ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮಡಿಕೇರಿ: ಕೆಂಡದಂತಹ ಬಿಸಿಲಿನಲ್ಲೂ ಅಂದದ ಕೈತೋಟ!

ತಾವರೆಗಾಗಿಯೇ ಕೊಳ ಕಟ್ಟಿಸಿದರು, ಇದು ಬರೀ ಮನೆಯಂಗಳವಲ್ಲ, ಹೂಗಳ ಲೋಕ
Published 23 ಫೆಬ್ರುವರಿ 2024, 4:59 IST
Last Updated 23 ಫೆಬ್ರುವರಿ 2024, 4:59 IST
ಅಕ್ಷರ ಗಾತ್ರ

ಮಡಿಕೇರಿ: ಮನೆಯ ಮುಂದೊಂದು ಪುಟ್ಟ ಕೊಳ, ಅದರ ತುಂಬೆಲ್ಲ ಅರಳಿರುವ ತಾವರೆ ಹೂಗಳು, ಅಂಗಳದಲ್ಲಿ ಕಣ್ಣಾಯಿಸಿದ ಕಡೆಯಲ್ಲೆಲ್ಲ ಹೂಗಳ ರಾಶಿ, ಮೂಗಿಗೆ ಸೂಸುವ ಪರಿಮಳ, ಹೂಗಳಿಗೆ ಮುತ್ತುವ ಜೇನ್ನೋಣಗಳು...

ಹೀಗೆ, ಹೂಗಳ ಗಂಧರ್ವ ಲೋಕವನ್ನೇ ತಮ್ಮ ಮನೆಯ ಮುಂದೆ ನಿರ್ಮಿಸಿದ್ದಾರೆ ಇಲ್ಲಿನ ಎನ್‌.ಸವಿತಾ ಭಟ್.

ಇವರು ಇಲ್ಲಿನ ಸಂತ ಜೋಸೆಫರ ಕಾನ್ವೆಂಟ್ ಬಳಿಯ ತಮ್ಮ ಮನೆಯ ಮುಂದೆ ಪುಟ್ಟದಾದ ಕೊಳವನ್ನು ನಿರ್ಮಿಸಿ, ಅದರಲ್ಲಿ ಒಟ್ಟು 40 ಬಗೆಯ ತಾವರೆಗಿಡಗಳನ್ನು ನೆಟ್ಟಿದ್ದಾರೆ. ಒಂದು ಹೂವಿಗೂ ಮತ್ತೊಂದು ಹೂವಿಗೂ ವರ್ಣದಲ್ಲಿ, ಕಂಪಿನಲ್ಲಿ, ದಳಗಳ ಸಂಖ್ಯೆಗಳಲ್ಲಿ ವ್ಯತ್ಯಾಸಗಳಿವೆ. ಹೀಗಾಗಿ, ಕೊಳವನ್ನು ಸೂಕ್ಷ್ಮವಾಗಿ ಗಮನಿಸಿದರೆ ವೈವಿಧ್ಯಮಯ ತಾವರೆಯ ಲೋಕವೇ ತೆರೆದುಕೊಂಡಂತೆ ಭಾಸವಾಗುತ್ತದೆ.

ಇನ್ನು ಬಿರು ಬೇಸಿಗೆಯ ಈ ದಿನಗಳಲ್ಲೂ ಇವರ ಮನೆಯ ಅಂಗಳದಲ್ಲಿ 60ಕ್ಕೂ ಹೆಚ್ಚು ಬಗೆಯ ಹೂಗಳು ಅರಳಿ ನಿಂತು ಸ್ವಾಗತ ಕೋರುತ್ತಿವೆ. ಒಂದೊಂದು ಹೂವುಗಳು ಮತ್ತೊಂದು ಹೂಗಳಿಗಿಂತ ಭಿನ್ನ, ವಿಭಿನ್ನ.

ಸಾಲ್ವಿಯಾ, ಸೆಲೊಸಿಯಾ, ಚೆಂಡು, ಹುಂಜದ ತಲೆಯ ಮೇಲಿನ ಶಿಖೆಯನ್ನು ಹೋಲುವ ಕೋಳಿಜುಟ್ಟು ಗಿಡ, ಇಂಪೇಶಿಯನ್ಸ್, ಫ್ಯೂಜಿಯಾ, ಡ್ಯಾನ್ಸಿಂಗ್ ಡಾಲ್, ಆಂಥೋರಿಯಂ ... ಹೀಗೆ ಹೇಳುತ್ತಾ ಹೋದರೆ ಸವಿತಾ ಅವರ ಮಾತುಗಳು ಮುಗಿಯುವುದೇ ಇಲ್ಲ. ಅಷ್ಟೊಂದು ಬಗೆಬಗೆಯ ಹೂಗಳನ್ನು ಅವರು ಮಕ್ಕಳಂತೆ ಜತನದಿಂದ ಬೆಳೆಸಿದ್ದಾರೆ. 

ಇದರ ಜೊತೆಗೆ, ಇವರ ಕೈತೋಟದಲ್ಲಿ ಬಿಸಿಲನ್ನು ಅರಗಿಸಿಕೊಳ್ಳಬಲ್ಲ ಕಳ್ಳಿಜಾತಿಗಳ ಗಿಡಗಳೂ ಹೇರಳ ಸಂಖ್ಯೆಯಲ್ಲಿವೆ. ಗ್ರೌಂಡ್ ಆರ್ಕಿಡ್‌ಗಳು ಸೂಜಿಗಲ್ಲಿನಂತೆ ಸೆಳೆಯುತ್ತವೆ. ಸುವರ್ಣಧಾರೆಯ ಬಳ್ಳಿಗಳು ಕೈಬೀಸಿ ಕರೆಯುತ್ತವೆ. ಎಲೆಯ ತುದಿಯಲ್ಲಿ ಹೂಬಿಡುವ ಅಪರೂಪದ ಕ್ರಿಸ್‌ಮಸ್ ಕ್ಯಾಕ್ಟಸ್ ಸಹ ಇಲ್ಲಿ ಗಮನ ಸೆಳೆಯುತ್ತವೆ.

ಸುಮಾರು ಅರ್ಧ ಎಕರೆ ಪ್ರದೇಶದಲ್ಲಿ ಇವರು ಪನ್ನೇರಳೆ, ಮಾವು, ಹಲಸು, ಲಿಚ್ಚಿ, ಕಾಡು ಬಾದಾಮಿ ಸೇರಿದಂತೆ ಕಾಡುಜಾತಿಯ ಮರಗಳನ್ನು ಉಳಿಸಿಕೊಂಡಿದ್ದಾರೆ.

ಈ ಹಿಂದೆ ರಾಜಾಸೀಟ್ ಉದ್ಯಾನದಲ್ಲಿ ನಡೆಸುತ್ತಿದ್ದ ಫಲಪುಷ್ಪ ಪ್ರದರ್ಶನದ ವೇಳೆ ಮನೆ ಕೈತೋಟದ ಸ್ಪರ್ಧೆಯನ್ನು ಆಯೋಜಿಸಲಾಗುತ್ತಿತ್ತು. ಅದರಲ್ಲಿ ಸತತ 7 ಬಾರಿ ಪ್ರಥಮ ಬಹುಮಾನವನ್ನು ಇವರು ಗಳಿಸಿರುವುದು ವಿಶೇಷ. ಆದರೆ, ಈಗ ಫಲಪುಷ್ಪ ಪ್ರದರ್ಶನದಲ್ಲಿ ಈ ಸ್ಪರ್ಧೆ ಇಲ್ಲ.

ವಿವಿಧ ಸಂಘ, ಸಂಸ್ಥೆಗಳು ಇವರ ಕೈತೋಟ ಕಂಡು ಇವರನ್ನು ಸನ್ಮಾನಿಸಿವೆ. ತೋಟಗಾರಿಕಾ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಕಳೆದ ವರ್ಷ ಇವರ ಕೈತೋಟಕ್ಕೆ ಅಧ್ಯಯನ ಪ್ರವಾಸದ ನಿಮಿತ್ತ ಬಂದು ತಾವರೆಕೊಳ ಮತ್ತು ಕೈತೋಟದ ಪ್ರಾತ್ಯಕ್ಷಿಕೆಯನ್ನು ಪಡೆದುಕೊಂಡಿದ್ದರು.

ಇವರ ಎಲ್ಲ ಕೆಲಸದಲ್ಲಿ ಪತಿ ಡಾ.ಎನ್.ಆರ್.ಕೃಷ್ಣ ಭಟ್ ಅವರು ಸಾಥ್‌ ನೀಡಿದ್ದಾರೆ.

ಸವಿತಾ ಭಟ್ ಅವರ ಮನೆಯ ಮುಂದಿನ ಪುಟ್ಟ ಕೊಳದಲ್ಲಿ ಅರಳಿದ ತಾವರೆಗೆ ಮುತ್ತಿರುವ ಜೇನ್ನೊಣಗಳು
ಸವಿತಾ ಭಟ್ ಅವರ ಮನೆಯ ಮುಂದಿನ ಪುಟ್ಟ ಕೊಳದಲ್ಲಿ ಅರಳಿದ ತಾವರೆಗೆ ಮುತ್ತಿರುವ ಜೇನ್ನೊಣಗಳು
ಸವಿತಾ ಭಟ್ ಅವರು ತಮ್ಮ ಮನೆಯಲ್ಲಿ ಜೋಡಿಸಿರುವ ಹೂಕುಂಡಗಳು
ಸವಿತಾ ಭಟ್ ಅವರು ತಮ್ಮ ಮನೆಯಲ್ಲಿ ಜೋಡಿಸಿರುವ ಹೂಕುಂಡಗಳು
ತಾವು ಬೆಳೆದ ಹೂಗಳೊಂದಿಗೆ ಸವಿತಾ ಭಟ್
ತಾವು ಬೆಳೆದ ಹೂಗಳೊಂದಿಗೆ ಸವಿತಾ ಭಟ್
ಸವಿತಾ ಭಟ್ ಅವರು ತಮ್ಮ ಮನೆಯ ಅಂಗಳದಲ್ಲಿ ಬೆಳೆದಿರುವ ಹೂಗಳು
ಸವಿತಾ ಭಟ್ ಅವರು ತಮ್ಮ ಮನೆಯ ಅಂಗಳದಲ್ಲಿ ಬೆಳೆದಿರುವ ಹೂಗಳು
ಸವಿತಾ ಭಟ್ ಅವರ ನಿವಾಸದಲ್ಲಿರುವ ಕೈತೋಟ
ಸವಿತಾ ಭಟ್ ಅವರ ನಿವಾಸದಲ್ಲಿರುವ ಕೈತೋಟ
ಸವಿತಾ ಭಟ್ ಅವರ ಮನೆಯಲ್ಲಿ ಬೆಳೆಸಿರುವ ವೈವಿಧ್ಯಮಯ ಹೂಗಳು
ಸವಿತಾ ಭಟ್ ಅವರ ಮನೆಯಲ್ಲಿ ಬೆಳೆಸಿರುವ ವೈವಿಧ್ಯಮಯ ಹೂಗಳು
ಎನ್.ಸವಿತಾ ಭಟ್
ಎನ್.ಸವಿತಾ ಭಟ್

ಮನೆಯ ಮುಂದೆ ಹೂತೋಟದಿಂದ ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ಖಿನ್ನತೆ ಹತ್ತಿರವೂ ಸುಳಿಯುವುದಿಲ್ಲ. ವ್ಯಾಯಾಮವೂ ಆಗುತ್ತದೆ. ಎಲ್ಲರೂ ಮನೆ ಸುತ್ತಮುತ್ತ ಗಿಡ ಮರ ಬೆಳೆಸಿದರೆ ಜೀವವೈವಿಧ್ಯವೂ ಉಳಿಯುತ್ತವೆ

-ಎನ್.ಸವಿತಾ ಭಟ್ ಗೃಹಿಣಿ.

ಹೂಗಳನ್ನು ನೋಡಿ ಜೇನು ಪೆಟ್ಟಿಗೆ ಇರಿಸಿದರು!

ಇವರ ಮನೆಯಂಗಳದಲ್ಲಿ ಅರಳಿರುವ ಹೂಗಳನ್ನು ನೋಡಿದ ಕೆಲವರು ಅಂಗಳದಲ್ಲಿ ಜೇನುಪೆಟ್ಟಿಗೆಗಳನ್ನು ಇರಿಸಿದ್ದಾರೆ. ಈ ಜೇನುಗಳ ಜೊತೆಗೆ ಸಮೀಪದ ಕಾಡಿನಿಂದಲೂ ಜೇನುಗಳು ಇಲ್ಲಿಗೆ ಬಂದು ಹೂಗಳ ಮಕರಂದವನ್ನು ಹೀರುವುದು ವಿಶೇಷ. ಇವರು ಋತುಮಾನದ ಪುಷ್ಪಗಳನ್ನು ಬೆಳೆಯುವುದರಿಂದ ಸಹಜವಾಗಿ ವರ್ಷದ ಎಲ್ಲ ಋತುವಿನಲ್ಲಿಯೂ ಹೂಗಳು ಅರಳಿರುವುದನ್ನು ಕಾಣಬಹುದು. ಹಾಗಾಗಿ ಜೇನ್ನೊಣಗಳಿಗೆ ಇಲ್ಲಿನ ಪರಿಸರ ಅಪ್ಯಾಯಮಾನವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT