ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿ ವಿರೋಧಿ ಕಾಯ್ದೆ ಕೊರೊನಾ ಸೋಂಕಿಗಿಂತ ದೊಡ್ಡ ಆಘಾತ: ಕೋಡಿಹಳ್ಳಿ ಚಂದ್ರಶೇಖರ್

ಕೇಂದ್ರದ ವಿರುದ್ಧ ವಾಗ್ದಾಳಿ
Last Updated 16 ಜನವರಿ 2021, 15:06 IST
ಅಕ್ಷರ ಗಾತ್ರ

ಕೋಲಾರ: ‘ಕೇಂದ್ರ ಸರ್ಕಾರ ಕೃಷಿ ವಿರೋಧಿ ಕಾಯ್ದೆಗಳ ಮೂಲಕ ರೈತ ಸಮುದಾಯಕ್ಕೆ ಕೊರೊನಾ ಸೋಂಕಿಗಿಂತಲೂ ದೊಡ್ಡ ಆಘಾತ ನೀಡಿದೆ’ ಎಂದು ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ವಾಗ್ದಾಳಿ ನಡೆಸಿದರು.

ಇಲ್ಲಿ ಶನಿವಾರ ನಡೆದ ಸಂಘದ ಸಭೆಯಲ್ಲಿ ಮಾತನಾಡಿ, ‘ರೈತರ ಮನೆ ಹಾಳು ಮಾಡಲು ಕೃಷಿ ವಿರೋಧಿ ಕಾಯ್ದೆಗಳನ್ನು ಜಾರಿ ಮಾಡಲಾಗಿದೆ. ಇವರಿಗೆ ತಲೆ ಇದಿಯಾ?’ ಎಂದು ಪ್ರಶ್ನಿಸಿದರು.

‘ಕೃಷಿ ವಿರೋಧಿ ಕಾಯ್ದೆಗಳಿಗೆ ರೈತರ ಸಂಪೂರ್ಣ ವಿರೋಧವಿದೆ. ಕಾಯ್ದೆ ಜಾರಿ ಮಾಡಿದರೆ ದೇಶದಲ್ಲಿ ನಾಗರಿಕ ಯುದ್ಧ ಶುರುವಾಗುತ್ತೆ. ಕೇಂದ್ರದಲ್ಲಿ ಇರುವುದು ರೈತ ವಿರೋಧಿ ಸರ್ಕಾರ. ಬಿಜೆಪಿ ಎಂದರೆ ಮೋದಿ ಅಭಿಮಾನಿ ಸಂಘವಷ್ಟೇ. ಮೋದಿ ಹೇಳಿದಂತೆ ವಿದೇಶದಿಂದ ಕಪ್ಪು ಹಣ ತರುವುದು, ಗಂಗಾನದಿ ಶುದ್ಧೀಕರಣ ಯಾವುದೂ ಜಾರಿಯಾಗಿಲ್ಲ’ ಎಂದು ಟೀಕಿಸಿದರು.

‘ಕೃಷಿ ವಿರೋಧಿ ಕಾಯ್ದೆ ಅನ್ವಯ ಕೃಷಿ ಉತ್ಪನ್ನಗಳನ್ನು ಯಾರು ಎಲ್ಲಿ ಬೇಕಾದರೂ ಖರೀದಿಸಲು ಹಾಗೂ ಮಾರಲು ಅವಕಾಶ ನೀಡಿದಂತಾಗುತ್ತದೆ. ರೈತರು ದೊಡ್ಡ ಕಂಪನಿಗಳು ನಿಗದಿಪಡಿಸಿದ ದರಕ್ಕೆ ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡಬೇಕಾಗುತ್ತದೆ. ಈಗಿನ ವ್ಯವಸ್ಥೆಯಂತೆ ರೈತರಿಗೆ ಸ್ಪರ್ಧಾತ್ಮಕ ದರ ದೊರೆಯುವುದಿಲ್ಲ’ ಎಂದು ಆತಂಕ ವ್ಯಕ್ತಪಡಿಸಿದರು.

‘ದೆಹಲಿಯಲ್ಲಿ ನಡೆಯುತ್ತಿರುವ ರೈತರ ಹೋರಾಟದ ಬಗ್ಗೆ ಲಂಡನ್‌ ಸಂಸದರು, ಕೆನಡಾ ಪ್ರಧಾನಿ ಪ್ರಶ್ನೆ ಮಾಡಿ, ಸಮಸ್ಯೆ ಇತ್ಯರ್ಥಪಡಿಸುವಂತೆ ಸಲಹೆ ನೀಡಿದ್ದಾರೆ. ಅಮೆರಿಕ, ಯೂರೋಪ್‌ನಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದು, ಜಾಗತಿಕವಾಗಿ ಹಲವು ದೇಶಗಳು ಈ ಬಗ್ಗೆ ಪ್ರಶ್ನೆ ಮಾಡುತ್ತಿವೆ. ಆದರೆ, ಮೋದಿಯವರ ಮನ್‌ಕಿ ಬಾತ್‌ನಲ್ಲಿ ರೈತರ ಹೋರಾಟದ ಬಗ್ಗೆ ಪ್ರಸ್ತಾಪವಿಲ್ಲ’ ಎಂದು ಆರೋಪಿಸಿದರು.

ಹೋರಾಟ ಉಗ್ರ: ‘ಸುಪ್ರೀಂ ಕೋರ್ಟ್ ಹೊಸ ಕೃಷಿ ಕಾನೂನುಗಳಿಗೆ ತಡೆ ನೀಡಿದೆ. ಹೀಗಾಗಿ ಕೇಂದ್ರ ಸರ್ಕಾರ ಸಮಿತಿ ರಚನೆ ಮಾಡಿದೆ. ಸಮಿತಿಯಲ್ಲಿರುವವರು ಕಾನೂನು ಪರ ಮಾತನಾಡುತ್ತಾರಾ ಎಂಬ ಅನುಮಾನ ಕಾಡುತ್ತಿದ್ದು, ಅದನ್ನು ನಾವು ಒಪ್ಪುವುದಿಲ್ಲ. ಕೃಷಿ ವಿರೋಧಿ ಕಾನೂನುಗಳನ್ನು ಹಿಂಪಡೆಯದಿದ್ದರೆ ಹೋರಾಟ ಉಗ್ರ ಸ್ವರೂಪ ಪಡೆಯುತ್ತದೆ’ ಎಂದು ಎಚ್ಚರಿಕೆ ನೀಡಿದರು.

‘ಎಲ್ಲಾ ಉದ್ಯಮಗಳನ್ನು ಮುಚ್ಚಿಸಿ ಖಾಸಗೀಕರಣ ಮಾಡುವುದು ಕೇಂದ್ರ ಸರ್ಕಾರದ ತೀರ್ಮಾನ. ಅದಾನಿ, ಅಂಬಾನಿ ಕಂಪನಿಯವರು ಗೋದಾಮು ನಿರ್ಮಿಸಿಕೊಂಡು ಎಲ್ಲಾ ಕ್ಷೇತ್ರಕ್ಕೂ ಪ್ರವೇಶಿಸಲು ಸಿದ್ಧರಾಗಿದ್ದಾರೆ. ಇವರನ್ನು ಮಾತ್ರ ದೇಶದ ವಾರಸುದಾರರಾಗಿಸುವ ಹುನ್ನಾರ ನಡೆಯುತ್ತಿದೆ. ಇವರೇನು ಮೋದಿಯ ದೊಡ್ಡಪ್ಪ, ಚಿಕ್ಕಪ್ಪನ ಮಕ್ಕಳೇ?’ ಎಂದು ಕುಟುಕಿದರು.

ಪ್ರಚಾರಕ್ಕೆ ಸೂಚನೆ: ‘ಗೋಹತ್ಯೆ ನಿಷೇಧ, ಭೂ ಸುಧಾರಣೆ ಕಾಯ್ದೆ ಜಾರಿಗೆ ಶಿವಮೊಗ್ಗದಲ್ಲಿ ನಡೆದ ಬಿಜೆಪಿ ಕಾರ್ಯಕ್ರಮದಲ್ಲಿ ತೀರ್ಮಾನ ಕೈಗೊಳ್ಳುತ್ತಾರೆ. ಸರ್ಕಾರದ ಖರ್ಚಿನಲ್ಲಿ ಪಕ್ಷದ ಕಾರ್ಯಕ್ರಮ ನಡೆಯುತ್ತಿದೆ. ಕಾಯ್ದೆಗಳ ಬಗ್ಗೆ ಜಿ.ಪಂ, ತಾ.ಪಂ, ಗ್ರಾ.ಪಂ ಮಟ್ಟದಲ್ಲಿ ಪ್ರಚಾರ ಮಾಡುವಂತೆ ಕಾರ್ಯಕರ್ತರಿಗೆ ಸೂಚನೆ ನೀಡಿದ್ದಾರೆ’ ಎಂದು ದೂರಿದರು.

‘ಅಶೋಕ, ಔರಂಗಜೇಬನ ಕಾಲದಲ್ಲೂ ಗೋಹತ್ಯೆ ನಿಷೇಧ ಕಾಯ್ದೆಯಿತ್ತು. ಹಾಲು ಉತ್ಪಾದನೆ ಪ್ರಮಾಣ ಹಾಗೂ ಗೋವುಗಳ ಸಂಖ್ಯೆ ಕಡಿಮೆಯಾದಾಗ ನೆಹರೂ ಸಹ ಗೋಹತ್ಯೆ ನಿಷೇಧ ಕಾಯ್ದೆ ಜಾರಿ ಮಾಡಿದ್ದರು. ಆದರೆ, ಬಿಜೆಪಿ ಸರ್ಕಾರವು ಮುಸ್ಲಿಮರಿಗೆ ತಿನ್ನಲು ಆಹಾರ ಸಿಗುತ್ತದೆ ಎಂಬ ಕಾರಣಕ್ಕೆ ಗೋಹತ್ಯೆ ನಿಷೇಧಿಸಿದೆ’ ಎಂದು ಆರೋಪಿಸಿದರು.

ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ರಾಮೇಗೌಡ, ಸದಸ್ಯರಾದ ಮುನಿಯಪ್ಪ, ವೀರಭದ್ರಗೌಡ, ಮಂಜುನಾಥ್ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT