ಮಂಗಳವಾರ, 6 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಲಿನಂತೆ ಸುರಿದ ಆಲಿಕಲ್ಲು ಮಳೆ

ಬೇಸಿಗೆಯ ಆರಂಭದಲ್ಲೇ ಹೂಮಳೆಯ ಪುಳಕ
Last Updated 15 ಮಾರ್ಚ್ 2023, 4:46 IST
ಅಕ್ಷರ ಗಾತ್ರ

ಮಡಿಕೇರಿ: ಕೊಡಗು ಜಿಲ್ಲೆಯ ಸುಂಟಿಕೊಪ್ಪದ ಆಸುಪಾಸಿನಲ್ಲಿ ಮಂಗಳವಾರ ಸುರಿದ ಆಲಿಕಲ್ಲು ಮಳೆಯು ಕೆಲವರಿಗೆ ಹಾಲಿನ ಮಳೆಯಂತೆ ಕಂಡರೆ, ಮತ್ತೆ ಕೆಲವರಿಗೆ ಹಿಮಪಾತದಂತೆ ತೋರಿತು. ಒಂದಷ್ಟು ಹೊತ್ತು ಒಂದೇ ಸಮನೆ ಸುರಿದ ಆಲಿಕಲ್ಲು ಪನ್ಯಗ್ರಾಮದಲ್ಲಿ ಸಂ‌ಭ್ರಮಕ್ಕೆ ಕಾರಣವಾಯಿತು. ಮಡಿಕೇರಿಯ ಟಿ.ಜಾನ್‌ ಬಡಾವಣೆ ಸೇರಿದಂತೆ ಕೆಲವೆಡೆ ಕೆಲ ನಿಮಿಷಗಳ ಕಾಲ ಆಲಿಕಲ್ಲು ಬಿದ್ದು, ಮಕ್ಕಳು ಸಂಭ್ರಮಿಸಿದರು. ಬೇಸಿಗೆಯ ಮೊದಲ ಮಳೆಯಿಂದ ಇಳೆಯಿಂದ ಹೊಮ್ಮಿದ ಸುಗಂಧಕ್ಕೆ ಜನಸಮುದಾಯ ಮಾರುಹೋಯಿತು.

ಮುಂಗಾರು‍ಪೂರ್ವದ ಈ ವರ್ಷಧಾರೆಗಾಗಿ ರೈತರು, ಬೆಳೆಗಾರರು ಚಾತಕ ಪಕ್ಷಿಗಳಂತೆ ಕಾಯುತ್ತಿದ್ದರು. ಬಿರು ಬಿಸಿಲಿನಿಂದ ಜನರು ಮಾತ್ರವಲ್ಲ ಪ್ರಾಣಿಗಳೂ ಬಸವಳಿದ್ದವು. ಮಂಗಳವಾರ ಗುಡುಗು, ಸಿಡಿಲಿನೊಂದಿಗೆ ಅಲ್ಲಲ್ಲಿ ಸುರಿದ ಮಳೆಯು ಇಳೆಯನ್ನು ತಂಪಾಗಿಸಿತು. ಕಾಡಿನಲ್ಲಿ ಬೆಂಕಿ ನಿಯಂತ್ರಣಕ್ಕೂ ಈ ಮಳೆ ಸಹಕಾರಿಯಾಯಿತು.

ಸುಂಟಿಕೊಪ್ಪ ಹೋಬಳಿಯಲ್ಲಿ ಬೀಸಿದ ಬಿರುಗಾಳಿ, ಕೇಳಿಬಂದ ಗುಡುಗು ಸಿಡಿಲುಗಳು ಜನರಲ್ಲಿ ಕೆಲ ಹೊತ್ತು ಆತಂಕಕ್ಕೂ ಕಾರಣವಾಯಿತು. ಇದರಿಂದ ವಿದ್ಯುತ್ ತಂತಿಗಳಿಗೆ ಮರದ ರೆಂಬೆಗಳು ತಗುಲಿ ವಿದ್ಯುತ್ ವ್ಯತ್ಯಯವೂ ಉಂಟಾಯಿತು.

ನಾಪೋಕ್ಲುವಿನಲ್ಲೂ ಕೆಲಹೊತ್ತು ಬಿರುಸಿನಿಂದ ಮಳೆ ಸುರಿಯಿತು. ರಸ್ತೆಗಳಲ್ಲಿ ನೀರು ಹರಿಯಿತು. ಕೊಡೆ ಇಲ್ಲದೇ ಬಂದಿದ್ದ ಜನರು ಪರದಾಡಿದರು. ಅಂಗಡಿಗಳ ಮುಂದೆ ನಿಂತು ರಕ್ಷಣೆ ಪಡೆದರು.

ನಾಪೋಕ್ಲು ವ್ಯಾಪ್ತಿಯಲ್ಲಿ ಸುರಿದ ಸಾಧಾರಣ ಮಳೆಗೆ ಕಾಫಿ ಬೆಳೆಗಾರರು ಸಂತಸ ವ್ಯಕ್ತಪಡಿಸಿದ್ದಾರೆ. ಜನವರಿ ಎರಡನೇ ವಾರದಲ್ಲಿ ಈ ವ್ಯಾಪ್ತಿಯಲ್ಲಿ ಸಣ್ಣ ಪ್ರಮಾಣದಲ್ಲಿ ಮಳೆಯಾಗಿದ್ದು ಆ ಬಳಿಕ ಮಳೆಯಾಗದೆ ಬೆಳೆಗಾರರು ಸಮಸ್ಯೆ ಎದುರಿಸಿದ್ದರು.

ಕಾಫಿಯ ಹೂಗಳು ಅಲ್ಪ ಪ್ರಮಾಣದಲ್ಲಿ ಆಗ ಅರಳಿದ್ದವು. ಬಹುತೇಕ ಹೂಗಳು ಅರಳುವುದು ಇದೇ ಸಂದರ್ಭದಲ್ಲಿ. ಬೆಳೆಗಾರರು ಮಳೆಯ ನಿರೀಕ್ಷೆಯಲ್ಲಿದ್ದರು. ಹಲವು ಬೆಳೆಗಾರರು ನೀರಿನ ಮೂಲವನ್ನು ಅರಸಿ ತೋಟಗಳಿಗೆ ತುಂತುರು ನೀರಾವರಿ ವ್ಯವಸ್ಥೆ ಕೈಗೊಂಡಿದ್ದರು. ಕಾವೇರಿ ನದಿ ಹರಿವಿನ ತಾಣಗಳಲ್ಲಿ ಪಂಪ್‌ಗಳನ್ನು ಇರಿಸಿ ತೋಟಕ್ಕೆ ನೀರು ಹಾಯಿಸುತ್ತಿದ್ದರು. ಮಳೆಯಿಲ್ಲದೆ ಬಹುತೇಕ ಭಾಗಗಳಲ್ಲಿ ನೀರಿನ ಮೂಲಗಳು ಇಳಿಮುಖವಾಗಿದ್ದು, ತುಂತುರು ನೀರಾವರಿ ವ್ಯವಸ್ಥೆಗೂ ಕೆಲವರಿಗೆ ತೊಡಕಾಗಿತ್ತು. ಇದೀಗ ಮಳೆ ಆಗಿರುವುದರಿಂದ ಬೆಳೆಗಾರರ ಮುಖದಲ್ಲಿ ಮಂದಹಾಸ ಅರಳಿದೆ.

ಸುಂಟಿಕೊಪ್ಪ ವ್ಯಾಪ್ತಿಯಲ್ಲಿ ಸುರಿದ ಆಲಿಕಲ್ಲು‌ ಮಳೆಯಿಂದ ಮಾವಿನ ಕಾಯಿ, ಹಲಸಿನ ಹಣ್ಣು, ಬೆಣ್ಣೆಹಣ್ಣುಗಳಿಗೆ ಬಹಳಷ್ಟು ಹಾನಿಯಾಗಲಿದೆ. ಕಳೆದ ಮೂರ್ನಾಲ್ಕು ದಿನಗಳ ಹಿಂದೆ ರೋಬಾಸ್ಟಾ ಗಿಡಗಳಿಗೆ ನೀರು ಸಿಂಪಡಿಸಿದ್ದು, ಕೆಲವೆಡೆ ಹೂವು ಬಂದಿದೆ. ಆದರೆ, ಮಂಗಳವಾರ ಸುರಿದ ಆಲಿಕಲ್ಲು ಮಳೆಯಿಂದ ಕಾಫಿಗೆ ಹಾನಿ‌ ಮತ್ತು ನಷ್ಟ ಉಂಟಾಗುವ ಸಾಧ್ಯತೆ ಇದೆ.

ಪನ್ಯ ಮತ್ತು ಗುಂಡುಗುಟ್ಟಿ ಭಾಗದಲ್ಲಿ ಸುಮಾರು 30 ನಿಮಿಷಗಳ ಕಾಲ ಆಲಿಕಲ್ಲು ಮಳೆ ಸುರಿಯಿತು. ಪನ್ಯದ ಕಾಫಿ‌ ಬೆಳೆಗಾರ ಎಸ್.ಬಿ.ಶಂಕರ್ ಅವರ ಮನೆಯ ಸುತ್ತಮುತ್ತ ಸುರಿದ ಆಲಿಕಲ್ಲು ಮಳೆ ಇಡೀ ಪ್ರದೇಶ ಹಾಲಿನಂತೆ ಕಂಗೊಳಿಸುತ್ತಿತ್ತು. ಮಕ್ಕಳಾದಿಯಾಗಿ ಗ್ರಾಮಸ್ಥರು ಆಲಿಕಲ್ಲಿನ ರಾಶಿಯನ್ನು ಹಿಡಿದು ಕುಣಿದು ಕುಪ್ಪಳಿಸಿದರು. ಕೊಡಗರಹಳ್ಳಿ, ಹರದೂರು, ಗರಗಂದೂರು, ಮತ್ತಿಕಾಡುಗಳಲ್ಲೂ ಸಿಡಿಲು, ಗುಡುಗಿನಿಂದ ಮಳೆ ಸುರಿಯಿತು.

ಸಿದ್ದಾಪುರ ಪಟ್ಟಣದಲ್ಲಿ ಸಾಧಾರಣ ಮಳೆಯಾಗಿದೆ. ಕಳೆದ ಕೆಲವು ದಿನಗಳಿಂದ ಬಿಸಿಲಿನ ವಾತಾವರಣ ಇದ್ದು, ತಾಪಮಾನ ಗಣನೀಯವಾಗಿ ಏರಿಕೆಯಾಗುತ್ತಿದೆ. ಮಳೆಯಿಲ್ಲದೇ ಬೆಳೆಗಾರರು ಕಾಫಿ ತೋಟದಲ್ಲಿ ಮೋಟರ್ ಮೂಲಕ ನೀರು ಹಾಯಿಸುತ್ತಿದ್ದು, ಪಟ್ಟಣದ ಸುತ್ತಮುತ್ತಲ ಭಾಗದ ಬೆಳೆಗಾರರಿಗೆ ಮಳೆಯಿಂದಾಗಿ ಅನುಕೂಲವಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT