ಭಾನುವಾರ, ಏಪ್ರಿಲ್ 2, 2023
33 °C
ಸಂವಾದದಲ್ಲಿ ನೆನಪಿನ ಅಲೆಯಲ್ಲಿ ತೇಲಿದ ರಾಣಿ ಮಾಚಯ್ಯ

ಪ್ರಶಸ್ತಿ, ನನಗಲ್ಲ... ನನ್ನಿಂದ ಕಲಿತವರಿಗೆ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಡಿಕೇರಿ: ‘ಪದ್ಮಶ್ರೀ ಪ್ರಶಸ್ತಿ ಬಂದಿರುವುದು ಕೇವಲ ನನಗಲ್ಲ. ನನ್ನಿಂದ ಉಮ್ಮತ್ತಾಟ್ ಕಲೆಯನ್ನು ಕಲಿತ 10 ಸಾವಿರ ವಿದ್ಯಾರ್ಥಿಗಳಿಗೆ ಹಾಗೂ ಅವರನ್ನು ನನ್ನ ಬಳಿ ಈ ಕಲೆ ಕಲಿಸಲು ಕಳುಹಿಸಿದ ಪೋಷಕರಿಗೆ. ಅವರೆಲ್ಲರೂ ನನ್ನ ಬಳಿ ಬಂದು ಕಲಿತಿದ್ದರಿಂದಲೇ ಇಂದು ನನ್ನನ್ನು ಗುರುತಿಸಲಾಯಿತು’ ಎಂದು ಪದ್ಮಶ್ರೀ ಪುರಸ್ಕೃತ ಹಿರಿಯ ಕಲಾವಿದೆ ಐಮುಡಿಯಂಡ ರಾಣಿ ಮಾಚಯ್ಯ ಹೇಳಿದರು.

ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಇಲ್ಲಿನ ಪತ್ರಿಕಾ ಭವನದಲ್ಲಿ ಸೋಮವಾರ ಏರ್ಪಡಿಸಿದ್ದ ಸಂವಾದದಲ್ಲಿ ಅವರು ಮಾತನಾಡಿದರು.

‘ನಾನು ಮಾತನಾಡುವುದಿಲ್ಲ, ಮಾತನಾಡಲು ನನಗೆ ಬರುವುದೂ ಇಲ್ಲ. ಕೇವಲ ಕೆಲಸ ಮಾಡುತ್ತೇನೆ’ ಎನ್ನುತ್ತಲೇ ಮಾತಿಗಿಳಿದ ಅವರು, ತಮ್ಮ ಮಾತುಗಳ ಮೂಲಕ ಕೇಳುಗರನ್ನು ತಮ್ಮ ನೆನಪಿನಂಗಳಕ್ಕೆ ಕರೆದೋಯ್ದರು.

‘ಕಲೆಗೆ ಯಾವುದೇ ಜಾತಿ ಭೇದ ಇಲ್ಲ’ ಎಂದ ಅವರು ಅಂಡಮಾನ್ ಮತ್ತು ನಿಕೋಬಾರ್ ದ್ವೀಪದಲ್ಲಿ ನೀಡಿದ ಪ್ರದರ್ಶನದಲ್ಲಿ ನಾಲ್ವರು ಮುಸ್ಲಿಮರು, ಕ್ರೈಸ್ತರು ಪಾಲ್ಗೊಂಡು ಉಮ್ಮತ್ತಾಟ್ ಕಲೆ ಪ್ರದರ್ಶಿಸಿದ್ದು, ರಾಜ್ಯಪಾಲರೊಬ್ಬರು ಎದ್ದು ನಿಂತು ಚಪ್ಪಾಳೆ ತಟ್ಟಿದ ನೆನಪಿನ ಬುತ್ತಿಯನ್ನು ಬಿಚ್ಚಿಟ್ಟರು.

‘ಉಮ್ಮತ್ತಾಟ್ ಕಲೆ ಉಳಿಯಬೇಕು. ನನ್ನ ನಂತರ ಈ ಕಲೆಯನ್ನು ಉಳಿಸಿ, ಬೆಳೆಸಿ’ ಎಂದೂ ಮನವಿ ಮಾಡುವ ಮೂಲಕ ಗಮನ ಸೆಳೆದರು.

‘1982ರಿಂದಲೇ ಉಮ್ಮತ್ತಾಟ್ ಕಲಿಸಲು ಆರಂಭಿಸಿದೆ. ಗೋವಾದಿಂದ ಆರಂಭಿಸಿ ದೇಶದ ಉದ್ದಗಲಕ್ಕೂ ಸಂಚರಿಸಿದೆ. ಹೋದ ಕಡೆಯಲ್ಲೆಲ್ಲ ಒಳ್ಳೆಯ ಹೆಸರು ಸಿಕ್ಕಿತು. ಹೊರಗಡೆ ನಮ್ಮನ್ನು ಚೆನ್ನಾಗಿಯೇ ನೋಡಿಕೊಂಡರು’ ಎಂದು ಹೇಳಿದರು.

‘ಕಲಿಯಬೇಕು ಎಂದು ಆಸೆ ಉಳ್ಳವರಿಗೆ ನಾನೇ ನನ್ನ ಮನೆಯಲ್ಲಿರಿಸಿಕೊಂಡು ಕಲಿಸಿದೆ. ಬಡವರು, ಓದುವುದಕ್ಕೆ ಆರ್ಥಿಕ ಶಕ್ತಿ ಇಲ್ಲದವರನ್ನೇ ಆಯ್ಕೆ ಮಾಡಿಕೊಂಡೆ. ಬಸ್ ಇಲ್ಲದ ಊರಿನವರನ್ನೂ
ನಮ್ಮ ಮನೆಯಲ್ಲಿ ಇರಿಸಿಕೊಂಡು ಕಲಿಸಿದೆ. ಅವರೆಲ್ಲರೂ ತಮ್ಮ  ಕಾಲ ಮೇಲೆ ನಿಲ್ಲುವುದಕ್ಕೆ ಸಾಧ್ಯವಾಯಿತು’ ಎಂದರು.

‘ಇದಕ್ಕೆಲ್ಲ ನನ್ನ ಪತಿ ಸಂಪೂರ್ಣ ಸಹಕಾರ ನೀಡಿದರು. ನಮ್ಮ ಮಕ್ಕಳಂತೆ ಬೇರೆ ಮಕ್ಕಳನ್ನೂ ನೋಡಿಕೊಂಡರು. ನಮ್ಮ ಕುಟುಂಬವರ ನೆರವು ಇಲ್ಲದಿದ್ದರೆ ಇಷ್ಟೆಲ್ಲ ಸಾಧನೆ ಮಾಡಲು ಆಗುತ್ತಿರಲಿಲ್ಲ’ ಎಂದು ತಿಳಿಸಿದರು.

‘ನಾನು ಪ್ರಶಸ್ತಿಗಾಗಿ ಅರ್ಜಿ ಹಾಕಿಲ್ಲ. ಪ್ರಶಸ್ತಿಗಾಗಿ ಈ ಕಲೆಯನ್ನು ಕಲಿಸಿಲ್ಲ. ಇಷ್ಟೆಲ್ಲ ಮಾಡಿದ್ದು ಕಲೆಗಾಗಿ. ಮುಂದೆಯೂ ಯಾರಾದರೂ ಈ ಬಗೆಯಲ್ಲಿ ಕೆಲಸ ಮಾಡಿದರೆ ಈ ಕಲೆ ಉಳಿಯುತ್ತದೆ, ಬೆಳೆಯುತ್ತದೆ’ ಎಂದರು.

ಸಂಘದ ಪ್ರಧಾನ ಕಾರ್ಯದರ್ಶಿ ಅನು ಕಾರ್ಯಪ್ಪ, ಅಧ್ಯಕ್ಷೆ ಸವಿತಾ ರೈ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು