಿಲ್ಲೆಗೆ ಜೂನ್‌ 1ರಂದು ಮುಂಗಾರು ಪ್ರವೇಶಿಸಲಿದೆ ಎಂದು ಹವಾಮಾನ ಇಲಾಖೆ ಅಧಿಕೃತವಾಗಿ ತಿಳಿಸಿದೆ.

ಪ್ರತಿ ವರ್ಷದ ಮುಂಗಾರಿನಲ್ಲೂ ಮಳೆಯನ್ನು ಹರ್ಷದಿಂದ ಸ್ವಾಗತಿಸುತ್ತಿದ್ದ ಕಾವೇರಿ ನಾಡು, 2018ರ ಬಳಿಕ ಮುಂಗಾರು ಮಳೆಯೆಂದರೆ ಬೆಚ್ಚಿ ಬೀಳುತ್ತಿದೆ. ಕಳೆದ ಮೂರು ವರ್ಷದಿಂದ ಮಳೆಗಾಲದಲ್ಲಿ ಜಿಲ್ಲೆಯಲ್ಲಿ ಬಹಳಷ್ಟು ಅನಾಹುತ ಸಂಭವಿಸುತ್ತಿದೆ. ಇದೇ ಕಾರಣಕ್ಕೆ ಜಿಲ್ಲೆಯ ಜನರಿಗೆ ಮಳೆಯೆಂದರೆ ನಡುಕ. ಕೊಡಗಿನಲ್ಲಿ ಮಳೆಗಾಲ ಆಘಾತವನ್ನೇ ನೀಡುತ್ತಿದೆ. ಸಾವು– ನೋವಿಗೂ ವರುಣ ಕಾರಣವಾಗುತ್ತಿದೆ. ಈ ವರ್ಷ ಕೊರೊನಾವೇ ಸಾಕಷ್ಟು ಪೆಟ್ಟು ನೀಡಿದ್ದು ಮಳೆಗಾಲ ಮತ್ತಷ್ಟು ಆತಂಕ ತಂದೊಡ್ಡುವ ಸಾಧ್ಯತೆಯಿದೆ ಎಂದು ಸ್ಥಳೀಯರು ಕಳವಳ ವ್ಯಕ್ತಪಡಿಸುತ್ತಿದ್ದಾರೆ.

ಸಿದ್ಧತೆಗೂ ತೊಡಕು: ಇನ್ನು ಪ್ರತಿ ವರ್ಷವು ಮಾರ್ಚ್‌, ಏಪ್ರಿಲ್‌ ಹಾಗೂ ಮೇನಲ್ಲಿ ಸ್ಥಳೀಯ ಗ್ರಾಮ ಪಂಚಾಯಿತಿ ಆಡಳಿತ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿಗಳು ಮಳೆಗಾಲಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದವು. ಆದರೆ, ಈ ವರ್ಷ ಮೂರು ತಿಂಗಳು ಕೊರೊನಾ ಸೋಂಕು ಬಾಧಿಸಿದ್ದರಿಂದ, ಸಿದ್ಧತೆಗೆ ತೊಡಕಾಗಿದೆ. ಹೂಳು ತೆರವು, ಚರಂಡಿ ಶುಚಿತ್ವ ಮತ್ತಿತರ ಸಿದ್ಧತಾ ಕೆಲಸಗಳು ನಡೆದಿಲ್ಲ.

ಇನ್ನು ಕೃಷಿಕರು ಮಳೆಗಾಲ ಆರಂಭಕ್ಕೂ ಮೊದಲು, ಕಾಫಿ ತೋಟದ ಕೆಲಸ, ಕಾಳು ಮೆಣಸಿನ ಬಳ್ಳಿಗೆ ಮಣ್ಣು ಏರಿಸುವುದು, ರಸಗೊಬ್ಬರ ಹಾಕುವುದು, ಲಿಂಡನ್‌ ಹಚ್ಚುವ ಕೆಲಸ ಪೂರ್ಣ ಮಾಡಿಕೊಳ್ಳುತ್ತಿದ್ದರು. ಆದರೆ, ಕೊರೊನಾ ಪ್ರಕರಣಗಳು ಗ್ರಾಮೀಣ ಪ್ರದೇಶಕ್ಕೂ ವ್ಯಾಪಿಸಿದ್ದರಿಂದ ಹಲವು ತೋಟಗಳಲ್ಲಿ ಕೆಲಸ ಸ್ಥಗಿತಗೊಂಡಿದೆ. ಕಾರ್ಮಿಕರೂ ಕೆಲಸಕ್ಕೆ ಬರಲು ಹಿಂದೇಟು ಹಾಕಿದ್ದೂ ಉಂಟು. ಹೀಗಾಗಿ, ಮಳೆಗಾಲಕ್ಕೂ ಮುನ್ನವೇ ನಿರೀಕ್ಷಿತ ಕೆಲಸಗಳು ನಡೆದಿಲ್ಲ ಎಂದು ರೈತರು ಹೇಳಿದರು.

ಕಳೆದ ವಾರ ಕರಾವಳಿಯಲ್ಲಿ ಉಂಟಾಗಿದ್ದ ಚಂಡಮಾರುತದಿಂದ ಜಿಲ್ಲೆಯಲ್ಲೂ ಜೋರು ಮಳೆ ಸುರಿದಿತ್ತು. ಅಪಾರ ಹಾನಿ ಸಂಭವಿಸಿತ್ತು. ಈಗ ಮುಂಗಾರು ಮಳೆ, ಏನೆಲ್ಲಾ ಅನಾಹುತ ಸೃಷ್ಟಿಸಲಿದೆಯೇ ಎಂಬ ಆತಂಕವಿದೆ.

ಕೊಡಗು ಗುಡ್ಡಗಾಡು ಪ್ರದೇಶ. ಹಲವು ಕಡೆ ಬೆಟ್ಟದ ಮೇಲೆ ಮನೆ ನಿರ್ಮಿಸಿಕೊಂಡು ಜನರು ವಾಸಿಸುತ್ತಾರೆ. 2018ರ ಬಳಿಕ ಅವರೆಲ್ಲರೂ ಆತಂಕದಲ್ಲಿಯೇ ಜೀವನ ನಡೆಸುವಂತಾಗಿದೆ ಎಂದು ಹಟ್ಟಿಹೊಳೆಯ ಸುರೇಶ್‌ ಹೇಳುತ್ತಾರೆ.

ಎನ್‌ಡಿಆರ್‌ಎಫ್‌ ಆಗಮನ: ಮುಂಜಾಗ್ರತಾ ಕ್ರಮವಾಗಿ, ಈ ಬಾರಿಯೂ ಎನ್‌ಡಿಆರ್‌ಎಫ್‌ನ 20 ಮಂದಿ ಸಿಬ್ಬಂದಿಯನ್ನು ಜಿಲ್ಲೆಗೆ ಕರೆಸಿಕೊಳ್ಳಲಾಗಿದೆ. ‘ಮೈತ್ರಿ’ ಹಾಲ್‌ನಲ್ಲಿ ಅವರು ವಾಸ್ತವ್ಯ ಹೂಡಿದ್ದಾರೆ. ಮೂರು ವರ್ಷಗಳಿಂದಲೂ ಆಗಸ್ಟ್‌ನಲ್ಲಿಯೇ ಅಪಾರ ಹಾನಿ ಸಂಭವಿಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT