ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನಾಪೋಕ್ಲು: ಕಂಗೊಳಿಸುತ್ತಿದೆ ತ್ರಿವೇಣಿ ಸಂಗಮ

ಸಂಗಮದ ಬಳಿ ಸುಂದರ ಉದ್ಯಾನ ನಿರ್ಮಾಣ
Published 19 ಮೇ 2024, 6:43 IST
Last Updated 19 ಮೇ 2024, 6:43 IST
ಅಕ್ಷರ ಗಾತ್ರ

ನಾಪೋಕ್ಲು: ಮಡಿಕೇರಿಯಿಂದ ಪಶ್ಚಿಮಕ್ಕೆ 40 ಕಿ.ಮೀ ದೂರದಲ್ಲಿರುವ ಭಾಗಮಂಡಲ ಕೊಡಗಿನ ಪ್ರಮುಖ ಪ್ರೇಕ್ಷಣೀಯ ಯಾತ್ರಾಸ್ಥಳ.

ಕಾವೇರಿಯ ಉಗಮ ಸ್ಥಾನ ತಲಕಾವೇರಿಯ ಸನಿಹದ ಭಾಗಮಂಡಲವು ಭಗಂಡೇಶ್ವರ, ಸುಬ್ರಹ್ಮಣ್ಯ ಹಾಗೂ ಮಹಾವಿಷ್ಣು ದೇಗುಲ ಸಂಕೀರ್ಣಗಳಿಂದ ಪ್ರಸಿದ್ಧವಾಗಿದೆ. ಕೇರಳದ ಕಲಾಶೈಲಿ ಮಾದರಿಯನ್ನು ಹೋಲುವ ಈ ದೇವಾಲಯಕ್ಕೆ ತಲಕಾವೇರಿ ದರ್ಶನಕ್ಕೆ ಬರುವವರೆಲ್ಲರೂ ಭೇಟಿ ನೀಡುತ್ತಾರೆ. ಹಸಿರು ಹೊದ್ದು ನಿಂತ ಬೆಟ್ಟಗುಡ್ಡಗಳ ಸುಂದರ ಪರಿಸರದ ನಡುವೆ ಇರುವ ಭಾಗಮಂಡಲಕ್ಕೆ ಕಾಲಿಡುವಾಲೇ ಕಾವೇರಿ, ಕನ್ನಿಕೆಯರ ಸಂಗಮ ಕಾಣುತ್ತದೆ. ಕಾವೇರಿ ನದಿಯು ತಲಕಾವೇರಿಯಿಂದ ಮೂರು ಮೈಲು ಕೂಡಾ ಹರಿದಿಲ್ಲ ಎನ್ನುವಾಗಲೇ ಕನ್ನಿಕೆ ಜೊತೆಗೂಡುತ್ತಾಳೆ. ಇಲ್ಲಿ ಇನ್ನೊಂದು ನದಿ ಸುಜ್ಯೋತಿ ಗುಪ್ತಗಾಮಿನಿಯಾಗಿ ಬಂದು ಸೇರುತ್ತದೆ. ಸ್ಕಂದ ಪುರಾಣ ಪ್ರಸಿದ್ದ ಭಗಂಡೇಶ್ವರ ದೇವಾಲಯದ ಮುಂಭಾಗದಲ್ಲಿಯೇ ಈ ಮೂರು ನದಿಗಳ ತ್ರಿವೇಣಿ ಸಂಗಮವಿದೆ. ಈ ಸಂಗಮದಿಂದಾಗಿಯೇ ಭಾಗಮಂಡಲ ದಕ್ಷಿಣದ ಪ್ರಯಾಗ ಎಂದು ಪ್ರಖ್ಯಾತಿ.

ಈಗ ತ್ರೀವೇಣಿ ಸಂಗಮ ಪ್ರೇಕ್ಷಣೀಯ ತಾಣವಾಗುವತ್ತ ಹೆಜ್ಜೆ ಇಟ್ಟಿದೆ. ಸಂಗಮದ ಬಳಿ ಉದ್ಯಾನ ನಿರ್ಮಾಣಗೊಂಡಿದ್ದು, ಜನಾಕರ್ಷಣೀಯ ತಾಣವಾಗಿ ರೂಪುಗೊಳ್ಳುತ್ತಿದೆ. ಭಗ೦ಡೇಶ್ವರ ದೇವಾಲಯದ ಎದುರಿನ ತ್ರಿವೇಣಿ ಸಂಗಮದ ಆವರಣ ಸುಂದರ ಉದ್ಯಾನದಂತೆ ಕಂಗೊಳಿಸುತ್ತಿದೆ. ತ್ರಿವೇಣಿ ಸಂಗಮವನ್ನು ಜನ ಆಕರ್ಷಣೀಯ ಸ್ಥಳವಾಗುವಂತೆ ಮಾಡಲು ₹ 2 ಕೋಟಿ ಅನುದಾನದಲ್ಲಿ ಅಭಿವೃದ್ಧಿ ಕಾರ್ಯಗಳು ಭರದಿಂದ ನಡೆಯುತ್ತಿವೆ.

ಒಂದೆಡೆ ನಿಧಾನಗತಿಯಲ್ಲಿ ಸಾಗಿದ ಮೇಲ್ಸೇತುವೆ ಅಭಿವೃದ್ಧಿ ಕಾಮಗಾರಿ, ಮತ್ತೊಂದೆಡೆ ಮೂಲ ಸೌಕರ್ಯಗಳ ಕೊರತೆಯಿಂದ ಬಳಲಿದ ತ್ರಿವೇಣಿ ಸಂಗಮ. ಇದೀಗ ಮೇಲ್ಸೇತುವೆ ಕಾಮಗಾರಿ ಪೂರ್ಣಗೊಳ್ಳುತ್ತಿದ್ದಂತೆ ತ್ರಿವೇಣಿ ಸಂಗಮವನ್ನು ಅಭಿವೃದ್ಧಿಗೊಳಿಸಿ ಈ ಭಾಗಕ್ಕೆ ಸುತ್ತಲೂ ಭದ್ರತಾ ವ್ಯವಸ್ಥೆಯನ್ನು ಕೈಗೊಳ್ಳಲಾಗಿದೆ. ಹೊಸ ಮೇಲ್ಸೇತುವೆ ಕೆಳಭಾಗದಲ್ಲಿ ತ್ರಿವೇಣಿ ಸಂಗಮಕ್ಕೆ ಹೋಗುವ ದಾರಿಗೆ ಗೋಪುರ ಸಹಿತ 3 ದ್ವಾರ ನಿರ್ಮಾಣವಾಗಿದೆ. ಎರಡೂ ಬದಿಯಲ್ಲಿ ಸುಂದರ ಉದ್ಯಾನ ನಿರ್ಮಾಣ ಮಾಡಲಾಗಿದ್ದು, ಈಗಾಗಲೇ ಹುಲ್ಲು ಹಾಸಿನ ಸಹಿತ ಗಿಡಗಳನ್ನು ನೆಡಲಾಗಿದೆ. ಭಕ್ತರಿಗೆ ಕುಳಿತುಕೊಳ್ಳಲು ಅಲ್ಲಲ್ಲಿ ಬೆಂಚುಗಳ ಅಳವಡಿಕೆ ಮತ್ತು ಮುಂಭಾಗದ ದ್ವಾರಕ್ಕೆ ಅಂತಿಮ ಸ್ಪರ್ಶ ನೀಡಿದ್ದು ತ್ರಿವೇಣಿ ಸಂಗಮ ಜನಾಕರ್ಷಣೀಯ ತಾಣವಾಗಿದೆ.

ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ನಿರ್ಮಾಣವಾಗುತ್ತಿರುವ ಉದ್ಯಾನ
ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ನಿರ್ಮಾಣವಾಗುತ್ತಿರುವ ಉದ್ಯಾನ

ರಾತ್ರಿ ಕೂಡ ಕಂಗೊಳಿಸಲಿದೆ ತ್ರಿವೇಣಿ ಸಂಗಮ!

ತ್ರಿವೇಣಿ ಸಂಗಮದ ಸುತ್ತ ಆಕರ್ಷಣೀಯ ಹೂವಿನ ಅಲಂಕಾರಗಳ ಉದ್ಯಾನ ನಿರ್ಮಾಣವಾಗುತ್ತಿದೆ. ಸುತ್ತಲೂ ಕಬ್ಬಿಣದ ಗ್ರಿಲ್‌ಗಳನ್ನು ಅಳವಡಿಸಿ ಇನ್ನಷ್ಟು ಅಂದ ಹೆಚ್ಚಿಸಲಾಗುತ್ತಿದೆ. ಕಮಾನಿಗೆ ಹಂಚು ಮತ್ತು ಕಲ್ಲುಗಳಿಂದ ಅಳವಡಿಸಿ ಸುಂದರವಾಗಿ ಕಾಣುವಂತೆ ಮಾಡಲಾಗುತ್ತಿದೆ. ನದಿಯ ಬಳಿ ನಿಂತು ನೋಡಲು ಅವಕಾಶ ಕಲ್ಪಿಸಲಾಗುತ್ತಿದೆ. ರಾತ್ರಿ ಅಲ್ಲಲ್ಲಿ ಅಲಂಕೃತ ಲೈಟಿಂಗ್ ವ್ಯವಸ್ಥೆಯನ್ನು ಕಲ್ಪಿಸಲಾಗಿದ್ದು ರಾತ್ರಿ ಕೂಡ ತ್ರಿವೇಣಿ ಸಂಗಮ ಕಂಗೊಳಿಸಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT