ಶುಕ್ರವಾರ, 2 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಡಿಕೇರಿ: ಯಮಪಾಶವಾಗುತ್ತಿರುವ ಅಲ್ಯುಮಿನಿಯಂ ಲೋಹದ ಏಣಿ

ಅಜ್ಞಾನ, ನಿರ್ಲಕ್ಷ್ಯ, ಉದಾಸೀನಕ್ಕೆ ಬಲಿಯಾಗುತ್ತಿವೆ ಬಡಜೀವಗಳು
Last Updated 13 ಮಾರ್ಚ್ 2023, 14:22 IST
ಅಕ್ಷರ ಗಾತ್ರ

ಮಡಿಕೇರಿ: ಕೊಡಗು ಜಿಲ್ಲೆಯ ಕೃಷಿ ಕಾರ್ಮಿಕರ ಪಾಲಿಗೆ ಲೋಹದ ಏಣಿಗಳೇ ಯಮಪಾಶವಾಗುತ್ತಿವೆ. ನಿರ್ಲಕ್ಷ್ಯ, ಉದಾಸೀನ, ಅಜ್ಞಾನಕ್ಕೆ ಬಡ ಜೀವಗಳು ಬಲಿಯಾಗುತ್ತಿದ್ದು, ಅವರ ಕುಟುಂಬದವರು ಬೀದಿ ಪಾಲಾಗುತ್ತಿದ್ದಾರೆ. ಇದನ್ನು ತಡೆಯಲು ಜಿಲ್ಲಾಡಳಿತ ಯಾವೊಂದೂಕ್ರಮಗಳನ್ನು ಕೈಗೊಳ್ಳದೇ ಮೌನ ವಹಿಸಿದೆ.

2016ರ ನಂತರ ಇಲ್ಲಿಯವರೆಗೆ ಸರಿಸುಮಾರು 35ಕ್ಕೂ ಹೆಚ್ಚು ಕಾರ್ಮಿಕರು ಲೋಹದ ಏಣಿಗೆ
ವಿದ್ಯುತ್ ಪ್ರವಹಿಸಿ ಮೃತಪಟ್ಟಿದ್ದಾರೆ. ಪ್ರತಿ ವರ್ಷ ಕೋಯ್ಲಿನ ಸಮಯದಲ್ಲಿ ಕಾರ್ಮಿಕರ ಸಾವಿನ ಸುದ್ದಿಗಳು ಬರಸಿಡಿಲಿನಂತೆ ಅಪ್ಪಳಿಸುತ್ತಿವೆ.

ಸಾಂಪ್ರದಾಯಿಕ ಬಿದಿರಿನ ಏಣಿಯ ಬದಲಿಗೆ ಅಲ್ಯುಮಿನಿಯಂ ಏಣಿಯ ಬಳಕೆ ಹೆಚ್ಚುತ್ತಿದ್ದಂತೆ ಇಂತಹ ಅವಘಡಗಳು ಸಂಭವಿಸಲಾರಂಭಿಸಿವೆ. ಈ ಲೋಹದ ಏಣಿಗಳು ವಿದ್ಯುತ್ ವಾಹಕಗಳಾಗಿರುವುದರಿಂದ ಅವುಗಳನ್ನು ಎತ್ತಿಕೊಂಡು ಹೋಗುವಾಗ ಮೇಲಿನ ವಿದ್ಯುತ್ ತಂತಿಗೆ ತಗುಲಿ ಕಾರ್ಮಿಕರು ವಿದ್ಯುತ್ ಆಘಾತದಿಂದ ಸಾವನ್ನಪ್ಪುತ್ತಿದ್ದಾರೆ. ಈ ಕುರಿತು ತೋಟದ ಮಾಲೀಕರು, ಸೆಸ್ಕ್ ಇಲಾಖೆಯವರು ತುರ್ತು ಗಮನ ಹರಿಸಬೇಕಿದೆ.

ಜಿಲ್ಲೆಯಲ್ಲಿ ಕಾಳುಮೆಣಸು ಕೊಯ್ಲು ಆರಂಭಗೊಂಡಿದ್ದು, ಕಾಳು ಮೆಣಸನ್ನು ಕೊಯ್ಲು ಮಾಡಲು ಜಿಲ್ಲೆಯಲ್ಲಿ ಅಲ್ಯುಮಿನಿಯಂ ಏಣಿಗಳನ್ನು ವ್ಯಾಪಕವಾಗಿ ಬಳಸಲಾಗುತ್ತಿದೆ. ವಿವಿಧೆಡೆಗಳಿಂದ ವ್ಯಾಪಾರಸ್ಥರು ಅಲ್ಯೂಮಿನಿಯಂ ಏಣಿಗಳನ್ನು ಜಿಲ್ಲೆಯಲ್ಲಿ ಮಾರಾಟಕ್ಕೆ ತರುತ್ತಿದ್ದಾರೆ. ಬಿದಿರು ಏಣಿಗಳ ಆಲಭ್ಯತೆ, ಅವುಗಳನ್ನು ಸಂರಕ್ಷಿಸಿಡುವುದು ಕಷ್ಟಕರವಾದ ಹಿನ್ನೆಲೆಯಲ್ಲಿ ಅಲ್ಯೂಮಿನಿಯಂ ಏಣಿಗಳು ಸುಲಭ ಎನಿಸಿದೆ. ಕಾಫಿ ತೋಟಗಳಲ್ಲಿ ಮರಗಳಲ್ಲಿ ಹಬ್ಬಿಸಲಾಗಿರುವ ಕಾಳುಮೆಣಸು ಕೊಯ್ಲು ಮಾಡಲು ಅಲ್ಯೂಮಿನಿಯಂ ಏಣಿಗಳನ್ನು ಹಗುರವಾಗಿರುವ ಕಾರಣ ಬಳಸಲು ಕಾರ್ಮಿಕರೂ ಹೆಚ್ಚಿನ ಉತ್ಸಾಹ ತೋರುತ್ತಿದ್ದಾರೆ.

ಹೊರ ಜಿಲ್ಲೆಯ ಮತ್ತು ಹೊರ ರಾಜ್ಯದ ಕಾರ್ಮಿಕರು ಕಾಫಿ ಕೊಯ್ಲಿಗೆ ಹಾಗೂ ಕಾಳುಮೆಣಸು ಕೊಯ್ಲಿಗೆ ಜಿಲ್ಲೆಗೆ ಆಗಮಿಸುತ್ತಿದ್ದು ಎಚ್ಚರಿಕೆ ಇಲ್ಲದೇ ಅಲ್ಯುಮಿನಿಯಂ ಏಣಿಗಳನ್ನು ಬಳಸುತ್ತಿರುವುದರಿಂದ ಇಂತಹ ಅವಘಡಗಳು ಸಂಭವಿಸುತ್ತಿವೆ. ವಿದ್ಯುತ್ ತಂತಿ ಹಾದು ಹೋಗಿರುವ ಕಾಫಿ ತೋಟಗಳ ಮಾಲೀಕರೂ ಹೆಚ್ಚಿನ ಎಚ್ಚರ ವಹಿಸುವುದು ತೀರಾ ಅಗತ್ಯವಾಗಿದೆ.

ಲೋಹದ ಏಣಿ ನಿಷೇಧಿಸಲು ಮನವಿ

ಕಾಫಿ ತೋಟದಲ್ಲಿ ಕಾಳು ಮೆಣಸು ಕೊಯ್ಯಲು ಅಲ್ಯುಮಿನಿಯಂ ಏಣಿ ಬಳಸುತ್ತಿರುವುದರಿಂದ ಕಾರ್ಮಿಕರ ಜೀವಕ್ಕೆ ಹಾನಿಯಾಗುತ್ತಿದೆ. ಪ್ರತಿ ವರ್ಷ ಐದಾರು ಕಾರ್ಮಿಕರು ಬಲಿಯಾಗುತ್ತಿದ್ದರೂ ಈ ಏಣಿ ಬಳಕೆ ನಿಷೇಧಕ್ಕೆ ಜಿಲ್ಲಾಡಳಿತ ಮುಂದಾಗದಿರುವುದು ಅಚ್ಚರಿ ಮೂಡಿಸಿದ್ದು, ಜಿಲ್ಲಾಡಳಿತ ನಿರ್ಲಕ್ಷ್ಯ ತೋರಿದಂತಿದೆ ಎಂಬುದು ಜನಸಾಮಾನ್ಯರ ಅಭಿಪ್ರಾಯವಾಗಿದೆ.

‘ಹೊಟ್ಟೆ ಪಾಡಿಗಾಗಿ ಜೀವ ಭಯ ತೊರೆದು ದುಡಿಯುವ ಅಮಾಯಕ ಕಾರ್ಮಿಕರು ಪ್ರತಿ ವರ್ಷ ವಿದ್ಯುತ್ ಸ್ಪರ್ಶದಿಂದ ಸಾವನ್ನಪ್ಪುತ್ತಿದ್ದಾರೆ. ಇದರಿಂದ ಇವರ ಕುಟುಂಬ ಅನಾಥವಾಗುತ್ತಿದೆ. ದಯಮಾಡಿ ಜಿಲ್ಲಾಡಳಿತ ಅಲ್ಯೂಮಿನಿಯಂ ಏಣಿ ಬಳಕೆಯನ್ನು ನಿಷೇಧಿಸಬೇಕು’ ಎಂದು ಮಾಯಮುಡಿ ಧನುಗಾಲದ ಕಾಫಿ ಬೆಳೆಗಾರ ಅಬ್ದುಲ್ ರೆಹಮಾನ್ ಬಾಪು ಮನವಿ ಮಾಡಿದ್ದಾರೆ.

‘ಕಾಫಿ ತೋಟದಲ್ಲಿ ಎಲ್ಲ ಕಡೆ 11 ಕೆವಿ ವಿದ್ಯುತ್ ಮಾರ್ಗ ಹಾದು ಹೋಗಿದೆ. ತೋಟದ ಒಳಗಡೆ ಮನೆಗಳು ಚದುರಿದಂತೆ ಇರುವುದರಿಂದ ಅವುಗಳಿಗೆ ವಿದ್ಯುತ್ ನೀಡುವುದಕ್ಕಾಗಿ ವಿದ್ಯುತ್ ಮಾರ್ಗ ಅನಿವಾರ್ಯವಾಗಿದೆ’ ಎಂಬುದು ಗೋಣಿಕೊಪ್ಪಲು ಸೆಸ್ಕ್ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ನೀಲ ಶೆಟ್ಟಿ ಅವರ ಮಾತು.

‘ಹಿಂದೆ ಬಿದಿರು ಬಹಳಷ್ಟು ಪ್ರಮಾಣದಲ್ಲಿ ಎಲ್ಲ ಕಡೆ ಲಭಿಸುತ್ತಿತ್ತು. ಇದರ ಗಳದಿಂದ ಏಣಿ ಮಾಡುತಿದ್ದರು. ಇದರಿಂದ ಯಾವುದೇ ಹಾನಿಯಾಗುತ್ತಿರಲಿಲ್ಲ. ಈಗ ಬಿದಿರು ಸಿಗುತ್ತಿಲ್ಲ. ಹೀಗಾಗಿ, ಅಲ್ಯೂಮಿನಿಯಂ ಏಣಿ ಬಳಸುವುದು ಅನಿವಾರ್ಯವಾಗಿದೆ. ಆದರೆ, ವಿದ್ಯುತ್ ಮಾರ್ಗದಿಂದ ಬಹಳ ತೊಂದರೆಯಾಗುತ್ತಿದೆ. ಅಲ್ಯೂಮಿನಿಯಂ ಏಣಿಗೆ ಪರ್ಯಾಯವಾಗಿ ಫೈಬರ್ ಏಣಿ ಬಂದಿದೆ. ಆದರೆ, ಅದು ದುಬಾರಿ. ಜೊತೆಗೆ ಎಲ್ಲೆಡೆ ಸಿಗುತ್ತಿಲ್ಲ. ಕೃಷಿ ಮತ್ತು ತೋಟಗಾರಿಕೆ ಇಲಾಖೆಯವರು ಇದನ್ನು ಸಬ್ಸಿಡಿಯಲ್ಲಿ ರೈತರಿಗೆ ನೀಡಿದರೆ ಒಳ್ಳೆಯದು ಎನ್ನುತ್ತಾರೆ’ ಮಯಮುಡಿಯ ಕಾಫಿ ಬೆಳೆಗಾರ ಎ.ಎಸ್. ಮೊನ್ನಪ್ಪ.

ಲೋಹದ ಏಣಿ ಹಗುರ, ಅಪಾಯ ಕಟ್ಟಿಟ್ಟ ಬುತ್ತಿ

ಅಲ್ಯುಮಿನಿಯಂ ಏಣಿ ಬಿದಿರಿನ ಏಣಿಗೆ ಹೋಲಿಸಿದರೆ ಹಗುರ. ಇದೇ ಕಾರಣಕ್ಕೆ ಕಾರ್ಮಿಕರು ಹೆಚ್ಚಾಗಿ ತೋಟಗಳಲ್ಲಿ ಇದನ್ನೇ ಬಳಸುತ್ತಾರೆ. ಬಿದಿರು ಹಾಗೂ ಮರದ ಏಣಿಗಳಿಗೆ ಹೋಲಿಸಿದರೆ ಅಲ್ಯುಮಿನಿಯಂ ಏಣಿಗಳು ಗಟ್ಟಿಯಾಗಿದ್ದು, ಬಾಳಿಕೆಯೂ ಹೆಚ್ಚಿದೆ ಎಂಬ ಕಾರಣಕ್ಕೆ ತೋಟದ ಮಾಲೀಕರೂ ಇದನ್ನೇ ತರುತ್ತಿದ್ದಾರೆ.

ಬಿದಿರಿನ ಏಣಿ ಸುರಕ್ಷಿತ

ಬಿದಿರನ್ನು ಬಿಸಿಲಿನಲ್ಲಿ ಒಣಗಿಸಿ ನಂತರ ಬಳಕೆ ಮಾಡಿದರೆ ವಿದ್ಯುತ್ ಪ್ರವಹಿಸುವ ಸಾಧ್ಯತೆ ಕಡಿಮೆ. ಆದರೆ, ಈಚೆಗೆ ಜಿಲ್ಲೆಯಲ್ಲಿ ಬಿದಿರಿನ ಪ್ರಮಾಣ ಕಡಿಮೆ ಇರುವುದರಿಂದ ಇಂತಹ ಏಣಿಗಳ ಲಭ್ಯತೆಯೂ ಕಡಿಮೆ ಇದೆ.

ಅಪಾಯ ಹೇಗೆ?

ತೋಟದೊಳಗಿನ ಕಾರ್ಮಿಕರ ಮನೆಗಳಿಗೆ ವಿದ್ಯುತ್ ಅನಿವಾರ್ಯವೂ ಆಗಿರುವುದರಿಂದ ಜಿಲ್ಲೆಯಲ್ಲಿ ಹೆಚ್ಚು ಕಾಫಿ, ಕರಿ ಮೆಣಸು ತೋಟಗಳ ನಡುವೆಯೇ ವಿದ್ಯುತ್‌ ತಂತಿಗಳು ಹಾದು ಹೋಗಿವೆ.

ಮರಗಳ ರೆಂಬೆ- ಕೊಂಬೆಗಳ ಬೀಳುವಿಕೆಯಿಂದ ಕಂಬಗಳು ಬಾಗಿ, ತಂತಿಗಳು ಕೆಳಮಟ್ಟಕ್ಕಿಳಿದು ವಿದ್ಯುತ್‌ ಆಘಾತಗಳಾಗುವ ಸಂಭವ ಹೆಚ್ಚಿದೆ. ಆದ್ದರಿಂದ, ಅಪಾಯ ಮಟ್ಟದಲ್ಲಿರುವ ವಿದ್ಯುತ್ ತಂತಿಗಳು, ಶಿಥಿಲಗೊಂಡಿರುವ ಕಂಬಗಳು ಕಂಡು ಬಂದರೆ ಸೆಸ್ಕ್ ಕಚೇರಿ ಅಥವಾ ಅಧಿಕಾರಿಗಳಿಗೆ ಸಾರ್ವಜನಿಕರು ದೂರು ನೀಡಬಹುದು.

ಇದರ ಜತೆಗೆ ತೋಟಗಳಲ್ಲಿ ಇಳಿಜಾರು, ಎತ್ತರದ ಪ್ರದೇಶಗಳು ಇದ್ದಾಗ ಹೆಚ್ಚಿನ ಎಚ್ಚರಿಕೆ ವಹಿಸಬೇಕು. ಇಳಿಜಾರಿನಿಂದ ಎತ್ತರದ ಪ್ರದೇಶವನ್ನು ಏಣಿ ಹಿಡಿದು ಹತ್ತುವಾಗಲೂ ವಿದ್ಯುತ್ ಸ್ಪರ್ಶವಾಗಿದೆ.

ಎರಡು ಅಡಿಯಿಂದಲೂ ವಿದ್ಯುತ್ ಪ್ರವಹಿಸಬಹುದು!

ಅಲ್ಯುಮಿನಿಯಂ ಏಣಿಗಳು ವಿದ್ಯುತ್‌ನ ಪ್ರಬಲ ವಾಹಕವಾಗಿರುವುದರಿಂದ ತಂತಿಗೆ ಏಣಿ ತಗುಲಬೇಕು ಎಂದೇನೂ ಇಲ್ಲ. ತುಸು ಸಮೀಪ ಹಾದು ಹೋದರೂ ವಿದ್ಯುತ್ ಪ್ರವಹಿಸುವ ಸಾಧ್ಯತೆ ಇದೆ ಎನ್ನುತ್ತಾರೆ ಸೆಸ್ಕ್‌ ಅಧಿಕಾರಿಗಳು. ಹಾಗಾಗಿ, ಅತಿ ಜಾಗ್ರತೆಯಿಂದ ಏಣಿಯನ್ನು ಬಳಸಬೇಕು ಎಂದು ಕಿವಿಮಾತು ಹೇಳುತ್ತಾರೆ. ’

ತಪ್ಪಿಸುವುದು ಹೇಗೆ?

ವಿದ್ಯುತ್ ತಂತಿಗಳು ಹಾದು ಹೋಗಿರುವ ಕಡೆಯಾದರೂ ಕನಿಷ್ಠ ಬಿದಿರಿನ ಏಣಿಯನ್ನು ಬಳಕೆ ಮಾಡಬೇಕು. ಇಂತಹ ಕಡೆ ಕೆಲಸ ತುಸು ನಿಧಾನವಾದರೂ ಅತಿ ಜಾಗ್ರತೆ ವಹಿಸಬೇಕು. ಸೆಸ್ಕ್‌ನವರು, ಜಿಲ್ಲಾಡಳಿತ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಗ್ರಾಮಸಭೆಗಳನ್ನು ನಡೆಸಿ ಅಪಾಯದ ಕುರಿತು ಜಾಗೃತಿ ಮೂಡಿಸಬೇಕು.

ಜನಾಭಿಪ್ರಾಯ

ಮಾಲೀಕರು ಎಚ್ಚರ ವಹಿಸಬೇಕು

ವಿದ್ಯುತ್ ತಂತಿ ಹಾದು ಹೋಗಿರುವ ತೋಟದ ಮಾಲೀಕರು ಅತೀವ ಎಚ್ಚರಿಕೆ ವಹಿಸಬೇಕು. ಅಲ್ಯುಮಿನಿಯಂ ಏಣಿ ಬಳಸದೇ ಬಿದಿರಿನ ಏಣಿಯನ್ನೇ ಬಳಸಬೇಕು. ಬಡ ಕಾರ್ಮಿಕರ ಜೀವಗಳನ್ನು ಈ ಮೂಲಕ ರಕ್ಷಿಸಬೇಕು.

ಎಂ.ಡಿ.ರಂಗಸ್ವಾಮಿ, ಕುಶಾಲನಗರದ ನಿವಾಸಿ.

ಜಿಲ್ಲಾಡಳಿತ ನಿಷೇಧಿಸಲಿ

ಅಲ್ಯುಮಿನಿಯಂ ಏಣಿಗಳಿಂದ ಮೃತಪಡುವ ಬಡ ಕಾರ್ಮಿಕರ ಸಾವಿನ ಸರಣಿ ನಿಲ್ಲಿಸಲು ಜಿಲ್ಲಾಡಳಿತ ಕೂಡಲೇ ಇಂತಹ ಏಣಿಗಳ ಬಳಕೆ ನಿಷೇಧಿಸಬೇಕು. ಆಗ ಮಾತ್ರ ಈ ಸಾವು ನಿಲ್ಲುತ್ತದೆ.

ಅಬ್ದುಲ್ ರೆಹಮಾನ್ ಬಾಪು, ಮಾಯಮುಡಿ ಧನುಗಾಲದ ಕಾಫಿ ಬೆಳೆಗಾರ

ಭಯದಲ್ಲೇ ಕೆಲಸ ಮಾಡಬೇಕಿದೆ

ಈ ಹಿಂದೆ ಬಿದಿರಿನ ಏಣಿಯನ್ನು ಬಳಸುತ್ತಿದ್ದೆವು. ಈಗ ಅಲ್ಯೂಮಿನಿಯಂ ಏಣಿ ಹೆಚ್ಚಾಗಿದೆ. ತೋಟದಲ್ಲಿ ವಿದ್ಯುತ್ ಲೈನ್ ಕೂಡ ಹೆಚ್ಚಾಗಿದೆ. ಹಾಗಾಗಿ, ಭಯದಲ್ಲೇ ಕೆಲಸ ಮಾಡಬೇಕಿದೆ. ಕಾರ್ಮಿಕರು ಎಚ್ಚರಿಕೆಯಿಂದ ಕೆಲಸ ಮಾಡಬೇಕು.

ವಸಂತ್, ಕಾರ್ಮಿಕ, ಗುಹ್ಯ ಗ್ರಾಮ.

ಸಬ್ಸಿಡಿ ದರದಲ್ಲಿ ಪ್ಲಾಸ್ಟಿಕ್ ಏಣಿ ನೀಡಿ

ಕಾಫಿ ತೋಟದಲ್ಲಿ ವಿದ್ಯುತ್ ತಂತಿ ಹೆಚ್ಚಾಗಿದೆ. ಇಲಾಖೆ ವಿದ್ಯುತ್ ತಂತಿಗಳನ್ನು ರಸ್ತೆ ಬದಿಗೆ ವರ್ಗಾಯಿಸಬೇಕು. ತೋಟದ ಮಾಲೀಕರು ಹಾಗೂ ಕಾರ್ಮಿಕರು ಎಚ್ಚರ ವಹಿಸಬೇಕು. ತೋಟಗಾರಿಕಾ ಇಲಾಖೆಯ ವತಿಯಿಂದ ಸಬ್ಸಿಡಿ ದರದಲ್ಲಿ ಪ್ಲಾಸ್ಟಿಕ್ ಏಣಿ ನೀಡಬೇಕು

ಮುಂಡ್ರುಮನೆ ಸುಧೀರ್, ಬೆಳೆಗಾರರು, ವಾಲ್ನೂರು

ಅಲ್ಯುಮಿನಿಯಂ ಏಣಿ ಬಳಸದಂತೆ ಮನವಿ

ತೋಟಗಳಲ್ಲಿ ಮೆಣಸು ಕೀಳಲು ಮತ್ತು ಮರದ ಕೊಂಬೆಗಳನ್ನು ಕಡಿಯಲು ಅಲ್ಯುಮಿನಿಯಂ ಏಣಿಗಳ ಬದಲಿಗೆ ಬಿದಿರು, ಫೈಬರ್ ಏಣಿಗಳನ್ನೇ ಉಪಯೋಗಿಸಬೇಕು. ಅಪಾಯದ ಮಟ್ಟದಲ್ಲಿರುವ ವಿದ್ಯುತ್ ತಂತಿಗಳು, ಶಿಥಿಲಗೊಂಡಿರುವ ವಿದ್ಯುತ್ ಕಂಬಗಳು ಕಂಡುಬಂದರೆ ಸಾರ್ವಜನಿಕರು ಮಾಹಿತಿ ನೀಡಬೇಕು

ಅನಿತಾ ಬಾಯಿ, ಸೆಸ್ಕ್‌ನ ಕಾರ್ಯನಿರ್ವಾಹಕ ಎಂಜಿನಿಯರ್.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT