ಮಡಿಕೇರಿ: ಹಿಮವೇ ಹೊದ್ದು ನಿಂತಿದ್ದ ಬ್ರಹ್ಮಗಿರಿ ಶ್ರೇಣಿಯ ತಲಕಾವೇರಿಯಲ್ಲಿ ಬುಧವಾರ ನಸುಕಿನ 1.26ಕ್ಕೆ, ಕನ್ನಡ ನಾಡಿನ ಜೀವನದಿ ಕಾವೇರಿಯ ತೀರ್ಥೋದ್ಭವವಾಯಿತು.
ಥರಗುಟ್ಟುವಷ್ಟು ಚಳಿಯ ನಡುವೆಯೇ ‘ಉಕ್ಕಿ ಬಾ ತಾಯಿ ಉಕ್ಕಿ ಬಾ’ ಎಂಬ ಘೋಷಣೆ ಮುಗಿಲು ಮುಟ್ಟಿತ್ತು. ತುಲಾಸಂಕ್ರಮಣದ ಈ ವಿದ್ಯಮಾನವನ್ನು ಕಣ್ತುಂಬಿಕೊಳ್ಳಲು ಸಾವಿರಾರು ಭಕ್ತರು ಎಲ್ಲೆಡೆಯಿಂದ ಬಂದು ನೆರೆದಿದ್ದರು.
‘ಬ್ರಹ್ಮಕುಂಡಿಕೆಯಿಂದ ಕಾವೇರಿ ತಾಯಿ ಉಕ್ಕಿದಳು’ ಎಂದು ಅರ್ಚಕರು ಸುತ್ತಲೂ ಸೇರಿದ್ದ ಅಪಾರ ಭಕ್ತರ ಮೇಲೆ ತೀರ್ಥವನ್ನು ಪ್ರೋಕ್ಷಿಸುತ್ತಿದ್ದಂತೆ ನೂರಾರು ಭಕ್ತರು ಬ್ಯಾರಿಕೇಡ್‌ಗಳನ್ನು ತೆಗೆದು ಬ್ರಹ್ಮಕುಂಡಿಕೆ ಸಮೀಪದ ಪುಷ್ಕರಣಿಗೆ ನುಗ್ಗಿದರು. ಕೊಡಗಳು, ಕ್ಯಾನ್‌ಗಳಲ್ಲಿ ಪವಿತ್ರ ತೀರ್ಥವನ್ನು ತುಂಬಿಸಿಕೊಳ್ಳಲು ಮುಗಿಬಿದ್ದರು. ಗಂಟೆಗಟ್ಟಲೆ ಕಾಲ ಇಲ್ಲಿ ನೂಕುನುಗ್ಗಲು ಏರ್ಪಟ್ಟಿತ್ತು.
ಇದಕ್ಕೂ ಮುನ್ನ, ಕಾವೇರಿ ಮಾತೆಯ ಹಾಡುಗಳನ್ನು ಹಾಡುತ್ತ ಭಾಗಮಂಡಲದಿಂದ ತಲಕಾವೇರಿಯವರೆಗೆ ಕಾಲ್ನಡಿಗೆಯಲ್ಲೇ ಸಾವಿರಾರು ಮಂದಿ ಬಂದಿದ್ದು ವಿಶೇಷವಾಗಿತ್ತು. ನಟಿ ಹರ್ಷಿಕಾ ಪೂಣಚ್ಚ ಹಾಗೂ ಭುವನ್ ಪೊನ್ನಣ್ಣ ದಂಪತಿ ಕೂಡ ನಡೆದು ಬಂದರು.
ತೀರ್ಥೋದ್ಭವಕ್ಕೂ ಮುನ್ನ ಗಣ್ಯರು ಹಾಗೂ ಪತ್ರಕರ್ತರಿಗಾಗಿ ಮೀಸಲಿದ್ದ ಪ್ರವೇಶದ್ವಾರದಲ್ಲಿ ಭಕ್ತರ ಗುಂಪೊಂದು ಪೊಲೀಸರೊಂದಿಗೆ ವಾಗ್ವಾದ ನಡೆಸಿ, ಬ್ಯಾರಿಕೇಡ್ ತೆಗೆದು ನೇರ ಒಳಗೆ ನುಗ್ಗಿತು. ಪೊಲೀಸರೂ ಅಸಹಾಯಕರಾಗಿ ನಿಂತಿದ್ದರು.
ತೀರ್ಥೋದ್ಭವದ ಬಳಿಕವೂ ತಲಕಾವೇರಿಗೆ ಅಪಾರ ಸಂಖ್ಯೆ ಭಕ್ತರು ಭೇಟಿ ನೀಡಿದರು. ಇಲ್ಲಿಗೆ ಸಮೀಪದ ಬಲಮುರಿಯಲ್ಲೂ ಬುಧವಾರ ಸಂಭ್ರಮದ ಕಾವೇರಿ ಜಾತ್ರೆ ನೆರವೇರಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.