ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸುಳ್ಳು ಮೊಕದ್ದಮೆ ಹಿಂಪಡೆಯಲು ಒತ್ತಾಯ: ಬಿಜೆಪಿ

Published 30 ಏಪ್ರಿಲ್ 2024, 15:47 IST
Last Updated 30 ಏಪ್ರಿಲ್ 2024, 15:47 IST
ಅಕ್ಷರ ಗಾತ್ರ

ಸೋಮವಾರಪೇಟೆ: ಕಾಂಗ್ರೆಸ್ ದಮನ ನೀತಿಗೆ ಬಿಜೆಪಿ ಕಾರ್ಯಕರ್ತರು ಮಣಿಯುವುದಿಲ್ಲ. ಇಂತಹ ಹಲವಾರು ಘಟನೆಗಳನ್ನು ಎದುರಿಸಿಯೇ ಮುಂದೆ ಬಂದಿದ್ದು, ಕಾಂಗ್ರೆಸ್ ನೀತಿಯನ್ನು ಕೂಡಲೇ ಬಿಡಬೇಕೆಂದು ಮಂಡಲ ಬಿಜೆಪಿ ಒತ್ತಾಯಿಸಿದೆ.

ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಂಡಲ ವಕ್ತಾರ ಕಂಠಿ ಕಾರ್ಯಪ್ಪ ಮಾತನಾಡಿ, ಆಡಳಿತ ಯಂತ್ರವನ್ನು ದುರಪಯೋಗಪಡಿಸಿಕೊಂಡು ಸುಳ್ಳು ಮೊಕದ್ದಮೆ ದಾಖಲಿಸುವ ಮೂಲಕ ಬಿಜೆಪಿ ಕಾರ್ಯಕರ್ತರ ಶಕ್ತಿಯನ್ನು ಕುಗ್ಗಿಸುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ.ಲೋಕಸಭಾ ಚುನಾವಣೆಯ ಮತದಾನದ ದಿನ  ಶನಿವಾರಸಂತೆ ಬೈಪಾಸ್ ರಸ್ತೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತ ಗಂಗಾಧರ್ ಹಾಗೂ ಬಿಜೆಪಿ ಬೆಂಬಲಿಗರಾದ ಪಾರ್ವತಿ ಎಂಬವರ ನಡುವೆ ಜಗಳ ನಡೆಯುತ್ತಿದ್ದಾಗ ವರದಿಗಾರ ಹರೀಶ್ ಕುಮಾರ್ ಗಲಾಟೆ ದೃಶ್ಯವನ್ನು ಸೆರೆ ಹಿಡಿಯುತ್ತಿದ್ದರು. ಅಲ್ಲಿಗೆ ಆಗಮಿಸಿದ ಕಾಂಗ್ರೆಸ್ ಕಾರ್ಯಕರ್ತರಾದ ಅಕ್ಮಲ್ ಪಾಶ ಮತ್ತು ಗಂಗಾಧರ್ ಕ್ಯಾಮೆರಾ ಕಿತ್ತುಕೊಂಡು, ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ದೂರಿದರು.ಹರೀಶ್ ಕುಮಾರ್ ನೀಡಿದ ದೂರನ್ನು ವಿಳಂಬವಾಗಿ ಸ್ವೀಕರಿಸಿ ಮೊಕದ್ದಮೆ ದಾಖಲಿಸಲಾಗಿದೆ ಎಂದು ಆರೋಪಿಸಿದರು.

‌ಆದರೆ, ಕಾಂಗ್ರೆಸ್ ಶಾಸಕ ಮಂತರ್ ಗೌಡ ಒತ್ತಡದಿಂದ ಹರೀಶ್ ಕುಮಾರ್ ಹಾಗೂ ಬಿಜೆಪಿಯ ಎಸ್.ಎನ್. ರಘು ವಿರುದ್ಧವೇ ಶನಿವಾರಸಂತೆ ಠಾಣೆಯಲ್ಲಿ ಕೊಲೆಯತ್ನ ಪ್ರಕರಣ ದಾಖಲಾಗಿದೆ. ಶಾಸಕರು ಕಾಂಗ್ರೆಸ್ ಪಕ್ಷಕ್ಕಷ್ಟೇ ಅಲ್ಲ, ಮಡಿಕೇರಿ ಕ್ಷೇತ್ರದ ಜನರಿಗೂ ಶಾಸಕರೇ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಬೇಕು. ಕಾರ್ಯಕರ್ತರು ಹೇಳಿದ್ದೆಲ್ಲವೂ ಸತ್ಯ ಎಂದು ತಿಳಿದು ಬಿಜೆಪಿ ಕಾರ್ಯಕರ್ತರ ಮೇಲೆ ದೌರ್ಜನ್ಯ ಹಾಗೂ ಸುಳ್ಳು ಮೊಕದಮೆ ದಾಖಲಿಸುವುದು ಸಲ್ಲದು ಎಂದು ಹೇಳಿದರು.

ಕೂಡಲೆ ಬಿಜೆಪಿ ಕಾರ್ಯಕರ್ತರ ವಿರುದ್ಧ ದಾಖಲಾಗಿರುವ ಸುಳ್ಳು ಪ್ರಕರಣವನ್ನು ಕೈಬಿಡಬೇಕು. ತಪ್ಪಿದಲ್ಲಿ ಜಿಲ್ಲಾಮಟ್ಟದಲ್ಲಿ ಪಕ್ಷದಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಬಿಜೆಪಿ ಮಂಡಲ ಅಧ್ಯಕ್ಷ ಎಂ.ಸಿ.ಗೌತಮ್ ಎಚ್ಚರಿಸಿದರು.

ಇತ್ತೀಚಿನ ದಿನಗಳಲ್ಲಿ ಅನೇಕ ಕಾಂಗ್ರೆಸ್ ಕಾರ್ಯಕರ್ತರು ಶಾಸಕರಂತೆ ವರ್ತಿಸುತ್ತಿದ್ದಾರೆ. ಕಚೇರಿಗಳಲ್ಲಿ ಅಧಿಕಾರಿಗಳನ್ನೇ ಬೆದರಿಸುತ್ತಾರೆ ಎಂಬ ದೂರು ಕೇಳಿಬರುತ್ತಿದೆ. ಕಾರ್ಯಕರ್ತರ ಕಾಟದಿಂದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ವೈದ್ಯರೇ ಬರುತ್ತಿಲ್ಲ. ಹಿಂದೆ ಅಪ್ಪಚ್ಚು ರಂಜನ್ ಅವರು ಶಾಸಕರಾಗಿದ್ದ ಸಂದರ್ಭ 10 ವೈದ್ಯರು ಸರ್ಕಾರಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದರು. ಈಗ 3–4 ವೈದ್ಯರು ಮಾತ್ರ ಕೆಲಸ ಮಾಡುತ್ತಿದ್ದಾರೆ ಎಂದು ಮಂಡಲ ಪ್ರಧಾನ ಕಾರ್ಯದರ್ಶಿ ಎಸ್.ಆರ್.ಸೋಮೇಶ್ ದೂರಿದರು.

ಪಕ್ಷದ ಪದಾಧಿಕಾರಿಗಳಾದ ದರ್ಶನ್ ಜೋಯಪ್ಪ, ಕೃಷ್ಣಪ್ಪ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT