ಭಾನುವಾರ, 25 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೀಮೆ ಎಣ್ಣೆ ಪೂರೈಕೆಗೆ ಆಗ್ರಹ

ಗೌಡಳ್ಳಿ ಗ್ರಾಮ ಸಭೆ: ಸಮಸ್ಯೆಗಳ ಸುರಿಮಳೆ, ಗ್ರಾಮಸ್ಥರ ಆಕ್ರೋಶ
Published 22 ನವೆಂಬರ್ 2023, 6:33 IST
Last Updated 22 ನವೆಂಬರ್ 2023, 6:33 IST
ಅಕ್ಷರ ಗಾತ್ರ

ಸೋಮವಾರಪೇಟೆ: ಬೆಟ್ಟಗುಡ್ಡ ಪ್ರದೇಶವಾದ ಕೊಡಗಿನಲ್ಲಿ ಸೀಮೆ ಎಣ್ಣೆ ವಿತರಿಸುತ್ತಿಲ್ಲ ಎಂದು ಗ್ರಾಮಸ್ಥರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಘಟನೆ ಗೌಡಳ್ಳಿ ಗ್ರಾಮ ಸಭೆಯಲ್ಲಿ ಮಂಗಳವಾರ ನಡೆಯಿತು.

ಗ್ರಾಮ ಪಂಚಾಯಿತಿ ಅಧ್ಯಕ್ಷ ನವೀನ್ ಅಜ್ಜಳ್ಳಿ ಅವರ ಅಧ್ಯಕ್ಷತೆಯಲ್ಲಿ ನವದುರ್ಗಾಪರಮೇಶ್ವರಿ ದೇವಾಲಯದ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ನ್ಯಾಯಬೆಲೆ ಅಂಗಡಿಗಳಲ್ಲಿ ಸಿಗಬೇಕಾಗಿರುವ ಸೀಮೆ ಎಣ್ಣೆ ಅವಶ್ಯಕತೆಯ ಬಗ್ಗೆ ಅಧಿಕಾರಿಗಳಿಗೆ ಮನವರಿಕೆ ಮಾಡಿದರು.

ಜಿಲ್ಲೆಯಲ್ಲಿ ಸೀಮೆ ಎಣ್ಣೆ ವಿತರಣೆಯನ್ನು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯೇ ಮಾಡಬೇಕು. ಈ ಬಗ್ಗೆ ಜಿಲ್ಲಾಧಿಕಾರಿಗಳು ಕ್ರಮಕೈಗೊಳ್ಳುವಂತೆ ಆಗ್ರಹಿಸಿದರು.

‘ಕಳೆದ 2 ವರ್ಷಗಳಿಂದ ಇಲಾಖೆ ಸೀಮೆ ಎಣ್ಣೆ ವಿತರಿಸುತ್ತಿಲ್ಲ. ಇಂತಹ ನಿರ್ಲಕ್ಷ್ಯದಿಂದ ಜಿಲ್ಲೆಯ ನಿವಾಸಿಗಳಿಗೆ ತೊಂದರೆಯಾಗಿದೆ. ಸರ್ಕಾರದ ಟೆಂಡರ್ ತೆಗೆದುಕೊಳ್ಳಲು ಯಾರು ಮುಂದೆ ಬರುತ್ತಿಲ್ಲ. ಇಲಾಖೆಯ ಮೂಲಕವೇ ಸೀಮೆ ಎಣ್ಣೆ ವಿತರಣೆಯಾಗುವಂತೆ ಜಿಲ್ಲಾಧಿಕಾರಿಗಳು ಕ್ರಮಕೈಗೊಳ್ಳಬೇಕು’ ಎಂದು ಗ್ರಾಮಸ್ಥರಾದ ಕೂಗೂರು ನಾಗರಾಜ್, ವೀರಭದ್ರಪ್ಪ, ವಿ.ಎನ್.ದೇವರಾಜ್, ಜಿ.ಪಿ.ಸುನಿಲ್, ಫ್ರಾನ್ಸಿಸ್ ಡಿಸೋಜ ಒತ್ತಾಯಿಸಿದರು.

‘ಸರ್ಕಾರದಿಂದ ಸೀಮೆ ಎಣ್ಣೆ ಹಂಚಿಕೆಗೆ ಅನುಮತಿ ಇದೆ. ಆದರೆ, ಟೆಂಡರ್ ಪಡೆಯುವವರು ಇಲ್ಲದಿರುವುದರಿಂದ ವಿತರಣೆಯಾಗುತ್ತಿಲ್ಲ. ಬೇಡಿಕೆ ಬಗ್ಗೆ ಮೇಲಾಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ’ ಎಂದು ಆಹಾರ ನಿರೀಕ್ಷಕಿ ಯಶಸ್ವಿನಿ ಸ್ಪಷ್ಟನೆ ನೀಡಿದರು.

ಕಂದಾಯ ಇಲಾಖೆಯ ಅಧಿಕಾರಿಗಳು ಎರಡು ದಿನ ಗೌಡಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಕಚೇರಿಯಲ್ಲಿ ಇದ್ದು, ಸಾರ್ವಜನಿಕರ ಕೆಲಸ ಮಾಡಬೇಕು ಎಂದು ಗ್ರಾಮ ಆಡಳಿತಾಧಿಕಾರಿ ಸಂತೋಷ್ ಅವರಿಗೆ ಸಭೆ ಸೂಚಿಸಿತು. ಹೆಚ್ಚಿನ ಅಧಿಕಾರಿಗಳು ಜನರ ಕರೆಗಳನ್ನು ಸ್ವೀಕರಿಸುತ್ತಿಲ್ಲ. ಸರ್ಕಾರಿ ಸಿಮ್ ಉಪಯೋಗಿಸಬೇಕು. ರೈತರ ಕರೆ ಸ್ವೀಕಾರ ಮಾಡಬೇಕು ಎಂದು ಹೇಳಿದ ಹಿನ್ನೆಲೆ, ಸೋಮವಾರ ಮತ್ತು ಶುಕ್ರವಾರ ಗೌಡಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಕಂದಾಯ ಅಧಿಕಾರಿಯೊಬ್ಬರು ಲಭ್ಯವಿರುತ್ತಾರೆ ಎಂದು ಅಧಿಕಾರಿ ಭರವಸೆ ನೀಡಿದರು.

ಹಿರಿಕರ, ಕೂಗೂರು, ಚಿಕ್ಕಾರ ವ್ಯಾಪ್ತಿಯಲ್ಲಿ ಕಾಡಾನೆಗಳು, ಕಾಡುಕೋಣಗಳ ಹಾವಳಿ ಮಿತಿಮೀರಿದೆ. ಕಾಫಿ ಕೊಯ್ಲಿಗೆ ಬಂದಿದೆ. ತೋಟದಲ್ಲಿ ಕೆಲಸ ಮಾಡಲು ಕಾರ್ಮಿಕರು ಭಯಪಡುತ್ತಿದ್ದಾರೆ. ಕಾಡಾನೆ ಹಾವಳಿ ನಿಯಂತ್ರಣಕ್ಕೆ ಅರಣ್ಯ ಇಲಾಖೆ ಕ್ರಮ ಕೈಗೊಳ್ಳಬೇಕು ಎಂದು ಕೃಷಿಕ ಎಚ್.ಈ.ರಮೇಶ್, ಫ್ರಾನ್ಸಿಸ್ ಡಿಸೋಜ ಹೇಳಿದರು.

‘ಹಿರಿಕರ ಗ್ರಾಮ ಕಾಡಂಚಿನಲ್ಲಿ ಸೋಲಾರ್ ತಂತಿಬೇಲಿ ಕೆಲಸವಾಗುತ್ತಿದೆ. ನಂತರ ಹತೋಟಿಗೆ ಬರುತ್ತದೆ’ ಎಂದು ಪ್ರತಕ್ರಿಯಿಸಿದ ಡಿಆರ್‌ಎಫ್‌ಒ ಸೂರ್ಯ ಭರವಸೆ ನೀಡಿದರು.

‘ಕಾಡಾನೆಗಳ ಕೃಷಿ ಭೂಮಿಗೆ ಬಂದರೆ ಎಲಿಫೆಂಟ್ ಟಾಸ್ಕ್ ಫೋರ್ಸ್ (ಮೊ.8277124444) ಕರೆ ಮಾಡಿ ಮಾಹಿತಿ ನೀಡಿದರೆ, ಸಿಬ್ಬಂದಿಗಳು ಕ್ರಮ ಕೈಗೊಳ್ಳುತ್ತಾರೆ’ ಎಂದು ಹೇಳಿದರು.

ಗೃಹಲಕ್ಷ್ಮಿ ಯೋಜನೆ ಜಾರಿಗೆ ಬಂದು ನಾಲ್ಕು ತಿಂಗಳು ಕಳೆದಿವೆ. ಅನೇಕ ಮಹಿಳೆಯರಿಗೆ ಮಾಸಿಕ ಹಣ ಬರುತ್ತಿಲ್ಲ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಹೋಗಿ ಅರ್ಜಿ ನೀಡಿದರೂ, ಪ್ರಯೋಜನ ಆಗುತ್ತಿಲ್ಲ ಎಂದು ದೇವರಾಜ್ ಹೇಳಿದರು.

ಈ ಸಂಬಂಧ ಉತ್ತರಿಸಿ, ತಾಂತ್ರಿಕ ಸಮಸ್ಯೆ ಬಗೆಹರಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಮೇಲ್ವಿಚಾರಕಿ ಭರವಸೆ ನೀಡಿದರು.

ಸಭೆಯಲ್ಲಿ ಗ್ರಾ.ಪಂಉಪಾಧ್ಯಕ್ಷೆ ವಿಶಾಲಾಕ್ಷಿ, ಸದಸ್ಯರಾದ ವೆಂಕಟೇಶ್, ಮಂಜುನಾಥ್, ಪ್ರಸನ್ನ, ಗಣೇಶ್, ರೋಹಿಣಿ, ಸುಮಾ, ಮಲ್ಲಿಕಾ, ನೋಡೆಲ್ ಅಧಿಕಾರಿ ಸತೀಶ್, ಪಿಡಿಒ ಲಿಖಿತಾ ಇದ್ದರು.

Highlights - ಇಲಾಖೆ ಕಳೆದ 2 ವರ್ಷಗಳಿಂದ ವಿತರಿಸದ ಸೀಮೆ ಎಣ್ಣೆ  ಟೆಂಡರ್ ಪಡೆಯುವವರು ಇಲ್ಲದಿರುವುದರಿಂದ ವಿತರಣೆಯಿಲ್ಲ ಕಾಡಾನೆ ಹಾವಳಿ ನಿಯಂತ್ರಣಕ್ಕೆ ಅರಣ್ಯ ಇಲಾಖೆ ಕ್ರಮ ಕೈಗೊಳ್ಳಿ

Cut-off box - ದಾಖಲೆ ಒದಗಿಸಲು ಕಿರುಕುಳ ‘ಪೋಡಿಮುಕ್ತ ಗ್ರಾಮಗಳನ್ನು ಮಾಡಲು ಕಂದಾಯ ಇಲಾಖೆ ಕ್ರಮ ಕೈಗೊಳ್ಳಬೇಕು. ರೈತರ ದುರಸ್ತಿ ಫೈಲ್ ವಿಲೇವಾರಿ ಮಾಡಬೇಕು. ದುರಸ್ತಿಗೆ ಅರ್ಜಿ ಸಲ್ಲಿಸಿದ ಮೇಲೆಯೂ ಪೂರಕ ದಾಖಲೆ ಒದಗಿಸಲು ಕಿರುಕುಳ ನೀಡಲಾಗುತ್ತಿದೆ. ಎಲ್ಲಾ ದಾಖಲೆಗಳು ಕಂದಾಯ ಇಲಾಖೆಯಲ್ಲೇ ಸಿಗುವುದರಿಂದ ಕಂದಾಯ ಇಲಾಖೆಯ ಸಿಬ್ಬಂದಿಗಳನ್ನು ನೇಮಿಸಿ ಅರ್ಜಿದಾರರನ್ನು ಮಡಿಕೇರಿ ಸೋಮವಾರಪೇಟೆಗೆ ಅಲೆಸುವುದನ್ನು ನಿಲ್ಲಿಸಬೇಕು’ ಎಂದು ಗ್ರಾಮಸ್ಥರರು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT