ಸೋಮವಾರ, ಆಗಸ್ಟ್ 2, 2021
21 °C
ಗೋಣಿಕೊಪ್ಪಲು: ಹೊಳೆಗೆ ಕೊಳಚೆ ನೀರು, ಒಂದು ಕಿಲೋ ಮೀಟರ್‌ವರೆಗೂ ಕಸ

ಕೀರೆಹೊಳೆ ಸೇರುತ್ತಿದೆ ತ್ಯಾಜ್ಯ ರಾಶಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗೋಣಿಕೊಪ್ಪಲು: ಪಟ್ಟಣದಲ್ಲಿ ಹರಿಯುತ್ತಿರುವ ಕೀರೆಹೊಳೆಗೆ ತ್ಯಾಜ್ಯವೇ ದಡವಾಗಿದೆ. ಕೆಲ ನಿವಾಸಿಗಳು ಕಸವನ್ನು ಹೊಳೆ ದಡಕ್ಕೆ ತಂದು ಹಾಕುತ್ತಿದ್ದು, ಪರಿಸರ ಮಲಿನ ಮಾಡುತ್ತಿದ್ದಾರೆ.

ದಡದಲ್ಲಿ ಕೊಳೆತ ತ್ಯಾಜ್ಯ ಹೊಳೆ ಸೇರುತ್ತಿದೆ, ತ್ಯಾಜ್ಯವನ್ನು ಗ್ರಾಮ ಪಂಚಾಯಿತಿ ವತಿಯಿಂದ ಪ್ರತಿ ವರ್ಷ ಮಳೆಗಾಲ ಆರಂಭವಾಗುವುದಕ್ಕೂ ಮೊದಲು ತೆರವುಗೊಳಿಸಿ ದಡಕ್ಕೆ ಸರಿಸಲಾಗುತ್ತಿದೆ. ಹೀಗಾಗಿ ಸುಮಾರು 1 ಕಿ.ಮೀ.ಗೂ ಹೆಚ್ಚಿನ ದೂರ ಹೊಳೆ ದಡದಲ್ಲಿ ಪ್ಲಾಸ್ಟಿಕ್‌ನಿಂದ ಕೂಡಿದ ತ್ಯಾಜ್ಯದ ರಾಶಿ ಕಂಡುಬರುತ್ತಿದೆ.

‘ಗ್ರಾಮ ಪಂಚಾಯಿತಿ ಪೌರ ಕಾರ್ಮಿಕರು ವಾಹನದಲ್ಲಿ ನಿತ್ಯವೂ ಕಸ ಸಂಗ್ರಹಿಸಿ ಪಂಚಾಯಿತಿ ಆವರಣದ ಲ್ಲಿಯೇ ತುಂಬಿಸುತ್ತಾರೆ. ಬಳಿಕ ಪ್ಲಾಸ್ಟಿಕ್ ಮೊದಲಾದ ಒಣ ಕಸವನ್ನು ಬೇರ್ಪಡಿಸಿ ಅದಕ್ಕೆ ಬೆಂಕಿ ಹಚ್ಚುತ್ತಾರೆ. ಹಸಿ ಕಸವನ್ನು ರಾತ್ರಿ ವೇಳೆ ತೆಗೆದುಕೊಂಡು ಹೋಗಿ ಹೊಳೆ ದಡಕ್ಕೆ ವಿಲೇವಾರಿ ಮಾಡುತ್ತಾರೆ’ ಎಂದು ಗ್ರಾಮಸ್ಥರು ಆರೋಪಿಸುತ್ತಾರೆ.

ವರ್ಷ ಪೂರ್ತಿ ಸುರಿದ ಕಸ ಹೊಳೆಯನ್ನು ತುಂಬಿ ಮಳೆಗಾಲದಲ್ಲಿ ನೀರಿನ ಹರಿವಿಗೆ ಅಡ್ಡಿಯಾಗುತ್ತಿದೆ. ಗ್ರಾಮ ಪಂಚಾಯಿತಿ ಎರಡು ವರ್ಷಗಳಿಂದ ಮಳೆಗಾಲ ಆರಂಭವಾ ಗುವುದಕ್ಕೂ ಮೊದಲೇ ಹೂಳೆತ್ತಿಸುವ ಕಾರ್ಯಕ್ಕೆ ಮುಂದಾಗುತ್ತಿದೆ. ಈ ವರ್ಷವೂ ₹3.5ಲಕ್ಷ ವೆಚ್ಚದಲ್ಲಿ ಹೊಳೆಯಲ್ಲಿ ತುಂಬಿದ್ದ ತ್ಯಾಜ್ಯವನ್ನು ತೆರವುಗೊಳಿಸಿ ದಡಕ್ಕೆ ಹಾಕಿಸಲಾಗಿದೆ. ಮಳೆಗಾಲದಲ್ಲಿ ನೀರು ಹೆಚ್ಚಿದಾಗ ಈ ತ್ಯಾಜ್ಯ ಮತ್ತೆ ಕುಸಿದು ಹೊಳೆ ಸೇರುತ್ತದೆ.

‘40 ವರ್ಷಗಳ ಹಿಂದೆ ಹೊಳೆಯ ನೀರನ್ನು ಕುಡಿಯಲು ಬಳಸುತ್ತಿದ್ದೆವು. ದಡದಲ್ಲಿ ಬಿದಿರು ಮತ್ತು ಗಿಡಮರಗಳ ತೋಪಿತ್ತು. ಹೊಳೆಯ ನೀರು ಶುಭ್ರವಾಗಿತ್ತು’ ಎಂದು ಪಟೇಲ್ ನಗರದ ನಿವಾಸಿ ಹಾಗೂ ಸಿನಿಮಾ ನಟ ಫಯಾಜ್ ಖಾನ್‌ ನೆನಪು ಮಾಡಿಕೊಳ್ಳುತ್ತಾರೆ.

‘ನಗರ ಬೆಳೆದಂತೆ ಹೊಳೆ ದಡ ಸಂಪೂರ್ಣವಾಗಿ ಒತ್ತುವರಿಯಾಗಿದೆ. ಮನೆಗಳ ಶೌಚಾಲಯದ ನೀರನ್ನು ನೇರವಾಗಿ ನದಿಗೆ ಬಿಡುತ್ತಿದ್ದಾರೆ’ ಎಂದು ಅವರು ಆರೋಪಿಸುತ್ತಾರೆ.

‘ಪಟ್ಟಣದ ಬಸ್ ನಿಲ್ದಾಣ ಬಳಿ ಗ್ರಾಮ ಪಂಚಾಯಿತಿ ಎದುರು ಕಸ ಹಾಕಿ ಅದಕ್ಕೆ ರಾತ್ರಿ ವೇಳೆ ಬೆಂಕಿ ಹಚ್ಚುತ್ತಿದ್ದಾರೆ. ಇದರಿಂದ ಪ್ಲಾಸ್ಟಿಕ್ ಮತ್ತು ಇತರೆ ತ್ಯಾಜ್ಯದ ಕಮಟು ವಾಸನೆ ಬಸ್ ನಿಲ್ದಾಣವನ್ನು ಆವರಿಸಿಕೊಂಡು ಉಸಿರಾಡಲು ಕಷ್ಟವಾಗುತ್ತದೆ. ರಾತ್ರಿ ವೇಳೆ ವಾಹನ ನಿಲ್ಲಿಸಿಕೊಂಡು ಬೀಟ್ ಕಾಯಲು ತೊಂದರೆ ಆಗುತ್ತಿದೆ’ ಎಂದು ಎಎಸ್‌ಐ ಉದಯ್‌ ಅವರು ದೂರುತ್ತಾರೆ.

‘ಗ್ರಾಮ ಪಂಚಾಯಿತಿ ಆವರಣ ದಿಂದ ಕಸವನ್ನು ತೆರವುಗೊಳಿ ಸಲಾಗುವುದು’ ಎಂದು ಪಿಡಿಒ ತಿಮ್ಮಯ್ಯ ಹೇಳುತ್ತಾರೆ.

‘ಕಸ ಹಾಕಲು ಹಳ್ಳಿಗಟ್ಟು ಬಳಿಯ ಸೀತಾ ಕಾಲೊನಿಯಲ್ಲಿ 10 ವರ್ಷಗಳ ಹಿಂದೆಯೇ ಎರಡು ಎಕರೆ ಜಾಗ ನಿಗದಿಗೊಳಿಸಲಾಗಿದೆ. ಸುತ್ತ ಕಾಂಪೌಂಡ್ ನಿರ್ಮಿಸಿ ಕಸ ಹಾಕಲು ಸಜ್ಜುಗೊಳಿಸಲಾಗಿದೆ. ಆದರೆ, ಅಲ್ಲಿನ ಜನ ಕಸ ಹಾಕಲು ಬಿಡುತ್ತಿಲ್ಲ. ಹೀಗಾಗಿ ಕಸವನ್ನು ಗ್ರಾಮ ಪಂಚಾಯಿತಿ ಎದುರೇ ತುಂಬಿಸಬೇಕಾಗಿದೆ’ ಎಂದು ಗ್ರಾಮ ಪಂಚಾಯಿತಿ ಸದಸ್ಯ ಬಿ.ಎನ್.ಪ್ರಕಾಶ್ ಪ್ರತಿಕ್ರಿಯೆ ನೀಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು