ಬುಧವಾರ, ಆಗಸ್ಟ್ 4, 2021
25 °C
ಎ.ಸಿ ತನಿಖೆಯಲ್ಲಿ ಬಯಲು

ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ ಕಾರಿಡಾರ್‌ನಲ್ಲಿ ಅಕ್ರಮ ಭೂ ಮಂಜೂರಾತಿ

ಜೆ.ಆರ್‌.ಗಿರೀಶ್‌ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ಬೆಂಗಳೂರು–ಚೆನ್ನೈ ಎಕ್ಸ್‌ಪ್ರೆಸ್‌ ಕಾರಿಡಾರ್‌ ಹಾದು ಹೋಗುವ ಮಾರ್ಗದಲ್ಲಿನ ಸರ್ಕಾರಿ ಜಮೀನಿನ ಅಕ್ರಮ ಮಂಜೂರಾತಿ ರದ್ದುಪಡಿಸಿರುವ ಉಪ ವಿಭಾಗಾಧಿಕಾರಿ ವಿ.ಸೋಮಶೇಖರ್‌ ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಜಮೀನು ರಕ್ಷಿಸಿದ್ದಾರೆ.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಬೆಂಗಳೂರು–ಚೆನ್ನೈ ಎಕ್ಸ್‌ಪ್ರೆಸ್‌ ಕಾರಿಡಾರ್‌ ಯೋಜನೆ ಕೈಗೆತ್ತಿಕೊಂಡಿದ್ದು, ಕಾರಿಡಾರ್‌ ಜಿಲ್ಲೆಯ ಮಾಲೂರು ಹಾಗೂ ಬಂಗಾರಪೇಟೆ ತಾಲ್ಲೂಕಿನ ಮೂಲಕ ಹಾದು ಹೋಗಲಿದೆ. ಕಾರಿಡಾರ್‌ ಅಕ್ಕಪಕ್ಕದ ಜಮೀನಿಗೆ ಚಿನ್ನದ ಬೆಲೆ ಬಂದಿದ್ದು, ಭೂಗಳ್ಳರ ಕಣ್ಣು ಸರ್ಕಾರಿ ಜಮೀನಿನ ಮೇಲೆ ಬಿದ್ದಿದೆ.

ಮಾಲೂರು ತಾಲ್ಲೂಕಿನ ಚಿಕ್ಕಸಬ್ಬೇನಹಳ್ಳಿ, ಮಲಿಯಪ್ಪನಹಳ್ಳಿ ಸೇರಿದಂತೆ ಕಾರಿಡಾರ್‌ ಮಾರ್ಗದಲ್ಲಿನ 50 ಎಕರೆಗೂ ಹೆಚ್ಚು ಸರ್ಕಾರಿ ಜಮೀನನ್ನು ದರಖಾಸ್ತು ಸಮಿತಿಯು 2019ರಲ್ಲಿ ಅನರ್ಹರಿಗೆ ಮಂಜೂರು ಮಾಡಿತ್ತು. ಈ ಸಂಬಂಧ ಸ್ಥಳೀಯರು ಹಿಂದೆ ಪ್ರಾದೇಶಿಕ ಆಯುಕ್ತರಾಗಿದ್ದ ಹರ್ಷಗುಪ್ತ ಅವರಿಗೆ ದೂರು ಕೊಟ್ಟಿದ್ದರು.

ಹರ್ಷಗುಪ್ತ ಅವರು ಖುದ್ದು ಸ್ಥಳ ಪರಿಶೀಲನೆ ನಡೆಸಿದಾಗ ಅಕ್ರಮವಾಗಿ ಸರ್ಕಾರಿ ಭೂಮಿ ಮಂಜೂರು ಮಾಡಿರುವುದು ಮೇಲ್ನೋಟಕ್ಕೆ ದೃಢಪಟ್ಟಿತ್ತು. ಹೀಗಾಗಿ ಅವರು ಅಕ್ರಮದ ಸಂಬಂಧ ಸಮಗ್ರ ತನಿಖೆ ನಡೆಸಿ ವರದಿ ನೀಡುವಂತೆ ಉಪ ವಿಭಾಗಾಧಿಕಾರಿಗೆ ಆದೇಶಿಸಿದ್ದರು.

126 ಎಕರೆ ವಶಕ್ಕೆ: ಉಪ ವಿಭಾಗಾಧಿಕಾರಿ ಸಮಗ್ರ ತನಿಖೆ ನಡೆಸಿದಾಗ ದರಖಾಸ್ತು ಸಮಿತಿಯು 126 ಎಕರೆ 3 ಗುಂಟೆ ಸರ್ಕಾರಿ ಜಮೀನನ್ನು ಅಕ್ರಮವಾಗಿ ಮಂಜೂರು ಮಾಡಿರುವ ಸಂಗತಿ ಬಯಲಾಗಿತ್ತು. ನಂತರ ಉಪ ವಿಭಾಗಾಧಿಕಾರಿ ತಮ್ಮ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿಕೊಂಡು 6 ತಿಂಗಳ ಕಾಲ ವಿಚಾರಣೆ ನಡೆಸಿ 60 ಪ್ರಕರಣದಲ್ಲಿ ಭೂ ಮಂಜೂರಾತಿ ವಜಾಗೊಳಿಸಿದ್ದಾರೆ.

ಕೆಲ ಸಚಿವರು ಸೇರಿದಂತೆ ಸರ್ಕಾರದಲ್ಲಿನ ಘಟಾನುಘಟಿಗಳಿಂದ ಒತ್ತಡ ಬಂದರೂ ಮಣಿಯದ ಉಪ ವಿಭಾಗಾಧಿಕಾರಿ 60 ಪ್ರಕರಣದಲ್ಲಿ ಅಕ್ರಮವಾಗಿ ಮಂಜೂರಾಗಿದ್ದ 126 ಎಕರೆ 3 ಗುಂಟೆ ಜಮೀನನ್ನು ಸರ್ಕಾರದ ವಶಕ್ಕೆ ಪಡೆದಿದ್ದಾರೆ. ಈ ಪೈಕಿ 10 ಪ್ರಕರಣದಲ್ಲಿ ಅರ್ಹರಿಗೆ ಜಮೀನು ಮಂಜೂರು ಮಾಡಿದ್ದರೂ ನಿಯಮಾವಳಿ ಪಾಲನೆಯಾಗಿಲ್ಲ.

ಜಮೀನ್ದಾರರಿಗೂ ಜಮೀನು: ನಿಯಮದ ಪ್ರಕಾರ ಭೂರಹಿತರಿಗೆ ಸರ್ಕಾರಿ ಜಮೀನು ಮಂಜೂರು ಮಾಡಬೇಕು. ಆದರೆ, ನೂರಾರು ಎಕರೆ ಜಮೀನು ಹೊಂದಿರುವ ಜಮೀನ್ದಾರರು, ಲಕ್ಷಗಟ್ಟಲೇ ಸಂಬಳ ಪಡೆಯುವ ಸರ್ಕಾರಿ ನೌಕರರು ಹಾಗೂ ಅವರ ಕುಟುಂಬ ಸದಸ್ಯರು ತಮ್ಮ ಪ್ರಭಾವ ಬಳಸಿ ಸರ್ಕಾರಿ ಜಮೀನು ಮಂಜೂರು ಮಾಡಿಸಿಕೊಂಡಿದ್ದರು.

ಹಲವು ವರ್ಷಗಳಿಂದ ಸರ್ಕಾರಿ ಜಮೀನು ಉಳುಮೆ ಮಾಡುತ್ತಿರುವವರು ಸಾಗುವಳಿ ಚೀಟಿಗಾಗಿ ಫಾರಂ 53 ಹಾಗೂ 57ರಲ್ಲಿ ಅರ್ಜಿ ಸಲ್ಲಿಸಬೇಕು. ಬಳಿಕ ಅರ್ಜಿದಾರರು ಜಮೀನು ಹಿಡುವಳಿ ಮಾಡುತ್ತಿರುವ ಬಗ್ಗೆ ಹಾಗೂ ಯಾವುದೇ ತಕರಾರು ಇಲ್ಲದ ಸಂಬಂಧ ವರದಿ ಪಡೆಯಲಾಗುತ್ತದೆ.

ಬಳಿಕ ತಹಶೀಲ್ದಾರ್ ಹಾಗೂ 8 ಸದಸ್ಯರನ್ನು ಒಳಗೊಂಡ ಶಾಸಕರ ನೇತೃತ್ವದ ಸಮಿತಿಯಲ್ಲಿ ಅರ್ಜಿದಾರರಿಗೆ ಸಾಗುವಳಿ ಚೀಟಿ ನೀಡುವ ಬಗ್ಗೆ ತೀರ್ಮಾನವಾಗುತ್ತದೆ. ಆ ನಂತರ ಫಲಾನುಭವಿ ಹೆಸರಿಗೆ ಜಮೀನಿನ ಖಾತೆ ಮಾಡಲಾಗುತ್ತದೆ. ಆದರೆ, ಈ ನಿಯಮಗಳನ್ನೆಲ್ಲಾ ಗಾಳಿಗೆ ತೂರಿ ತರಾತುರಿಯಲ್ಲಿ ಅನರ್ಹರಿಗೆ ಸರ್ಕಾರಿ ಜಮೀನು ಮಂಜೂರು ಮಾಡಿ ಖಾತೆ ಮಾಡಲಾಗಿತ್ತು.

ಸಂಚು ವಿಫಲ: ಸ್ಥಳೀಯರ ಜತೆಗೆ, ಬೆಂಗಳೂರು, ಹೊಸಕೋಟೆ ಭಾಗದ ಪ್ರಭಾವಿಗಳು ನಿಯಮಬಾಹಿರವಾಗಿ ಜಮೀನು ಮಂಜೂರು ಮಾಡಿಸಿಕೊಂಡಿದ್ದರು. ಕಾರಿಡಾರ್‌ಗೆ ಭೂಸ್ವಾಧೀನ ಆದಾಗ ಕೋಟಿಗಟ್ಟಲೇ ಭೂ ಪರಿಹಾರ ಪಡೆಯಲು ದೊಡ್ಡ ಸಂಚು ರೂಪಿಸಿದ್ದರು. ಸರ್ಕಾರದ ಜಮೀನನ್ನು ಕಾರಿಡಾರ್‌ಗಾಗಿ ಸರ್ಕಾರಕ್ಕೇ ಬಿಟ್ಟು ಕೊಟ್ಟು ಪರಿಹಾರ ಪಡೆಯಲು ತೆರೆಮರೆಯ ಪ್ರಯತ್ನ ನಡೆದಿತ್ತು.

ಕಾರಿಡಾರ್‌ ಮಾರ್ಗದಲ್ಲಿ ಜಮೀನಿನ ಮಾರುಕಟ್ಟೆ ದರ ಎಕರೆಗೆ ಸದ್ಯ ಸುಮಾರು ₹ 1 ಕೋಟಿಯಿದೆ. ಉಪ ವಿಭಾಗಾಧಿಕಾರಿಯ ಕರ್ತವ್ಯ ಪ್ರಜ್ಞೆಯಿಂದ ಭೂಗಳ್ಳರ ಸಂಚು ವಿಫಲವಾಗಿದ್ದು, ಸರ್ಕಾರಿ ಜಮೀನು ರಕ್ಷಣೆಯಾಗಿದೆ. ಮತ್ತೊಂದೆಡೆ ಸರ್ಕಾರಕ್ಕೆ ಭೂಪರಿಹಾರ ನೀಡಿಕೆಯ ಆರ್ಥಿಕ ಹೊರೆ ತಪ್ಪಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು