ಸೋಮವಾರಪೇಟೆ: ಈ ಮುಖ್ಯ ರಸ್ತೆಗಳಲ್ಲಿ ಗುಂಡಿಗಳದ್ದೇ ಕಾರುಬಾರು

7
ಇನ್ನೂ ಆರಂಭಗೊಂಡಿಲ್ಲ ಕಾಮಗಾರಿ

ಸೋಮವಾರಪೇಟೆ: ಈ ಮುಖ್ಯ ರಸ್ತೆಗಳಲ್ಲಿ ಗುಂಡಿಗಳದ್ದೇ ಕಾರುಬಾರು

Published:
Updated:
Deccan Herald

ಸೋಮವಾರಪೇಟೆ: ಸರ್ಕಾರದಿಂದ ರಸ್ತೆ ಅಭಿವೃದ್ಧಿಗೆ ಕೋಟಿ ಲೆಕ್ಕದಲ್ಲಿ ಹಣ ಬಿಡುಗಡೆಯಾದರೂ, ಸೂಕ್ತ ಸಮಯದಲ್ಲಿ ಕಾಮಗಾರಿ ಮುಗಿಸಿ ಜನರ ಉಪಯೋಗಕ್ಕೆ ಸಿಗುವುದೇ ದೊಡ್ಡ ಸಮಸ್ಯೆ. ಸಿಕ್ಕರೂ ಅವಧಿಗೆ ಮುನ್ನವೇ ಮತ್ತೆ ಬಳಕೆಗೆ ದೂರವಾಗುತ್ತವೆ.

ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಹಲವು ರಸ್ತೆಗಳಲ್ಲಿ ಸಂಚರಿಸುವ ವಾಹನ ಸವಾರರು ಗೋಳಾಡಿಕೊಂಡೇ ಓಡಾಡುವ ಪರಿಸ್ಥಿತಿ ಇದೆ. ಗುಂಡಿಗಳೇ ತುಂಬಿರುವ ರಸ್ತೆಗಳಲ್ಲಿ ವಾಹನ ಸವಾರರು ಹಾಗೂ ರಾತ್ರಿ ಸಮಯದಲ್ಲಿ ಜನರು ಸಂಚರಿಸಲು ಪರದಾಡಬೇಕಾಗಿದೆ.

ಕೆಲವೆಡೆ ಒಂದು ಅಡಿ ಆಳದವರೆಗೆ ಗುಂಡಿ ನಿರ್ಮಾಣವಾಗಿದೆ. ಮಳೆಗಾಲವಾಗಿರುವುದರಿಂದ ನೀರು ತುಂಬಿಕೊಂಡರೆ ಗುಂಡಿ ಇರುವುದೂ ತಿಳಿಯದೆ ಬೀಳುವ ಪ್ರಸಂಗಗಳು ನಡೆದಿವೆ.

‘ಪಟ್ಟಣದಲ್ಲಿ ಕೆಲವು ಬಡಾವಣೆಯ ರಸ್ತೆಗಳು ತೀರಾ ಚಿಕ್ಕದಾಗಿದ್ದು, ವಾಹನಗಳು ಸಂಚರಿಸಲು ದುಸ್ತರವಾಗಿದೆ. ಹೊಸದಾಗಿ ಮನೆ ಕಟ್ಟಿಸುತ್ತಿರುವ ಕೆಲವರು ಮುಖ್ಯ ರಸ್ತೆಯಲ್ಲಿಯೇ ಜಲ್ಲಿಕಲ್ಲು ಮತ್ತು ಮರಳನ್ನು ಸುರಿದಿದ್ದರೂ, ಇದನ್ನು ತೆರವುಗೊಳಿಸಲು ಪಟ್ಟಣ ಪಂಚಾಯಿತಿ ಮುಂದಾಗದಿರುವುದರಿಂದ ವಾಹನಗಳು ಸಂಚರಿಸಲು ತೊಂದರೆಯಾಗಿದೆ’ ಎಂದು ವಾಹನ ಚಾಲಕರ ಸಂಘದ ಅಧ್ಯಕ್ಷರಾದ ಸಿ.ಸಿ. ನಂದ ದೂರಿದರು.

ಪಟ್ಟಣದಲ್ಲಿ ಜನಸಂಖ್ಯೆಗಿಂತ ವಾಹನಗಳ ಸಂಖ್ಯೆ ಹೆಚ್ಚುತ್ತಿದೆ. ಮುಖ್ಯ ರಸ್ತೆ ಮತ್ತು ತ್ಯಾಗರಾಜ ರಸ್ತೆ, ಸಿ.ಕೆ. ಸುಬ್ಬಯ್ಯ ರಸ್ತೆಯ ಒಂದು ಭಾಗದಲ್ಲಿ ವಾಹನಗಳನ್ನು ನಿಲ್ಲಿಸುತ್ತಿರುವುದರಿಂದ ಬೃಹತ್ ವಾಹನಗಳಿಗೆ ಮತ್ತು ಪಾದಚಾರಿಗಳಿಗೆ ತೀವ್ರ ತೊಂದರೆ ಉಂಟಾಗುತ್ತಿದೆ. ಇಲ್ಲಿನ ವಲ್ಲಭಬಾಯಿ ಬ್ಲಾಕ್‌ನಲ್ಲಿ ಹಲವು ರಸ್ತೆಗಳು ಕಿತ್ತು ಹೋಗಿದ್ದು, ಆ ಸ್ಥಳದಲ್ಲಿ ರಸ್ತೆ ಇವೆಯೇ ಎಂಬ ಗೊಂದಲ ಮೂಡುತ್ತದೆ. ಆದರೆ ಇದನ್ನು ಸರಿಪಡಿಸುವ ಗೋಜಿಗೆ ಯಾರೂ ಮುಂದಾಗುತ್ತಿಲ್ಲ.

ಮಳೆಗೂ ಮುನ್ನ ರಸ್ತೆ ಕಾಮಗಾರಿಗೆ ನಗರೋತ್ಥಾನ ಯೋಜಯನೆಡಿ ₹1.70 ಕೋಟಿಗೆ ಟೆಂಡರ್ ಕರೆದು ಶಾಸಕರು ಭೂಮಿ ಪೂಜೆ ನೆರವೇರಿಸಿದ್ದರಾದರೂ ಕಾಮಗಾರಿ ಪ್ರಾರಂಭಗೊಳ್ಳಲಿಲ್ಲ. ಪಟ್ಟಣದ ಹೃದಯ ಭಾಗದಲ್ಲಿ ತಾಲ್ಲೂಕು ಕಚೇರಿ ಮತ್ತು ಪೊಲೀಸ್ ಇಲಾಖೆಗೆ ತೆರಳುವ ರಸ್ತೆ ಸಂಪೂರ್ಣ ಹಾಳಾಗಿದೆ. ‘ರಾತ್ರಿ ಸಮಯದಲ್ಲಿ ರೇಂಜರ್ ಬ್ಲಾಕ್ ಮತ್ತು ಮಹದೇಶ್ವರ ಬ್ಲಾಕ್‌ಗೆ ತೆರಳುವುದೇ ಸಾಹಸ’ ಎಂದು ನಿವಾಸಿ ನಾಗರಾಜು ಆರೋಪಿಸುತ್ತಾರೆ. ಹಿಂದಿನ ಆಡಳಿತ ಮಂಡಳಿಯ ಅವಧಿಯಲ್ಲಿ ರಸ್ತೆ ಸರಿಪಡಿಸುವಂತೆ ಹಲವು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದರು.

ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ನಾಚಪ್ಪ ಮಾತನಾಡಿ, ರಸ್ತೆ ಕಾಮಗಾರಿಗೆ ಮಳೆಗೂ ಮುನ್ನ ಟೆಂಡರ್ ಪ್ರಕ್ರಿಯೆ ನಡೆದಿತ್ತು. ಆದರೆ, ವಿಧಾನ ಸಭೆ ಮತ್ತು ವಿಧಾನ ಪರಿಷತ್ ಚುನಾವಣೆಗೆ ನೀತಿ ಸಂಹಿತೆ ಜಾರಿಯಾಗಿದ್ದರಿಂದ ಕಾಮಗಾರಿ ಮಾಡಲು ಸಾಧ್ಯವಾಗಲಿಲ್ಲ. ಇದೀಗ ಭಾರಿ ಮಳೆಯಾಗುತ್ತಿದ್ದು, ಮಳೆ ಮುಗಿದ ನಂತರ ರಸ್ತೆ ಕಾಮಗಾರಿ ಮಾಡುವುದಾಗಿ ತಿಳಿಸಿದರು.

‘ಪಟ್ಟಣದ ಎಲ್ಲ ರಸ್ತೆಗಳು ದುಸ್ಥಿತಿಗೆ ಬಂದಿದ್ದು, ರಸ್ತೆಗಳನ್ನು ಸರಿಪಡಿಸಲು ಮಳೆಹಾನಿ ಪರಿಹಾರದಲ್ಲಿ ₹50 ಲಕ್ಷದ ಯೋಜನೆ ತಯಾರಿಸಿ ಜಿಲ್ಲಾಧಿಕಾರಿಗಳಿಗೆ ಕಳುಹಿಸಲಾಗಿದೆ. ಮುಂದಿನ ದಿನಗಳಲ್ಲಿ ಎಲ್ಲ ರಸ್ತೆಗಳನ್ನು ಸರಿಪಡಿಸಲಾಗುವುದು’ ಎಂದು ತಿಳಿಸಿದರು.

 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !