ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮಡಿಕೇರಿ: ಮಾಯದಂತಹ ಮಳೆಗೆ ತುಂಬಿದ ಕೆರೆಕಟ್ಟೆಗಳು

ಮುಂಗಾರಿಗೂ ಮುನ್ನವೇ ಕೆರೆಕಟ್ಟೆಗಳನ್ನು ತುಂಬಿಸಿದ ವರುಣ
Published 26 ಮೇ 2024, 5:29 IST
Last Updated 26 ಮೇ 2024, 5:29 IST
ಅಕ್ಷರ ಗಾತ್ರ

ಮಡಿಕೇರಿ: ‘ಮಾಯದಂತ ಮಳೆ ಬಂತಣ್ಣ ಮದಗಾದ ಕೆರೆಗೆ...’ ಎಂಬ ಜನಪದ ಗೀತೆ ಪ್ರಸ್ತುತ ಸುರಿಯುತ್ತಿರುವ ಮಳೆ, ತುಂಬುತ್ತಿರುವ ಕೆರೆಗಳನ್ನು ನೋಡಿದರೆ ನೆನಪಿಗೆ ಬರುತ್ತದೆ.

‘ಅಂಗೈಯಗಳ ಮೋಡನಾಡಿ ಭೂಮಿತೂಕದ ಗಾಳಿ ಬೀಸಿ ಗುಡುಗಿ ಗೂಡಾಗಿ ಚೆಲ್ಲಿದಳೋ ಗಂಗಮ್ಮ ತಾಯಿ’ ಎಂದು ಗೀತೆಯಲ್ಲಿ ಬರುವಂತೆ ಜೋರು ಗಾಳಿ, ಗುಡುಗು, ಸಿಡಿಲಿನಿಂದ ಕೂಡಿದ ಧಾರಾಕಾರವಾದ ಮಳೆ ಕೆರೆಕಟ್ಟೆಗಳನ್ನೆಲ್ಲ ಮುಂಗಾರಿಗೂ ಮುನ್ನವೇ ತುಂಬಿಸಿದೆ.

ಮೇ ತಿಂಗಳ ಆರಂಭದವರೆಗೂ ಜಿಲ್ಲೆಯಲ್ಲಿ ಒಂದು ಹನಿ ಮಳೆ ಬಂದಿರಲಿಲ್ಲ. ಕೆರೆಕಟ್ಟೆಗಳು ಬಿರುಬಿಸಿಲಿನ ಬೇಗೆಗೆ ಒಣಗಿ ಹೋಗಿದ್ದವು. ಯಾವ ಕೆರೆ ನೋಡಿದರೂ ಬಿರುಕು ಬಿಟ್ಟ ಕೆರೆಯಂಗಳವೇ ಕಾಣಿಸುತ್ತಿತ್ತು. ಅನೇಕ ಜಲಚರಗಳು ನೀರಿಲ್ಲದೇ ಕಾಣದಾದವು.  ಮತ್ತೆ ಕೆಲವು, ಗುಂಡಿಗಳಲ್ಲಿ ತುಂಬಿದ್ದ ನೀರಿನಲ್ಲಿ ಗುಟುಕು ಜೀವವಿಡಿದು ಮಳೆಗಾಗಿ ಚಾತಕ ಪಕ್ಷಿಗಳಂತೆ ಕಾಯುತ್ತಿದ್ದವು.

ಜಲಚರಗಳ ಮೊರೆಗೋ, ಏನೋ ಎಂಬಂತೆ ಒಮ್ಮೆಗೆ ಸುರಿಯಲು ತೊಡಗಿದ ಮಳೆ ಅಕ್ಷರಶಃ ಮಾಯದಂತಹ ಮಳೆ ಎನಿಸಿತು. ಗುಡುಗು, ಸಿಡಿಲುಗಳು, ಒಮ್ಮೆಗೆ ಆಕಾಶವೇ ತೂತಾದ ಹಾಗೆ ಭೋರನೇ ಸುರಿಯುತ್ತಿದ್ದ ಮಳೆ, ಅಕಾಲಿಕವಾಗಿ ಮುಂಗಾರಿನ ಗಾಳಿಯಂತೆ ಬೀಸುತ್ತಿದ್ದ ಮಾರುತಗಳು ನಿಜಕ್ಕೂ ದಿಗಿಲು ಮೂಡಿಸಿದ್ದವು. ಆದರೆ, ಇದರಿಂದ ಕೆರೆ, ಕಟ್ಟೆಗಳಿಗೆ ಜೀವ ಕಳೆ ಬಂದಿದಂತೂ ಸತ್ಯ. ಜಲಚರಗಳ ಜೀವಗಳನ್ನು ಕಾಪಾಡಿದ್ದೂ ಸತ್ಯ.

ವಿಶೇಷವಾಗಿ ಕಾಡಿನೊಳಗಿನ ಕೆರೆಗಳಲ್ಲಿ ನೀರು ಕಡಿಮೆಯಾಗಿ ವನ್ಯಜೀವಿಗಳು ಜನವಸತಿ ಪ್ರದೇಶಗಳತ್ತ ಬರುತ್ತಿದ್ದವು. ರಾಜ್ಯದಲ್ಲಿ ಏಪ್ರಿಲ್ ಮತ್ತು ಮೇ ತಿಂಗಳಿನಲ್ಲಿ ವನ್ಯಜೀವಿಗಳಿಂದ ಮಾನವ ಪ್ರಾಣಹಾನಿ ಹೆಚ್ಚು ಆಗಿತ್ತು. ಕೊಡಗು ಜಿಲ್ಲೆಯಲ್ಲೂ ಕೇವಲ 30 ದಿನಗಳಲ್ಲಿ ಮೂವರು ಆನೆ ದಾಳಿಗೆ ಸಿಲುಕಿ ಮೃತಪಟ್ಟಿದ್ದರು. ಪರಿಸ್ಥಿತಿ ಹೇಗಿತ್ತು ಎಂದರೆ ಒಂದೇ ದಿನ ಕಾಡಾನೆ, ಹುಲಿ, ಕರಡಿ ಹಾಗೂ ಕಾಡೆಮ್ಮೆಗಳು ಮನುಷ್ಯರ ಮೇಲೆ ದಾಳಿ ಎಸಗಿದ್ದವು. ಇವೆಲ್ಲವೂ ನೀರಿಗಾಗಿ ಇಲ್ಲವೇ ಹಸಿರು ಮೇವಿಗಾಗಿ ಜನವಸತಿ ಪ್ರದೇಶಗಳತ್ತ ಬಂದಿದ್ದವು.

ಇದೇ ರೀತಿ ಬಿಸಿಲ ಬೇಗೆಯನ್ನು ಸಹಿಸಲಾರದೆ ಕಾಡಾನೆಗಳು ಕಾಫಿತೋಟಗಳ ಕೆರೆಗಳಿಗೆ ಬಂದು ಜಲಕ್ರೀಡೆಯಾಡಿದವು. ಈ ವೇಳೆ ಪೊನ್ನಂಪೇಟೆ ತಾಲ್ಲೂಕಿನ ಶ್ರೀಮಂಗಲದ ಕುಮಟೂರಿನ ಕಾಫಿತೋಟದ ಕೆರೆಯಲ್ಲಿ ಜಲಕ್ರೀಡೆಯಾಡಿದ ಆನೆ ಹಿಂಡುಗಳಲ್ಲಿದ್ದ ಮೂರು ಆನೆಗಳು ಮೇಲೆ ಬರಲಾರದೇ ಪರದಾಡಿದವು. ಅರಣ್ಯ ಇಲಾಖೆ ಸಿಬ್ಬಂದಿ ಜೆಸಿಬಿ ಮೂಲಕ ಮಣ್ಣು ತೆಗೆದು ಆನೆಗಳು ಮೇಲೆ ಬರಲು ಸಹಾಯ ಮಾಡಿದ್ದರು. ಇದೇ ಬಗೆಯಲ್ಲಿ ಅನೇಕ ಕಡೆ ಕಾಫಿತೋಟಗಳ ಕೆರೆಗಳನ್ನು ಅರಸಿ ಆನೆಗಳು ಹಾಗೂ ಇತರ ವನ್ಯಜೀವಿಗಳು ಬಂದಿದ್ದವು. 

ಈಗ ಸುರಿದ ಸಮೃದ್ಧ ಮಳೆಯಿಂದ ಕಾಡಿನೊಳಗಿನ ಬಹುತೇಕ ಎಲ್ಲ  ಕೆರೆಗಳೂ ತುಂಬಿವೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಖಚಿತಪಡಿಸಿದ್ದಾರೆ. ನಾಗರಹೊಳೆ ಅರಣ್ಯದೊಳಗಿನ ನಾಗರಹೊಳೆಯಲ್ಲೂ ನೀರು ಭೋರ್ಗರೆಯುತ್ತಿದೆ. ಅಲ್ಲಿನ ಸುಮಾರು 300ಕ್ಕೂ ಅಧಿಕ ಕೆರೆ, ಕಟ್ಟೆಗಳು ತುಂಬಿವೆ ಎಂದು ನಾಗರಹೊಳೆಯ ಸಿಸಿಎಫ್ ಹರ್ಷವರ್ಧನ್ ‘ಪ್ರಜಾವಾಣಿ’ಗೆ ತಿಳಿಸಿದರು.

ಕಾಡಿನಿಂದ ಹೊರಗೆ ಇರುವ ಬಹುತೇಕ ಎಲ್ಲ ಕೆರೆಗಳೂ ಈಗ ಭರ್ತಿಯಾಗುತ್ತಿವೆ. ಬಹಳಷ್ಟು ಕೆರೆಗಳು ತುಂಬಿವೆ. ಮಳೆ ಹೀಗೆಯೇ ಮುಂದುವರಿದೆ ಮುಂಗಾರಿಗೂ ಮುನ್ನವೆ ಎಲ್ಲ ಕೆರೆಗಳೂ ತುಂಬುವ ಸಾಧ್ಯತೆಗಳಿವೆ.

ಹೇಮಾವತಿ ಹಿನ್ನೀರು ಕೊಡ್ಲಿಪೇಟೆಯಲ್ಲಿ ಕಂಡು ಬಂದಿದ್ದು ಹೀಗೆ
ಹೇಮಾವತಿ ಹಿನ್ನೀರು ಕೊಡ್ಲಿಪೇಟೆಯಲ್ಲಿ ಕಂಡು ಬಂದಿದ್ದು ಹೀಗೆ
ನಾಗರಹೊಳೆ ಅರಣ್ಯದಲ್ಲಿರುವ ನಾಗರಹೊಳೆಯು ತುಂಬಿ ಹರಿಯುತ್ತಿದ್ದ ದೃಶ್ಯ ಶನಿವಾರ ಕಂಡು  ಬಂತು
ನಾಗರಹೊಳೆ ಅರಣ್ಯದಲ್ಲಿರುವ ನಾಗರಹೊಳೆಯು ತುಂಬಿ ಹರಿಯುತ್ತಿದ್ದ ದೃಶ್ಯ ಶನಿವಾರ ಕಂಡು  ಬಂತು
ಮಡಿಕೇರಿ ವಿಭಾಗದಲ್ಲಿ ಸುಮಾರು 35ರಿಂದ 40 ಕೆರೆಗಳಿದ್ದು ಸಮೃದ್ಧ ಮಳೆಯಿಂದ ಎಲ್ಲದರಲ್ಲೂ ನೀರು ಸೇರಿದೆ.
ಭಾಸ್ಕರ್ ಡಿಸಿಎಫ್, ಮಡಿಕೇರಿ ವಿಭಾಗ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT