ಮಡಿಕೇರಿ: ಕೋಲ್ಕತ್ತಾದಲ್ಲಿ ಈಚೆಗೆ ನಡೆದ ವೈದ್ಯಕೀಯ ವಿದ್ಯಾರ್ಥಿನಿಯ ಕೊಲೆ ಖಂಡಿಸಿ ಹಾಗೂ ಮಹಿಳೆಯ ರಕ್ಷಣೆಗೆ ಒತ್ತಾಯಿಸಿ ಬಿಜೆಪಿ ಜಿಲ್ಲಾ ಮತ್ತು ನಗರ ಮಹಿಳಾ ಮೋರ್ಚಾ ನೇತೃತ್ವದಲ್ಲಿ ಶುಕ್ರವಾರ ಮಹಿಳೆಯರು ಮೋಂಬತ್ತಿ ಮೆರವಣಿಗೆ ನಡೆಸಿದರು.
ಇಲ್ಲಿನ ಜನರಲ್ ತಿಮ್ಮಯ್ಯ ವೃತ್ತದಲ್ಲಿ ಸೇರಿದ ಪ್ರತಿಭಟನಕಾರರು ಮೋಂಬತ್ತಿ ಬೆಳಗಿಸಿ ಮೌನ ಪ್ರತಿಭಟನೆ ನಡೆಸಿದರು.
ಬಿಜೆಪಿಯ ಹಿರಿಯ ಮುಖಂಡ ಕೆ.ಜಿ.ಬೋಪಯ್ಯ ಮಾತನಾಡಿ, ‘ಪಶ್ಚಿಮ ಬಂಗಾಳದಲ್ಲಿ ನಡೆದಿರುವ ಘಟನೆ ನಿಜಕ್ಕೂ ಆತಂಕ ಮೂಡಿಸಿದೆ. ಮಹಿಳೆಯೊಬ್ಬರು ಮುಖ್ಯಮಂತ್ರಿಯಾಗಿರುವ ರಾಜ್ಯದಲ್ಲಿ ಮಹಿಳೆಯರಿಗೆ ರಕ್ಷಣೆ ಇಲ್ಲದಂತಾಗಿದೆ’ ಎಂದು ಘಟನೆಯನ್ನು ಖಂಡಿಸಿದರು.
ಮಹಿಳಾ ಮೋರ್ಚಾದ ಜಿಲ್ಲಾಧ್ಯಕ್ಷೆ ಅನಿತಾ ಪೂವಯ್ಯ ಮಾತನಾಡಿ, ‘ಇದೊಂದು ಅತ್ಯಂತ ಕರಾಳ ಘಟನೆ. ಇತ್ತೀಚೆಗಷ್ಟೇ ಮಹಿಳೆಯರು ಪಶ್ಚಿಮ ಬಂಗಾಳದಲ್ಲಿ ರಕ್ಷಣೆಗೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದರು. ಆದರೂ, ಮತ್ತೆ ಅಂತದ್ದೇ ಘಟನೆ ನಡೆದಿದೆ. ಅಲ್ಲಿನ ಸರ್ಕಾರ ಮಹಿಳೆಯರಿಗೆ ರಕ್ಷಣೆ ಕೊಡುವಲ್ಲಿ ಸೋತಿದೆ’ ಎಂದು ಕಿಡಿಕಾರಿದರು.
ಬಿಜೆಪಿ ಜಿಲ್ಲಾಧ್ಯಕ್ಷ ರವಿ ಕಾಳಪ್ಪ, ನಗರಸಭೆ ಸದಸ್ಯರು ಹಾಗೂ ಬಿಜೆಪಿ ಮಹಿಳಾ ಮೋರ್ಚಾದ ಪದಾಧಿಕಾರಿಗಳು ಪ‍್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಬಿಜೆಪಿ ಜಿಲ್ಲಾ ಮತ್ತು ನಗರ ಮಹಿಳಾ ಮೋರ್ಚಾ ನೇತೃತ್ವದಲ್ಲಿ ಕೋಲ್ಕತ್ತಾದಲ್ಲಿ ಈಚೆಗೆ ನಡೆದ ವೈದ್ಯಕೀಯ ವಿದ್ಯಾರ್ಥಿನಿಯ ಕೊಲೆ ಖಂಡಿಸಿ ಹಾಗೂ ಮಹಿಳೆಯ ರಕ್ಷಣೆಗೆ ಒತ್ತಾಯಿಸಿ ಶುಕ್ರವಾರ ಮಹಿಳೆಯರು ಮೋಂಬತ್ತಿ ಮೆರವಣಿಗೆ ನಡೆಸಿದರು.