ಬುಧವಾರ, 4 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಡಗು ಜಿಲ್ಲೆಯಲ್ಲಿ ಮಳೆಗಾಲದ ಸಂಭ್ರಮ: ‘ಬೇಲ್ ನಮ್ಮೆ’, ಕೆಸರುಗದ್ದೆ ಕ್ರೀಡಾಕೂಟ

ಕಾಫಿನಾಡಿನಲ್ಲಿ ಮುಂಗಾರಿನಲ್ಲೂ ಬತ್ತದ ಕ್ರೀಡೋತ್ಸಾಹ
Published 18 ಜುಲೈ 2023, 5:18 IST
Last Updated 18 ಜುಲೈ 2023, 5:18 IST
ಅಕ್ಷರ ಗಾತ್ರ

ನಾಪೋಕ್ಲು: ಕೌಟುಂಬಿಕ ಕ್ರೀಡಾ ಉತ್ಸವಗಳು, ವಿವಿಧ ಜನಾಂಗಗಳು ನಡೆಸುವ ಆಟೋಟಗಳು ಇಲ್ಲಿನ ವಿವಿಧ ಕ್ರೀಡಾಂಗಣದಲ್ಲಿ ಬೇಸಿಗೆಯ ಅವಧಿಯಲ್ಲಿ ಬಿಡುವಿಲ್ಲದೆ ಜರುಗಿವೆ. ಇದೀಗ ಮಳೆಗಾಲ ಆರಂಭವಾದೊಡನೆ ಕ್ರೀಡಾಂಗಣಗಳು ಭಣಗುಡಲಾರಂಭಿಸಿವೆ. ದೊಡ್ಡ ದೊಡ್ಡ ಕ್ರೀಡಾಕೂಟಗಳಿಗೆ ತುಸು ವಿರಾಮ ನೀಡಲಾಗಿದೆ. ಹಾಗೆಂದು, ಕ್ರೀಡೆಗಳಿಗೆ ಇಲ್ಲಿ ಬರವಿಲ್ಲ. ಆದರೆ,

ಗ್ರಾಮೀಣ ಕ್ರೀಡೆಗಳು ಮಳೆಗಾಲದಲ್ಲಿ ಮತ್ತೆ ಜನಮನ ಸೆಳೆಯುತ್ತಿವೆ. ಕೆಸರು ಗದ್ದೆಗಳಲ್ಲಿ, ಆಟದ ಮೈದಾನಗಳಲ್ಲಿ ಮನೋರಂಜನ ಕ್ರೀಡೆಗಳನ್ನು ಹಮ್ಮಿಕೊಂಡು ಯುವಜನರು ಸಂಭ್ರಮಿಸುತ್ತಾರೆ. ಇದರೊಂದಿಗೆ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ, ಗೌಡ ಅಕಾಡೆಮಿ ಸೇರಿದಂತೆ ವಿವಿಧ ಅಕಾಡೆಮಿಗಳು ಕೂಡ ‘ಬೇಲ್ ನಮ್ಮೆ’ ಆಚರಿಸಿ ಗ್ರಾಮೀಣ ಕ್ರೀಡೆಗಳಿಗೆ ಪ್ರೋತ್ಸಾಹ ನೀಡುವ ಮೂಲಕ ಸಂಭ್ರಮಿಸುವುದನ್ನು ಜಿಲ್ಲೆಯಲ್ಲಿ ನಾವು ಕಾಣಬಹುದು.

ಜಿಲ್ಲೆಯಲ್ಲಿ ಮಳೆಗಾಲದ ಕ್ರೀಡೆಗಳಿಗೆ ವಿಶೇಷ ಮಹತ್ವವಿದೆ. ವಿಶೇಷವಾಗಿ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಆಗಸ್ಟ್ ತಿಂಗಳ ಮೊದಲ ವಾರದಲ್ಲಿ ಮಡಿಕೇರಿ ಸಮೀಪದ ಕಗ್ಗೋಡ್ಲು ಗ್ರಾಮದಲ್ಲಿ ಕೆಸರುಗದ್ದೆ ಕ್ರೀಡಾಕೂಟವನ್ನು ಆಯೋಜಿಸುವುದರ ಮೂಲಕ ಮಳೆಗಾಲದ ಕ್ರೀಡಾಕೂಟಗಳಿಗೆ ನಾಂದಿ ಹಾಡಲಿದೆ. ಕಳೆದ ಕೆಲವು ವರ್ಷಗಳಿಂದ ಸತತವಾಗಿ ಕೆಸರುಗದ್ದೆ ಕ್ರೀಡಾಕೂಟಗಳು ಇಲ್ಲಿನ ಗದ್ದೆಗಳಲ್ಲಿ ನಡೆದು ಜನರನ್ನು ರಂಜಿಸುತ್ತಿವೆ.

ಜಿಲ್ಲೆಯ ಜನಪದ ಸಂಸ್ಕೃತಿಯ ಭಾಗವಾಗಿ ನಾಟಿ ಪೂರೈಸಿದ ಕೂಡಲೇ ಗದ್ದೆಗಳಲ್ಲಿ ಹಿಂದೆ ‘ನಾಟಿ ಓಟ’ ಜರುಗುತ್ತಿತ್ತು. ಈಗ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಕೆಸರು ಗದ್ದೆಯಲ್ಲಿ ವಿವಿಧ ಕ್ರೀಡಾಪಟುಗಳು ಜರುಗಿ ವೈವಿಧ್ಯತೆ ಪಡೆದುಕೊಂಡಿವೆ. ಇದರ ಪ್ರಯೋಜನ ಮಕ್ಕಳಿಗೆ, ಯುವಜನರಿಗೆ ಲಭಿಸಬೇಕು. ಚಟುವಟಿಕೆಗಳು ಕ್ರೀಡೆಗೆ ಮಾತ್ರ ಸೀಮಿತವಾಗದೆ ಉದ್ದೇಶ ಸಫಲತೆ ಕಾಣಬೇಕು. ಕೃಷಿ ಚಟುವಟಿಕೆಗಳ ಬಗ್ಗೆ ಮಕ್ಕಳು ಅರಿವು ಹೊಂದಬೇಕು ಎಂಬುದು ಹಿರಿಯರ ಆಶಯ.

ಜಿಲ್ಲೆಯಲ್ಲಿನ ಆಚಾರ, ವಿಚಾರ, ಪದ್ಧತಿ, ಪರಂಪರೆ ಸೇರಿದಂತೆ ಕ್ರೀಡೆಗಳು ಸಹ ಪ್ರತಿಯೊಂದು ಕೃಷಿ ಆಧಾರಿತವಾಗಿದೆ. ಇತ್ತೀಚೆಗೆ ಕೃಷಿಯಲ್ಲಿ ಯುವ ಜನಾಂಗ ಆಸಕ್ತಿ ಕುಂಠಿತಗೊಂಡಿದ್ದು ಅವರಲ್ಲಿ ಆಸಕ್ತಿ ಬೆಳೆಸುವ ಉದ್ದೇಶದಿಂದ ಕೃಷಿ ಆಧಾರಿತ ಕ್ರೀಡಾಕೂಟಗಳನ್ನು ಆಯೋಜಿಸಲಾಗುತ್ತಿದೆ.

ನಾಲ್ಕುನಾಡು ವ್ಯಾಪ್ತಿಯ ವಿವಿಧೆಡೆ ಕೆಸರುಗದ್ದೆ ಓಟ, ವಾಲಿಬಾಲ್, ಹಗ್ಗ ಜಗ್ಗಾಟ ಮತ್ತಿತರ ಕ್ರೀಡೆಗಳನ್ನು ಆಯೋಜಿಸಲಾಗುತ್ತಿದೆ. ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಈ ಹಿಂದೆ ನಾಪೋಕ್ಲುವಿನಲ್ಲಿ ಆಯೋಜಿಸಿದ್ದ ‘ಬೇಲ್ ನಮ್ಮ’ ವೀಕ್ಷಕರ ಮನರಂಜಿಸಿತ್ತು. ಅಗೆ ತೆಗೆಯುವ ಸ್ಪರ್ಧೆ, ನಾಟಿ ನೆಡುವ ಸ್ಪರ್ಧೆ, ಕೆಸರುಗದ್ದೆ ಓಟ ಕೆಸರುಗದ್ದೆಯಲ್ಲಿ ಎಲ್ಲೆಂದರಲ್ಲಿ ಅಡ್ಡಾಡಿ ಬಿದ್ದು ನಿಧಿಗಾಗಿ ಶೋಧನೆ, ಎರಡು ತಂಡಗಳ ನಡುವಿನ ಬಲಾಬಲಾ ಪ್ರದರ್ಶನದ ಹಗ್ಗಜಗ್ಗಾಟ ಮುಂತಾದ ಹತ್ತು ಹಲವು ಕ್ರೀಡೆಗಳು ಕೆಸರುಗದ್ದೆಯಲ್ಲಿ ರಂಜಿಸುತ್ತಿದ್ದವು. ಈಗಲೂ ಸಂಘ-ಸಂಸ್ಥೆಗಳು ಕೆಸರಗದ್ದೆಯಲ್ಲಿ ಹಗ್ಗ ಜಗ್ಗಾಟ ಮತ್ತು ವಾಲಿಬಾಲ್ ಕ್ರೀಡೆಗಳನ್ನು ನಡೆಸುತ್ತಿವೆ.

ಮಳೆಗಾಲದ ಮುಕ್ತಾಯದ ಹಂತದಲ್ಲಿ ವಿಶೇಷವಾಗಿ ಭತ್ತದ ಗದ್ದೆಯ ಕೆಲಸಗಳು ಪೂರ್ಣಗೊಂಡ ಬಳಿಕ ಕೊಡಗಿನಲ್ಲಿ ಸಾಂಪ್ರದಾಯಿಕವಾಗಿ ಕ್ರೀಡಾಕೂಟಗಳನ್ನು ನಡೆಸುವುದು ವಿಶೇಷ. ‘ಕೈಲು ಮುಹೂರ್ತ’ ಹಬ್ಬದ ಸಂದರ್ಭದಲ್ಲಿ ವಿವಿಧ ಯುವಕ ಸಂಘಗಳು ಗ್ರಾಮೀಣ ಕ್ರೀಡೆಗಳನ್ನು ಆಯೋಜಿಸುತ್ತವೆ. ಕಣ್ಣಿಗೆ ಬಟ್ಟೆ ಕಟ್ಟಿ ಮಡಿಕೆ ಒಡೆಯುವುದು, ನಿಂಬೆ- ಚಮಚ ಓಟ, ಕಾಲಿಗೆ ಹಗ್ಗ ಕಟ್ಟಿ ಓಡುವುದು ಸೇರಿದಂತೆ ಗ್ರಾಮೀಣ ಕ್ರೀಡೆಗಳಿಗೆ ಉತ್ತೇಜನ ನೀಡಿ ಯುವ ಕ್ರೀಡಾಪಟುಗಳನ್ನು ಹುರಿದುಂಬಿಸುವಂಥದ್ದು ಹಿಂದಿನಿಂದ ನಡೆದು ಬಂದ ಸಂಪ್ರದಾಯ.

ಕಣ್ಣಿಗೆ ಬಟ್ಟೆ ಕಟ್ಟಿ ಮಡಿಕೆಒಡೆಯುವ ಗ್ರಾಮೀಣ ಕ್ರೀಡೆ.
ಕಣ್ಣಿಗೆ ಬಟ್ಟೆ ಕಟ್ಟಿ ಮಡಿಕೆಒಡೆಯುವ ಗ್ರಾಮೀಣ ಕ್ರೀಡೆ.
ತಾಳ್ಮೆಏಕಾಗ್ರತೆ ಪರೀಕ್ಷಿಸುವ ನಿಂಬೆ-ಚಮಚ ಓಟ.
ತಾಳ್ಮೆಏಕಾಗ್ರತೆ ಪರೀಕ್ಷಿಸುವ ನಿಂಬೆ-ಚಮಚ ಓಟ.
ಮಡಿಕೇರಿ ಸಮೀಪದ ಬಿಳಿಗೇರಿ ಗ್ರಾಮದಲ್ಲಿ ಭಾನುವಾರ ತುಂತ್ತಾಜೆ ಮನೆಸ್ಥಾನದವರ ಗದ್ದೆಯಲ್ಲಿ ಪ್ಲಾಂಟರ್ ಕ್ಲಬ್ ಬಿಳಿಗೇರಿ ಆಯೋಜಿಸಿದ್ದ 3ನೇ ವರ್ಷದ ಮುಕ್ತ ಕೆಸರುಗದ್ದೆ ಕ್ರೀಡಾಕೂಟದಲ್ಲಿ ಮಹಿಳೆಯರು ಹಗ್ಗಜಗ್ಗಾಟ ಆಟದಲ್ಲಿ ಪಾಲ್ಗೊಂಡರು
ಮಡಿಕೇರಿ ಸಮೀಪದ ಬಿಳಿಗೇರಿ ಗ್ರಾಮದಲ್ಲಿ ಭಾನುವಾರ ತುಂತ್ತಾಜೆ ಮನೆಸ್ಥಾನದವರ ಗದ್ದೆಯಲ್ಲಿ ಪ್ಲಾಂಟರ್ ಕ್ಲಬ್ ಬಿಳಿಗೇರಿ ಆಯೋಜಿಸಿದ್ದ 3ನೇ ವರ್ಷದ ಮುಕ್ತ ಕೆಸರುಗದ್ದೆ ಕ್ರೀಡಾಕೂಟದಲ್ಲಿ ಮಹಿಳೆಯರು ಹಗ್ಗಜಗ್ಗಾಟ ಆಟದಲ್ಲಿ ಪಾಲ್ಗೊಂಡರು
ಮಡಿಕೇರಿ ಸಮೀಪದ ಬಿಳಿಗೇರಿ ಗ್ರಾಮದಲ್ಲಿ ಭಾನುವಾರ ತುಂತ್ತಾಜೆ ಮನೆಸ್ಥಾನದವರ ಗದ್ದೆಯಲ್ಲಿ ಪ್ಲಾಂಟರ್ ಕ್ಲಬ್ ಬಿಳಿಗೇರಿ ಆಯೋಜಿಸಿದ್ದ 3ನೇ ವರ್ಷದ ಮುಕ್ತ ಕೆಸರುಗದ್ದೆ ಕ್ರೀಡಾಕೂಟದಲ್ಲಿ ಮಕ್ಕಳು ಸಂಭ್ರಮದಿಂದ ಪಾಲ್ಗೊಂಡಿದ್ದರು
ಮಡಿಕೇರಿ ಸಮೀಪದ ಬಿಳಿಗೇರಿ ಗ್ರಾಮದಲ್ಲಿ ಭಾನುವಾರ ತುಂತ್ತಾಜೆ ಮನೆಸ್ಥಾನದವರ ಗದ್ದೆಯಲ್ಲಿ ಪ್ಲಾಂಟರ್ ಕ್ಲಬ್ ಬಿಳಿಗೇರಿ ಆಯೋಜಿಸಿದ್ದ 3ನೇ ವರ್ಷದ ಮುಕ್ತ ಕೆಸರುಗದ್ದೆ ಕ್ರೀಡಾಕೂಟದಲ್ಲಿ ಮಕ್ಕಳು ಸಂಭ್ರಮದಿಂದ ಪಾಲ್ಗೊಂಡಿದ್ದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT