ಬುಧವಾರ, ಜೂನ್ 29, 2022
23 °C
ಅಗತ್ಯ ವಸ್ತುಗಳ ಖರೀದಿಗೂ ಕಡಿವಾಣ

ಕೋಲಾರ: ವಾಣಿಜ್ಯ ಚಟುವಟಿಕೆಗೆ ನಿರ್ಬಂಧ; 2 ದಿನ ಸಂಪೂರ್ಣ ಲಾಕ್‌ಡೌನ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ಕೋವಿಡ್‌ ನಿಯಂತ್ರಣಕ್ಕಾಗಿ ಜಿಲ್ಲೆಯಾದ್ಯಂತ ಶನಿವಾರದಿಂದ (ಜೂನ್‌ 5) ವಾರಾಂತ್ಯದ 2 ದಿನ ಸಂಪೂರ್ಣ ಲಾಕ್‌ಡೌನ್‌ ಘೋಷಿಸಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ.

ಶನಿವಾರ ಬೆಳಿಗ್ಗೆಯಿಂದ ಜೂನ್‌ 7ರ ಬೆಳಿಗ್ಗೆ 6ರವರೆಗೆ ಸಂಪೂರ್ಣ ಲಾಕ್‌ಡೌನ್‌ ಜಾರಿಗೊಳಿಸಲಾಗಿದೆ. ಪೆಟ್ರೋಲ್‌ ಬಂಕ್‌ ಮತ್ತು ವೈದ್ಯಕೀಯ ಸೇವೆ ಹೊರತುಪಡಿಸಿ ಉಳಿದ ಎಲ್ಲಾ ವಾಣಿಜ್ಯ ಚಟುವಟಿಕೆ ನಿರ್ಬಂಧಿಸಲಾಗಿದೆ. ಹಾಲಿನ ಮಳಿಗೆಗಳು ಹಾಗೂ ನ್ಯಾಯಬೆಲೆ ಅಂಗಡಿಗಳನ್ನು ಬೆಳಿಗ್ಗೆ 6ರಿಂದ 10 ಗಂಟೆವರೆಗೆ ಮಾತ್ರ ತೆರೆಯಲು ಅವಕಾಶ ನೀಡಲಾಗಿದೆ.

ಸರ್ಕಾರದ ಆದೇಶದಂತೆ ಜಿಲ್ಲೆಯಲ್ಲಿ ಲಾಕ್‌ಡೌನ್‌ ನಡುವೆಯೂ ಪ್ರತಿನಿತ್ಯ ಬೆಳಿಗ್ಗೆ 10ರವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಲಾಗಿತ್ತು. ಆದರೆ, ಜನರು ಲಾಕ್‌ಡೌನ್‌ ಆದೇಶ ಉಲ್ಲಂಘಿಸಿ ಅನಗತ್ಯವಾಗಿ ಮನೆಯಿಂದ ಹೊರ ಬಂದು ಓಡಾಡುತ್ತಿದ್ದ ಬಗ್ಗೆ ದೂರು ಕೇಳಿಬಂದಿತ್ತು.

ಹೀಗಾಗಿ ಕಠಿಣ ಕ್ರಮಕ್ಕೆ ಮುಂದಾಗಿರುವ ಜಿಲ್ಲಾಡಳಿತವು ಸಂಪೂರ್ಣ ಲಾಕ್‌ಡೌನ್‌ ಅಸ್ತ್ರ ಪ್ರಯೋಗಿಸಿದ್ದು, ಅಗತ್ಯ ವಸ್ತುಗಳ ಖರೀದಿಗೂ ಕಡಿವಾಣ ಹಾಕಲಾಗಿದೆ. ಆಹಾರಕ್ಕಾಗಿ ಹೋಟೆಲ್‌ಗಳ ಮೇಲೆ ಅವಲಂಬಿತರಾಗಿರುವ ಜನರ ಅನುಕೂಲಕ್ಕಾಗಿ ಹೋಟೆಲ್‌ ತೆರೆಯಲು ಅನುಮತಿ ನೀಡಲಾಗಿದೆ. ಜತೆಗೆ ಇಂದಿರಾ ಕ್ಯಾಂಟೀನ್‌ಗಳ ಸೇವೆಗೆ ಅವಕಾಶ ಕಲ್ಪಿಸಲಾಗಿದೆ. ಆದರೆ, ಆಹಾರ ಪದಾರ್ಥಗಳ ಪಾರ್ಸೆಲ್‌ ಮಾತ್ರ ಲಭ್ಯವಿರುತ್ತದೆ.

ತಳ್ಳುವ ಗಾಡಿಗಳಲ್ಲಿ ಹೂವು, ಹಣ್ಣು, ತರಕಾರಿ ಮಾರಾಟಕ್ಕೆ ಸಂಜೆ 6ರವರೆಗೆ ಅವಕಾಶವಿದೆ. ಬ್ಯಾಂಕ್‌ಗಳ ಸಂಪೂರ್ಣ ಬಂದ್‌ ಆಗಲಿದ್ದು, ಎಟಿಎಂ ಘಟಕಗಳು ತೆರೆದಿರುತ್ತವೆ. ಸರ್ಕಾರಿ ಕಚೇರಿಗಳಲ್ಲಿ ಕೋವಿಡ್‌ ಮಾರ್ಗಸೂಚಿಯಂತೆ ಕಾರ್ಯ ಚಟುವಟಿಕೆ ನಡೆಯಲಿವೆ. ಕೃಷಿ ಚಟುವಟಿಕೆಗೆ ಲಾಕ್‌ಡೌನ್‌ನಿಂದ ವಿನಾಯಿತಿ ನೀಡಲಾಗಿದೆ. ಎಪಿಎಂಸಿಗಳಲ್ಲಿ ಕೋವಿಡ್‌ ಮಾರ್ಗಸೂಚಿ ಪಾಲನೆಯೊಂದಿಗೆ ಬೆಳಿಗ್ಗೆ 6ರಿಂದ 10 ಗಂಟೆವರೆಗೆ ಮಾತ್ರ ವಹಿವಾಟು ನಡೆಸಬಹುದಾಗಿದೆ.

ಕೃಷಿ, ವೈದ್ಯಕೀಯ, ರಕ್ಷಣಾ ಇಲಾಖೆ ಸಂಬಂಧಿತ ಕೈಗಾರಿಕೆಗಳು ಮತ್ತು ಕಂಪನಿಗಳಿಗೆ ಕಾರ್ಯ ನಿರ್ವಹಿಸಲು ಅವಕಾಶ ನೀಡಲಾಗಿದೆ. ಇತರೆ ಕೈಗಾರಿಕೆಗಳಿಗೆ ಒಳಾಂಗಣದಲ್ಲೇ ಸಿಬ್ಬಂದಿ ಅಥವಾ ಕಾರ್ಮಿಕರ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಿ ಕಾರ್ಯ ಚಟುವಟಿಕೆ ನಡೆಸಲು ಅನುಮತಿ ಕೊಡಲಾಗಿದೆ. ಸಿಬ್ಬಂದಿ ಅಥವಾ ಕಾರ್ಮಿಕರು ಯಾವುದೇ ಕಾರಣಕ್ಕೂ ಹೊರಗಡೆಯಿಂದ ಕೈಗಾರಿಕೆಗಳಿಗೆ ಬಂದು ಕಾರ್ಯ ನಿರ್ವಹಿಸುವಂತಿಲ್ಲ ಎಂದು ಸೂಚಿಸಲಾಗಿದೆ.

ಮದುವೆಗೆ ಷರತ್ತು: ಮದುವೆ ಸಮಾರಂಭಗಳಿಗೆ ಕಠಿಣ ಷರತ್ತು ವಿಧಿಸಲಾಗಿದೆ. ಸಂಪೂರ್ಣ ಲಾಕ್‌ಡೌನ್‌ ಅವಧಿಯಲ್ಲಿ ನಡೆಸಲು ಉದ್ದೇಶಿಸಿರುವ ಮದುವೆ ಸಮಾರಂಭಕ್ಕೆ ಹೊಸದಾಗಿ ಅರ್ಜಿ ಸಲ್ಲಿಸುವವರಿಗೆ ಅನುಮತಿ ಕೊಡುವುದಿಲ್ಲ. ಈಗಾಗಲೇ ದಿನಾಂಕ ನಿಗದಿಯಾಗಿರುವ ಮದುವೆಗೆ ತಹಶೀಲ್ದಾರ್‌ಗಳ ಪೂರ್ವಾನುಮತಿ ಪಡೆಯುವುದನ್ನು ಕಡ್ಡಾಯಗೊಳಿಸಲಾಗಿದೆ. ಕಲ್ಯಾಣ ಮಂಟಪ ಅಥವಾ ಸಭಾಂಗಣಗಳಲ್ಲಿ ಮದುವೆ ಮಾಡುವಂತಿಲ್ಲ. ಬದಲಿಗೆ ಮನೆಗಳಲ್ಲೇ ಮದುವೆ ಕಾರ್ಯ ನಡೆಸಬೇಕು. ಅಲ್ಲದೇ, ಸಮಾರಂಭದಲ್ಲಿ 20ಕ್ಕೂ ಹೆಚ್ಚು ಜನ ಸೇರಿಸುವಂತಿಲ್ಲ ಎಂದು ಜಿಲ್ಲಾಡಳಿತ ಸೂಚಿಸಿದೆ.

ವಾಹನ ಜಪ್ತಿ: ಲಾಕ್‌ಡೌನ್‌ ಅವಧಿಯಲ್ಲಿ ಜನರು ಯಾವುದೇ ಕಾರಣಕ್ಕೂ ಮನೆಯಿಂದ ಹೊರ ಬಂದು ಓಡಾಡುವಂತಿಲ್ಲ. ಜತೆಗೆ ವಾಹನಗಳಲ್ಲೂ ಸಂಚರಿಸುವಂತಿಲ್ಲ. ಲಾಕ್‌ಡೌನ್‌ ಆದೇಶ ಉಲ್ಲಂಘಿಸಿ ರಸ್ತೆಗೆ ಬರುವ ವಾಹನ ಸವಾರರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸುತ್ತಾರೆ. ಅಲ್ಲದೇ, ವಾಹನ ಜಪ್ತಿ ಮಾಡಿ ದಂಡ ವಿಧಿಸುತ್ತಾರೆ. ಕೃಷಿ ಉತ್ಪನ್ನಗಳು ಮತ್ತು ಔಷಧ ಮಾತ್ರೆ ಸಾಗಣೆ, ಆಂಬುಲೆನ್ಸ್‌, ವೈದ್ಯಕೀಯ ಸಿಬ್ಬಂದಿ, ಕೋವಿಡ್‌ ಕರ್ತವ್ಯಕ್ಕೆ ನಿಯೋಜನೆಗೊಂಡ ಸರ್ಕಾರಿ ನೌಕರರ ವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು