ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ದೇಶ ವಿರೋಧಿ ಶಕ್ತಿಗಳಿಗೆ ಭಯವೇ ಇಲ್ಲ; ಭಾಸ್ಕರ್‌ರಾವ್

Published 7 ಮಾರ್ಚ್ 2024, 5:27 IST
Last Updated 7 ಮಾರ್ಚ್ 2024, 5:27 IST
ಅಕ್ಷರ ಗಾತ್ರ

ಮಡಿಕೇರಿ: ‘ರಾಜ್ಯದಲ್ಲಿ ದೇಶ ವಿರೋಧಿ ಶಕ್ತಿಗಳಿಗೆ ಭಯ ಇಲ್ಲದಂತಾಗಿರುವುದರಿಂದಲೇ ವಿಧಾನಸಭೆಯಲ್ಲಿ ಪಾಕಿಸ್ತಾನದ ಪರ ಘೋಷಣೆ ಕೂಗಿದ್ದಾರೆ. ಬೆಂಗಳೂರಿನಲ್ಲಿ ಬಾಂಬ್ ಸ್ಫೋಟದಂತಹ ಘಟನೆ ನಡೆದಿದೆ’ ಎಂದು ಬಿಜೆಪಿ ನಾಯಕ ಹಾಗೂ ನಿವೃತ್ತ ಐಪಿಎಸ್ ಅಧಿಕಾರಿ ಭಾಸ್ಕರ್‌ರಾವ್ ಹೇಳಿದರು.

‘ಒಂದು ಧರ್ಮದವರನ್ನು ತುಷ್ಟೀಕರಣ ಮಾಡುವ ಸರ್ಕಾರದ ಪ್ರವೃತ್ತಿ ಅತಿಯಾಯಿತು. ಪಾಕ್ ಪರ ಘೋಷಣೆಯ ಪ್ರಕರಣ ದಾಖಲಿಸುವಲ್ಲಿ, ವಿಧಿವಿಜ್ಞಾನ ಪ್ರಯೋಗಾಲಯದ ವರದಿ ಪಡೆಯುವಲ್ಲಿ ಸರ್ಕಾರ ವಿಳಂಬ ಮಾಡಿತು. ಈಗ ಪ್ರಕರಣ ದಾಖಲಿಸಿದ್ದರೂ ಮುಂದೆ ವಾಪಸ್ ಪಡೆಯಬಹುದೆಂಬ ಧೈರ್ಯ ಆರೋಪಿಗಳಲ್ಲಿದೆ’ ಎಂದು ಅವರು ಇಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

‘ಪ್ರಕರಣ ಇತ್ಯರ್ಥಯಾಗುವವರೆಗೂ ರಾಜ್ಯಸಭೆ ಸದಸ್ಯರಾಗಿ ಪ್ರಮಾಣವಚನ ಸ್ವೀಕರಿಸಲು ನಾಸಿರ್ ಹುಸೇನ್ ಅವರಿಗೆ ಅವಕಾಶ ಕೊಡಬಾರದು’ ಎಂದು ಒತ್ತಾಯಿಸಿದರು.

‘ರಾಜ್ಯದಲ್ಲಿದ್ದ ‘ಆ್ಯಂಟಿ ಟೆರರಿಸ್ಟ್ ಸೆಲ್’ ಅನ್ನು ಕಾಂಗ್ರೆಸ್ ಸರ್ಕಾರ ಮುಚ್ಚಿದ್ದರಿಂದ ಬೆಂಗಳೂರಿಗೆ ರಕ್ಷಣೆಯೇ ಇಲ್ಲದಂತಾಗಿದೆ. ಮುಖ್ಯಮಂತ್ರಿ ಮನೆಗೂ ಟ್ಯಾಂಕರ್ ನೀರು ಪೂರೈಸಲಾಗುತ್ತಿದೆ ಎಂದರೆ, ಬರ ಪರಿಸ್ಥಿತಿ ಎದುರಿಸಲು ಸರ್ಕಾರ ಹೇಗೆ ಸಿದ್ಧವಾಗಿದೆ ಎಂಬುದು ಗೊತ್ತಾಗುತ್ತದೆ‌’ ಎಂದು ಟೀಕಿಸಿದರು.

‘10 ವರ್ಷಗಳಿಂದ ಮೈಸೂರು– ಕೊಡಗು ಲೋಕಸಭಾ ಕ್ಷೇತ್ರವನ್ನು ಬಿಜೆಪಿ ಸಂಸದರು ಪ್ರತಿನಿಧಿಸುತ್ತಿದ್ದಾರೆ. ಬದಲಾವಣೆ ಇರಲಿ ಎಂಬ ಕಾರಣಕ್ಕೆ ಹಾಗೂ ನಾನು ಮತ್ತು ಪತ್ನಿ ಇಬ್ಬರು ಈ ಜಿಲ್ಲೆಗಳಲ್ಲಿ ಕೆಲಸ ಮಾಡಿರುವುದರಿಂದ ಟಿಕೆಟ್ ಕೊಡಿ ಎಂದು ವರಿಷ್ಠರಿಗೆ ಮನವಿ ಸಲ್ಲಿಸಿದ್ದೇನೆ. ಸಿಗುವ ವಿಶ್ವಾಸವಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT